ಕನ್ನಡಪ್ರಭ ವಾರ್ತೆ ದಾಬಸ್‍ಪೇಟೆ

ರಂಗೋಲಿ ಎನ್ನುವುದು ಕೇವಲ ಬಣ್ಣದ ಚಿತ್ತಾರವಲ್ಲ, ಅದು ನಮ್ಮ ದೇಶದ ಪವಿತ್ರ ಸಂಸ್ಕೃತಿಯ ಅವಿಭಾಜ್ಯ ಅಂಗ. ಮನೆಯ ಮುಂದಿನ ರಂಗೋಲಿ ಶುಭ ಸೂಚಕವಾಗಿದ್ದು, ಇಂತಹ ಸಂಪ್ರದಾಯವನ್ನು ಉಳಿಸಿ ಬೆಳೆಸುತ್ತಿರುವ ಮಹಿಳೆಯರ ಪ್ರತಿಭೆಯನ್ನು ಜಗತ್ತಿಗೆ ಪರಿಚಯಿಸುವುದೇ ನೆಲಮಂಗಲ ಉತ್ಸವದ ಮೂಲ ಉದ್ದೇಶ ಎಂದು ಶಾಸಕ ಎನ್. ಶ್ರೀನಿವಾಸ್ ಅವರು ತಿಳಿಸಿದರು.ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆಯೋಜಿಸಲಾಗಿದ್ದ ‘ನೆಲಮಂಗಲ ಉತ್ಸವ’ ದ ಅಂಗವಾಗಿ ಆಯೋಜಿಸಿದ್ದ ಬೃಹತ್ ರಂಗೋಲಿ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು. ಈ ಕ್ಷೇತ್ರದ ಜನರ ಋಣ ನನ್ನ ಮೇಲಿದೆ, ಅದನ್ನು ತೀರಿಸುವ ನಿಟ್ಟಿನಲ್ಲಿ ವೈಯಕ್ತಿಕವಾಗಿ ಇಂತಹ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇನೆ. ಫೆ.14 ರಂದು ಸಾವಿರಾರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವ ಮೂಲಕ ಆರಂಭವಾದ ಈ ಉತ್ಸವ, ಇಂದು ರಂಗೋಲಿ ಸ್ಪರ್ಧೆಯ ಮೂಲಕ ಹಳ್ಳಿ ಹಳ್ಳಿಯ ಮನೆ ಮನೆಗಳನ್ನು ತಲುಪಿದೆ ಎಂದರು.

ಗೊಲ್ಲಹಳ್ಳಿಯಲ್ಲಿ ಯಶಸ್ವಿಯಾಗಿ ನಡೆದ ಈ ಸ್ಪರ್ಧೆಯನ್ನು ಮುಂಬರುವ ದಿನಗಳಲ್ಲಿ ತಾಲೂಕಿನ ಇತರೆ ಪಂಚಾಯಿತಿಗಳು ಮತ್ತು ನಗರಸಭೆ ವ್ಯಾಪ್ತಿಯಲ್ಲಿಯೂ ವಿಸ್ತರಿಸಲಾಗುವುದು. ಕ್ರೀಡೆ, ಕಲೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಕ್ಷೇತ್ರದ ಯುವಕರು ಮತ್ತು ಮಹಿಳೆಯರನ್ನು ಪ್ರೋತ್ಸಾಹಿಸುವ ಕೆಲಸ ನಿರಂತರವಾಗಿ ನಡೆಯಲಿದೆ ಎಂದರು. ಎನ್‍ಪಿಎ ಅಧ್ಯಕ್ಷ ಎಂ.ಕೆ. ನಾಗರಾಜು ಮಾತನಾಡಿ, ನಮ್ಮ ಭಾಗದ ಗ್ರಾಮೀಣ ಕಲೆ ಮತ್ತು ಸಂಸ್ಕೃತಿಯನ್ನು ಜೀವಂತವಾಗಿರಿಸುವಲ್ಲಿ ಮಹಿಳೆಯರ ಪಾತ್ರ ದೊಡ್ಡದಿದೆ. ನಮ್ಮ ಜನಪ್ರಿಯ ಶಾಸಕರಾದ ಎನ್. ಶ್ರೀನಿವಾಸ್ ಅವರು ರೂಪಿಸಿರುವ ಈ ‘ನೆಲಮಂಗಲ ಉತ್ಸವ’ವು ಕೇವಲ ಹಬ್ಬವಲ್ಲ, ಇದು ನಮ್ಮೂರಿನ ಪ್ರತಿಭೆಗಳಿಗೆ ಸಿಕ್ಕ ಗೌರವವಾಗಿದೆ. ವಿಶೇಷವಾಗಿ ಗ್ರಾಮೀಣ ಭಾಗದ ಹೆಣ್ಣುಮಕ್ಕಳು ತಮ್ಮ ಮನೆಯ ಅಂಗಳದ ಕಲೆಯನ್ನು ಸ್ಪರ್ಧೆಯ ವೇದಿಕೆಯಲ್ಲಿ ಪ್ರದರ್ಶಿಸುತ್ತಿರುವುದು ಹೆಮ್ಮೆಯ ವಿಷಯ. ಇಂತಹ ಕಾರ್ಯಕ್ರಮಗಳು ಕ್ಷೇತ್ರದ ಜನರನ್ನು ಭಾವನಾತ್ಮಕವಾಗಿ ಒಂದುಗೂಡಿಸುತ್ತವೆ ಎಂದು ಶ್ಲಾಘಿಸಿದರು.

2000ಕ್ಕೂ ಹೆಚ್ಚು ಮಹಿಳೆಯರ ಭಾಗಿ

ಗೊಲ್ಲಹಳ್ಳಿ ಪಂಚಾಯಿತಿ ವ್ಯಾಪ್ತಿಯ 12 ಗ್ರಾಮಗಳಲ್ಲಿ ನಡೆದ ರಂಗೋಲಿ ಸ್ಪರ್ಧೆಯಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಂಡು ತಮ್ಮ ಸೃಜನಶೀಲತೆಯನ್ನು ಅನಾವರಣಗೊಳಿಸಿದರು. ಜಾನಪದ ಕಲೆ, ಪರಿಸರ ಕಾಳಜಿ ಮತ್ತು ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ರಂಗೋಲಿ, ಶಿವನಲಿಂಗ, ಶಿವಕುಮಾರ ಸ್ವಾಮೀಜಿಯ ಭಾವಚಿತ್ರ, ಇನ್ನು ವಿಶಿಷ್ಟ ರೀತಿಯಲ್ಲಿ ವಿವಿಧ ರೀತಿಯ ಲಾಂಛನಗಳನ್ನು ಒಳಗೊಂಡ ರಂಗೋಲಿಗಳು ನೋಡುಗರ ಕಣ್ಣು ಸೆಳೆದವು.


ಈ ವೇಳೆ ಎನ್‌ಪಿಎ ಮಾಜಿ ಅಧ್ಯಕ್ಷ ಎಂ. ನಾರಾಯಣಗೌಡ, ನಗರಸಭೆ ಅಧ್ಯಕ್ಷ ಎನ್. ಗಣೇಶ್, ಉಪಾಧ್ಯಕ್ಷ ಆನಂದ್, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ಕಸಬಾ ಬ್ಲಾಕ್ ಅಧ್ಯಕ್ಷ ಮಂಜುನಾಥ್, ಮುಖಂಡರಾದ ಅಗಳಕುಪ್ಪೆ ಗೋವಿಂದರಾಜು, ಕೆ.ಕೆ.ಕೃಷ್ಣಪ್ಪ, ಚಿಕ್ಕಹನುಮೇಗೌಡ, ಡಾಬಾ ರಾಜಣ್ಣ, ಮುನಿರಾಜು, ಹ್ಯಾಡಾಳು ಕಿರಣ್, ಮಂಜುನಾಥ್, ಬಿ.ಕೆ. ಮುನಿರಾಜು, ನಾರಾಯಣಸ್ವಾಮಿ, ಸಿ.ಎಂ.ಗೌಡ, ಎಸ್.ಎಸ್.ಟಿ ಚಿಕ್ಕಣ್ಣ, ಭೂಸಂದ್ರ ಚಿಕ್ಕಣ್ಣಸ್ವಾಮಿ, ಮೈಲನಹಳ್ಳಿ ಪ್ರಶಾಂತ್, ಕಾಚನಹಳ್ಳಿ ಮನು, ಸ್ಥಳೀಯ ಮುಖಂಡರು, ಗ್ರಾಮಸ್ಥರು ಹಾಗೂ ಮಹಿಳೆಯರು ಭಾಗವಹಿಸಿದ್ದರು.