ಸಾರಾಂಶ
ಗದಗ: ಜನರಿಗೆ ನೀಡಿದ ಗ್ಯಾರಂಟಿಗಳ ಭರವಸೆಗಳನ್ನು ಕೊಟ್ಟ ಮಾತಿನಂತೆ ಸಮರ್ಪಕವಾಗಿ ಅನುಷ್ಠಾನಕ್ಕೆ ತಂದು ಅರ್ಹ ಫಲಾನುಭವಿಗಳಿಗೆ ತಲುಪಿಸಿ ನುಡಿದಂತೆ ನಡೆದಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಅವರು ಭಾನುವಾರ ಗದಗ ತಾಲೂಕಿನ ಸುಕ್ಷೇತ್ರ ಹರ್ಲಾಪುರ ಗ್ರಾಮದಲ್ಲಿ ಬೀರಲಿಂಗೇಶ್ವರ, ಮಾಳಿಂಗರಾಯ ಮೂರ್ತಿ ಪ್ರತಿಷ್ಠಾಪನೆ ಹಾಗೂ ದೇವಸ್ಥಾನ ಉದ್ಘಾಟಿಸಿ ಮಾತನಾಡಿದರು.ರಾಜ್ಯದಲ್ಲಿನ ಬಡವರು ಯಾರೂ ಕೂಡ ಇನ್ನೊಬ್ಬರಲ್ಲಿ ಕೈ ಒಡ್ಡದಂತೆ, ಯಾರೂ ಹಸಿವಿನಿಂದ ಮಲಗಬಾರದು ಎನ್ನುವ ಉದ್ದೇಶದಿಂದ ಅನ್ನಭಾಗ್ಯ ಯೋಜನೆ ಜಾರಿಗೊಳಿಸಲಾಗಿದೆ. ಒಂದು ಕೋಟಿಗೂ ಅಧಿಕ ಮಹಿಳೆಯರು ಗೃಹಲಕ್ಷ್ಮೀ ಯೋಜನೆಯಲ್ಲಿ ಪ್ರತಿ ತಿಂಗಳು ₹2 ಸಾವಿರ ಪಡೆಯುತ್ತಿದ್ದಾರೆ. ಇದು ಸಮಾಜದಲ್ಲಿ ಸಮಾನತೆ ಮತ್ತು ಆರ್ಥಿಕ ಸುಧಾರಣೆಗೆ ಸಾಧ್ಯವಾಗಿದೆ. ಬಹುದಿನಗಳ ನಂತರ ಈ ಗ್ರಾಮಕ್ಕೆ ಆಗಮಿಸಿರುತ್ತೇನೆ, 1991ರಲ್ಲಿ ಕೊಪ್ಪಳ ಲೋಕಸಭಾ ಸ್ಪರ್ಧಿಸಿದ ಸಮಯದಲ್ಲಿ ಹರ್ಲಾಪುರ ಹಾಗೂ ಮುಂಡರಗಿ ಜನ ಆಶೀರ್ವಾದ ಮಾಡಿದ್ದರು. ಇದನ್ನು ಮರೆಯಲು ಸಾಧ್ಯವಿಲ್ಲ ಎಂದರು.
ಅಖಂಡ ಧಾರವಾಡ ಜಿಲ್ಲೆ 3 ಜಿಲ್ಲೆಗಳಾಗಿ ವಿಂಗಡನೆಯ ವೇಳೆ ಮುಂಡರಗಿ, ಕೊಪ್ಪಳ ಲೋಕಸಭಾ ಮತಕ್ಷೇತ್ರಕ್ಕೆ ಸೇರುತ್ತಿತ್ತು. ಆ ಸಮಯದಲ್ಲಿ ನನಗೆ ಮತ ನೀಡಿ ಆಶೀರ್ವದಿಸಿದ್ದನ್ನು ಸದಾ ಸ್ಮರಿಸುತ್ತೇನೆ ಎಂದರು.ಅನಾದಿ ಕಾಲದಿಂದಲೂ ದೇವಸ್ಥಾನ ನಿರ್ಮಿಸಿ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಮಾಡುವ ಸಂಸ್ಕೃತಿ ರೂಢಿಯಲ್ಲಿದೆ. ದೇವರನ್ನು ಭಕ್ತಿಯಿಂದ ಪೂಜೆ ಮಾಡಿದರೆ ದೇವರು ನಮಗೆ ವರ ನೀಡುವ ಮೂಲಕ ನಮ್ಮ ಕಷ್ಟ-ಕಾರ್ಪಣ್ಯಗಳು ದೂರಾಗುತ್ತವೆ ಎಂಬ ನಂಬಿಕೆ ಜನರಲ್ಲಿದೆ. ಉಳ್ಳವರು ದೇವಾಲಯ ಮಾಡುವರು, ನಾನೇನು ಮಾಡಲಿ ನಾನು ಬಡವನಯ್ಯ, ಕಾಲೇ ಕಂಬಗಳು, ಶಿರವೇ ಹೊನ್ನ ಕಳಶವಯ್ಯ ಎಂಬ ಬಸವಣ್ಣನವರ ವಚನ ಸ್ಮರಿಸಿದರು.
ದೇವರು ಸರ್ವವ್ಯಾಪಿಯಾಗಿದ್ದು ನಮ್ಮ, ಬದುಕು, ನಡುವಳಿಕೆಯಲ್ಲಿ ಇನ್ನೊಬ್ಬರಿಗೆ ಅನ್ಯಾಯ, ಕೆಟ್ಟದನ್ನು ಮಾಡಬಾರದು. ಈ ಗ್ರಾಮ ಭಾವೈಕ್ಯತ್ಯೆಯಿಂದ, ಸೌಹಾರ್ದತೆಯಿಂದ ಬದುಕುತ್ತಿರುವುದು ಶ್ಲಾಘನೀಯ. ಇದೇ ರೀತಿ ಇಡೀ ದೇಶದಲ್ಲಿ ಪ್ರತಿಯೊಬ್ಬರೂ ಬದುಕಬೇಕು. ಯಾವುದೇ ಧರ್ಮವು ಪ್ರೀತಿ ಮಾಡು ಅಂತ ಹೇಳುತ್ತದೆ ಹೊರತು ಪರಸ್ಪರ ದ್ವೇಷ ಮಾಡುವಂತೆ ಹೇಳುವುದಿಲ್ಲ. ಧರ್ಮದ ಪ್ರಕಾರ ಪ್ರತಿಯೊಬ್ಬರೂ ಮನುಷ್ಯರಂತೆ ಬದುಕಬೇಕು ಹೊರತು ಮೃಗಗಳಂತೆ ಜೀವಿಸಬಾರದು ಎಂದರು.ಉಪಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ ಮಾತನಾಡಿ, ಭಕ್ತ ಮತ್ತು ದೇವರ ನಡುವೆ ಕೊಂಡಿಯಾಗಿರುವ ಸ್ಥಳ ದೇವಸ್ಥಾನವಾಗಿದೆ. ನಮ್ಮೆಲ್ಲರ ಜೀವನ ಸುಖಕರವಾಗಿರಲು, ಬೀರಲಿಂಗೇಶ್ವರನ ಕೃಪೆ ತಮ್ಮೆಲ್ಲರ ಮೇಲೆ ಇರಲಿ ಎಂದರು.
ಕಾನೂನು, ಪ್ರವಾಸೋದ್ಯಮ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಮಾತನಾಡಿ, ಗ್ರಾಮೀಣ ಭಾಗದ ಜನರ ಬಡತನ ಬೇರು ಸಹಿತ ಕಿತ್ತೊಗೆದ ಮಹಾನ್ ವ್ಯಕ್ತಿ ನಮ್ಮ ಸಿದ್ದರಾಮಯ್ಯ ಎಂದರೆ ತಪ್ಪಾಗಲಾರದು ಎಂದರು.ರೋಣ ಶಾಸಕ ಜಿ.ಎಸ್. ಪಾಟೀಲ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಿಂಗಟಾಲೂರು ಏತ ನೀರಾವರಿ ಯೋಜನೆ ತ್ವರಿತವಾಗಿ ಪೂರ್ಣಗೊಳಿಸಲು ಕ್ರಮ ತೆಗೆದುಕೊಳ್ಳಬೇಕು ಎಂದರು.
ಮಾಜಿ ಶಾಸಕ ಡಿ.ಆರ್. ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ, ಜಿಪಂ ಅಧ್ಯಕ್ಷ ವಾಸಣ್ಣ ಕುರಡಗಿ, ಸಿದ್ದು ಪಾಟೀಲ, ಮುಖಂಡರಾದ ಕೃಷ್ಣಗೌಡ ಪಾಟೀಲ, ಫಕೀರಪ್ಪ ಹೆಬಸೂರ ಉಪಸ್ಥಿತರಿದ್ದರು.