ಕಾರ್ಯಕ್ರಮದ ಸಂಚಾಲಕ ಶಿವಾನಂದ ಹೆಗಡೆ ಕಡತೋಕಾ ಮಾತನಾಡಿ, ಸರ್ಕಾರಿ ಹಾಗೂ ಅರಣ್ಯ ಭೂಮಿಯಲ್ಲಿರುವ ಮನೆಗಳ ತೆರಿಗೆ ಕೈಬಿಡುವ ಮಾರ್ಗಸೂಚಿಯ ಮೂಲಕ ಬಡವರನ್ನು ಒಕ್ಕಲೆಬ್ಬಿಸಿ, ಪಂಚಾಯಿತಿ ಕಾಯ್ದೆಯಡಿ ದೊರೆತ ಹಕ್ಕುಗಳನ್ನು ಕಿತ್ತುಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂದರು.
ಹೊನ್ನಾವರ: ಸರ್ಕಾರಿ ಹಾಗೂ ಅರಣ್ಯ ಜಾಗದಲ್ಲಿರುವ ಮನೆಗಳಿಗೆ ತೆರಿಗೆ ವಿಧಿಸುವುದನ್ನು ಕೈಬಿಡುವ ಕುರಿತು ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯನ್ನು ವಿರೋಧಿಸಿ ಬಿಜೆಪಿ ಹೊನ್ನಾವರ ಮಂಡಲ ವತಿಯಿಂದ ತಾಲೂಕಿನ ಸಾಲ್ಕೋಡ್ ಗ್ರಾಮ ಪಂಚಾಯಿತಿ ಎದುರು ನಮ್ಮ ಮನೆ- ನಮ್ಮ ಹಕ್ಕು ಜನಾಂದೋಲನ ಜರುಗಿತು.
ಕಾರ್ಯಕ್ರಮದ ಸಂಚಾಲಕ ಶಿವಾನಂದ ಹೆಗಡೆ ಕಡತೋಕಾ ಮಾತನಾಡಿ, ಸರ್ಕಾರಿ ಹಾಗೂ ಅರಣ್ಯ ಭೂಮಿಯಲ್ಲಿರುವ ಮನೆಗಳ ತೆರಿಗೆ ಕೈಬಿಡುವ ಮಾರ್ಗಸೂಚಿಯ ಮೂಲಕ ಬಡವರನ್ನು ಒಕ್ಕಲೆಬ್ಬಿಸಿ, ಪಂಚಾಯಿತಿ ಕಾಯ್ದೆಯಡಿ ದೊರೆತ ಹಕ್ಕುಗಳನ್ನು ಕಿತ್ತುಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಸರ್ಕಾರದ ಈ ಕ್ರಮದಿಂದ ಈ ಗ್ರಾಮದ 150 ಮನೆಗಳು ಅತಂತ್ರವಾಗಲಿದೆ ಎಂದರು.ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಕರ್ಕಿ ಮಾತನಾಡಿ, ಕರ ಕಟ್ಟುವುದನ್ನು ಬಂದ್ ಮಾಡಿ ಬಡವರ ಬದುಕನ್ನು ಕಸಿದುಕೊಳ್ಳಲು ಹೊರಟಿದೆ. ಈ ನಿರ್ಧಾರದಿಂದ ಸಾಲ್ಕೋಡ್ ಗ್ರಾಮದಲ್ಲೆ ಎರಡು ಸಾವಿರದಷ್ಟು ಜನ ನಿರ್ಗತಿಕರಿಗಾಗುತ್ತಾರೆ. ಆದೇಶ ವಾಪಸ್ ಪಡೆಯದೆ ಹೊದಲ್ಲಿ ತಾಲೂಕು ಮಟ್ಟ, ಜಿಲ್ಲಾ ಮಟ್ಟದಲ್ಲಿ ಹೋರಾಟ ಮಾಡುತ್ತೇವೆ. ಸರ್ಕಾರವನ್ನು ಎಚ್ಚರಿಸಲು ಪಕ್ಷದ ನಾಯಕರು ವಿಧಾನಮಂಡಲ ಅಧಿವೇಶನದಲ್ಲಿ ಪ್ರಶ್ನಿಸಿದರೆ ಸರ್ಕಾರದಿಂದ ಉತ್ತರ ಸಿಕ್ಕಿಲ್ಲ ಎಂದರು.
ಜಿಪಂ ಮಾಜಿ ಸದಸ್ಯೆ ಶ್ರೀಕಲಾ ಶಾಸ್ತಿ ಮಾತನಾಡಿ, ಅತಿಕ್ರಮಣ ಜಾಗದಲ್ಲಿ ಮನೆ ಕಟ್ಟಲು ಯಾವ ಸರ್ಕಾರವು ಹಣ ನೀಡಿಲ್ಲ. ಆದರೆ ವಾಸವಿರುವ ಮನೆಗೆ ಕರ ಸಂಗ್ರಹಣೆ ನಿಲ್ಲಿಸಿ ಅಭದ್ರತೆ ಸೃಷ್ಟಿಸಲು ಹೊರಟಿದೆ. ಈ ಹಿಂದೆ ಅತಿಕ್ರಮಣದಾರರಿಗೆ ಅಕ್ರಮವನ್ನು ಸಕ್ರಮವಾಗಿಸಲು ಹೋರಾಟ ಮಾಡಿದ್ದೇವೆ. ನಮ್ಮ ಶ್ರಮದ ನಮ್ಮ ಮನೆ ಉಳಿಸಿಕೊಳ್ಳಬೇಕು. ವಾಸ್ತವ್ಯದ ಜಾಗದಲ್ಲಿ ನಿಮ್ಮ ಪರವಾಗಿ ಆರ್‌ಟಿಸಿ ಬರುವರೆಗೂ ಹೋರಾಟ ಮಾಡುತ್ತೇವೆ ಎಂದರು.ಬಿಜೆಪಿ ಮಂಡಲಧ್ಯಕ್ಷ ಯೊಗೀಶ ಮೇಸ್ತ, ಗ್ರಾಪಂ ಮಾಜಿ ಸದಸ್ಯ ಸಚಿನ ನಾಯ್ಕ, ಗ್ರಾಮಸ್ಥರಾದ ಗೋಪಾಲ ನಾಯ್ಕ, ಅಗ್ನಿ ಭಟ್, ಮಹೇಶ ನಾಯ್ಕ ಕಾನಕ್ಕಿ, ಐ.ಆರ್. ಭಟ್, ಮಂಜುನಾಥ ನಾಯ್ಕ, ಶಿವಾನಂದ ಮರಾಠಿ ನೂತನ ಆದೇಶಕ್ಕೆ ಕಳವಳ ವ್ಯಕ್ತಪಡಿಸಿ ಆದೇಶ ವಾಪಸ್ ಪಡೆಯುವಂತೆ ಆಗ್ರಹಿಸಿದರು.
ಗ್ರಾಪಂ ಅಭಿವೃದ್ದಿ ಅಧಿಕಾರಿ ಬಾಬುರಾಯ್ ನಾಯ್ಕ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ಬಾಲಚಂದ್ರ ನಾಯ್ಕ, ಸದಸ್ಯ ಗಣಪತಿ ಭಟ್, ಲಕ್ಷ್ಮೀ ಮುಕ್ರಿ, ಬಿಜೆಪಿ ಮುಖಂಡರಾದ ಗೋವಿಂದ ಗೌಡ, ಸುಬ್ರಹ್ಮಣ್ಯ ಹೆಗಡೆ, ಎನ್.ಎಸ್. ಹೆಗಡೆ, ನಾರಾಯಣ ಹೆಗಡೆ, ಎಂ.ಎಸ್. ಹೆಗಡೆ, ಆರ್.ಎಂ. ಹೆಗಡೆ ನೂರಾರು ಸಂಖ್ಯೆಯ ಸಾರ್ವಜನಿಕರು ಇದ್ದರು.