ಮುಂದಿನ ಪೀಳಿಗೆಗೆ ನಮ್ಮ ಭಾಷೆ ಸಂಸ್ಕೃತಿಯ ಹಿರಿತನ ತಲುಪಿಸಬೇಕು: ಪೊನ್ನಣ್ಣ

| Published : Nov 11 2024, 11:47 PM IST

ಮುಂದಿನ ಪೀಳಿಗೆಗೆ ನಮ್ಮ ಭಾಷೆ ಸಂಸ್ಕೃತಿಯ ಹಿರಿತನ ತಲುಪಿಸಬೇಕು: ಪೊನ್ನಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಗಡಿನಾಡ ಉತ್ಸವದಲ್ಲಿ ಶಾಸಕ ಎ.ಎಸ್‌. ಪೊನ್ನಣ್ಣ ಭಾಗವಹಿಸಿದ್ದರು. ಯುವ ಪೀಳಿಗೆ ಭಾಷೆ, ಸಾಹಿತ್ಯ, ಸಂಸ್ಕೃತಿ, ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕರ್ನಾಟಕ ಅರೆ ಭಾಷೆ ಸಂಸ್ಕೃತಿ ಹಾಗೂ ಸಾಂಸ್ಕೃತಿಕ ಅಕಾಡೆಮಿ ಹಾಗೂ ಚೆಯ್ಯಂಡಾಣೆ ಆಯೋಜಿಸಿದ ಗಡಿನಾಡ ಉತ್ಸವ ಕಾರ್ಯಕ್ರಮದಲ್ಲಿ ಶಾಸಕ ಎ.ಎಸ್. ಪೊನ್ನಣ್ಣ ಭಾಗವಹಿಸಿದ್ದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಗೌಡ ಜನಾಂಗದವರು ತಮ್ಮ ಸಂಸ್ಕೃತಿ ಸಾಹಿತ್ಯ ಹಾಗೂ ಭಾಷೆಯ ಉಳಿವಿಗಾಗಿ ಇಂತಹ ಹಲವಾರು ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಇಂದಿನ ಯುವ ಪೀಳಿಗೆ ಭಾಷೆ, ಸಂಸ್ಕೃತಿ ಹಾಗೂ ಸಾಹಿತ್ಯವನ್ನು ಕಾಪಾಡಿಕೊಂಡು ಹೋಗುವ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸಬೇಕಾಗಿದೆ ಎಂದು ಸಲಹೆ ನೀಡಿದರು.

ಮುಂದಿನ ಪೀಳಿಗೆಗೆ ನಮ್ಮ ಭಾಷೆ ಸಂಸ್ಕೃತಿ ಹಾಗೂ ಸಾಹಿತ್ಯದ ಹಿರಿತನವನ್ನು ಪ್ರಾಮುಖ್ಯತೆಯನ್ನು ತಲುಪಿಸುವಂತಹ ಕೆಲಸವನ್ನು ಇಂದು ಅಕಾಡೆಮಿ ವತಿಯಿಂದ ಆಗುತ್ತಿದ್ದು ಇದು ಮುಂದುವರಿಯಲಿ ಎಂದು ಇದೇ ಸಂದರ್ಭದಲ್ಲಿ ಶುಭ ಕೋರಿದರು.

------------------------

ವಕ್ಫ್ ಆಸ್ತಿ ನೆಪದಲ್ಲಿ ಇಬ್ಬರಿಂದ ಮನೆಗೆ ಅತಿಕ್ರಮಣ: ದೂರು

ಕನ್ನಡಪ್ರಭ ವಾರ್ತೆ ಕುಶಾಲನಗರ

ಕುಶಾಲನಗರದ ಸಮೀಪ ಮುಳ್ಳುಸೋಗೆ ಬಳಿ ವಕ್ಫ್ ಆಸ್ತಿ ಎಂದು ಹೇಳಿ ಇಬ್ಬರು ವ್ಯಕ್ತಿಗಳು ಮನೆಗೆ ಅತಿಕ್ರಮಣ ಪ್ರವೇಶ ಮಾಡಿ ಬೆದರಿಕೆ ಒಡ್ಡಿರುವ ಹಾಗೂ ಬೆದರಿಕೆ ಕರೆ ಬಂದಿರುವ ಬಗ್ಗೆ ಮಹಿಳೆಯಿಂದ ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸೂಕ್ಷ್ಮ ಪ್ರಕರಣವಾದ್ದರಿಂದ ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ಮತ್ತು ತಾಲೂಕು ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಕ್ರಮ ಕೈಗೊಂಡಿದ್ದಾರೆ. ಪ್ರಾಥಮಿಕ ತನಿಖೆ ಪ್ರಕಾರ ಮಹಿಳೆಗೆ ಯಾವುದೇ ಬೆದರಿಕೆ ಕರೆ ಬಂದಿಲ್ಲ ಎಂದು ಕೊಡಗು ಜಿಲ್ಲಾ ಎಸ್‌ಪಿ ರಾಮರಾಜನ್ ಸ್ಪಷ್ಟ ಪಡಿಸಿದ್ದಾರೆ.

ಮುಳ್ಳುಸೋಗೆಯ ನಿವಾಸಿ ಪುಚ್ಚಿಮಂಡ ರೇಣುಕಾ ಉತ್ತಪ್ಪ ಎಂಬವರು ಇಬ್ಬರ ಮೇಲೆ ದೂರು ದಾಖಲಿಸಿದ್ದು, ಅ.25ರಂದು ಇಬ್ಬರು ತನ್ನ ಮನೆಯ ಆವರಣಕ್ಕೆ ಅಕ್ರಮವಾಗಿ ಪ್ರವೇಶಿಸಿ, ಈ ಆಸ್ತಿ ವಕ್ಫ್ ಮಂಡಳಿಗೆ ಸೇರಿದ್ದು ತಕ್ಷಣ ಖಾಲಿ ಮಾಡುವಂತೆ ತಗಾದೆ ತೆಗೆದಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಈ ವೇಳೆ ತನಗೆ ಬೆದರಿಕೆಯೊಡ್ಡಿದ್ದರು. ನಂತರ ತನಗೆ ಮೊಬೈಲ್ ಮೂಲಕ ಮೂರು ಸಾರಿ ಸಂಪರ್ಕ ಮಾಡಿರುವುದಾಗಿಯೂ ದೂರಿನಲ್ಲಿ ಹೇಳಿದ್ದಾರೆ.

ಮಹಿಳೆ, ಮುಖ್ಯಮಂತ್ರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಲಿಖಿತ ದೂರು ನೀಡಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಮತ್ತು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆ ಕೈಗೊಳ್ಳಲಾಗಿದೆ.ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಕುಶಾಲನಗರ ತಾಲೂಕು ತಹಸೀಲ್ದಾರ್ ಕಿರಣ್ ಜಿ. ಗೌರಯ್ಯ ಮತ್ತು ಸಿಬ್ಬಂದಿ ಮಹಿಳೆಯ ಮನೆಗೆ ಭೇಟಿ ನೀಡಿ ಸಂಪೂರ್ಣ ಮಾಹಿತಿ ಕಲೆ ಹಾಕಿದ್ದಾರೆ. ದಾಖಲೆಗಳ ಪರಿಶೀಲನೆ ನಡೆಸಿದ್ದು, ಈ ಆಸ್ತಿ ಒಟ್ಟು 21 ಸೆಂಟ್ ಹೊಂದಿದ್ದು, ಪ್ರಸಕ್ತ ರೇಣುಕಾ ಉತ್ತಪ್ಪ ಅವರು ಜಾಗದ ಮಾಲೀಕರಾಗಿದ್ದಾರೆ ಎಂದು ತಿಳಿಸಿದ್ದಾರೆ.

1985ರಲ್ಲಿ ಆಸ್ತಿ ಖರೀದಿಯಾಗಿದ್ದು, ಇದರಲ್ಲಿ ಇತ್ತೀಚೆಗೆ 5 ಸೆಂಟ್ ಜಾಗವನ್ನು ಸ್ವಾಮಿಗೌಡ ಎಂಬವರಿಗೆ ಮಾರಾಟ ಮಾಡಿರುವ ದಾಖಲೆಯೂ ಲಭಿಸಿದೆ ಎಂದು ತಹಸೀಲ್ದಾರ್ ಮಾಹಿತಿ ನೀಡಿದ್ದಾರೆ.

ಕುಶಾಲನಗರ ಪೊಲೀಸ್ ಇನ್‌ಸ್ಪೆಕ್ಟರ್‌ ಪ್ರಕಾಶ್, ಠಾಣಾಧಿಕಾರಿ ಗೀತಾ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಸಂಪೂರ್ಣ ಸ್ಥಳ ಮಹಜರು ನಡೆಸಿದ್ದಾರೆ.

ಕುಶಾಲನಗರ ಪಟ್ಟಣ ಠಾಣಾಧಿಕಾರಿ ಗೀತಾ ಮತ್ತು ಸಿಬ್ಬಂದಿ ಬೆಂಗಳೂರಿನ ಬನಶಂಕರಿಗೆ ತೆರಳಿ ಈ ಹಿಂದೆ ದೂರು ನೀಡಿದ ಮಹಿಳೆ ರೇಣುಕಾ ಉತ್ತಪ್ಪ ಅವರನ್ನು ಭೇಟಿ ಮಾಡಿ ಕುಶಾಲನಗರಕ್ಕೆ ಬರುವಂತೆ ಸೂಚನೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಮಹಿಳೆ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ಪ್ರಕರಣದ ಬಗ್ಗೆ ದೂರು ಸಲ್ಲಿಸಿದ್ದರು ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ತಿಳಿಸಿದ್ದಾರೆ.

ಪೊಲೀಸರು ಘಟನಾ ಸ್ಥಳದ ಸುತ್ತಮುತ್ತ ನೆರೆಕೆರೆಯ ಮನೆಯ ಜನರನ್ನು ಕೂಡ ವಿಚಾರಣೆಗೆ ಒಳಪಡಿಸಿದ್ದು, ಇವರಿಗೆ ಪ್ರಕರಣದ ಬಗ್ಗೆ ಯಾವುದೇ ಮಾಹಿತಿ ಇಲ್ಲದಿರುವ ಬಗ್ಗೆ ಕೂಡ ಪೊಲೀಸರು ಖಚಿತಪಡಿಸಿಕೊಂಡಿದ್ದಾರೆ.

* ಮನೆ ಮಾರಾಟ ಚಿಂತನೆ:

ತಾನು ಮನೆಯನ್ನು ಮಾರಾಟ ಅಥವಾ ಲೀಸ್ ನೀಡುವ ಬಗ್ಗೆ ಕೂಡ ಚಿಂತನೆ ಹೊಂದಿದ್ದೆ. ಈ ಸಂಬಂಧ ನಾಲ್ಕೈದು ಮಂದಿ ತನ್ನ ಮನೆ ಖರೀದಿಸಲು ಬಂದಿರುವ ಬಗ್ಗೆ ಮಹಿಳೆ ರೇಣುಕಾ ಉತ್ತಪ್ಪ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ. ಆ ಸಂದರ್ಭ ಬಂದಿದ್ದ ವ್ಯಕ್ತಿಗಳಿಗೆ ಮನೆಯನ್ನು ಮಾರಾಟ ಮಾಡಲು ಸಮ್ಮತಿ ನೀಡದಿರುವ ಬಗ್ಗೆ ಕೂಡ ತಿಳಿಸಿದ್ದು, ಒಟ್ಟಾರೆ ಈ ಪ್ರಕರಣದಲ್ಲಿ ಹಲವು ಗೊಂದಲಗಳು ಉದ್ಭವಿಸಿದೆ. ಪೊಲೀಸರು ಸಮಗ್ರ ತನಿಖೆ ಕೈಗೊಂಡಿದ್ದಾರೆ.

ಜಿಲ್ಲಾ ಎಸ್‌ಪಿ ಸ್ಪಷ್ಟನೆ:

ಮಹಿಳೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಬೆದರಿಕೆ ಕರೆ ಮಾಡಿರುವ ಬಗ್ಗೆ ಸಂಬಂಧಿಸಿದ ಮೊಬೈಲ್ ಕರೆಗಳನ್ನು ಪರಿಶೀಲಿಸಲಾಗಿದ್ದು, ಆ ದಿನಾಂಕಗಳಲ್ಲಿ ಯಾವುದೇ ರೀತಿಯ ಕರೆಗಳು ಬಂದಿರುವ ಕುರಿತು ಮಾಹಿತಿ ಇರುವುದಿಲ್ಲ ಎಂದು ಜಿಲ್ಲಾ ಎಸ್‌ಪಿ ರಾಮರಾಜನ್‌ ಸ್ಪಷ್ಟಪಡಿಸಿದ್ದಾರೆ.

ದೂರುದಾರ ಮಹಿಳೆಯ ಮಾಹಿತಿಯಂತೆ ಈ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಯನ್ನು ಹರಡಿಸಿ ಸಮಾಜದ ಸಾಮರಸ್ಯವನ್ನು ಕರಡುವ ಪ್ರಯತ್ನ ನಡೆದಲ್ಲಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಯಾವುದೇ ಅಪರಿಚಿತ ವ್ಯಕ್ತಿಗಳು ಬೆದರಿಕೆ ಹಾಕುವುದು ಕಂಡುಬಂದಲ್ಲಿ ಸ್ಥಳೀಯ ಪೊಲೀಸ್ ಠಾಣೆ ಅಥವಾ ತುರ್ತು ಸಹಾಯವಾಣಿ 112 ಕರೆ ಮಾಡಿ ಮಾಹಿತಿ ನೀಡಿ ಸಹಕರಿಸುವಂತೆ ಕೆ. ರಾಮರಾಜನ್ ಕೋರಿದ್ದಾರೆ.