ಮಾಗಡಿ: ಕಾಂಗ್ರೆಸ್ಸಿನ ಕೆಲ ಗಂಜಿ ಗಿರಾಕಿಗಳು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಮಾಜಿ ಶಾಸಕ ಎ.ಮಂಜುನಾಥ್ ವಿರುದ್ಧ ಸಾರ್ವಜನಿಕವಾಗಿ ಆಧಾರರಹಿತ ಮತ್ತು ಕೀಳುಮಟ್ಟದ ಹೇಳಿಕೆಗಳನ್ನು ನೀಡುತ್ತಿರುವ ಪಕ್ಷಾಂತರಿ ಮುಖಂಡರಿಗೆ ಜೆಡಿಎಸ್ ನಾಯಕರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಜೆಡಿಎಸ್ ಮುಖಂಡ ಬೆಳಗವಾಡಿ ರಂಗಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು

ಮಾಗಡಿ: ಕಾಂಗ್ರೆಸ್ಸಿನ ಕೆಲ ಗಂಜಿ ಗಿರಾಕಿಗಳು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಮಾಜಿ ಶಾಸಕ ಎ.ಮಂಜುನಾಥ್ ವಿರುದ್ಧ ಸಾರ್ವಜನಿಕವಾಗಿ ಆಧಾರರಹಿತ ಮತ್ತು ಕೀಳುಮಟ್ಟದ ಹೇಳಿಕೆಗಳನ್ನು ನೀಡುತ್ತಿರುವ ಪಕ್ಷಾಂತರಿ ಮುಖಂಡರಿಗೆ ಜೆಡಿಎಸ್ ನಾಯಕರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಜೆಡಿಎಸ್ ಮುಖಂಡ ಬೆಳಗವಾಡಿ ರಂಗಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಕೃಷ್ಣಮೂರ್ತಿ ಹಾಗೂ ಕಲ್ಕೆರೆ ಶಿವಣ್ಣ ಸೇರಿದಂತೆ ಕೆಲವರು ಮಾಜಿ ಶಾಸಕರು ಹಾಗು ಮಾಜಿ ಸಿಎಂ ಕುಮಾರಸ್ವಾಮಿ ಅವರು ಯಾವುದೇ ಆರೋಪ ಮಾಡಿದರೂ ದಾಖಲೆ ಸಮೇತ ಮಾತನಾಡುತ್ತಾರೆ. ಆದರೆ ಅಧಿಕಾರ ಎಲ್ಲಿದೆಯೋ ಅಲ್ಲಿಗೆ ಜಿಗಿಯುವ ಕೆಲವರು ಕೇವಲ ಪ್ರಚಾರಕ್ಕಾಗಿ ನಮ್ಮ ನಾಯಕರ ವಿರುದ್ಧ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಒಕ್ಕಲಿಗರ ಸಂಘ ಸೇರಿದಂತೆ ತಾವು ಹೆಜ್ಜೆ ಇಟ್ಟ ಕಡೆಗಳಲ್ಲೆಲ್ಲಾ ಅವ್ಯವಹಾರದ ಆರೋಪ ಹೊತ್ತಿರುವ ಇವರ ರಾಜಕೀಯ ಇತಿಹಾಸವೇನೆಂದು ಮಾಗಡಿ ಜನತೆಗೆ ಗೊತ್ತಿದೆ ಎಂದು ರಂಗಸ್ವಾಮಿ ಕಿಡಿಕಾರಿದರು.

ವಿದ್ಯಾರ್ಥಿ ಮಿತ್ರ ಕಿರಣ್ ಅವರೇ 35 ವರ್ಷಗಳ ಆಡಳಿತಕ್ಕೂ ಮಂಜಣ್ಣ ಅವರ 5 ವರ್ಷಗಳ ಆಡಳಿತಕ್ಕೂ ಹೋಲಿಕೆ ಮಾಡಲು ಹೊರಟಿದ್ದಾರೆ. ಕೊರೊನಾ ಸಂಕಷ್ಟದ ನಡುವೆಯೂ ಕುಮಾರಸ್ವಾಮಿ ಅವರ ಅವಧಿಯಲ್ಲಿ ನೂರಾರು ಕೋಟಿ ಅನುದಾನ ತಂದು ತಾಲೂಕಿನ ರಸ್ತೆಗಳು, ಚೆಕ್ ಡ್ಯಾಮ್‌ಗಳು, ಜಿಟಿಟಿಸಿ ತರಬೇತಿ ಕೇಂದ್ರ ಹಾಗೂ ಕುಡಿಯುವ ನೀರಿನ ಯೋಜನೆಗಳನ್ನು ಜಾರಿಗೆ ತಂದ ಹೆಗ್ಗಳಿಕೆ ಮಂಜಣ್ಣ ಅವರಿಗಿದೆ. ನಾವಿಲ್ಲಿ ದಾಖಲೆಗಳ ಸಮೇತ ಕುಳಿತಿದ್ದೇವೆ. ಅಭಿವೃದ್ಧಿ ಬಗ್ಗೆ ಮುಕ್ತ ಚರ್ಚೆಗೆ ಬರುವುದಾದರೆ ಬರಲಿ ಎಂದು ರಂಗಸ್ವಾಮಿ ಕಾಂಗ್ರೆಸ್ ಮುಖಂಡರಿಗೆ ಸವಾಲು ಹಾಕಿದರು.

ಇಂತಹ ಅವಕಾಶವಾದಿ ರಾಜಕಾರಣಿಗಳ ಮಾತು ಕೇಳಿ ಸಚಿವರು ತಮ್ಮ ಘನತೆ ಕಡಿಮೆ ಮಾಡಿಕೊಳ್ಳಬಾರದು. ಇನ್ನಾದರೂ ಕ್ಷೇತ್ರದ ಅಭಿವೃದ್ಧಿ, ಕುಡಿಯುವ ನೀರು, ಕೆರೆ ತುಂಬಿಸುವ ಯೋಜನೆಗಳು ಹಾಗೂ ಪುರಸಭೆ ವ್ಯಾಪ್ತಿಯ ಮೂಲಸೌಕರ್ಯಗಳ ಸುಧಾರಣೆಗೆ ಗಮನಹರಿಸಲಿ. 2028ರ ಚುನಾವಣೆಯಲ್ಲಿ ಯಾರು ಜನಪರ ಕೆಲಸ ಮಾಡಿದ್ದಾರೆ ಎಂಬುದನ್ನು ಮತದಾರರೇ ತೀರ್ಮಾನಿಸಲಿದ್ದಾರೆ ಎಂದು ತಿಳಿಸಿದರು.

ಜೆಡಿಎಸ್ ಮುಖಂಡ ಮರೂರು ಸಾಗರ್ ಮಾತನಾಡಿ, ತಾಲೂಕಿನಲ್ಲಿ ತೀವ್ರ ಬರಗಾಲ ಎದುರಾಗಿದ್ದು ಕೆರೆ-ಕಟ್ಟೆಗಳಲ್ಲಿ ನೀರಿಲ್ಲದೆ ಜನ ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಆಡಳಿತಾರೂಢ ಕಾಂಗ್ರೆಸ್ ನಾಯಕರು ಬರ ಪರಿಹಾರ ಹಾಗೂ ಅಭಿವೃದ್ಧಿ ಕಡೆಗೆ ಗಮನಹರಿಸುವುದು ಬಿಟ್ಟು, ಜೆಡಿಎಸ್ ನಾಯಕರ ವೈಯಕ್ತಿಕ ನಿಂದನೆಯಲ್ಲಿ ತೊಡಗಿದ್ದಾರೆ. ರಾಜಕೀಯ ನಾಯಕರ ನಡುವೆ ಸೈದ್ಧಾಂತಿಕ ಚರ್ಚೆಗಳು ಸಹಜ. ಆದರೆ ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ನಾಯಕರ ವಿರುದ್ಧ ಏಕವಚನ ಬಳಸುತ್ತಿರುವುದು ಖಂಡನೀಯ ಎಂದು ಗುಡುಗಿದರು.

ಈ ವೇಳೆ ಎಂಡಿಎ ಮಾಜಿ ಅಧ್ಯಕ್ಷ ಎಂ.ಎನ್.ಮಂಜುನಾಥ್‌, ಪುರಸಭೆ ಮಾಜಿ ಅಧ್ಯಕ್ಷ ನಯಾಜ್‌ ಆಹಮದ್, ಕೆ.ವಿ.ಬಾಲರಘು, ಎನ್‌ಇಎಸ್ ರಮೇಶ್, ನೇತೇನಹಳ್ಳಿ ಪುರುಷೋತ್ತಮ್, ವಕೀಲರಾದ ವಸಂತ್, ಹೊಸಪೇಟೆ ನಾಗರಾಜ್ ಮಾತನಾಡಿದರು, ಪುರಸಭೆ ಮಾಜಿ ಸದಸ್ಯ ಅನಿಲ್‌ಕುಮಾರ್, ಎಂ.ಬಿ.ಮಹೇಶ್, ಹಲಸಬೆಲೆ ಗಂಗರಾಜು, ರೇಖಾನವೀನ್, ಶಿವಕುಮಾರ್, ಶಹಬಾಜ್, ದೊಣಕುಪ್ಪೆ ಮೂರ್ತಿ, ಮಂಜುನಾಥ್ ಧರ್ಮ, ಗೌಡ ಹಾಜರಿದ್ದರು.

(ಫೋಟೊ ಕ್ಯಾಪ್ಷನ್‌)

ಮಾಗಡಿಯಲ್ಲಿ ಜೆಡಿಎಸ್ ಮುಖಂಡ ಬೆಳಗವಾಡಿ ರಂಗಸ್ವಾಮಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.