‘ದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್ಐಆರ್) ಪ್ರಕ್ರಿಯೆಯು ಬಿಜೆಪಿಯನ್ನು ವಿರೋಧಿಸುವವರ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಉದ್ದೇಶ ಹೊಂದಿದೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಚುನಾವಣಾ ಆಯೋಗವು ಪ್ರಜಾಪ್ರಭುತ್ವದ ಹತ್ಯೆ ಮಾಡುತ್ತಿದೆ’ ಎಂದು ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ) ಸಂಸ್ಥಾಪಕ ಅಭಿಜಿತ್ ದೀಪ್ಕೆ ವಾಗ್ದಾಳಿ ನಡೆಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
‘ದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್ಐಆರ್) ಪ್ರಕ್ರಿಯೆಯು ಬಿಜೆಪಿಯನ್ನು ವಿರೋಧಿಸುವವರ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಉದ್ದೇಶ ಹೊಂದಿದೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಚುನಾವಣಾ ಆಯೋಗವು ಪ್ರಜಾಪ್ರಭುತ್ವದ ಹತ್ಯೆ ಮಾಡುತ್ತಿದೆ’ ಎಂದು ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ) ಸಂಸ್ಥಾಪಕ ಅಭಿಜಿತ್ ದೀಪ್ಕೆ ವಾಗ್ದಾಳಿ ನಡೆಸಿದ್ದಾರೆ.‘ನಮ್ಮ ಮುಂದಿನ ವಿಕೆಟ್ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್. ಅವರು ರಾಜೀನಾಮೆ ನೀಡುವವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ’ ಎಂದೂ ಅವರು ಘೋಷಿಸಿದ್ದಾರೆ.
ಗುರುವಾರ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಎಸ್ಐಆರ್ ವಿರೋಧಿ ಒಕ್ಕೂಟ, ಸಿಜೆಪಿ ಸೇರಿದಂತೆ ವಿವಿಧ ನಾಗರಿಕ ಸಂಘಟನೆಗಳ ನೇತೃತ್ವದಲ್ಲಿ ನಡೆದ ‘ಜನತಾ ನ್ಯಾಯಾಲಯ’ ಹೆಸರಿನ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮತಗಳನ್ನು ಅಳಿಸಿ ಹಾಕುವ(ಡಿಲೀಟ್) ಮತ್ತು ಕದಿಯುವ ಮೂಲಕ ನರೇಂದ್ರ ಮೋದಿ ಅವರು ಈ ದೇಶದ ಪ್ರಧಾನಿಯಾದರು ಎಂದು ಆರೋಪಿಸಿದರು.ಎಸ್ಐಆರ್ ವೇಳೆ ಸತ್ತಿದ್ದಾರೆ ಎಂದು ಘೋಷಿಸಿರುವ ಜನರು ಇಲ್ಲಿ ಜೀವಂತವಾಗಿ ನಿಂತಿದ್ದಾರೆ. ಹೀಗಾಗಿ ಇಲ್ಲಿ ಸಂಭವಿಸಿರುವುದು ಈ ಜನರ ಸಾವಲ್ಲ. ಇದು ಈ ದೇಶದ ಪ್ರಜಾಪ್ರಭುತ್ವದ ಸಾವಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೂಚನೆ ಮೇರೆಗೆ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ಹಾಗೂ ಆಯೋಗದ ಅಧಿಕಾರಿಗಳು ಜನರ ಮತಗಳನ್ನು ಅಳಿಸಿ ಹಾಕಿದ್ದಾರೆ ಎಂದು ದೂರಿದರು.
ಆರ್‌ಎಸ್‌ಎಸ್‌ದು ಗೋಡ್ಸೆ ಸಿದ್ಧಾಂತ:ಆರ್‌ಎಸ್‌ಎಸ್ ಸಿದ್ಧಾಂತವು ಎಲ್ಲರನ್ನೂ ಒಳಗೊಂಡ ಭಾರತ ಅಲ್ಲ. ಡಾ.ಬಿ.ಆರ್.ಅಂಬೇಡ್ಕರ್, ಪೆರಿಯಾರ್, ಮಹಾತ್ಮ ಗಾಂಧಿ ಅವರ ತತ್ವಗಳಲ್ಲಿ ಇವರಿಗೆ ನಂಬಿಕೆ ಇಲ್ಲ. ಮಹಾತ್ಮ ಗಾಂಧಿಯನ್ನು ಕೊಂದ ನಾಥೂರಾಮ್ ಗೋಡ್ಸೆ ತತ್ವಗಳಲ್ಲಿ ಇವರಿಗೆ ನಂಬಿಕೆಯಿದೆ. ನಮ್ಮ ಪ್ರಜಾಪ್ರಭುತ್ವ ಮತ್ತು ದೇಶವನ್ನು ಉಳಿಸಲು ನಾವು ಆ ಸಿದ್ಧಾಂತದ ವಿರುದ್ಧ ಹೋರಾಡುವ ಅಗತ್ಯವಿದೆ ಎಂದು ದೀಪ್ಕೆ ಹೇಳಿದರು.
ಮಹಾತ್ಮ ಗಾಂಧಿ ಭಾರತದ ಆತ್ಮ, ಡಾ.ಬಿ.ಆರ್.ಅಂಬೇಡ್ಕರ್ ಈ ದೇಶದ ಬೆನ್ನೆಲುಬು ಮತ್ತು ಜವಾಹರಲಾಲ್ ನೆಹರು ಈ ದೇಶದ ಮನಸು ಎಂದು ಬಣ್ಣಿಸಿದ ಅಭಿಜಿತ್ ದೀಪ್ಕೆ, ಈ ಮೂವರು ನಾಯಕರು ಈ ದೇಶಕ್ಕೆ ಭದ್ರ ಅಡಿಪಾಯ ಹಾಕಿದವರು. ಪ್ರಧಾನಿ ನರೇಂದ್ರ ಮೋದಿ ಅವರು ಈ ಮೂವರು ಮಹನೀಯರೊಂದಿಗೆ ಹೋಲಿಸಿಕೊಳ್ಳಲು ಸಾಧ್ಯವಿಲ್ಲ. ಮತಗಳನ್ನು ಅಳಿಸಿ ಹಾಕುವ ಮೂಲಕ ನೆಹರು ಅವರಿಗಿಂತ ಹೆಚ್ಚು ಕಾಲ ಅಧಿಕಾರದಲ್ಲಿ ಉಳಿಯಲು ಮೋದಿ ಬಯಸುತ್ತಿದ್ದಾರೆ ಎಂದು ದೀಪ್ಕೆ ಆರೋಪಿಸಿದರು.ಬಿಜೆಪಿಗೆ ಹಾಕದ ಮತ ಡಿಲೀಟ್:
2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ವಿರೋಧ ಪಕ್ಷಗಳ ನಡುವಿನ ಮತ ಹಂಚಿಕೆ ಅಂತರ ಕೇವಲ ಶೇ.2ರಷ್ಟಿತ್ತು. ಆಗ 400 ಸೀಟುಗಳ ಗಡಿ ದಾಟುವ ಘೋಷಣೆ ಮಾಡಿದ್ದ ಬಿಜೆಪಿಗೆ ಅಂತಿಮವಾಗಿ ದಕ್ಕಿದ್ದು ಕೇವಲ 240 ಸ್ಥಾನ ಮಾತ್ರ. ಎಸ್ಐಆರ್ ಪ್ರಕ್ರಿಯೆಯಲ್ಲಿ ಬಿಜೆಪಿ ಬೆಂಬಲಿಸದ ಜನರ ಮತಗಳನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕುವ ನಿರ್ಧಾರಕ್ಕೆ ಇದೂ ಪ್ರಮುಖ ಕಾರಣ. ಬಿಜೆಪಿಯು ತನಗೆ ಮತ ಹಾಕದವರ ಮತಗಳನ್ನೇ ತೆಗೆಯುತ್ತೇವೆ ಎಂಬ ಧೋರಣೆ ಅನುಸರಿಸುತ್ತಿದೆ ಎಂದು ಅಭಿಜಿತ್ ದೀಪ್ಕೆ ಆರೋಪಿಸಿದರು.ದೇಶದಾದ್ಯಂತ 13 ಕೋಟಿ ಮತ್ತು ಕರ್ನಾಟಕದಲ್ಲಿ ಸುಮಾರು ಒಂದು ಕೋಟಿ ಮತಗಳನ್ನು ತೆಗೆದುಹಾಕಲಾಗಿದೆ. ಈ ಸಂಖ್ಯೆಯು ನೋಂದಾಯಿತ ಮತದಾರರ ಪೈಕಿ ಶೇ.13 ರಿಂದ 14ರಷ್ಟಿದೆ. ಮೋದಿ ಅಲೆಯ ಉತ್ತುಂಗದ ಸಮಯದಲ್ಲೂ ಗೆಲ್ಲಲು ಸಾಧ್ಯವಾಗದಿದ್ದ ರಾಜ್ಯಗಳಲ್ಲಿ ಬಿಜೆಪಿ ಗೆಲುವು ಸಾಧಿಸಲು ಇಂತಹ ಮತಗಳ ಅಳಿಸುವಿಕೆ ಪ್ರಮುಖ ಕಾರಣವಾಯಿತು ಎಂದು ಅವರು ಹೇಳಿದರು.
ಮತ ಡಿಲೀಟ್ ಮಾಡಿಸಿ ಸೋಲಿಸಿದರು:ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಕ್ಷೇತ್ರದಲ್ಲಿ 50 ಸಾವಿರ ಮತಗಳನ್ನು ತೆಗೆದುಹಾಕಲಾಗಿದೆ. ಅಲ್ಲಿ ಅವರು 15 ಸಾವಿರ ಮತಗಳಿಂದ ಸೋತಿದ್ದಾರೆ. ಅರವಿಂದ್ ಕೇಜ್ರಿವಾಲ್ ಅವರ ಕ್ಷೇತ್ರದಲ್ಲಿ ಸುಮಾರು 40 ಸಾವಿರ ಮತಗಳನ್ನು ತೆಗೆದುಹಾಕಲಾಗಿದೆ. ಅಲ್ಲಿ ಅವರು ಸುಮಾರು 4 ಸಾವಿರ ಮತಗಳ ಅಂತರದಿಂದ ಸೋತಿದ್ದಾರೆ. ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಕ್ಷೇತ್ರದಲ್ಲಿ ಸುಮಾರು 1 ಲಕ್ಷ ಮತಗಳನ್ನು ತೆಗೆದು ಹಾಕಲಾಗಿದೆ. ಅಲ್ಲಿ ಗೆಲುವಿನ ಅಂತರ ಸುಮಾರು 9-10 ಸಾವಿರ ಇದೆ. ಕೇರಳದಲ್ಲಿ ಪಿಣರಾಯಿ ವಿಜಯನ್ ಮುಖ್ಯಮಂತ್ರಿ ಸ್ಥಾನದಿಂದಲೇ ನಿರ್ಗಮಿಸಿದರು ಎಂದು ಅಭಿಜಿತ್ ದೀಪ್ಕೆ ಕೆಲ ಉದಾಹರಣೆ ನೀಡಿದರು.
ಈ ನಾಲ್ವರು ನಾಯಕರು 2024ರ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ವಿರುದ್ಧ ಪ್ರಚಾರ ನಡೆಸಿದ್ದರು. ಬಿಜೆಪಿ ಬಹುಮತ ಪಡೆಯದಂತೆ ತಡೆಯಲು ಸಹಾಯ ಮಾಡಿದ್ದರು. ಬಿಜೆಪಿ ಮತ್ತು ಆರ್‌ಎಸ್‌ಎಸ್ ಪ್ರಾದೇಶಿಕ ಶಕ್ತಿಗಳನ್ನು ನಾಶಪಡಿಸುವ ತಂತ್ರ ಹೊಂದಿದೆ. ಪ್ರಾದೇಶಿಕ ನಾಯಕರನ್ನು ನಾಶಪಡಿಸುವ ಮೂಲಕ ಆರ್‌ಎಸ್‌ಎಸ್‌ನ ಈ ಪುಂಡರು ತಮ್ಮ ಸಿದ್ಧಾಂತವನ್ನು ನಮ್ಮ ಮೇಲೆ ಹೇರಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.ನಾವು ಎಂದಿಗೂ ಕ್ಷೇತ್ರ ಮರು-ವಿಂಗಡಣೆಗೆ ಅವಕಾಶ ನೀಡುವುದಿಲ್ಲ. ಏಕೆಂದರೆ, ಭಾರತವನ್ನು ಮುನ್ನಡೆಸುವುದು ದಕ್ಷಿಣ ಭಾರತವೇ. ಪ್ರಜಾಪ್ರಭುತ್ವವನ್ನು ಉಳಿಸುವ ಹೋರಾಟದಲ್ಲಿ ದಕ್ಷಿಣ ಭಾರತ ಮುಂಚೂಣಿಯಲ್ಲಿರುತ್ತದೆ ಮತ್ತು ಭವಿಷ್ಯದಲ್ಲಿ ಭಾರತವನ್ನು ದಕ್ಷಿಣ ಭಾರತವೇ ಮುನ್ನಡೆಸುತ್ತದೆ. ಪ್ರಜಾಪ್ರಭುತ್ವ ಮರಳಿ ಪಡೆಯುವವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಹೇಳಿದರು.
-ಕೋಟ್-10ಕ್ಕೆ ದಿಲ್ಲಿಯಲ್ಲಿ ಹೋರಾಟಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ. ಅ.10ರಂದು ದೆಹಲಿಯಲ್ಲಿ ನಡೆಯುವ ಹೋರಾಟಕ್ಕೆ ನಿಮ್ಮೆಲ್ಲರ ಬೆಂಬಲದ ಅಗತ್ಯವಿದೆ
- ಅಭಿಜಿತ್ ದೀಪ್ಕೆ, ಸಿಜೆಪಿ ಸಂಸ್ಥಾಪಕ---