ಈ ಪುಣ್ಯ ಭೂಮಿಯಲ್ಲಿ ಹತ್ತಾರು ಆಚರಣೆಗಳಿವೆ; ಅವುಗಳಿಂದ ನಮ್ಮ ಸಂಸ್ಕೃತಿಯನ್ನು ಕಟ್ಟಿಕೊಟ್ಟಿವೆ

ಹೂವಿನಹಡಗಲಿ: ಈ ಪುಣ್ಯ ಭೂಮಿಯಲ್ಲಿ ಹತ್ತಾರು ಆಚರಣೆಗಳಿವೆ; ಅವುಗಳಿಂದ ನಮ್ಮ ಸಂಸ್ಕೃತಿಯನ್ನು ಕಟ್ಟಿಕೊಟ್ಟಿವೆ. ಸಂಸ್ಕೃತಿಯ ಪುನರುತ್ಥಾನಕ್ಕೆ ಧರ್ಮಾಚರಣೆಗಳು ಅವಶ್ಯಕವಾಗಿವೆ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ಡಾ.ವೀರಸೋಮೇಶ್ವರ ಸ್ವಾಮೀಜಿ ಹೇಳಿದರು.ತಾಲೂಕಿನ ಕಾಂತೇಬೆನ್ನೂರು ಮೈಲಮ್ಮದೇವಿ, ಸಿದ್ಧಿ ವಿನಾಯಕ ಜೋಡಿ ರಥೋತ್ಸವ ಅಂಗವಾಗಿ ನಡೆದ ಉಚಿತ ಸಾಮೂಹಿಕ ವಿವಾಹ ಮತ್ತು ಜನ ಜಾಗೃತಿ ಧರ್ಮ ಸಮಾರಂಭದ ಕಾರ್ಯಕ್ರಮ ಚಾಲನೆ ನೀಡಿ ಮಾತನಾಡಿದರು.

ಎಲ್ಲ ಜಾತಿ ಜನಾಂಗದವರು ಈ ನಾಡಿನ ಸಂಸ್ಕೃತಿಯ ಪಾವಿತ್ರತೆಯ ಕಾಪಾಡುವ ಭಾವನೆ ಎಲ್ಲರಲ್ಲಿಯೂ ಇರಬೇಕು. ಮನುಷ್ಯನ ಮೌಲ್ಯಗಳು ನಮ್ಮ ಆಚರಣೆಯಲ್ಲಿವೆ. ಹಿಂಸೆ, ಅಸಮಾಧಾನ, ಅತೃಪ್ತಿ ಹೋಗಲಾಡಿಸಿಕೊಂಡವನೇ ನಿಜವಾದ ಧರ್ಮ ನಿಷ್ಠನಾಗಲು ಸಾಧ್ಯ. ಮನುಷ್ಯನಲ್ಲಿ ಆದರ್ಶ ಸಂಸ್ಕಾರಗಳು ಬೆಳೆದುಕೊಂಡು ಬರುವ ಅವಶ್ಯಕತೆಯಿದೆ. ವೀರಶೈವ ಧರ್ಮ ಸಕಲರಿಗೂ ಸದಾ ಒಳ್ಳೆಯದನ್ನೇ ಬಯಸುತ್ತಾ ಬಂದಿದೆ ಎಂದರು.

ಈ ಸಂದರ್ಭದಲ್ಲಿ ಜರುಗಿದ ಸಾಮೂಹಿಕ ವಿವಾಹದಲ್ಲಿ 7 ಜೋಡಿಗಳು ನೂತನ ಜೀವನ ಆರಂಭಿಸಿದರು. ಸಮಾರಂಭಕ್ಕೂ ಮುನ್ನ ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಸಡಗರ ಸಂಭ್ರಮ ಸಡಗರದಿಂದ ಜರುಗಿತು.

ಮೈಲಮ್ಮದೇವಿ ಸಮಾಜಮುಖಿ ತ್ರಿವಿಧ ದಾಸೋಹ ಟ್ರಸ್ಟಿನ ಧರ್ಮಾಧಿಕಾರಿ ಮಂಜುನಾಥ, ಹಂಪಸಾಗರ, ನವಲಿ ಹಿರೇಮಠದ ಶಿವಲಿಂಗ ರುದ್ರಮುನಿ ಸ್ವಾಮೀಜಿ, ನೆಗಳೂರು ಹಿರೇಮಠದ ಗುರುಶಾಂತೇಶ್ವರ ಸ್ವಾಮೀಜಿ, ಮಾನಿಹಳ್ಳಿ ಪುರವರ್ಗಮಠದ ಮಳೆಯೋಗೀಶ್ವರ ಸ್ವಾಮೀಜಿ, ಅಂಗೂರು ಹಿರೇಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ಮುತ್ತಿಗಿ ಸದ್ಗುರು ಅಜ್ಜಯ್ಯ ಹಾಲಸ್ವಾಮೀಜಿ ಸೇರಿದಂತೆ ಇತರರಿದ್ದರು.