ಹಾನಗಲ್ಲಿನ ಪ್ರತಿಷ್ಠಿತ ಜನತಾ ಶಿಕ್ಷಣ ಸೌಹಾರ್ದ ಸಹಕಾರಿ ಸಂಸ್ಥೆಯ ನಿರ್ದೇಶಕರ ಚುನಾವಣೆ ಜೂನ್ ೧೪ಕ್ಕೆ ನಿಗದಿಯಾಗಿ ೧೫ ನಿರ್ದೇಶಕರ ಆಯ್ಕೆಗೆ ೩೪ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.
ಹಾನಗಲ್ಲ: ೭೩ ವರ್ಷಗಳ ಸುಧೀರ್ಘ ಶೈಕ್ಷಣಿಕ ಇತಿಹಾಸದ ಹಾನಗಲ್ಲಿನ ಪ್ರತಿಷ್ಠಿತ ಜನತಾ ಶಿಕ್ಷಣ ಸೌಹಾರ್ದ ಸಹಕಾರಿ ಸಂಸ್ಥೆ ಕಳೆದ ಒಂದು ವರ್ಷದಿಂದ ಸದಸ್ಯತ್ವದ ಗೊಂದಲದ ಚರ್ಚೆಗೀಡಾಗಿದ್ದು, ಈ ಕುರಿತ ಹೋರಾಟಕ್ಕೆ ಜಯವೂ ದೊರೆತಿದೆ. ಈಗ ನಿರ್ದೇಶಕರ ಚುನಾವಣೆ ಜೂನ್ ೧೪ಕ್ಕೆ ನಿಗದಿಯಾಗಿ ೧೫ ನಿರ್ದೇಶಕರ ಆಯ್ಕೆಗೆ ೩೪ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.
ಒಂದು ವರ್ಷದಿಂದ ಈ ಸಂಸ್ಥೆಗೆ ಹೊಸ ಸದಸ್ಯತ್ವ ನೀಡಬೇಕು ಎಂಬ ಹೋರಾಟ, ೨೦೧೦ರಲ್ಲಿ ಇದೇ ಸಂಸ್ಥೆಯ ೧೦೧೯ ಸದಸ್ಯರ ಸದಸ್ಯತ್ವವನ್ನು ರದ್ದುಗೊಳಿಸಿದ ಸಂಗತಿಗಳು ಕೂಡ ನ್ಯಾಯಾಲಯಗಳ ಮೆಟ್ಟಿಲೇರಿ ಈಗ ಇವರೆಲ್ಲರ ಸದಸ್ಯತ್ವ ಮರು ಸೇರ್ಪಡೆಯಾಗಿವೆ. ಇದಕ್ಕಾಗಿ ಹೋರಾಟದ ಮುಂಚೂಣಿಯಲ್ಲಿದ್ದು, ಸಂಬಂಧಿಸಿದ ಇಲಾಖೆಗಳಿಗೂ ಮನವರಿಕೆ ಮಾಡಿದ್ದು, ನಿವೃತ್ತ ಪ್ರಾಚಾರ್ಯ ಚಿಕ್ಕಾವಲಿ ಮಂಜುನಾಥ ಮತ್ತು ತಂಡ. ಹಾನಗಲ್ಲ ತಾಲೂಕು ಶಿಕ್ಷಣಾಭಿಮಾನಿಗಳ ಪಕ್ಷಾತೀತ ವೇದಿಕೆಯಡಿ ಈ ಚುನಾವಣೆಯಲ್ಲಿ ಸ್ಪರ್ಧಿಗಳಾಗಿ ಸಂಸ್ಥೆಯ ಹಿತಕ್ಕಾಗಿ ಹೋರಾಡುತ್ತಿದ್ದೇವೆ. ಗ್ರಾಮೀಣ ಮಕ್ಕಳಿಗೆ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣ ದೊರೆಯಬೇಕೆಂಬ ಸದುದ್ದೇಶ ನಮ್ಮಲ್ಲಿದೆ. ಅದಕ್ಕಾಗಿಯೇ ಅನಿವಾರ್ಯವಾಗಿ ಈಗ ಚುನಾವಣಾ ಕಣದಲ್ಲಿದ್ದೇವೆ ಎಂದು ಹೇಳುತ್ತಾರೆ.ಬೀದಿಗಿಳಿಯುವ ಸಂದರ್ಭಈ ಕುರಿತು ಕನ್ನಡಪ್ರಭದೊಂದಿಗೆ ಮಾತನಾಡಿದ ಪ್ರೊ. ಚಿಕ್ಕಾವಲಿ ಮಂಜುನಾಥ, ಸಂಸ್ಥೆಯಲ್ಲಿ ಉಪನ್ಯಾಸಕನಾಗಿ, ಪ್ರಾಚಾರ್ಯನಾಗಿ ಸೇವೆ ಸಲ್ಲಿಸಿದ ನನಗೆ ಸಂಸ್ಥೆ ನಿರೀಕ್ಷಿತ ಮಟ್ಟದಲ್ಲಿ ಬೆಳೆಯುತ್ತಿಲ್ಲ ಎಂಬ ಕೊರಗಿತ್ತು. ಸಂಸ್ಥೆಯ ಸದಸ್ಯತ್ವ ನಿರಾಕರಣೆ ಆದಾಗ ಅನಿವಾರ್ಯವಾಗಿ ಹೋರಾಟ, ಬೀದಿಗಿಳಿಯುವ ಸಂದರ್ಭ ಬಂದೋದಗಿತು. ಇದಕ್ಕಾಗಿ ಸಹಸ್ರಾರು ಶಿಕ್ಷಣಾಭಿಮಾನಿಗಳು ಬೆಂಬಲಿಸಿದರು. ನ್ಯಾಯಾಲಯದ ಮೊರೆ ಹೋಗಬೇಕಾಯಿತು. ಸೌಹಾರ್ದ ಸಂಸ್ಥೆಯ ಮುಂದೆಯೂ ನಮ್ಮ ಅಪೇಕ್ಷೆ ಮನವರಿಕೆ ಮಾಡಿದೆವು. ಸಂಸ್ಥೆಯಲ್ಲಿನ ಹಲವು ಸಂಗತಿಗಳನ್ನು ಜನರ ಮುಂದಿಟ್ಟಾಗ ಬೆಂಬಲದಿಂದಾಗಿ ನಮಗೆ ಯಶಸ್ಸು ದೊರೆಯಿತು.
ನಮ್ಮ ಹೋರಾಟದ ಫಲದಿಂದಾಗಿ ೨೪೩ರ ಬದಲಾಗಿ ೧೩೪೦ ಸದಸ್ಯರು ಈ ಸಂಸ್ಥೆಯ ಸದಸ್ಯರಾಗಿ ಮರು ಸೇರ್ಪಡೆಯಾಗಿ ಮತದಾರರಾಗಿದ್ದಾರೆ. ಈಗ ಇವರೇ ನಿರ್ಣಾಯಕರು. ಸಂಸ್ಥೆಯನ್ನು ಉತ್ತರೋತ್ತರವಾಗಿ ಬೆಳೆಸಬೇಕೆಂಬ ಬಯಕೆ ಇವರದ್ದಾಗಿದೆ. ಅದಕ್ಕೆ ನಾವು ಕಂಕಣಬದ್ಧರಾಗಿ ಸಂಸ್ಥೆಯ ಈ ಚುನಾವಣೆಯಲ್ಲಿ ಅಭ್ಯರ್ಥಿಗಳಾಗಿದ್ದೇವೆ.ಈ ಸಂಸ್ಥೆಯಲ್ಲಿ ಪಾರದರ್ಶಕ, ಪ್ರಾಮಾಣಿಕ ದಕ್ಷ ಆಡಳಿತ ಬೇಕು. ಪಿಯುಸಿ ವಿಜ್ಞಾನ, ನರ್ಸಿಂಗ್ ಕಾಲೇಜು, ಕಾನೂನು ವಿದ್ಯಾಲಯ, ಸಿಬಿಎಸ್‌ಸಿ ಪಠ್ಯಕ್ರಮದ ಶಾಲೆ ಆರಂಭಿಸಬೇಕು. ಇಲ್ಲಿನ ಅತಿಥಿ ಶಿಕ್ಷಕರಿಗೆ ಗೌರವಯುತ ಗೌರವಧನ ನೀಡಬೇಕು. ಸಂಸ್ಥೆಯ ಆದಾಯ ಸೋರಿಕೆಗೆ ಅವಕಾಶ ನೀಡಬಾರದು. ಬಡ ವಿದ್ಯಾರ್ಥಿಗಳಿಗೆ ಶುಲ್ಕ ರಿಯಾಯತಿ, ಉದ್ಯೋಗಾವಕಾಶಕ್ಕಾಗಿ ಬಿಸಿಎ ಕೋರ್ಸ್‌ಗಳನ್ನು ಆರಂಭಿಸಿ ಗ್ರಾಮೀಣ ಮಕ್ಕಳ ಶೈಕ್ಷಣಿಕ ಹಿತಕ್ಕೆ ಈ ಸಂಸ್ಥೆ ಹೆಸರಾಗಬೇಕು ಎಂಬ ಸಂಕಲ್ಪ ನಮ್ಮದಾಗಿದೆ ಎಂದು ಚಿಕ್ಕಾವಲಿ ಮಂಜುನಾಥ ತಮ್ಮ ತಂಡದ ಉದ್ದೇಶ ತಿಳಿಸಿದರು.
ಸಂಸ್ಥೆಯ ಹಿತಕ್ಕಾಗಿಈ ಸಂಸ್ಥೆಯ ಹಿತಕ್ಕಾಗಿ ಹಿರಿಯರೆಲ್ಲರೂ ಸೇರಿ ನಾನು ಚಿಕ್ಕಾವಲಿ ಮಂಜುನಾಥ, ರವಿ ಒಡೆಯರ, ಎನ್.ಬಿ. ಬಣಕಾರ, ಗುರುರಾಜ ನಿಂಗೋಜಿ, ವಿನಾಯಕ ಪವಾರ, ದೀಪಕ್ ದೇಶಪಾಂಡೆ, ಗಣೇಶ ಮೂಡ್ಲಿಯವರ, ನಾಗರಾಜ ತುಮರಿಕೊಪ್ಪ, ಸುರೇಶ ದೊಡ್ಡಕುರುಬರ, ವಿನಾಯಕ ಹತ್ತಿಕಾಳ, ವಿರೂಪಾಕ್ಷಪ್ಪ ಮೂಡೂರ, ರಾಮಚಂದ್ರ ಹೊಸಮನಿ, ಮಾರುತಿ ಕರಿಭೀಮಣ್ಣನವರ, ವೀಣಾ ಗುಡಿ, ಸುಜಾತಾ ನಂದೀಶೆಟ್ಟರ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿ ನಮ್ಮ ಬೆಂಬಲಕ್ಕೆ ನಿಂತಿದ್ದಾರೆ. ೭೩ ವರ್ಷಗಳ ಇತಿಹಾಸದ ಈ ಸಂಸ್ಥೆ ನಿರೀಕ್ಷಿತ ಬೆಳವಣಿಗೆ ಕಾಣಲಿಲ್ಲ. ಗ್ರಾಮೀಣ ಪ್ರತಿಭಾವಂತ ವಿದ್ಯಾರ್ಥಿಗಳ ಹಿತಕ್ಕಾಗಿ ಶೈಕ್ಷಣಿಕ ಅಭಿವೃದ್ಧಿಯಾಗಲಿಲ್ಲ ಎಂಬ ಕೊರಗನ್ನು ಸರಿಪಡಿಸಿ ಸಂಸ್ಥೆಯ ಹಿತಕ್ಕೆ ಗಟ್ಟಿಯಾಗಿ ನಿಲ್ಲುವ ನಮ್ಮ ದೃಢ ಸಂಕಲ್ಪಕ್ಕೆ ಬದ್ಧರಾಗಿದ್ದೇವೆ ಎಂಬ ಆತ್ಮ ವಿಶ್ವಾಸ ನಮಗಿದೆ ಎಂದು ಮಂಜುನಾಥ ತಿಳಿಸಿದರು.