ನಮ್ಮ ಈ ಹೋರಾಟ ಅಂತ್ಯವಲ್ಲ, ಆರಂಭ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದರು.

ಕನ್ನಡಪ್ರಭ ವಾರ್ತೆ ಬಳ್ಳಾರಿ:

ನಮ್ಮ ಈ ಹೋರಾಟ ಅಂತ್ಯವಲ್ಲ, ಆರಂಭ. ರಾಜ್ಯ ಕಾಂಗ್ರೆಸ್‌ ಸರ್ಕಾರದ ಭ್ರಷ್ಟಾಚಾರದ ವಿರುದ್ಧದ ಮೊದಲ ಹಂತದ ಹೋರಾಟಕ್ಕೆ ತೆರೆ ಬೀಳುತ್ತಿದೆ. ಆದರೆ, ಭ್ರಷ್ಟಾಚಾರದ ವಿರುದ್ಧದ ನಮ್ಮ ಹೋರಾಟ ನಿರಂತರ. ನಮ್ಮ ಈ ಹೋರಾಟ ಹೊಸ ಆಶಾಕಿರಣ ಮೂಡಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದರು.

ಬಳ್ಳಾರಿ ಚಲೋ ಪಾದಯಾತ್ರೆ ಬುಧವಾರ ಸಂಜೆ ಬಳ್ಳಾರಿ ನಗರ ಪ್ರವೇಶಿಸಿತು. ಈ ವೇಳೆ, ನಗರದಲ್ಲಿ ಏರ್ಪಡಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದ ವಿಜಯೇಂದ್ರ, ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಅಧಿಕಾರ ಪೂರ್ವದಲ್ಲಿ ನೀಡಿದ ಭರವಸೆಯನ್ನು ಈ ಸರ್ಕಾರ ಈಡೇರಿಸಿಲ್ಲ. ಇದೊಂದು ಅಭಿವೃದ್ಧಿ ಶೂನ್ಯ ಸರ್ಕಾರ. ರಾಜ್ಯದ ಎಲ್ಲಾ ವರ್ಗದ ಜನ ಪಾದಯಾತ್ರೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ಬರಲು ಜನಬೆಂಬಲ ವ್ಯಕ್ತವಾಗಿದೆ. ಸಾಮೂಹಿಕ ನಾಯಕತ್ವದಲ್ಲಿ 2028ರ ವಿಧಾನಸಭಾ ಚುನಾವಣೆ ನಡೆಯುತ್ತದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ನವಿನ್‌ ನೇತೃತ್ವದಲ್ಲಿ ಚುನಾವಣೆ ನಡೆಯುತ್ತದೆ ಎಂದರು.

ನನ್ನ ರಾಜಕೀಯ ಜೀವನದ ಮಹತ್ವದ ತಿರುವು ಈ ಪಾದಯಾತ್ರೆ. ಇದೊಂದು ಮರೆಯಲಾಗದ ಪಾದಯಾತ್ರೆ. ಹೃದಯಕ್ಕೆ ಹತ್ತಿರವಾದ ಪಾದಯಾತ್ರೆ. ಸಮಾರೋಪ ಸಮಾವೇಶಕ್ಕೆ 50 ಸಾವಿರ ಜನ ಸೇರುವ ನಿರೀಕ್ಷೆಯಿದೆ. ಯಡಿಯೂರಪ್ಪ, ಜಗದೀಶ ಶೆಟ್ಟರ್, ರಾಧಾ ಮೋಹನ್ ದಾಸ್ ಅಗರ್‌ವಾಲ್‌, ಪ್ರಹ್ಲಾದ್‌ ಜೋಶಿ ಸೇರಿದಂತೆ ರಾಜ್ಯದ ಶಾಸಕರು, ಸಂಸದರು ಪಾಲ್ಗೊಳ್ಳಲಿದ್ದಾರೆ. ಸಮಾರಂಭಕ್ಕೆ ರಾಜ್ಯದ ಮೂಲೆಮೂಲೆಗಳಿಂದ ಜನರು ಭಾಗವಹಿಸುವ ನಿರೀಕ್ಷೆಯಿದ್ದು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಜನವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧದ ಬಿಜೆಪಿಯ ಕಾಲ್ನಡಿಗೆ ಹೋರಾಟ ಯಶಸ್ವಿಯಾಗಿದೆ. ದಲಿತರು, ಬಡವರು, ರೈತರು, ಮಹಿಳೆಯರು ಹಾಗೂ ಯುವಕರ ವಿರೋಧಿ ಸರ್ಕಾರದ ಈ ನೀತಿಯನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಈ ಪಾದಯಾತ್ರೆ ನಡೆಸಲಾಗಿದೆ ಎಂದರು.ಬಳ್ಳಾರಿ ಪ್ರವೇಶಿಸಿದ ಬಿವೈವಿಗೆ ಭರ್ಜರಿ ಸ್ವಾಗತ:

ವಾಲ್ಮೀಕಿ ನಿಗಮದ ಹಣ ವಾಪಸ್‌ಗೆ ಆಗ್ರಹಿಸಿ, ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಆರೋಪಿಸಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಬಳ್ಳಾರಿ ಚಲೋ ಪಾದಯಾತ್ರೆ ಬುಧವಾರ ಸಂಜೆ ಬಳ್ಳಾರಿ ನಗರ ಪ್ರವೇಶಿಸಿದ್ದು, ಈ ವೇಳೆ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು.

ಬಳ್ಳಾರಿ ಚಲೋ ಪಾದಯಾತ್ರೆ ಕುಡುತಿನಿ ಮೂಲಕ ಬಳ್ಳಾರಿ ನಗರ ಪ್ರವೇಶಿಸುತ್ತಿದ್ದಂತೆ ವಿಜಯೇಂದ್ರ ಅವರು ಬಳ್ಳಾರಿ ನೆಲಕ್ಕೆ ಶಿರಭಾಗಿ ನಮಿಸಿದರು. ಈ ವೇಳೆ, ಕಾರ್ಯಕರ್ತರ ಘೋಷಣೆಗಳು ಮುಗಿಲು ಮುಟ್ಟಿದವು. ಬಳಿಕ, ಏಳು ತಾಯಿ ಮಕ್ಕಳ ದೇವಸ್ಥಾನದಲ್ಲಿ ಬಳ್ಳಾರಿ ನಗರ ಬಿಜೆಪಿ ಘಟಕದಿಂದ ಅದ್ದೂರಿ ಸ್ವಾಗತ ಕೋರಲಾಯಿತು. ಬೃಹತ್‌ ಹಾರ ಹಾಕಿ, ಜೆಸಿಬಿ ಮೂಲಕ ಹೂವು ಸುರಿಸಿ, ಪಟಾಕಿ ಸಿಡಿಸಿ ಕಾರ್ಯಕರ್ತರು ಸ್ವಾಗತ ಕೋರಿದರು.

ಈ ವೇಳೆ, ರಸ್ತೆಗಳ ಇಕ್ಕೆಲಗಳಲ್ಲಿ ಸೇರಿದ್ದ ಸಾವಿರಾರು ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಹಾಗೂ ವಿಜಯೇಂದ್ರ ಪರ ಘೋಷಣೆ ಕೂಗಿದರು. ಪಕ್ಷದ ಧ್ವಜಗಳು, ಘೋಷಣೆ, ಜನಪದ ಕಲಾತಂಡಗಳ ವಾದ್ಯಗಳ ಸದ್ದು ಹಾಗೂ ನಾಯಕರಿಗೆ ಹೂವಿನ ಹಾರ ಹಾಕಿ ಬರಮಾಡಿಕೊಂಡ ಕಾರ್ಯಕರ್ತರ ಸಂಭ್ರಮದಿಂದ ಪಾದಯಾತ್ರೆಯ ಮಾರ್ಗ ಹಬ್ಬದ ವಾತಾವರಣ ಪಡೆದುಕೊಂಡಿತು.20 ಕಿಮೀ. ಯಾತ್ರೆ:ಇದಕ್ಕೂ ಮೊದಲು ಬುಧವಾರ ಬೆಳಗ್ಗೆ ಕುಡತಿನಿ ಪಟ್ಟಣದ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಗೋಪೂಜೆ ಮಾಡುವ ಮೂಲಕ 9ನೇ ದಿನದ ಯಾತ್ರೆಗೆ ವಿಜಯೇಂದ್ರ ಚಾಲನೆ ನೀಡಿದರು. ನಾಯಕರು ಕೈಯಲ್ಲಿ ಢಮರುಗ ಹಿಡಿದು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು. ಬಳಿಕ, ಅಲ್ಲಿಪುರ ಮಹಾದೇವ ತಾತಾ ಅವರ ಮಠಕ್ಕೆ ಭೇಟಿ ‌ನೀಡಿದ ವಿಜಯೇಂದ್ರಗೆ ಡ್ರೋನ್‌ ಮೂಲಕ ಹೂವು ಸುರಿಸಿ, ಸ್ವಾಗತ ಕೋರಲಾಯಿತು. ಮಠದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಅವರು ಶ್ರೀಗಳ ಆಶೀರ್ವಾದ ಪಡೆದರು. ಮಠದ ಮುಂದೆ ಪುಟ್ಟ ವೇದಿಕೆ ಮೇಲೆ ವಿಜಯೇಂದ್ರ, ಶ್ರೀ ರಾಮುಲು ಸೇರಿ ನಾಯಕರಿಗೆ ಸನ್ಮಾನ ಮಾಡಲಾಯಿತು. ಬಳಿಕ, ಯಾತ್ರೆ ಅಲ್ಪಸಂಖ್ಯಾತರೇ ಹೆಚ್ಚಾಗಿರುವ ಬಳ್ಳಾರಿಯ ಅತಿ ಸೂಕ್ಷ್ಮ ಪ್ರದೇಶ ಕೌಲ್ ಬಜಾರ್‌ಗೆ ಆಗಮಿಸಿ, ಅಲ್ಲಿಂದ ಬಳ್ಳಾರಿ ನಗರ ಪ್ರವೇಶಿಸಿತು.ಶಾಸಕ ನಾಗೇಂದ್ರ ಕ್ಷೇತ್ರದಲ್ಲಿ ಬಿಜೆಪಿ ಭರ್ಜರಿ ರೋಡ್ ಶೋ:ಬಳ್ಳಾರಿ ನಗರದ ಅತಿ ಸೂಕ್ಷ್ಮ ಪ್ರದೇಶವೆಂದೇ ಗುರುತಿಸಿಕೊಂಡಿರುವ ಹಾಗೂ ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಕೌಲ್‌ಬಜಾರ್‌ ಪ್ರದೇಶಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದ ಬಳ್ಳಾರಿ ಚಲೋ ಪಾದಯಾತ್ರೆ ಬುಧವಾರ ಸಂಜೆ ಭರ್ಜರಿ ಪ್ರವೇಶ ಪಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಬಿಜೆಪಿ ಕಾರ್ಯಕರ್ತರು, ಮುಖಂಡರು ಹಾಗೂ ಬೆಂಬಲಿಗರೊಂದಿಗೆ ವಿಜಯೇಂದ್ರ ಅವರು ಕೌಲ್‌ಬಜಾರ್‌ನ ಪ್ರಮುಖ ರಸ್ತೆಗಳಲ್ಲಿ ಪಾದಯಾತ್ರೆ ನಡೆಸಿದರು. ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಕೌಲ್‌ಬಜಾರ್‌ ಹಾಗೂ ರೇಡಿಯೋ ಪಾರ್ಕ್ ಪ್ರದೇಶಗಳಲ್ಲಿ ಅಲ್ಪಸಂಖ್ಯಾತ ಸಮುದಾಯದ ಜನಸಂಖ್ಯೆ ಹೆಚ್ಚಿದ್ದು, ನಗರದ ಅತ್ಯಂತ ಜನನಿಬಿಡ ಪ್ರದೇಶಗಳಲ್ಲೊಂದಾಗಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗೆ ಆಸ್ಪದವಾಗದಂತೆ ಐದು ನೂರಕ್ಕೂ ಹೆಚ್ಚು ಪೊಲೀಸರನ್ನು ಪ್ರದೇಶದಲ್ಲಿ ನಿಯೋಜನೆ ಮಾಡಲಾಗಿತ್ತು.ಪಾದಯಾತ್ರೆಗೆ ಜನರಿಂದ ಭಾರೀ ಬೆಂಬಲ: ಬಿಎಸ್‌ವೈಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ನೇತೃತ್ವದ ಹೋರಾಟಕ್ಕೆ ಜನ ನಮಗೆ ಅಭೂತ ಪೂರ್ವ ಬೆಂಬಲ ನೀಡಿದ್ದಾರೆ. ಬಳ್ಳಾರಿಯಲ್ಲಿ ಪಾದಯಾತ್ರೆ ಅಂಗವಾಗಿ ನಡೆಯುವ ಸಮಾವೇಶ ಹೋಗುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು.ಮೈಸೂರಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆ ನಾನು ಬಳ್ಳಾರಗೆ ಹೋಗುತ್ತೇನೆ. ನಮ್ಮ ನಿರೀಕ್ಷೆಗೂ ಮೀರಿ ಪಾದಯಾತ್ರೆ ಯಶಸ್ವಿಯಾಗಿದೆ. ಪಾದಯಾತ್ರೆ ಉದ್ದಕ್ಕೂ ಜನರು ನಮಗೆ ಅಭೂತ ಪೂರ್ವ ಬೆಂಬಲ ನೀಡುತ್ತಿದ್ದಾರೆ ಎಂದರು.

ಬಿ.ವೈ. ವಿಜಯೇಂದ್ರ ಅವರ ನೇತೃತ್ವದ ಹೋರಾಟಕ್ಕೆ ಜನ ಬೆಂಬಲ ನೀಡಿದ್ದಾರೆ. ಪಾದಯಾತ್ರೆ ಸಮಾವೇಶಕ್ಕೆ ಕೇಳಿದ ತಕ್ಷಣ ಸ್ಥಳ ಸರ್ಕಾರ ಅವಕಾಶ ನೀಡಬೇಕಿತ್ತು. ನಂತರವಾದರೂ ಕೊಟ್ಟಿರುವುದು ಸಂತೋಷವನ್ನುಂಟು ಮಾಡಿದೆ. ಆದರೆ ಪಾದಯಾತ್ರೆಗೆ ಸರ್ಕಾರ ಹೆದರಿದೆ ಎಂದು ನಾನು ಹೇಳಲು ಸಿದ್ಧನಿಲ್ಲ. ನನಗೆ ಪಾದಯಾತ್ರೆಗೆ ಹೋಗಲು ಸಾಧ್ಯ ಆಗಿರಲಿಲ್ಲ. ಆದರೆ ಎಲ್ಲವನ್ನೂ ಗಮನಿಸಿದ್ದೇನೆ. ಕೊನೆ ದಿನದ ಸಮಾವೇಶಕ್ಕೆ ನಾಳೆ ಹೋಗುತ್ತೇನೆ ಎಂದು ಹೇಳಿದರು.