ಕಾರವಾರದಲ್ಲಿ ನಮ್ಮ ಶೌಚಾಲಯ ನಮ್ಮ ಗೌರವ ಆಂದೋಲನಕ್ಕೆ ಚಾಲನೆ

| Published : Nov 20 2024, 12:32 AM IST

ಕಾರವಾರದಲ್ಲಿ ನಮ್ಮ ಶೌಚಾಲಯ ನಮ್ಮ ಗೌರವ ಆಂದೋಲನಕ್ಕೆ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರದಿಂದ ಶೌಚಾಲಯ ನಿರ್ಮಾಣ ಮಾಡಿಕೊಳ್ಳಲು ಅನುದಾನ ನೀಡಲಾಗುತ್ತಿದ್ದು, ಅದನ್ನು ಬಳಸಿಕೊಂಡು ಪ್ರತಿಯೊಬ್ಬರೂ ಶೌಚಾಲಯ ನಿರ್ಮಿಸಿಕೊಳ್ಳಬೇಕು.

ಕಾರವಾರ: ಪ್ರತಿ ಮನೆ ಮನೆಯಲ್ಲಿ ಶೌಚಾಲಯ ನಿರ್ಮಾಣ ಮಾಡಿಕೊಳ್ಳುವ ಮೂಲಕ ಜಿಲ್ಲೆಯನ್ನು ಪೂರ್ಣ ಪ್ರಮಾಣದ ಬಯಲು ಬಹಿರ್ದೆಸೆ ಮುಕ್ತ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ (ಆಡಳಿತ) ನಾಗೇಶ್ ರಾಯ್ಕರ್ ಹೇಳಿದರು.

ಅವರು ಮಂಗಳವಾರ ಜಿಪಂ ಸಭಾಂಗಣದಲ್ಲಿ ವಿಶ್ವ ಶೌಚಾಲಯ ದಿನಾಚರಣೆ-2024ರ ಅಂಗವಾಗಿ ಆಯೋಜಿಸಿದ್ದ ನಮ್ಮ ಶೌಚಾಲಯದ ನಮ್ಮ ಗೌರವ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದರು. ಸರ್ಕಾರದಿಂದ ಶೌಚಾಲಯ ನಿರ್ಮಾಣ ಮಾಡಿಕೊಳ್ಳಲು ಅನುದಾನ ನೀಡಲಾಗುತ್ತಿದ್ದು, ಅದನ್ನು ಬಳಸಿಕೊಂಡು ಪ್ರತಿಯೊಬ್ಬರೂ ಶೌಚಾಲಯ ನಿರ್ಮಿಸಿಕೊಳ್ಳಬೇಕು. ಶಾಲೆ, ಸರ್ಕಾರಿ ಕಚೇರಿಗಳಲ್ಲಿ, ಸಾರ್ವಜನಿಕ ಬಸ್‌ ನಿಲ್ದಾಣ, ಸಾರ್ವಜನಿಕ ಸಮುದಾಯ ಶೌಚಾಲಯಗಳನ್ನು ಬಳಕೆ ಮತ್ತು ಅದರ ಸ್ವಚ್ಛತೆ ಕಾಯ್ದುಕೊಳ್ಳಬೇಕು. ಅದಕ್ಕೆ ಸಂಬಂಧಿಸಿದ ಇಲಾಖೆಗಳು ಅದರ ಬಗ್ಗೆ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಹೇಳಿದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ರಾಜೀವ ನಾಯ್ಕ ಮಾತನಾಡಿ, ವಿಶ್ವ ಶೌಚಾಲಯ ದಿನಾಚರಣೆ ಅಂಗವಾಗಿ ಸ್ವಚ್ಛತೆ ಹೇಗೆ ಮುಖ್ಯವೋ ಹಾಗೆ ನೀರು ಕೂಡಾ ಮುಖ್ಯವಾಗಿದ್ದು, ಅದಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಎಫ್‌ಟಿಕೆ ಟೆಸ್ಟ್ ಕಿಟ್ ನೀಡಲಾಗಿದೆ. ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ನೀರಿನ ಗುಣಮಟ್ಟ ಪರೀಕ್ಷೆ ಮಾಡಬೇಕು. ಶೌಚಾಲಯ ಮಹತ್ವ, ಬಳಕೆ, ನಿರ್ವಹಣೆ ಹಾಗೂ ಶುಚಿತ್ವದ ಬಗ್ಗೆ ತಿಳಿಸಿದರು.

ಅಭಿವೃದ್ಧಿ ಶಾಖೆಯ ಉಪ ಕಾರ್ಯದರ್ಶಿ ಪ್ರಕಾಶ ಹಾಲಮ್ಮನವರ, ಮುಖ್ಯ ಲೆಕ್ಕಾಧಿಕಾರಿ ಆನಂದಸಾ ಹಬೀಬ, ಮುಖ್ಯ ಯೋಜನಾಧಿಕಾರಿ ವಿನೋದ ಅಣ್ವೇಕರ, ಯೋಜನಾ ನಿರ್ದೇಶಕ ಕರೀಂ ಅಸಾದಿ, ಸಹಾಯಕ ಕಾರ್ಯದರ್ಶಿ (ಆಡಳಿತ) ಸುನೀಲ್ ನಾಯ್ಕ ಇದ್ದರು.

ಜೋಯಿಡಾಕ್ಕೆ ಇಲ್ಲದ ಇಂದಿರಾ ಕ್ಯಾಂಟಿನ್

ಜೋಯಿಡಾ: ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದ ತಾಲೂಕುಗಳಲ್ಲಿ ಒಂದೆಂದು ಗುರುತಿಸಿಕೊಂಡಿರುವ ಜೋಯಿಡಾದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣವಾಗದಿರುವುದು ಸಾರ್ವಜನಿಕರಲ್ಲಿ ತೀವ್ರ ನಿರಾಸೆ ಮೂಡಿಸಿದೆ.ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಇಂದಿರಾ ಕ್ಯಾಂಟೀನ್ ಒಂದು. ಬಡವರಿಗೆ ಕೈಗೆಟುಕುವ ದರದಲ್ಲಿ ತಿಂಡಿಗಳು ಸಿಗಲಿ ಎನ್ನುವ ಸದುದ್ದೇಶದಿಂದ ಹಲವೆಡೆ ಇಂದಿರಾ ಕ್ಯಾಂಟೀನ್‌ಗಳನ್ನು ನಿರ್ಮಾಣ ಮಾಡಿದೆ. ಆದರೆ ತಾಲೂಕಿನಲ್ಲಿ ಒಂದೇ ಒಂದು ಇಂದಿರಾ ಕ್ಯಾಂಟೀನ್‌ ಸ್ಥಾಪನೆ ಮಾಡಿಲ್ಲ. ಇದರಿಂದ ಜನರು ದುಬಾರಿ ದರ ತೆತ್ತು ತಿಂಡಿ ಸೇವಿಸಬೇಕಾದ ಸ್ಥಿತಿ ಇದೆ.

ಆದ್ದರಿಂದ ಇಂದಿರಾ ಕ್ಯಾಂಟಿನ್‌ಗಳನ್ನು ಜೋಯಿಡಾ ಹಾಗೂ ರಾಮನಗರದಲ್ಲಿ ನಿರ್ಮಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.ನಮ್ಮ ತಾಲೂಕಿಗೆ ಕೋರ್ಟು ಇಲ್ಲ. ಬಸ್ ಘಟಕ ಸ್ಥಾಪಿಸಿಲ್ಲ. ನಿರಂತರ ನೀರು ಯೋಜನೆ ಇನ್ನೂ ಮರೀಚಿಕೆಯಾಗಿದೆ. ಕಟ್ಟಿಗೆ ಡಿಪೋ ಸ್ಥಾಪಿಸಿಲ್ಲ. ಅಧಿಕಾರಿಗಳ ವಸತಿಗೃಹಗಳಿಲ್ಲ. ಅಲ್ಲದೇ ಇಂದಿರಾ ಕ್ಯಾಂಟಿನ್ ನೀಡಿಲ್ಲ ಎಂದು ಸ್ಥಳೀಯರಾದ ಅರವಿಂದ ಜಿ. ತಿಳಿಸಿದರು.