ಸೇವೆ ಎಂಬುದು ಬದುಕಿನ ಪವಿತ್ರ ಧರ್ಮ, ನಮ್ಮ ಸಾರ್ಥಕತೆಯನ್ನು ಸೇವೆಯಲ್ಲಿಯೇ ಕಾಣಬೇಕು, ದುರ್ಬಲರಿಗೆ ಸಾಥ್ ನೀಡಿ ಅವರನ್ನು ಸಬಲರನ್ನಾಗಿಸಲು ನಮ್ಮೆಲ್ಲರ ಸಹಯೋಗದ ಸಹಾಯ ಅವ್ಯವಶ್ಯ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಹುಬ್ಬಳ್ಳಿಯ ವೀಣಾ ಅಠವಲೆ ತಿಳಿಸಿದರು.
ಹಾನಗಲ್ಲ: ಸೇವೆ ಎಂಬುದು ಬದುಕಿನ ಪವಿತ್ರ ಧರ್ಮ, ನಮ್ಮ ಸಾರ್ಥಕತೆಯನ್ನು ಸೇವೆಯಲ್ಲಿಯೇ ಕಾಣಬೇಕು, ದುರ್ಬಲರಿಗೆ ಸಾಥ್ ನೀಡಿ ಅವರನ್ನು ಸಬಲರನ್ನಾಗಿಸಲು ನಮ್ಮೆಲ್ಲರ ಸಹಯೋಗದ ಸಹಾಯ ಅವ್ಯವಶ್ಯ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಹುಬ್ಬಳ್ಳಿಯ ವೀಣಾ ಅಠವಲೆ ತಿಳಿಸಿದರು. ಹಾನಗಲ್ಲಿನಲ್ಲಿನ ಶ್ರೀ ಸದಾಶಿವ ಮಂಗಲ ಭವನದಲ್ಲಿ ಹುಬ್ಬಳ್ಳಿಯ ಸೇವಾಭಾರತೀ ಟ್ರಸ್ಟನಿಂದ ನಡೆಯುತ್ತಿರುವ ಶ್ರೀ ದಯಾಶಂಕರ ಛಾತ್ರಾಲಯ ಮಕ್ಕಳ ಸಾಮೂಹಿಕ ಹುಟ್ಟು ಹಬ್ಬ ಕಾರ್ಯಕ್ರಮ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಇಂದು ಸಂಸ್ಕಾರ ಶಿಕ್ಷಣಕ್ಕೆ ಪ್ರಥಮಾದ್ಯತೆ ಬೇಕಾಗಿದೆ. ಮಕ್ಕಳನ್ನು ತುಂಬ ಕಾಳಜಿಯಿಂದ ಬೆಳೆಸಬೇಕಾದ ಅವಶ್ಯಕತೆಯೂ ಇದೆ. ಕೌಟುಂಬಿಕ ವಾತ್ಸಲ್ಯ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿರುವುದು ವಿಷಾದದ ಸಂಗತಿ. ನಾವೆಲ್ಲ ನಮ್ಮ ವೃತ್ತಿ ಕೌಟುಂಬಿಕ ಜವಾಬ್ದಾರಿಯ ನಡುವೆಯೂ ಉತ್ತಮ ಪ್ರವೃತ್ತಿಗಳನ್ನು ಅಳವಡಿಸಿಕೊಳ್ಳೋಣ. ಅದರಲ್ಲಿ ಸೇವೆಯೂ ಒಂದು ಪ್ರಮುಖವಾದ ಪ್ರವೃತ್ತಿಯಾಗಿರಲಿ. ಎಲ್ಲರೂ ಸಮಾಜದ ಮುಖ್ಯವಾಹಿನಿಯಲ್ಲಿರುವಂತೆ ನಮ್ಮ ಸಹಾಯ ಸಹಕಾರವೂ ಇರಲಿ. ಹಾನಗಲ್ಲಿನ ಛಾತ್ರಾಲಯದ ಮಕ್ಕಳ ಸಮೂಹಿಕ ಹುಟ್ಟುಹಬ್ಬ ಆಚರಣೆ ಮೂಲಕ ಒಂದು ಸಂತಸದ ಕ್ಷಣಕ್ಕೆ ಎಲ್ಲರೂ ಸೇರಿರುವುದು ನಿಜಕ್ಕೂ ಅಭಿನಂದನೀಯ ಎಂದರು. ಅಧ್ಯಕ್ಷತೆವಹಿಸಿ ಮಾತನಾಡಿದ ಸೇವಾ ಭಾರತಿ ಟ್ರಸ್ಟ ಹುಬ್ಬಳ್ಳಿ ಕೇಂದ್ರದ ಅಧ್ಯಕ್ಷ ಪೂರ್ಣಚಂದ್ರರಾವ ಘಂಟಸಾಲ, ಸೇವಾಹೀ ಪರಮೋಧರ್ಮ ಎಂಬ ಸತ್ಯ ಸತ್ವವನ್ನು ಅಳವಡಿಸಿಕೊಂಡಲ್ಲಿ ಉತ್ತಮ ಸಮಾಜ ನಿರ್ಮಾಣಕ್ಕೆ ಅತ್ಯಂತ ಸಹಕಾರಿಯಾಗಬಲ್ಲದು. ಎಲ್ಲರ ಬದುಕಿನಲ್ಲಿ ಕಷ್ಟಗಳು ಬರುತ್ತವೆ. ಅದಕ್ಕಾಗಿ ಬಂಧು ಬಳಗ ಸಮಾಜ ಒಟ್ಟಾಗಿ ಪರಿಹಾರಕ್ಕೆ ಮುಂದಾಗಬೇಕು. ಬಡವ ಬಲ್ಲಿದ ಎಂಬ ಭೇದ ತೊಲಗಿ ಎಲ್ಲರೂ ಒಂದೇ ಸಂತಸದ ಸೂರಿನಡಿ ನಡೆಯುವಂತಾಗಬೇಕು ಎಂದರು. ಆಶಯ ನುಡಿಗಳನ್ನಾಡಿದ ಹಾನಗಲ್ಲಿನ ದಯಾಶಂಕರ ಛಾತ್ರಾಲಯದ ಅಧ್ಯಕ್ಷೆ ರೇಖಾ ಶೆಟ್ಟರ, ಸೇವಾ ಭಾರತಿ 25 ವರ್ಷಗಳಿಂದ ಇಡೀ ಕರ್ನಾಟಕದಲ್ಲಿ ಸೇವಾ ಕ್ಷೇತ್ರದಲ್ಲಿ ಅನುಕರಣೀಯವಾಗಿ ಸೇವೆ ಸಲ್ಲಿಸಿದೆ. ಮಕ್ಕಳ ಹಿತಕ್ಕಾಗಿ ಸಮಾಜಮುಖಯಾಗಿ ಸೇವೆ ಸಲ್ಲಿಸುವ ಜೊತೆಗೆ ಹಾನಗಲ್ಲಿನಲ್ಲಿ ಮಹಿಳಾ ತರಬೇತಿಗಳು, ಮಾತೃ ವಾತ್ಸಲ್ಯ ಮಂಡಲಿ ಮೂಲಕ ಸೇವೆ, ಬೇಸಿಗೆ ಶಿಬಿರ, ರಕ್ಷಾಬಂಧನದಂತಹ ಹತ್ತು ಹಲವು ಸಾಮಾಜಿಕ ಚಟುವಟಿಕೆಗಳಿಗೆ ಛಾತ್ರಾಲಯ ಸಾಕ್ಷಿಯಾಗಿದೆ. ಇಲ್ಲಿನ ಮಕ್ಕಳಿಗೆ ಉತ್ತಮ ಶಿಕ್ಷಣ ಸೇವೆಗೆ ನಮ್ಮ ಛಾತ್ರಾಲಯದ ಆಡಳಿತ ಮಂಡಳಿಗೆ ಹಾಗೂ ಸಾರ್ವಜನಿಕರ ಸಹಕಾರ ಅತ್ಯಂತ ಸಂತಸದಾಯಕವಾಗಿದೆ ಎಂದರು. ನ್ಯಾಯವಾದಿ ಎಸ್.ಆರ್.ಹೆಗಡೆ, ಪುರಸಭೆ ಸಹಾಯಕ ಅಭಿಯಂತರ ನಾಗರಾಜ ಮಿರ್ಜಿ, ಹನುಮಂತಪ್ಪ ಹುಡೇದವರ, ಶಿವಬಸಪ್ಪ ಹೊಳಲದ, ವನಿತಾ ರೇವಡಿಗಾರ. ಶ್ರವಣಕುಮಾರ ಅತಿಥಿಗಳಾಗಿದ್ದರು. ವಿಜಲಕ್ಷ್ಮಿ ಹಳ್ಳೀಕೇರಿ ಸ್ವಾಗತಿಸಿದರು. ಪ್ರಶಾಂತ ಕಂಕಾಳಿ ಕಾರ್ಯಕ್ರಮ ನಿರೂಪಿಸಿದರು. ಉಮಾ ನಾಗರವಳ್ಳಿ ವಂದಿಸಿದರು.