ಜನತೆ ತಮ್ಮ ಕಷ್ಟಗಳನ್ನು ಮರೆಯಲು, ಕುಟ್ಟುವುದು, ಬೀಸುವುದು ಮುಂತಾದ ದೈನಂದಿನ ಕಾರ್ಯಗಳಲ್ಲಿ ನಿರತರಾದಾಗ ರಚಿಸಿದ ಸಾಹಿತ್ಯವೇ ಜನಪದ ಸಾಹಿತ್ಯವಾಗಿದೆ.

ಸಂಡೂರು: ತಾಲೂಕಿನ ವಿಠಲಾಪುರ ಗ್ರಾಮದ ಸೋಮಲಿಂಗೇಶ್ವರ ದೇವಸ್ಥಾನದ ಬಳಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸ್ಥಳೀಯ ಹಂಪಿ ವಿರೂಪಾಕ್ಷ ಬಯಲಾಟ ನಾಟಕ ಪ್ರೋತ್ಸಾಹ ಟ್ರಸ್ಟ್ ಸಹಯೋಗದಲ್ಲಿ ನಮ್ಮ ಹಳ್ಳಿಯ ಜಾನಪದ ಗೋಷ್ಠಿ ಹಾಗೂ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ರಾಜ್ಯ ಜನಪದ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಬಸವರಾಜ ಬಣಕಾರ್ ಉಪನ್ಯಾಸ ನೀಡಿ, ಜನತೆ ತಮ್ಮ ಕಷ್ಟಗಳನ್ನು ಮರೆಯಲು, ಕುಟ್ಟುವುದು, ಬೀಸುವುದು ಮುಂತಾದ ದೈನಂದಿನ ಕಾರ್ಯಗಳಲ್ಲಿ ನಿರತರಾದಾಗ ರಚಿಸಿದ ಸಾಹಿತ್ಯವೇ ಜನಪದ ಸಾಹಿತ್ಯವಾಗಿದೆ. ಯಾವುದೇ ಶಿಕ್ಷಣ ಪಡೆಯದ ನಮ್ಮ ರೈತರು, ಮಹಿಳೆಯರು ತಮ್ಮ ಬದುಕಿನ ಅನುಭವಗಳನ್ನು ಹಾಡಿನ ರೂಪದಲ್ಲಿ, ನಾಟಕ, ಗೀಗಿ ಪದ, ಒಗಟು, ಸೋಬಾನೆ ಪದ, ಗಾದೆಗಳು, ಕಥೆಗಳನ್ನು ರಚಿಸುವ ಮೂಲಕ ಉತ್ತಮ ಸಾಹಿತ್ಯವನ್ನು ನಾಡಿಗೆ ನೀಡಿದ್ದಾರೆ. ಶಿಷ್ಟ ಸಾಹಿತ್ಯಕ್ಕೆ ಜನಪದ ಸಾಹಿತ್ಯ ಮೂಲಬೇರಾಗಿ ನಿಲ್ಲುತ್ತದೆ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ. ನಾಗರಾಜ ಕಾರ್ಯಕ್ರಮ ಉದ್ಘಾಟಿಸಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಮುಖವಾಗಿ ಗ್ರಾಮೀಣ ಭಾಗದ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ, ಅದನ್ನು ಬೆಳೆಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳನ್ನು ಪ್ರತಿ ಗ್ರಾಮಗಳಿಗೂ ತೆಗೆದುಕೊಂಡು ಹೋಗುತ್ತಿದ್ದೇವೆ. ಅದರ ಪೂರ್ಣ ಲಾಭವನ್ನು ಪಡೆದುಕೊಳ್ಳುವ ಮೂಲಕ ನಮ್ಮ ನಾಡು, ನುಡಿ, ಸಾಹಿತ್ಯ ಸಂಸ್ಕೃತಿಯನ್ನು ಉಳಿಸಬೇಕು. ಅಲ್ಲದೆ ತಮ್ಮಲ್ಲಿರುವ ಕಲೆಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವಂತಹ ಮಹತ್ತರ ಕಾರ್ಯ ಮಾಡಬೇಕಾಬೇಕಾಗಿದೆ ಎಂದರು.

ಗ್ರಾಮದ ಮುಖಂಡ ಎಂ.ತಿರುಮಲ ಮಾತನಾಡಿದರು. ಬಸವರಾಜ ಅಮ್ಮನವರು ಸಾನ್ನಿಧ್ಯ ವಹಿಸಿದ್ದರು. ಟ್ರಸ್ಟಿನ ಸದಸ್ಯ ಉಮಾಶಂಕರ ಸ್ವಾಗತಿಸಿದರೆ, ಗುರುಪಾದ ವಂದಿಸಿದರು. ಹಂಪಿ ವಿರೂಪಾಕ್ಷ ಬಯಲಾಟ ನಾಟಕ ಪ್ರೋತ್ಸಾಹ ಟ್ರಸ್ಟ್‌ನ ಅಧ್ಯಕ್ಷ ತಿಪ್ಪೇಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.

ದುರ್ಗಮ್ಮ,ಶಿವಮ್ಮ ಮಹಿಳಾ ಕಲಾತಂಡದಿಂದ ಶೋಭಾನ ಪದಗಳು, ಡಿ.ನಾಗರಾಜ ಕಲಾ ತಂಡದವರು ಭಜನಾ ಗಾಯನವನ್ನು, ಕೆ.ಎಸ್. ಗಾದೆಪ್ಪ ಮತ್ತು ಕಲಾ ತಂಡದವರು ಡೊಳ್ಳು ವಾದನ, ಲಕ್ಷ್ಮೀದೇವಿ ಮತ್ತು ಕಲಾತಂಡದವರು ತೊಗಲು ಗೊಂಬೆ ಆಟವನ್ನು ಪ್ರದರ್ಶಿಸಿದರು.

ರಾಜೇಶ್ವರಿ, ಬಿ.ಕೆ. ಮರಿಸ್ವಾಮಿ, ವೈ. ನಾಗೇಶ್, ಶಿವಬಂಧಮ್ಮ, ಶಿವ ಸಿದ್ದಪ್ಪ, ಕೋರಿ ತಿಮ್ಮರೆಡ್ಡಿ, ಆರ್. ತಿಪ್ಪೇಸ್ವಾಮಿ, ಗ್ರಾಮಸ್ಥರು ಉಪಸ್ಥಿತರಿದ್ದರು.