ಸಾಮಾಜಿಕ ನ್ಯಾಯ ಒದಗಿಸುವ ಸಂವಿಧಾನ ನಮ್ಮದು

| Published : Jan 27 2025, 12:47 AM IST

ಸಾರಾಂಶ

ಕನ್ನಡ ನಾಡು ಕಂಡ ಬಲು ಅಪರೂಪದ ರಾಜಕಾರಣಿ, ನಾಡು ಮೆಚ್ಚಿದ ಜನನಾಯಕ, ಸಹಕಾರ ರಂಗದ ಭೀಷ್ಮ ದಿ. ಕೆ.ಎಚ್. ಪಾಟೀಲರ ಜನ್ಮ ಶತಮಾನೋತ್ಸವ ವರ್ಷಾಚರಣೆ ನಡೆಯುತ್ತಿರುವ ಪುಣ್ಯ ಪ್ರಸಂಗದಲ್ಲಿ ನಾವು ಶೋಷಣೆಮುಕ್ತ, ಸಮಾನತೆಯ ಸಮಾಜ ಕಟ್ಟುವಲ್ಲಿ ಕ್ರೀಯಾಶೀಲ ಪೂರ್ವಕ ತೊಡಗಿಸಿಕೊಳ್ಳಲು ಸಮರ್ಪಿತರಾಗಲು ದಾಪುಗಾಲುಗಳನ್ನೀಡೋಣ

ಗದಗ: ಭಾರತೀಯ ಪ್ರಜೆಗಳಾದ ನಾವು ಭಾರತ ಒಂದು ಸಾರ್ವಭೌಮ, ಸಮಾಜವಾದಿ, ಜ್ಯಾತ್ಯಾತೀತ, ಪ್ರಜಾಸತ್ತಾತ್ಮಕ ಗಣತಂತ್ರವನ್ನಾಗಿ ವಿಧಿಯುಕ್ತವಾಗಿ ಸ್ಥಾಪಿಸಿದ್ದೇವೆ. ಸಾಮಾಜಿಕ ನ್ಯಾಯ ರಾಷ್ಟ್ರದ ಎಲ್ಲ ಪ್ರಜೆಗಳಿಗೆ ಒದಗಿಸುವ ಸಂವಿಧಾನ ನಮ್ಮದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ಭಾನುವಾರ ಜರುಗಿದ ಗಣರಾಜ್ಯೋತ್ಸವ ದಿನಾಚರಣೆ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ನಮ್ಮ ದೇಶ ಪ್ರಪಂಚದಲ್ಲಿಯೇ ಅತಿದೊಡ್ಡ ಪ್ರಜಾಸತ್ತಾತ್ಮಕ ಆಡಳಿತ ಹೊಂದಿದ ಗಣರಾಜ್ಯ ಜನರಿಂದ-ಜನರಿಗಾಗಿ ಆಡಳಿತ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಧ್ಯೇಯ ಮಂತ್ರ. ಈ ಧ್ಯೇಯ ಮಂತ್ರ ಸಾಕಾರಗೊಳಿಸಲು ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್‌ ಅಂಬೇಡ್ಕರ ನೇತೃತ್ವದಲ್ಲಿ ರಚಿಸಲ್ಪಟ್ಟ ಸಂವಿಧಾನವನ್ನು 1950ರ ಜ.26 ರಂದು ಅಂಗೀಕರಿಸಿ ನಮ್ಮ ದೇಶವನ್ನು ಸರ್ವತಂತ್ರ ಸ್ವತಂತ್ರ, ಸಾರ್ವಭೌಮ ಗಣರಾಜ್ಯವೆಂದು ಘೋಷಣೆ ಮಾಡಲಾಯಿತು ಎಂದರು.

100 ವಸಂತಗಳ ಹಿಂದೆ 1924ರಲ್ಲಿ ನಮ್ಮ ಬೆಳಗಾವಿಯಲ್ಲಿ ನಡೆದ ಎಐಸಿಸಿ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದ ನಮ್ಮ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಸ್ಮರಣೆಯಲ್ಲಿ ಗಾಂಧಿ ಭಾರತ ಶತಮಾನೋತ್ಸವ ವರ್ಷ ಪೂರ್ಣ ಆಚರಿಸುತ್ತಿದ್ದೇವೆ. ಮಹಾತ್ಮ ಗಾಂಧೀಜಿ ಶತಮಾನದ ಶ್ರೇಷ್ಠ ಉತ್ತಮ ಮಾನವ,ಅಂತಾರಾಷ್ಟ್ರೀಯ ಭಾವೈಕೈಯ ಸಂಕೇತ. ಅವರು ಅಹಿಂಸೆಯ ಬೆಳಕು, ಸತ್ಯದ ಥಳಕು, ಸಮಾನತೆ ಬಿತ್ತಿದ ಚೇತನ, ಗಾಂಧೀಜಿ ಯುಗ ಪುರುಷ, ಗಾಂಧೀಜಿ ಚರ್ಚಿಸುವ ವಿಷಯವಲ್ಲ ಹೃದಯದಲ್ಲಿಟ್ಟು ಧ್ಯಾನಿಸುವ ಜೀವ. ಗಾಂಧೀಜಿ ಭಾರತಕ್ಕೆ ಆತ್ಮವಾದರೆ ವಿಶ್ವಕ್ಕೆ ಮಹಾತ್ಮರಾಗಿದ್ದಾರೆ. ಅವರನ್ನು ಸ್ಮರಿಸಿ ನಮಿಸಿ ಅವರ ಸನ್ಮಾರ್ಗದಲ್ಲಿ ನಡೆಯಲು ಇಂದು ಪಣತೊಡುವ ಪರ್ವಕಾಲವಾಗಿದೆ ಎಂದು ತಿಳಿಸಿದರು.

ಕನ್ನಡ ನಾಡು ಕಂಡ ಬಲು ಅಪರೂಪದ ರಾಜಕಾರಣಿ, ನಾಡು ಮೆಚ್ಚಿದ ಜನನಾಯಕ, ಸಹಕಾರ ರಂಗದ ಭೀಷ್ಮ ದಿ. ಕೆ.ಎಚ್. ಪಾಟೀಲರ ಜನ್ಮ ಶತಮಾನೋತ್ಸವ ವರ್ಷಾಚರಣೆ ನಡೆಯುತ್ತಿರುವ ಪುಣ್ಯ ಪ್ರಸಂಗದಲ್ಲಿ ನಾವು ಶೋಷಣೆಮುಕ್ತ, ಸಮಾನತೆಯ ಸಮಾಜ ಕಟ್ಟುವಲ್ಲಿ ಕ್ರೀಯಾಶೀಲ ಪೂರ್ವಕ ತೊಡಗಿಸಿಕೊಳ್ಳಲು ಸಮರ್ಪಿತರಾಗಲು ದಾಪುಗಾಲುಗಳನ್ನೀಡೋಣ ಎಂದರು.

ಕಲೆ, ಸಾಹಿತ್ಯ, ಸಂಸ್ಕೃತಿ,ಆಧ್ಯಾತ್ಮ, ಸಂಗೀತ, ವಾಸ್ತುಶಿಲ್ಪ, ಶಿಲ್ಪಕಲೆ, ಚಿತ್ರಕಲೆ, ಸಹಕಾರ, ಔಧ್ಯಮಿಕ ಕ್ಷೇತ್ರಗಳಲ್ಲಿ ವಿಶಿಷ್ಠ ಸ್ಥಾನ ಪಡೆದಿರುವ ಗದಗ ಪರಿಸರದಲ್ಲಿ ಸಂಗೀತ ನಿನಾದಿಸುತ್ತಿದೆ. ನಮ್ಮ ಜಿಲ್ಲೆಯ ಗಾಳಿಯಲ್ಲಿ ವಿದ್ಯುತ್ ಇದೆ. ಗಣಿಗಳಲ್ಲಿ ಬಂಗಾರವಿದೆ. ಇಲ್ಲಿಯ ದೇವಾಲಯ, ಬಸದಿ, ದರ್ಗಾ ಹಾಗೂ ಅನೇಕ ಪ್ರಾಚೀನ ಸ್ಮಾರಕಗಳಿವೆ. ಖ್ಯಾತಿವೆತ್ತ ಕಲಾವಿದರ ನೆಲೆಬೀಡಾಗಿದೆ. ಕೆಜಿ ಯಿಂದ ಪಿಜಿಯ ಎಲ್ಲ ವಿಶ್ವವಿದ್ಯಾಲಯಗಳು ಕಾರ್ಯನಿರ್ವಹಿಸುತ್ತಿವೆ.ಇದು ಸಹಕಾರದ ಗಂಗೋತ್ರಿ, ಒಟ್ಟಿನಲ್ಲಿ ಗದಗ, ರಾಜ್ಯದ ಸಾಂಸ್ಕೃತಿಕ, ಸಾಹಿತ್ಯಕ ರಾಜಧಾನಿಯಾಗಿದೆ ಎಂಬುದು ನಮಗೆಲ್ಲ ಹೆಮ್ಮೆಯ ಸಂಗತಿಯಾಗಿದೆ ಎಂದರು.

ಸಿಎಂ ಸಿದ್ದರಾಮಯ್ಯ ಅಭಿವೃದ್ಧಿಯ ಹರಿಕಾರರು ಹಾಗೂ ಹಸಿವು ಮುಕ್ತ ಕರ್ನಾಟಕ ಮಾಡಿದ ಮುಖ್ಯಮಂತ್ರಿ, ಜಿಲ್ಲೆಯ ಅಭಿವೃದ್ಧಿಗೆ ಸಹಕಾರ ನೀಡಿದ್ದು 15.12.2024 ರಂದು ಜಿಲ್ಲೆಯ ರೋಣಕ್ಕೆ ಆಗಮಿಸಿ, ರೋಣ ವಿಧಾನ ಸಭಾ ಕ್ಷೇತ್ರವ್ಯಾಪ್ತಿಯಲ್ಲಿ ₹19689.97 ಲಕ್ಷ ವೆಚ್ಚದಲ್ಲಿ 11ಶಂಕು ಸ್ಥಾಪನೆ ಹಾಗೂ 5 ಉದ್ಘಾಟನೆ ಕಾಮಗಾರಿಗಳು ಸೇರಿದಂತೆ ಒಟ್ಟು 16 ಕಾಮಗಾರಿಗಳಿಗೆ ಚಾಲನೆ ನೀಡುವ ಮೂಲಕ ಅಭಿವೃದ್ಧಿಯ ದಾಪುಗಲನ್ನು ಇಡಲಾಗಿದೆ ಎಂದರು.

ಬಡವರನ್ನು ಬಡತನ ರೇಖೆಯಿಂದ ಮೇಲೆತ್ತುವ ಕ್ರಾಂತಿಕಾರಕ ಕಾರ್ಯಕ್ರಮ ಗ್ಯಾರಂಟಿಯಿಂದಾಗಿದೆ. ಬಡವರ, ಅವಕಾಶ ವಂಚಿತರ, ಶೋಷಣೆಗೆ ಒಳಗಾದವರ ಪರ ಗಟ್ಟಿಯಾಗಿ ನಿಂತು ಸಾಮಾಜಿಕ, ಆರ್ಥಿಕ, ನ್ಯಾಯ ನೀಡುವ, ನಾಡಿನ ಜನತೆಯ ದೈನಂದಿನ ಬವಣೆಗಳನ್ನು ನೀಗಿಸಲು 5 ಗ್ಯಾರಂಟಿ ಜನತೆಗೆ ಕೊಡಮಾಡಿದೆ. ಗೃಹಲಕ್ಷ್ಮೀ, ಗೃಹಜ್ಯೋತಿ, ಶಕ್ತಿ, ಅನ್ನಭಾಗ್ಯ ಹಾಗೂ ಯುವನಿಧಿಯಂತಹ ಕ್ರಾಂತಿಕಾರಿ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ ಕೀರ್ತಿ ಸಿಎಂ ಸಿದ್ಧರಾಮಯ್ಯನವರಿಗೆ ಸಲ್ಲುತ್ತದೆ ಎಂದರು.

ಈ ವೇಳೆ ವಿಪ ಸದಸ್ಯ ಎಸ್.ವಿ.ಸಂಕನೂರ, ನಗರಾಬಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್‌ಸಾಬ ಬಬರ್ಜಿ, ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ, ಜಿಪಂ ಸಿಇಒ ಭರತ್ ಎಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಡಿಸಿಎಫ್ ಸಂತೋಷ ಕೆಂಚಪ್ಪನವರ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಉಪವಿಭಾಗಾಧಿಕಾರಿ ಗಂಗಪ್ಪ ಎಂ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಗಣ್ಯರು, ಸಾರ್ವಜನಿಕರು ಇದ್ದರು.