ರಾಷ್ಟ್ರೀಯ ಐಕ್ಯತೆ ಸಾರಿದ ದೇಶ ನಮ್ಮದು: ಎಸ್‌ಪಿ ಡಾ.ಶೋಭಾರಾಣಿ

| Published : Nov 01 2025, 02:15 AM IST

ರಾಷ್ಟ್ರೀಯ ಐಕ್ಯತೆ ಸಾರಿದ ದೇಶ ನಮ್ಮದು: ಎಸ್‌ಪಿ ಡಾ.ಶೋಭಾರಾಣಿ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತವು ವಿವಿಧತೆಯಲ್ಲಿ ಏಕತೆ ಹೊಂದಿದ ರಾಷ್ಟ್ರವಾಗಿದ್ದು, ಪ್ರಪಂಚದಾದ್ಯಂತ ರಾಷ್ಟ್ರೀಯ ಐಕ್ಯತೆ ಸಾರಿದ ದೇಶ ನಮ್ಮದು

ಬಳ್ಳಾರಿ: ಭಾರತವು ವಿವಿಧತೆಯಲ್ಲಿ ಏಕತೆ ಹೊಂದಿದ ರಾಷ್ಟ್ರವಾಗಿದ್ದು, ಪ್ರಪಂಚದಾದ್ಯಂತ ರಾಷ್ಟ್ರೀಯ ಐಕ್ಯತೆ ಸಾರಿದ ದೇಶ ನಮ್ಮದು ಎಂದು ಎಸ್ಪಿ ಡಾ.ಶೋಭಾರಾಣಿ ವಿ.ಜೆ. ಹೇಳಿದರು.ರಾಷ್ಟ್ರೀಯ ಐಕ್ಯತಾ ದಿನಾಚರಣೆ ಅಂಗವಾಗಿ ಸ್ವಾತಂತ್ರ್ಯ ಹೋರಾಟಗಾರ, ಏಕೀಕರಣದ ಶಿಲ್ಪಿ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ 150ನೇ ಜನ್ಮದಿನದ ವಾರ್ಷಿಕೋತ್ಸವದ ನಿಮಿತ್ತ ಸಾರ್ವಜನಿಕರಲ್ಲಿ ನಾಗರಿಕರ ಸುರಕ್ಷತೆ ಮತ್ತು ಜವಾಬ್ದಾರಿಗಳ ಕುರಿತು ಅರಿವು ಮೂಡಿಸಲು ಜಿಲ್ಲಾ ಪೊಲೀಸ್ ಇಲಾಖೆಯಿಂದ ನಗರದ ಡಿಎಆರ್ ಪೊಲೀಸ್ ಕವಾಯತು ಮೈದಾನದಲ್ಲಿ ರನ್- ಫಾರ್- ಯುನಿಟಿ (ಏಕತೆಗಾಗಿ ಓಟ) ಮ್ಯಾರಥಾನ್ ಓಟ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.

ಅಖಂಡ ಭಾರತ ಒಗ್ಗೂಡುವಿಕೆಗೆ ಕಾರಣೀಭೂತರಾದ ಉಕ್ಕಿನ ಮನುಷ್ಯ ಎಂದೇ ಖ್ಯಾತಿ ಪಡೆದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಸೇವೆ ಅಪಾರವಾಗಿದೆ. ಭಾರತ ದೇಶವು ಸ್ವಾತಂತ್ರ್ಯ ನಂತರ ಎಲ್ಲ ರಾಜ್ಯಗಳನ್ನು ವಿಲೀನಗೊಳಿಸಲು ಹಾಗೂ ಒಕ್ಕೂಟ ವ್ಯವಸ್ಥೆಯನ್ನು ಒಟ್ಟುಗೂಡಿಸಲು ಸಾಕಷ್ಟು ಶ್ರಮಿಸಿದ್ದರು ಎಂದು ತಿಳಿಸಿದರು.ಸಾರ್ವಜನಿಕರು ಆನ್ ಲೈನ್ ವಂಚನೆಗಳಿಗೆ ಹೆಚ್ಚಾಗಿ ಬಲಿಯಾಗುತ್ತಿದ್ದು, ಯಾರಾದರೂ ಅಪರಿಚಿತ ವ್ಯಕ್ತಿಗಳು ಕರೆ ಮಾಡಿ ವೈಯಕ್ತಿಕ ಮಾಹಿತಿ ಕೇಳಿದರೆ ಉತ್ತರಿಸಬಾರದು. ಯುವ ಸಮುದಾಯ ಮಾದಕ ವಸ್ತುಗಳಿಂದ ದೂರವಿರಬೇಕು ಎಂದು ಕಿವಿಮಾತು ಹೇಳಿದರು.

ಜಿಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಮಾತನಾಡಿ, ಪ್ರಸ್ತುತದಲ್ಲಿ ಯುವ ಸಮುದಾಯ ಆನ್‌ಲೈನ್ ಗೇಮ್, ಆನ್ ಲೈನ್ ವಂಚನೆಗಳಿಂದ ದೂರವಿರಬೇಕು. ಮೊಬೈಲ್ ನಲ್ಲಿ ಬರುವ ಯಾವುದೇ ರೀತಿಯ ಗೊತ್ತಿರದ ಫೈಲ್‌ಗಳ ಮೇಲೆ ಕ್ಲಿಕ್ ಮಾಡಬಾರದು. ಇದರಿಂದ ಸೈಬರ್ ವಂಚನೆಗೆ ಒಳಗಾಗುವ ಸಾಧ್ಯತೆ ಹೆಚ್ಚು ಎಂದು ತಿಳಿಸಿದರು.

ಮ್ಯಾರಥಾನ್ ನಗರದ ಡಿಎಆರ್ ಪೊಲೀಸ್ ಕವಾಯತು ಮೈದಾನದಿಂದ ಆರಂಭಗೊಂಡು ಇಂದಿರಾ ವೃತ್ತ- ನೂತನ ಜಿಲ್ಲಾಡಳಿತ ಭವನ- ಎಂ.ಜಿ ರಸ್ತೆ- ಅನಂತಪುರ ಬೈಪಾಸ್ ಕ್ರಾಸ್ ನಿಂದ ಮರಳಿ ಎಂ.ಜಿ ವೃತ್ತ- ಇಂದಿರಾ ವೃತ್ತ- ಎಸ್. ಎನ್.ಪೇಟೆ ಕ್ರಾಸ್(ಕೂಲ್ ಕಾರ್ನರ್)- ಡಿಎಆರ್ ಪೊಲೀಸ್ ಕವಾಯತು ಮೈದಾನಕ್ಕೆ ತಲುಪಿ ಮುಕ್ತಾಯಗೊಂಡಿತು.

ಮ್ಯಾರಥಾನ್ ಓಟದಲ್ಲಿ ಭಾಗವಹಿಸಿ ವಿಜೇತರಾದ ಸ್ಪರ್ಧಾಳುಗಳಿಗೆ ಪ್ರಶಸ್ತಿ, ನಗದು ಬಹುಮಾನ ನೀಡಿ ಗೌರವಿಸಲಾಯಿತು.

ಬಳ್ಳಾರಿ ವಲಯ ಉಪಅರಣ್ಯ ಸಂರಕ್ಷಣಾಧಿಕಾ ಬಸವರಾಜ್, ಎಎಸ್ಪಿ ಎಸ್.ನವೀನ್ ಕುಮಾರ್, ಡಿಎಸ್‌ಪಿ ಗಳಾದ ನಂದಾರೆಡ್ಡಿ, ಪ್ರಸಾದ್ ಗೋಖಲೆ, ಮಾಲತೇಶ ಕೋನಬೇವು, ತಿಪ್ಪೇಸ್ವಾಮಿ, ಸಂತೋಷ್ ಚವ್ಹಾಣ್, ಸಿಪಿಐಗಳಾದ ಅಯ್ಯನಗೌಡ ಪಾಟೀಲ್, ಮಹಾಂತೇಶ್, ರವಿಚಂದ್ರ, ಹನುಮಂತಪ್ಪ, ಚಂದನಗೋಪಾಲ್, ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ಶೇಖಸಾಬ್ ಸೇರಿದಂತೆ ಪೊಲೀಸ್ ಅಧಿಕಾರಿಗಳು, ನಿವೃತ್ತ ಯೋಧರು, ಐಎಂಎ ಸದಸ್ಯರು, ಬಳ್ಳಾರಿ ರನ್ನರ್ಸ್ ಅಸೋಷಿಯೇಷನ್, ರಾಜ್ಯದ ವಿವಿಧೆಡೆಯಿಂದ 1500ಕ್ಕೂ ಅಧಿಕ ಪುರುಷ, ಮಹಿಳೆಯರು ಭಾಗವಹಿಸಿದ್ದರು.

ಮ್ಯಾರಥಾನ್ ಓಟದ ವಿಜೇತರು:

ಪುರುಷ ವಿಭಾಗ:

ಪ್ರಥಮ ಬಹುಮಾನ (₹10 ಸಾವಿರ ನಗದು): ಪುರುಷೋತ್ತಮ ಬಳ್ಳಾರಿ

ದ್ವಿತೀಯ ಬಹುಮಾನ (₹5 ಸಾವಿರ): ಶಿವಾನಂದ ಬೆಳಗಾವಿ

ತೃತೀಯ ಬಹುಮಾನ (₹3 ಸಾವಿರ): ಸುನೀಲ್ ಬೆಳಗಾವಿ

ಮಹಿಳಾ ವಿಭಾಗ:

ಪ್ರಥಮ ಬಹುಮಾನ (₹10 ಸಾವಿರ): ಶಾಹೀನ್ ಎಸ್.ಡಿ ಹುಬ್ಬಳ್ಳಿ

ದ್ವಿತೀಯ ಬಹುಮಾನ (₹5 ಸಾವಿರ): ಯು.ಶಿರೀಷ ಬಳ್ಳಾರಿ

ತೃತೀಯ ಬಹುಮಾನ (₹3 ಸಾವಿರ): ವಿಜಯಲಕ್ಷ್ಮಿ ಧಾರವಾಡ