ಕಳೆದ ಅವಧಿಯಲ್ಲಿ ತಮ್ಮ ಸರ್ಕಾರವಿದ್ದಾಗ 168 ಭರವಸೆ ನೀಡಿದ್ದೇವೆ. ಅದರಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೇವು. ಜತೆಗೆ 30 ಕಾರ್ಯಕ್ರಮಗಳನ್ನು ಹೊಸದಾಗಿ ಜಾರಿಗೊಳಿಸಿದ್ದುಂಟು. ಆಗ ವಸತಿ ಹೀನರಿಗೆ ಪ್ರತಿವರ್ಷ 3 ಲಕ್ಷ ಮನೆ ಕಟ್ಟಿಸಿಕೊಡುತ್ತೇವೆ ಎಂದಿದ್ದೇವು. ಅದರಂತೆ 5 ವರ್ಷದಲ್ಲಿ 14.53 ಲಕ್ಷ ಮನೆ ನಿರ್ಮಿಸಿಕೊಡುವ ಮೂಲಕ ವಸತಿ ಕ್ರಾಂತಿ ಮಾಡಿದ್ದೇವು ಎಂದು ಸಿಎಂ ಹೇಳಿದರು.

ಹುಬ್ಬಳ್ಳಿ:

ನುಡಿದಂತೆ ನಡೆಯುವ ಸರ್ಕಾರ ನಮ್ಮದು. ನಾವು ಏನು ಭರವಸೆ ನೀಡಿದ್ದೇವೋ ಅವುಗಳನ್ನು ಈಡೇರಿಸಿದ್ದೇವೆ. ಈ ಬಗ್ಗೆ ಬೇಕಾದರೆ ಬಿಜೆಪಿ ಬಹಿರಂಗ ಚರ್ಚೆಗೆ ಬರಲಿ. ಅಂಕಿ ಸಂಖ್ಯೆ ಸಮೇತ ವಿವರಿಸಲು ಸಿದ್ಧರಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಹಿರಂಗ ಸವಾಲೆಸೆದರು.

ವಸತಿ ಇಲಾಖೆ, ಕೊಳಗೇರಿ ಅಭಿವೃದ್ಧಿ ಮಂಡಳಿಯು ರಾಜ್ಯಾದ್ಯಂತ ನಿರ್ಮಿಸಿರುವ 42,345 ಮನೆಗಳನ್ನು ಇಲ್ಲಿನ ಮಂಟೂರ ರಸ್ತೆಯಲ್ಲಿ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಹಂಚಿಕೆ ಮಾಡಿದ ಬಳಿಕ ಅವರು ಮಾತನಾಡಿದರು.

ಕಳೆದ ಅವಧಿಯಲ್ಲಿ ತಮ್ಮ ಸರ್ಕಾರವಿದ್ದಾಗ 168 ಭರವಸೆ ನೀಡಿದ್ದೇವೆ. ಅದರಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೇವು. ಜತೆಗೆ 30 ಕಾರ್ಯಕ್ರಮಗಳನ್ನು ಹೊಸದಾಗಿ ಜಾರಿಗೊಳಿಸಿದ್ದುಂಟು. ಆಗ ವಸತಿ ಹೀನರಿಗೆ ಪ್ರತಿವರ್ಷ 3 ಲಕ್ಷ ಮನೆ ಕಟ್ಟಿಸಿಕೊಡುತ್ತೇವೆ ಎಂದಿದ್ದೇವು. ಅದರಂತೆ 5 ವರ್ಷದಲ್ಲಿ 14.53 ಲಕ್ಷ ಮನೆ ನಿರ್ಮಿಸಿಕೊಡುವ ಮೂಲಕ ವಸತಿ ಕ್ರಾಂತಿ ಮಾಡಿದ್ದೇವು. ಇನ್ನು ಈ ಅವಧಿಯಲ್ಲಿ 592 ಭರವಸೆಯನ್ನೂ ನೀಡಿದ್ದೇವೆ. ಅದರಲ್ಲಿ ಈಗಾಗಲೇ 243 ಭರವಸೆ ಈಡೇರಿಸಿದ ತೃಪ್ತಿ ನಮಗಿದೆ. ಇನ್ನುಳಿದ ಅವಧಿಯಲ್ಲಿ ಉಳಿದಿರುವ ಭರವಸೆಗಳನ್ನು ಈಡೇರಿಸುತ್ತೇವೆ. ಯಾವುದೇ ಭರವಸೆ ಈಡೇರಿಸಿಲ್ಲ ಎಂದು ಬಿಜೆಪಿ ಆರೋಪಿಸುತ್ತದೆ. ಆದರೆ, ಈ ಬಗ್ಗೆ ತಾವು ಚರ್ಚೆಗೆ ಸಿದ್ಧ. ಬಿಜೆಪಿಗರು ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.

ಬಿಜೆಪಿ ಮಾಡಿರುವುದೇನು?:

ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದೆ. ಆದರೆ, ಅವರು ಮಾಡಿರುವುದೇನು? ಅದರ ಸಾಧನೆಗಳೇನು ಎಂಬುದನ್ನು ಸ್ಪಷ್ಟಪಡಿಸಲಿ ಎಂದ ಅವರು, ರಾಜ್ಯಕ್ಕೆ ಅನುದಾನ ಕೊಡದೇ ಅನ್ಯಾಯ ಮಾಡುತ್ತಿರುವುದೇ ಅದರ ಸಾಧನೆ. ರೈತರ ಆದಾಯ ದ್ವಿಗುಣ, ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ, ಕಪ್ಪು ಹಣ ತಂದು ಪ್ರತಿಯೊಬ್ಬರ ಖಾತೆಗೆ ₹ 15 ಲಕ್ಷ.. ಹೀಗೆ ಹತ್ತಾರು ಭರವಸೆ ನೀಡಿದ್ದರು. ಅವುಗಳನ್ನು ಎಷ್ಟನ್ನು ಈಡೇರಿಸಿದ್ದಾರೆ ಎಂದು ಪ್ರಶ್ನಿಸಿದರು.

ಇನ್ನು ನಿರ್ಮಲಾ ಸೀತಾರಾಮನ್‌ ಅವರು ಭದ್ರಾ ಮೇಲ್ದಂಡೆಗೆ ₹ 5300 ಕೋಟಿ ಕೊಡುವುದಾಗಿ ಬಜೆಟ್‌ನಲ್ಲೇ ಘೋಷಿಸಿದ್ದರು. ಆದರೆ, ಐದು ಪೈಸೆ ಕೂಡ ಬರಲಿಲ್ಲ. ಆಗ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದರು. ಅವರು ಕೇಂದ್ರದಿಂದ ಅನುದಾನ ತರಿಸುವುದಾಗಿ ತಿಳಿಸಿದ್ದರು. ಆ ಕೆಲಸವನ್ನೂ ಮಾಡಲಿಲ್ಲ. ಕೃಷ್ಣಾ ಮೇಲ್ದಂಡೆಗೆ ಸಂಬಂಧಪಟ್ಟಂತೆ ಈವರೆಗೂ ಗೆಜೆಟ್‌ ನೋಟಿಫಿಕೇಶನ್‌ ಹೊರಡಿಸಲು ಕೇಂದ್ರಕ್ಕೆ ಸಾಧ್ಯವಾಗಿಲ್ಲ. ಗೆಜೆಟ್‌ ನೋಟಿಫಿಕೇಶನ್‌ ಹೊರಡಿಸಿದರೆ ನಾವು ಮತ್ತಷ್ಟು ಕೆಲಸ ಮಾಡಬಹುದು ಎಂದರು.

ಮಹದಾಯಿ ನಾಳೆಯಿಂದ ಕೆಲಸ..!

ಮಹದಾಯಿ ಯೋಜನೆಗೆ ಈ ವರೆಗೂ ಅರಣ್ಯ ಹಾಗೂ ಪರಿಸರ ಇಲಾಖೆಯಿಂದ ಅನುಮತಿ ಕೊಟ್ಟಿಲ್ಲ. ಅನುಮತಿ ಕೊಡಿಸಿದರೆ ನಾಳೆಯಿಂದ ಕೆಲಸ ಶುರು ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು. ಆದರೆ, ಕೇಂದ್ರ ಸರ್ಕಾರ ಅನುಮತಿಯನ್ನೇ ಕೊಡುತ್ತಿಲ್ಲ. ಇಲ್ಲಿನ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಈ ಬಗ್ಗೆ ಗಮನವನ್ನೇ ಹರಿಸುತ್ತಿಲ್ಲ. ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ಮಹದಾಯಿಗೆ ಅನುಮತಿ ಕೊಡಿಸುವುದಾಗಿ ಯಡಿಯೂರಪ್ಪ ಭರವಸೆ ನೀಡಿದ್ದರು. 2 ವರ್ಷ ಆಡಳಿತ ನಡೆಸಿದರು. ಅನುಮತಿ ಕೊಡಿಸಲಿಲ್ಲ. ಈ ವರೆಗೂ ಕೇಂದ್ರ ಸರ್ಕಾರದಿಂದ ಅನುಮತಿಯೇ ಸಿಗುತ್ತಿಲ್ಲ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅನುಮತಿ ಕೊಡಿಸಲಿ. ನಾಳೆಯಿಂದಲೇ ಕೆಲಸ ಶುರು ಮಾಡುತ್ತೇವೆ ಎಂದರು.

ಫೆ. 8ಕ್ಕೆ ಬೆಣ್ಣಿಹಳ್ಳ ಕಾಮಗಾರಿಗೆ ಚಾಲನೆ

ಧಾರವಾಡ ಜಿಲ್ಲೆಯಲ್ಲಿ ಬೆಣ್ಣಿಹಳ್ಳದಿಂದ ಆಗುತ್ತಿರುವ ಪ್ರವಾಹ ತಡೆ ಯೋಜನೆಗೆ ಫೆ. 8ಕ್ಕೆ ಚಾಲನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಬೆಣ್ಣಿಹಳ್ಳ ಪ್ರವಾಹ ತಡೆಗೆ ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ಅನುದಾನ ಬಿಡುಗಡೆ ಮಾಡಲಾಗಿದೆ. ಇದಕ್ಕೆ ಚಾಲನೆ ನೀಡಲಾಗುವುದು. ಇದರೊಂದಿಗೆ ನವಲಗುಂದ ಕ್ಷೇತ್ರದಲ್ಲಿ ₹ 356 ಕೋಟಿ ವೆಚ್ಚದ ಯೋಜನೆಗಳಿಗೆ ಚಾಲನೆ ನೀಡಲಾಗುವುದು ಎಂದು ಇದೇ ವೇಳೆ ತಿಳಿಸಿದರು.