ಸಾರಾಂಶ
ಹುಬ್ಬಳ್ಳಿ:
ಯಾವಾಗಲೂ ನಮ್ಮ ಸರ್ಕಾರ ರೈತರ ಪರ. ಕಬ್ಬಿನ ದರ ಹೆಚ್ಚಿಸಲು ರೈತರು ನಡೆಸುತ್ತಿರುವ ಹೋರಾಟಕ್ಕೆ ರಾಜ್ಯ ಸರ್ಕಾರ ಸ್ಪಂದಿಸುತ್ತಿದೆ. ಬೇರೆ ರಾಜ್ಯದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಾಗ ಬಿಜೆಪಿಯವರು ಎಲ್ಲಿ ಹೋಗಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ ಎಂಬ ಕಾರಣಕ್ಕೆ ದೊಡ್ಡದಾಗಿ ಮಾತನಾಡುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಬಿಜೆಪಿ ವಿರುದ್ಧ ಹರಿಹಾಯ್ದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅಧಿಕಾರದಲ್ಲಿದ್ದ ವೇಳೆಯೇ ದೇಶದಲ್ಲಿ ಎಷ್ಟು ಜನ ರೈತರು ಆತ್ಮಹತ್ಮೆ ಮಾಡಿಕೊಂಡಿದ್ದಾರೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಅವಧಿಯಲ್ಲಿ 700ಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಕುರಿತು ಯಾವುದೇ ಬಿಜಪಿ ನಾಯಕರು ಮಾತನಾಡುವುದಿಲ್ಲ ಎಂದರು.
ತುಟಿ ಬಿಚ್ಚಲಿಲ್ಲ:ಬೇರೆ, ಬೇರೆ ರಾಜ್ಯಗಳಲ್ಲಿ ರೈತರು ಹೋರಾಟ ಮಾಡಿದರೆ ಅವರನ್ನು ದೇಶದ್ರೋಹಿಗಳೆಂದು ಬಿಂಬಿಸುತ್ತಿದ್ದಾರೆ. ಈ ಹಿಂದೆ ದೆಹಲಿಯಲ್ಲಿ ರೈತರು ಹೋರಾಟ ಮಾಡಿ ನೂರಾರು ರೈತರು ಜೀವ ಕಳೆದುಕೊಂಡರೆ ಯಾವೊಬ್ಬ ಬಿಜೆಪಿ ನಾಯಕರು ತುಟಿ ಬಿಚ್ಚಲಿಲ್ಲ. ಕಾಂಗ್ರೆಸ್ ಅಧಿಕಾರ ಇರುವ ರಾಜ್ಯಗಳಲ್ಲಿ ಹೋರಾಟಗಳಾದರೆ ದೊಡ್ಡದಾಗಿ ಬಿಂಬಿಸುತ್ತಿದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ನಾಟಕ ನಿಲ್ಲಿಸಿ:ವಿಶ್ವ ಗುರು ನರೇಂದ್ರ ಮೋದಿ ಅವರು ಗೆಲ್ಲುವ ಉದ್ದೇಶದಿಂದ ಮತ ಕಳ್ಳತನ ಮಾಡಿಸಿರುವುದು ಇಡೀ ದೇಶಕ್ಕೆ ಗೊತ್ತಾಗಿದೆ. ಮಾದರಿ ಚುನಾವಣೆ ಎಂದು ಹೇಳಿಕೊಂಡು ಇಡೀ ವ್ಯವಸ್ಥೆಯನ್ನೇ ಹಾಳು ಮಾಡಿದ್ದಾರೆ. ಸದ್ಯ ಮೋದಿ ಅವರ ತಂತ್ರ ಎಲ್ಲರಿಗೂ ಗೊತ್ತಾಗುತ್ತಿದೆ. ಈಗಲಾದರೂ ಪ್ರಧಾನಿ ನಾಟಕವಾಡುವುದು, ಪ್ರಚಾರ ಪಡೆಯುವುದು ನಿಲ್ಲಿಸಬೇಕು. ಬಿಜೆಪಿಗೆ ಯಾವುದೇ ರಾಜಕೀಯ ಸಿದ್ಧಾಂತ ಹಾಗೂ ಬದ್ಧತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರು ಒಪ್ಪುತ್ತಿಲ್ಲ:ಧಾರವಾಡ ಹಾಗೂ ಬೆಳಗಾವಿ ಹೊಸ ರೈಲು ಮಾರ್ಗಕ್ಕೆ ಸಚಿವ ಲಾಡ್ ಸ್ಪಂದಿಸುತ್ತಿಲ್ಲ ಎಂಬ ಸಚಿವ ವಿ. ಸೋಮಣ್ಣ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಲಾಡ್, ಧಾರವಾಡ ಹಾಗೂ ಬೆಳಗಾವಿ ಹೊಸ ರೈಲು ಮಾರ್ಗ ವಿನ್ಯಾಸ ಪ್ರಕ್ರಿಯೆ ಬದಲಾಯಿಸಲಾಯಿತು. ಬಳಿಕ ಇನ್ನೊಂದು ಮಾರ್ಗವಿನ್ಯಾಸಕ್ಕೆ ಒಪ್ಪಿಕೊಂಡರು. ಈಗ ಅದು ಬೇಡ ಹಳೇ ಮಾರ್ಗದ ವಿನ್ಯಾಸದಲ್ಲಿ ರೈಲು ಮಾರ್ಗ ಮಾಡಲು ಮುಂದಾಗಿದ್ದಾರೆ. ಇದಕ್ಕೆ ರೈತರು ಒಪ್ಪತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಮಹಾನಗರ ಪಾಲಿಕೆ ಹೆಚ್ಚುವರಿ ಅಭಿವೃದ್ಧಿ ಕಾಮಗಾರಿ ಟೆಂಡರ್ ಕರೆದ ಹಿನ್ನೆಲೆ ಹಣ ಬಾಕಿ ಇದೆ. ಅದನ್ನು ಗುತ್ತಿಗೆದಾರರ ಜತೆಗೆ ಮಾತನಾಡಿ ಆಯುಕ್ತರು ಬಗೆಹರಿಸುತ್ತಿದ್ದಾರೆ. ಸರ್ಕಾರದಿಂದ ಬರಬೇಕಾದ ಉಳಿದ ಹಣ ಹಂತ ಹಂತವಾಗಿ ಬರಲಿದೆ ಎಂದು ಹೇಳಿದರು.