ಲೂಟಿಕೋರರಿಗೆ ಅವಕಾಶ ನೀಡುವ ಸರ್ಕಾರ ನಮ್ಮದಲ್ಲ: ಶಾಸಕ ಕೆ. ಷಡಕ್ಷರಿ

ಕನ್ನಡಪ್ರಭ ವಾರ್ತೆ ತಿಪಟೂರು

ನಗರದ ಸಿಂಗ್ರಿ ನಂಜಪ್ಪ ವೃತ್ತದ ಬಳಿ ಮುಡಾ ಹಗರಣದಲ್ಲಿ ಪ್ರಾಸಿಕ್ಯೂಷನ್ ಅನುಮತಿ ನೀಡಿರುವ ರಾಜ್ಯಪಾಲರ ನಿರ್ಧಾರವನ್ನು ವಿರೋಧಿಸಿ ತಾಲೂಕು ಬ್ಲಾಕ್ ಕಾಂಗ್ರೆಸ್‌ನಿಂದ ಸೋಮವಾರ ಪ್ರತಿಭಟಿಸಿ ತಹಸೀಲ್ದಾರ್ ಪವನ್‌ಕುಮಾರ್‌ಗೆ ಮನವಿ ಸಲ್ಲಿಸಲಾಯಿತು.

ಶಾಸಕ ಕೆ. ಷಡಕ್ಷರಿ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಜನಪರ ಆಡಳಿತ ನೋಡಿ ಸಹಿಸಲಾಗದೇ ವಿರೋಧ ಪಕ್ಷದವರಿಗೆ ಅಸೂಯೆ ಬಂದಿದೆ. ಸರ್ಕಾರದ ಮೇಲೆ ಗೂಬೆ ಕೂರಿಸಲು ಇಲ್ಲಸಲ್ಲದ ಆಪಾದನೆ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೆ ಇದುವರೆಗೂ ಯಾವುದೇ ಕಪ್ಪುಚುಕ್ಕೆ ಇಲ್ಲದಂತೆ ಆಡಳಿತ ನಡೆಸುತ್ತಿದ್ದಾರೆ. ಲೂಟಿಕೋರರಿಗೆ ಅವಕಾಶ ನೀಡುವ ಸರ್ಕಾರ ನಮ್ಮದಲ್ಲ ಎಂದರು.

ರಾಜ್ಯಪಾಲರು ಯಾವುದೋ ಚಿತಾವಣೆಗೆ ಒಳಗಾಗಿ ಯಾರದೋ ಮಾತು ಕೇಳಿಕೊಂಡು ಮುಡಾ ಹಗರಣದಲ್ಲಿ ಮುಖ್ಯಮಂತ್ರಿಗಳ ವಿರುದ್ದ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಲೋಕಾಯುಕ್ತರು ಕೆಲವು ವಿರೋಧ ಪಕ್ಷದ ಮುಖಂಡರ ವಿರುದ್ದ ಭ್ರಷ್ಟಾಚಾರ ಆರೋಪದಡಿ ಕ್ರಮ ಕೈಗೊಳ್ಳಲು ಅನುಮತಿ ಕೇಳಿದರೂ ಇದುವರೆಗೂ ನೀಡದ ರಾಜ್ಯಪಾಲರು, ಮುಖ್ಯಮಂತ್ರಿ ವಿರುದ್ದ ಆಪಾದನೆಗೆ ಬೇಗ ಅನುಮತಿ ನೀಡಿರುವುದರ ಹಿಂದೆ ರಾಜಕೀಯ ಕಾರಣಗಳಿವೆ. ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಕೈವಾಡವಿಲ್ಲ ಎಂದರು.

ಎಂ.ಎನ್.ಕಾಂತರಾಜು, ಟಿ.ಎನ್.ಪ್ರಕಾಶ್, ನಿಖಿಲ್‌ರಾಜ್, ಆರ್.ಡಿ.ಬಾಬು, ಮಾದಿಹಳ್ಳಿ ಪ್ರಕಾಶ್, ಬಜಗೂರು ಮಂಜುನಾಥ್, ಲೋಕನಾಥ್‌ಸಿಂಗ್, ಪ್ರಕಾಶ್ ಯಾದವ್, ಸುಜಿತ್‌ ಭೂಷಣ್, ಮಂಜುನಾಥ್, ಶಾಂತಪ್ಪ, ಕಾರ್ಯಕರ್ತರಿದ್ದರು.