ಜಗತ್ತಿನ ಅತೀ ಶ್ರೇಷ್ಠ ಸಂವಿಧಾನ ನಮ್ಮದು: ನ್ಯಾ. ಬಾಳಾ ಸಾಹೇಬ್

| Published : Mar 15 2025, 01:06 AM IST

ಸಾರಾಂಶ

Ours is the greatest constitution in the world: Justice Balasaheb

- ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟನೆ

----

ಕನ್ನಡಪ್ರಭ ವಾರ್ತೆ ಯಾದಗಿರಿ

ಭಾರತ ಸಂವಿಧಾನವು ಜಗತ್ತಿನಲ್ಲಿಯೇ ಅತೀ ಶ್ರೇಷ್ಠವಾದ ಸಂವಿಧಾನವಾಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಗಳು ಸಂವಿಧಾನವನ್ನು ತಿಳಿಯುವ ಕಾರ್ಯವಾಗಬೇಕು ಎಂದು ಸಿವಿಲ್ ನ್ಯಾಯಾಧೀಶ ಬಾಳಾ ಸಾಹೇಬ್ ವಡ್‌ವಡೆ ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಾರ್ಮಿಕ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ಹಾಗೂ ವಿವಿಧ ಇಲಾಖೆ ಮತ್ತು ಸ್ಥಳೀಯ ಸಂಘ-ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ, ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆದ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಂವಿಧಾನದ 21 ಎ ವಿಧಿಯು 6 ರಿಂದ 14 ವರ್ಷದ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣದ ಹಕ್ಕನ್ನು ಪ್ರತಿಯೊಬ್ಬ ವಿದ್ಯಾರ್ಥಿಯು ಬಳಸಿಕೊಳ್ಳಬೇಕು ಎಂದು ಅವರು ಹೇಳಿದರು. ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀಹರಿ ಆರ್. ದೇಶಪಾಂಡೆ ಮಾತನಾಡಿ, ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986 ಹಾಗೂ ತಿದ್ದುಪಡಿ 2016ರ ಕುರಿತು ಪ್ರತಿಯೊಬ್ಬರು ಕೂಡ ತಮ್ಮ ಪಾಲಕರಿಗೆ ತಿಳಿಸಬೇಕು ಹಾಗೂ ಪ್ರತಿಯೊಂದು ಮಗುವು ತನ್ನ ಹಕ್ಕುಗಳಿಂದ ವಂಚಿತನಾಗದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ಪಾಲಕ-ಪೋಷಕರ ಜವಾಬ್ಧಾರಿ ಎಂದು ತಿಳಿಸಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಸಲಹಾ ಸಮಿತಿ ಸದಸ್ಯ ಮರೆಪ್ಪ ಚಟ್ಟೇರ್‌ಕರ್ ಮಾತನಾಡಿ, ಡಾ. ಬಿ. ಆರ್. ಅಂಬೇಡ್ಕರ್ ಅವರ ಬರೆದಂತಹ ಭಾರತ ಸಂವಿಧಾನವು ಜಗತ್ತಿನಲ್ಲಿಯೇ ಅತೀ ಶ್ರೇಷ್ಠವಾದ ಗ್ರಂಥವಾಗಿದೆ ಎಂದರು.

ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕ ರಿಯಾಜ್‌ ಪಟೇಲ್ ವರ್ಕನಳ್ಳಿ ಮಾತನಾಡಿ, ಮಕ್ಕಳನ್ನು ಶಾಲೆ ಬಿಡಿಸಿ ಆಟೋ, ಟಂಟಂಗಳಲ್ಲಿ ಕೃಷಿ ಹಾಗೂ ಇನ್ನಿತರ ಕೃಷಿ ಚಟುವಟಿಕೆ ಕೆಲಸಕ್ಕೆ ಕರೆದುಕೊಂಡು ಹೋಗುವುದು ಕಂಡು ಬಂದಲ್ಲಿ ಮಕ್ಕಳ ಸಹಾಯವಾಣಿ 1098 ಕ್ಕೆ ಪೋನ್ ಮಾಡಿ ತಿಳಿಸಿದರೆ, ಅಂತಹ ಮಕ್ಕಳನ್ನು ರಕ್ಷಿಸಿ, ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಉಪನ್ಯಾಸಕರು ಹಾಗೂ ಹಿರಿಯ ಸಾಹಿತಿ ಗುರುಪ್ರಸಾದ ವೈದ್ಯ ಅವರು ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986, ತಿದ್ದುಪಡಿ ಕಾಯ್ದೆ 2016ರ ಕುರಿತು ಉಪನ್ಯಾಸ ನೀಡಿದರು.

ಬಾಲ, ಕಿಶೋರ ಕಾರ್ಮಿಕ ಪದ್ಧತಿ ನಿಷೇಧದ ಕುರಿತು ಆಯೋಜಿಸಿದ್ದ ಚಿತ್ರಕಲೆ, ಪ್ರಬಂಧ, ಭಾಷಣ ಸ್ಪರ್ಧೆಯಲ್ಲಿ ಪ್ರಥಮ, ದ್ವೀತಿಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಬಹುಮಾನಗಳನ್ನು ಸಹ ವಿತರಿಸಲಾಯಿತು.

ಯಾದಗಿರಿ ಕಾರ್ಮಿಕ ನಿರೀಕ್ಷಕರಾದ ಸಂಗೀತಾ ಹೊನ್ನೂರು, ಸಿ.ಆರ್.ಪಿ ರವಿಚಂದ್ರ ನಾಯ್ಕಲ್, ಬಿ.ಆರ್.ಪಿ ವೆಂಕಟರೆಡ್ಡಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಡಾ. ಅಂಬೇಡ್ಕರ್ ನಗರದ ಎಸ್.ಡಿ.ಎಂ.ಸಿ ಅಧ್ಯಕ್ಷ ಅಂಬರೀಷ್ ಚಟ್ಟೇರ್‌ಕರ್, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಡಾ. ಅಂಬೇಡ್ಕರ್ ನಗರದ ಮುಖ್ಯ ಗುರುಗಳಾದ ಸುಮತಿ, ಶಾಲೆಯ ಸಹ ಶಿಕ್ಷಕಿಯರಾದ ವಿಜಯಲಕ್ಷ್ಮಿ, ಶಶಿಕಲಾ, ರೂಪಾ ಕೆ.ಎನ್. ಮಂಜುಳಾ, ಶೋಭಾದೇವಿ, ಅತಿಥಿ ಶಿಕ್ಷಕರಾದ ಮಹಿಪಾಲರೆಡ್ಡಿ, ಭೀಮರೆಡ್ಡಿ, ಭಾರತಿ, ಮಾರ್ಗದರ್ಶಿ ಸಂಸ್ಥೆಯ ಆಶಾ ಬೇಗಂ, ಚನ್ನಮ್ಮ ಕಾರ್ಮಿಕ ಇಲಾಖೆಯ ಸಿಬ್ಬಂದಿಗಳಾದ ದೀಪಕ್ ಸಿಂಗ್, ಅಂಬ್ರೇಶ ಶೆಹರ್‌ವಾಲೆ, ವೆಂಕಟೇಶ ಶಿವಾಂಗೆ, ಬಾಲು ನಾಯಕ, ಅಮೃತ್ ರಾವ್ ಕೋತ್ವಾಲ್ ಇತರರಿದ್ದರು.

-----

14ವೈಡಿಆರ್3: ಯಾದಗಿರಿ ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಕಾನೂನು ಅರಿವು-ನೆರವು ಕಾರ್ಯಕ್ರಮ ಜರುಗಿತು.