ಸಾರಾಂಶ
ಬೆಂಗಳೂರು : ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಸಂಬಂಧ ನ್ಯಾಯಮೂರ್ತಿ ನಾಗಮೋಹನ ದಾಸ್ ಅವರು ಸಲ್ಲಿಸಿರುವ ವರದಿಯಲ್ಲಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಜಾತಿಗಳ ಪೈಕಿ 10 ಜಾತಿಗಳು ಮಾತ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹೆಚ್ಚು ಪ್ರಾತಿನಿಧ್ಯ ಪಡೆದುಕೊಂಡಿವೆ ಎಂದು ಹೇಳಿದೆ.
ಪ್ರಮುಖವಾಗಿ ಆದಿ ದ್ರಾವಿಡ, ಆದಿ ಕರ್ನಾಟಕ, ಬಂಜಾರ, ಭೋವಿ, ಬಾಂಬಿ, ಚಲವಾದಿ, ಹೊಲೆಯ, ಕೊರಮ, ಮಾದಿಗ, ಸಮಗಾರ ಜಾತಿಗಳ ಜನ ಸರ್ಕಾರದ ವಿವಿಧ ವೃಂದಗಳ ಉದ್ಯೋಗದಲ್ಲಿದ್ದಾರೆ. ಆದಿ ದ್ರಾವಿಡ ಜಾತಿಯ 5,059, ಆದಿ ಕರ್ನಾಟಕ 20,092, ಬಂಜಾರ 19,691, ಭೋವಿ 12,212, ಬಾಂಬಿ 8,864, ಛಲವಾದಿ 6,985, ಹೊಲೆಯ 34,206, ಕೊರಮ 4,010, ಮಾದಿಗ 21,682, ಸಮಗಾರ ಜಾತಿಯ 2513 ಮಂದಿ ಸರ್ಕಾರಿ ಉದ್ಯೋಗದಲ್ಲಿದ್ದಾರೆ.
28 ಜಾತಿಗಳು ಮಧ್ಯಮ ಮಟ್ಟ:
28 ಜಾತಿಗಳು ಸರ್ಕಾರದ ಉದ್ಯೋಗದಲ್ಲಿ ಮಧ್ಯಮ ಮಟ್ಟದ ಪ್ರಾತಿನಿಧ್ಯ ಪಡೆದಿದ್ದಾರೆ. ಈ ಪೈಕಿ ಈ ಪೈಕಿ ಆದಿ ಆಂಧ್ರ 269, ಅಗೇರ 119, ಅರುನತಾತಿಯರ್ 123, ಬಂಟ 61, ಬಲಗೈ 736, ಬೇಡ ಜಂಗಮ 105, ಭಂಗಿ 144, ಚೆನ್ನದಾಸರ್ 940, ದೋರ್ ಕಕ್ಕಯ್ಯ 811, ದೊಂಬ 364, ಗಂಟಿ ಚೋರ್ಸ್ 94, ಗೊಡ್ಡ 64, ಹಲಸರ 140, ಹಂದಿ ಜೋಗಿ 138, ಹೊಲೇರ 807, ಜಂಬುವುಲು 74, ಕೊರಚ 784, ಮಹರ್ 673, ಮಾಲ 645, ಮಾಲ ದಾಸರಿ 149, ಮಾಂಗ ಗರುಡಿ 112, ಮಾಂಗ 151, ಮೊಗೇರ 484, ಮುಕ್ರಿ 101, ಮುಂಡಾಲ 479, ಪರಿಯಾನ 498, ಸಿಳ್ಳೇಕ್ಯಾತ 219, ಸುಡಗಾಡು ಸಿದ್ದ 233 ಮಂದಿ ಸರ್ಕಾರಿ ಉದ್ಯೋಗ ಪಡೆದಿದ್ದಾರೆ.
51 ಜಾತಿಗಳಿಗೆ ಕಡಿಮೆ ಪ್ರಾತಿನಿಧ್ಯ:
51 ಜಾತಿಗಳು ಕಡಿಮೆ ಪ್ರಾತಿನಿಧ್ಯ ಪಡೆದಿದ್ದು, ಈ ಪೈಕಿ ಬೈರ ಜಾತಿ 57, ಬೈಗಾರ 53, ಮಾದರಿ 55,ತೋಟಿ 55, ರನೆಯಾರ್ 48, ಬಕುಡ 47, ಹೊಲೆಯ ದಾಸರಿ 39, ಕೋಟೆಗಾರ 35, ಪಲ್ಲನ್ 38 ನಲಕೆಯವ ಮತ್ತು ನಲ್ಕೆದಾಯ ಜಾತಿ ತಲಾ 24, ಪಲೆ 30, ವಲ್ಲುವನ್ ಜಾತಿಯ 23 ಮಂದಿ ಸರ್ಕಾರಿ ಹುದ್ದೆಯಲ್ಲಿದ್ದಾರೆ. ಉಳಿದ ಬಹುತೇಕ ಜಾತಿಗಳ ಸರ್ಕಾರಿ ಉದ್ಯೋಗ ಪಡೆದವರ ಸಂಖ್ಯೆ 20ರೊಳಗಿದೆ.
12 ಜಾತಿಗಳು ಉದ್ಯೋಗದಲ್ಲಿಲ್ಲ:
ವಿಶೇಷವಾಗಿ ಚಾಂಡಾಲ, ಗರೋಡ, ಗರೋ, ಕೆಪಮಾರಿಸ್, ಕುಡಂಬನ್, ದೇಡ್, ವಣಕಾರ್, ಮಾರು ವಣಕಾರ್, ಮಾಲಾಹೆನ್ನಾಯಿ, ಮಾಲ ಮಸ್ತಿ, ಮಾಲಸಾಲೆ, ನೆಟ್ಕಣಿ, ಮಸ್ತಿ, ಮವಿಲನ್, ಪೆಣ್ಣಿಅಂಡಿ, ಸಿಂದೊಳ್ಳು ಜಾತಿಗಳಿಗೆ ಸೇರಿದ ಒಬ್ಬರೂ ಸರ್ಕಾರದ ಉದ್ಯೋಗದಲ್ಲಿ ಇಲ್ಲವೆಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಎಲ್ಲ ಮಾಹಿತಿಗಳು ಸದ್ಯ ಸರ್ಕಾರದಲ್ಲಿ ಉದ್ಯೋಗದಲ್ಲಿರುವವರದ್ದಾಗಿದ್ದು, 45 ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವ ಒಟ್ಟು ಉದ್ಯೋಗಿಗಳ ಪೈಕಿ ಪರಿಶಿಷ್ಟ ಜಾತಿಯ ವಿವಿಧ ವೃಂದಗಳಲ್ಲಿ ಕೆಲಸ ಮಾಡುವವರ ಮಾಹಿತಿ ಇದಾಗಿದೆ...
ಯಾವ್ಯಾವ ಜಾತಿಗೆ
ಹೆಚ್ಚಿನ ಪ್ರಾತಿನಿಧ್ಯ?
ಆದಿ ದ್ರಾವಿಡ, ಆದಿ ಕರ್ನಾಟಕ, ಬಂಜಾರ, ಭೋವಿ, ಬಾಂಬಿ, ಚಲವಾದಿ, ಹೊಲೆಯ, ಕೊರಮ, ಮಾದಿಗ, ಸಮಗಾರ
ಶಿಕ್ಷಣದ ಜಾಗೃತಿ
ಕಾರಣ ಉದ್ಯೋಗ
10 ಜಾತಿಗಳಲ್ಲಿ ಸಾಮಾಜಿಕ ತಿಳಿವಳಿಕೆ, ಶಿಕ್ಷಣ ಹಾಗೂ ಉದ್ಯೋಗ ಕುರಿತು ಜಾಗೃತಿ ಇರುವುದು ಅವರಿಗೆ ಹೆಚ್ಚಿನ ಪ್ರಮಾಣದ ಪ್ರಾತಿನಿಧ್ಯ ಸಿಗಲು ಕಾರಣವಾಗಿದೆ. ಜೊತೆಗೆ ಜಾತಿಯ ಜನಸಂಖ್ಯೆಯಲ್ಲೂ ಇವರೇ ಹೆಚ್ಚಾಗಿದ್ದಾರೆ. ಮಧ್ಯಮ ಮಟ್ಟದ ಪ್ರಾತಿನಿಧ್ಯ ಪಡೆದಿರುವ ಜಾತಿಗಳಿಗೆ ಸಮರ್ಪಕ ಪ್ರಮಾಣದಲ್ಲಿ ಪ್ರಾತಿನಿಧ್ಯ ಸಿಕ್ಕಿದ್ದರೂ ಈ ಜಾತಿಗಳನ್ನು ಪೂರ್ಣ ಪ್ರಾತಿನಿಧ್ಯ ಪಡೆದಿದೆ ಎಂದು ಪರಿಗಣಿಸಲಾಗದು. ಈ ಜಾತಿಗಳ ಜನ ಹೆಚ್ಚಾಗಿ ‘ಸಿ’ ವೃಂದದಲ್ಲಿ ಹೆಚ್ಚಿನ ಪ್ರಾತಿನಿಧ್ಯ ಪಡೆದುಕೊಂಡಿದ್ದಾರೆ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿ, ಶಿಕ್ಷಣ ಮತ್ತು ಜಾಗೃತಿ ಹಾಗೂ ಸೌಲಭ್ಯಗಳ ಕೊರತೆ ಉಳಿದ ಜಾರಿಗಳು ಕಡಿಮೆ ಪ್ರಾತಿನಿಧ್ಯ ಪಡೆಯಲು ಕಾರಣವಾಗಿರಬಹುದು ಎಂದು ವರದಿ ಹೇಳಿದೆ.