ಬೆಂಗಳೂರು : ನಮ್ಮ ಮೆಟ್ರೋ ಟಿಕೆಟ್‌ ದರ ಶೇ.50ರಷ್ಟು ಏರಿಕೆಗೆ ವ್ಯಾಪಕವಾಗಿ ಜನಾಕ್ರೋಶ

| N/A | Published : Feb 10 2025, 01:45 AM IST / Updated: Feb 10 2025, 07:59 AM IST

ಬೆಂಗಳೂರು : ನಮ್ಮ ಮೆಟ್ರೋ ಟಿಕೆಟ್‌ ದರ ಶೇ.50ರಷ್ಟು ಏರಿಕೆಗೆ ವ್ಯಾಪಕವಾಗಿ ಜನಾಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ ಮೆಟ್ರೋ ಟಿಕೆಟ್‌ ದರ ಶೇ.50ರಷ್ಟು ಏರಿಕೆಗೆ ವ್ಯಾಪಕವಾಗಿ ಜನಾಕ್ರೋಶ ವ್ಯಕ್ತವಾಗಿದ್ದು, ಬಿಎಂಟಿಸಿ ಬಸ್‌ಗಿಂತ ಮೆಟ್ರೋ ದರವೇ ಹೆಚ್ಚಾಗಿದೆ, ದೇಶದಲ್ಲಿ ಇರುವ ಮೆಟ್ರೋ ಪೈಕಿ ಬೆಂಗಳೂರು ಮೆಟ್ರೊ ದರ ಅತಿ ಹೆಚ್ಚಾಗಿದೆ, ದರ ಹೆಚ್ಚಳದಿಂದ ಜನರು ಮತ್ತೆ ಸ್ವಂತ ವಾಹನಗಳತ್ತ ಹೋಗುವುದು ಅನಿವಾರ್ಯವಾಗುತ್ತದೆ  

 ಬೆಂಗಳೂರು :  ನಮ್ಮ ಮೆಟ್ರೋ ಟಿಕೆಟ್‌ ದರ ಶೇ.50ರಷ್ಟು ಏರಿಕೆಗೆ ವ್ಯಾಪಕವಾಗಿ ಜನಾಕ್ರೋಶ ವ್ಯಕ್ತವಾಗಿದ್ದು, ಬಿಎಂಟಿಸಿ ಬಸ್‌ಗಿಂತ ಮೆಟ್ರೋ ದರವೇ ಹೆಚ್ಚಾಗಿದೆ, ದೇಶದಲ್ಲಿ ಇರುವ ಮೆಟ್ರೋ ಪೈಕಿ ಬೆಂಗಳೂರು ಮೆಟ್ರೊ ದರ ಅತಿ ಹೆಚ್ಚಾಗಿದೆ, ದರ ಹೆಚ್ಚಳದಿಂದ ಜನರು ಮತ್ತೆ ಸ್ವಂತ ವಾಹನಗಳತ್ತ ಹೋಗುವುದು ಅನಿವಾರ್ಯವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

77ಕಿ.ಮೀ ಉದ್ದದ ನಮ್ಮ ಮೆಟ್ರೋ ದೇಶದ 2ನೇ ಅತೀ ಉದ್ದದ ಮೆಟ್ರೋ ಎನ್ನಿಸಿಕೊಂಡಿದೆ. ಪ್ರತಿನಿತ್ಯ ಸರಾಸರಿ 8-9 ಲಕ್ಷ ಜನ ಪ್ರಯಾಣಿಸುತ್ತಿದ್ದಾರೆ. ಶೀಘ್ರ ಎಲೆಕ್ಟ್ರಾನಿಕ್‌ ಸಿಟಿ ಮೆಟ್ರೋ ಕೂಡ ಉದ್ಘಾಟನೆ ಆಗಲಿದ್ದು, ಮೆಟ್ರೋ ಬಳಕೆದಾರರ ಸಂಖ್ಯೆ 12ಲಕ್ಷಕ್ಕೂ ಅಧಿಕವಾಗಲಿದೆ. ಹೀಗಿರುವಾಗ ಕೈಗೆಟಕುವ ದರದಲ್ಲಿದ್ದ ನಮ್ಮ ಮೆಟ್ರೋ ದರವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿರುವುದಕ್ಕೆ ಪ್ರಯಾಣಿಕರು ವ್ಯಾಪಕವಾಗಿ ಅಸಮಧಾನ ತೋಡಿಕೊಂಡಿದ್ದಾರೆ.

ಮೆಟ್ರೋ ದರ ಹೆಚ್ಚಾಗಿರುವುದು ಜನ ಬೈಕ್‌, ಕಾರುಗಳ ಹೆಚ್ಚಿನ ಬಳಕೆಯತ್ತ ಜನ ಮುಖ ಮಾಡುವ ಸಾಧ್ಯತೆಯೂ ಇದ್ದು, ನಗರದ ಸಂಚಾರ ದಟ್ಟಣೆಗೂ ಇದು ಕಾರಣ ಆಗಬಹುದು. ಸಾರ್ವಜನಿಕ ಸಾರಿಗೆಯನ್ನು ಪ್ರೋತ್ಸಾಹಿಸುವ ಬದಲಾಗಿ ದರ ಏರಿಕೆ ಮೂಲಕ ಜನ ಮೆಟ್ರೋದಿಂದ ವಿಮುಖರಾಗುವಂತೆ ಮಾಡಲಾಗುತ್ತಿದೆ ಎಂದು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಬರೆದುಕೊಂಡಿದ್ದಾರೆ.

ಶೇ. 50 ಅಲ್ಲ, ಶೇ. 90ಕ್ಕೂ ಅಧಿಕ:

ನಮ್ಮ ಮೆಟ್ರೋ ದರ ಏರಿಕೆ ಶೇ.50 ಅಲ್ಲ ಬದಲಾಗಿ ಶೇ. 60- ಶೇ.90 ತಲುಪಿದೆ ಎಂದು ದಿನನಿತ್ಯದ ಪ್ರಯಾಣಿಕರು ಬೇಸರ ಹೊರಹಾಕಿದ್ದಾರೆ. ಕಾಡುಗೋಡಿಯಿಂದ ಬೈಯಪ್ಪನಹಳ್ಳಿಗೆ ಸಂಚರಿಸುವ ಟೆಕ್ಕಿ ರಾಜೇಶ್‌, ‘ಈ ಹಿಂದೆ ನಾನು 33.25 ಟಿಕೆಟ್‌ ದರ ಕೊಡುತ್ತಿದ್ದೆ. ಈಗ ₹ 60 ಕೊಡಬೇಕಿದ್ದು, ಶೇ. 90 ರಷ್ಟು ಹೆಚ್ಚಾದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಎಕ್ಸ್‌’ನಲ್ಲಿ ಬರೆದಿರುವ ಶರತ್‌ ಗೌತಮ್‌, ಸದನದಲ್ಲಿ ಸಚಿವರೊಬ್ಬರು ಹೇಳಿದಂತೆ ನಾವು ಇಂಗ್ಲೆಂಡ್‌ ಪ್ರಜೆಗಳ ರೀತಿ ತೆರಿಗೆ ಕಟ್ಟುತ್ತಿದ್ದೇವೆ, ಸೋಮಾಲಿಯಾ ರೀತಿಯ ಸೇವೆ ಪಡೆಯುತ್ತಿದ್ದೇವೆ, ಇದು ಮೆಟ್ರೋ ವಿಚಾರದಲ್ಲೂ ಸಾಬೀತಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.

ಮೊದಲು ಕುಂದನಹಳ್ಳಿಯಿಂದ ಎಂ.ಜಿ. ರಸ್ತೆಗೆ ಇದ್ದ ದರ ₹37, ಈಗ ₹70 ಆಗಿದೆ. ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ಸಾರ್ವಜನಿಕ ಸಾರಿಗೆ ವಿಚಾರದಲ್ಲಿ ಹಿಮ್ಮುಖ ಹೆಜ್ಜೆಯಾಗಿದೆ! ದರ ಏರಿಕೆ ಬೆಂಗಳೂರಿನ ಸಂಚಾರ ಬಿಕ್ಕಟ್ಟನ್ನು ಮತ್ತಷ್ಟು ಹದಗೆಡಿಸಲಿದೆ ಎಂದು ವಿಜಯ್‌ ಎಸ್‌. ಹೇಳಿದ್ದಾರೆ.

ಈ ಹಿಂದೆ ಸೀತಾರಾಮ ಪಾಳ್ಯದಿಂದ ದೀಪಾಂಜಲಿ ನಗರದವರೆಗೆ ₹ 57 ಇತ್ತು. ಈಗ 90 ಆಗಿದ್ದು, ಇದು ಶೇ. 60 ರಷ್ಟು ಹೆಚ್ಚಳವಾದಂತಾಗಿದೆ. ಇಷ್ಟೊಂದು ಏರಿಕೆ ಮಾಡಲು ಕಾರಣವೇನಿದೆ ಎಂದು ಪ್ರಯಾಣಿಕ ಟಿವಿಕೆ ಸಂಜಯ್‌ ಪ್ರಶ್ನಿಸಿದ್ದಾರೆ.

ದೇಶದಲ್ಲೇ ನಮ್ಮ ಮೆಟ್ರೋ ತುಟ್ಟಿ:

ದರ ಏರಿಕೆಯಿಂದಾಗಿ ದೇಶದಲ್ಲೇ ಬೆಂಗಳೂರಿನ ನಮ್ಮ ಮೆಟ್ರೋ ಅತ್ಯಂತ ದರ ದುಬಾರಿ ಎನ್ನಿಸಿಕೊಂಡಿದೆ. ದೆಹಲಿ, ಚೆನ್ನೈ, ಮುಂಬೈ, ಹೈದ್ರಾಬಾದ್‌, ಕೋಲ್ಕತ್ತಾ, ಲಕ್ನೋ, ಕೊಚ್ಚಿ, ಜೈಪುರಕ್ಕೆ ಹೋಲಿಸಿದರೆ ‘ನಮ್ಮ ಮೆಟ್ರೋ’ ಪ್ರಯಾಣ ದರ ತುಟ್ಟಿಯಾಗಿದೆ.

25 ಕಿ.ಮೀ ನಂತರದ ಪ್ರಯಾಣಕ್ಕೆ ನಮ್ಮ ಮೆಟ್ರೋ ₹ 90 ದರ ನಿಗದಿ ಪಡಿಸಿದೆ. ದೆಹಲಿ ಮೆಟ್ರೋ 32 ಕಿ.ಮೀ ಅಂತರದ ಪ್ರಯಾಣಕ್ಕೆ ₹ 60 ಇದೆ. ಕ್ರಮವಾಗಿ ಚೆನ್ನೈ ಮೆಟ್ರೋ ₹ 50 ಇದೆ. ಕೊಲ್ಕತ್ತಾ 25-30 ಕಿಮೀ ಮೆಟ್ರೋದ ಗರಿಷ್ಠ ದರ ಕೇವಲ ₹ 25 ಇದೆ. ಕೋಲ್ಕತ್ತಾ ಮೆಟ್ರೋ ಕನಿಷ್ಠ ₹ 5 - ಗರಿಷ್ಠ ₹ 50 ಇದ್ದು, ಹೆಚ್ಚು ಅಗ್ಗ ಎನ್ನಿಸಿಕೊಂಡಿದೆ.

ಟೆಕ್‌ ಸಿಟಿ ವಿಪರ್ಯಾಸ:

ಫೆ.8ರವರೆಗೆ ಕ್ಯೂಆರ್‌ ಕೋಡ್‌ ಮೇಲಿದ್ದ ರಿಯಾಯಿತಿಯನ್ನೂ ತೆಗೆಯಲಾಗಿದೆ. ನಮ್ಮ ಮೆಟ್ರೋದಲ್ಲಿ ಶೇ. 25.10 ರಷ್ಟು ( 2024ರ ಡಿಸೆಂಬರ್ ಪ್ರಕಾರ) ಕ್ಯೂಆರ್‌ ಟಿಕೆಟ್‌, ಶೇ. 46.60ರಷ್ಟು ಪ್ರಯಾಣಿಕರು ಸ್ಮಾರ್ಟ್‌ಕಾರ್ಡ್‌ (1ಕೋಟಿಗೂ ಅಧಿಕ) ಬಳಸುತ್ತಿದ್ದಾರೆ.

ಸ್ಮಾರ್ಟ್‌ ಕಾರ್ಡ್‌ ಮೇಲಿನ ಶೇ. 5ರಷ್ಟು ರಿಯಾಯಿತಿ ಮಾತ್ರ ಮುಂದುವರಿದಿದೆ. 2020 ರಲ್ಲಿ ಬಿಎಂಆರ್‌ಸಿಎಲ್‌ ಶೇ. 15ರಷ್ಟಿದ್ದ ಮೆಟ್ರೋ ಸ್ಮಾರ್ಟ್‌ ಕಾರ್ಡ್‌ ದರವನ್ನು ಶೇ. 5ಕ್ಕೆ ಇಳಿಕೆ ಮಾಡಿತ್ತು. ಆದರೆ, ಇತರೆ ಮೆಟ್ರೋಗಳಲ್ಲಿ ಸ್ಮಾರ್ಟ್‌ ಕಾರ್ಡ್‌ ಜೊತೆಗೆ ಕ್ಯೂಆರ್‌ ಕೋಡ್‌ ಬಳಕೆ ರಿಯಾಯಿತಿ ಇದೆ. ಟೆಕ್‌ ಸಿಟಿ ಎನ್ನಿಸಿಕೊಂಡ ಬೆಂಗಳೂರಲ್ಲಿ ಕ್ಯೂಆರ್‌ ಕೋಡ್‌ ಮೇಲಿನ ರಿಯಾಯಿತಿ ತೆಗೆದಿರುವುದು ವಿಪರ್ಯಾಸ. ಚೆನ್ನೈನಲ್ಲಿ ಮತ್ತು ಕೊಚ್ಚಿ ಮೆಟ್ರೋದಲ್ಲಿ ಕ್ಯೂಆರ್‌ ಟಿಕೆಟ್‌, ವಾಟ್ಸ್‌ ಆ್ಯಪ್‌ ಟಿಕೆಟ್‌ಗೆ ಶೇ. 20 ರಷ್ಟು ರಿಯಾಯಿತಿ ಇದೆ.

ದಿನದ ಪಾಸ್‌ ಮೊತ್ತ ದ್ವಿಗುಣ:

ಸ್ಮಾರ್ಟ್‌ಕಾರ್ಡ್‌ನಲ್ಲಿ ಕನಿಷ್ಠ ಮೊತ್ತವನ್ನು ₹ 50ರಿಂದ ₹ 90 ನಿಗದಿ ಮಾಡಿರುವುದಕ್ಕೂ ಜನ ಬೇಸರ ಹೊರಹಾಕಿದ್ದಾರೆ. ಬಿಎಂಆರ್‌ಸಿಎಲ್‌ 1ಕೋಟಿಗೂ ಅಧಿಕ ಸ್ಮಾರ್ಟ್‌ ಕಾರ್ಡ್‌ ವಿತರಿಸಿದೆ. 1 ದಿನದ ಪಾಸ್ ₹ 150ರಿಂದ ₹ 300, ಮೂರು ದಿನದ ಪಾಸ್ ₹ 350ರಿಂದ 600 ಹಾಗೂ ಐದು ದಿನಗಳ ಪಾಸ್‌ ₹ 550 ರಿಂದ ₹ 800 ವರೆಗೆ ಗರಿಷ್ಠ ಪ್ರಮಾಣದಲ್ಲಿ ಏರಿಸಲಾಗಿದೆ.