ಮಕ್ಕಳಿಗೆ ಬಯಲೇ ಬಹಿರ್ದೆಸೆ ಶೌಚಾಲಯ

| Published : Nov 30 2024, 12:45 AM IST

ಸಾರಾಂಶ

ಕಾಲೇಜಿನ ಪ್ರಾಂಶುಪಾಲನಾಗಿ ನಾನೇ ಬಯಲಿನಲ್ಲಿ ಬಹಿರ್ದೆಸೆಗೆ ಹೊಗುತ್ತೇನೆ. ಇನ್ನು ಮಕ್ಕಳು ಹೋಗುವುದರಲ್ಲೇನು ವಿಶೇಷ. ಇಲ್ಲಿಯ ಜನ ಸರಿಯಿಲ್ಲ. 8 ಶೌಚಾಲಯಗಳಿವೆ. ಎಲ್ಲವನ್ನು ಜನರು ಹಾಳು ಮಾಡಿದ್ದಾರೆ. ಪ್ರತಿ ದಿನ ನನಗೆ ಇವುಗಳನ್ನು ಸ್ವಚ್ಚಗೊಳಿಸುವುದೇ ಕೆಲಸವಲ್ಲ. ಅವುಗಳನ್ನು ಸರಿಪಡಿಸಲು ಕಾಲೇಜಿನಲ್ಲಿ ಹಣವಿಲ್ಲ. ಇದು ತಾಲೂಕಿನ ಅತಿ ದೊಡ್ಡ ಹೋಬಳಿ ಕೇಂದ್ರವೆನಿಸಿರುವ ಶ್ರೀರಾಂಪುರ ಕರ್ನಾಟಕ ಪಬ್ಲಿಕ್‌ ಶಾಲೆಯ ಪ್ರಾಂಶುಪಾಲ ಕೆವಿ. ಪ್ರಕಾಶ್ ಅವರ ನುಡಿಗಳು.

ಎನ್‌ ವಿಶ್ವನಾಥ್‌ ಶ್ರೀರಾಂಪುರ

ಕನ್ನಡಪ್ರಭ ವಾರ್ತೆ ಹೊಸದುರ್ಗ

ಕಾಲೇಜಿನ ಪ್ರಾಂಶುಪಾಲನಾಗಿ ನಾನೇ ಬಯಲಿನಲ್ಲಿ ಬಹಿರ್ದೆಸೆಗೆ ಹೊಗುತ್ತೇನೆ. ಇನ್ನು ಮಕ್ಕಳು ಹೋಗುವುದರಲ್ಲೇನು ವಿಶೇಷ. ಇಲ್ಲಿಯ ಜನ ಸರಿಯಿಲ್ಲ. 8 ಶೌಚಾಲಯಗಳಿವೆ. ಎಲ್ಲವನ್ನು ಜನರು ಹಾಳು ಮಾಡಿದ್ದಾರೆ. ಪ್ರತಿ ದಿನ ನನಗೆ ಇವುಗಳನ್ನು ಸ್ವಚ್ಚಗೊಳಿಸುವುದೇ ಕೆಲಸವಲ್ಲ. ಅವುಗಳನ್ನು ಸರಿಪಡಿಸಲು ಕಾಲೇಜಿನಲ್ಲಿ ಹಣವಿಲ್ಲ. ಇದು ತಾಲೂಕಿನ ಅತಿ ದೊಡ್ಡ ಹೋಬಳಿ ಕೇಂದ್ರವೆನಿಸಿರುವ ಶ್ರೀರಾಂಪುರ ಕರ್ನಾಟಕ ಪಬ್ಲಿಕ್‌ ಶಾಲೆಯ ಪ್ರಾಂಶುಪಾಲ ಕೆವಿ. ಪ್ರಕಾಶ್ ಅವರ ನುಡಿಗಳು.

ಶುಕ್ರವಾರ ಕನ್ನಡಪ್ರಭ ಸುದ್ದಿಗಾರರು ಶ್ರೀರಾಂಪುರದ ಕೆಪಿಎಸ್‌ ಶಾಲೆಗೆ ಭೇಟಿ ನೀಡಿದಾಗ ಶಾಲಾ ಮಕ್ಕಳು ಬಯಲಿನಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದನ್ನು ಕಂಡು ಮಕ್ಕಳನ್ನು ಪ್ರಶ್ನಿಸಿದಾಗ ಇಲ್ಲಿ 8 ಶೌಚಾಲಯಗಳಿವೆ. ಆದರೆ ಯಾವೂ ಕೂಡ ಬಳಕೆ ಮಾಡುವಂತೆ ಇಲ್ಲ. ಅವುಗಳಲ್ಲಿಯೇ ಒಂದೆರೆಡನ್ನು ಬಾಲಕಿಯರಿಗೆ ನೀಡಲಾಗಿದೆ. ಉಳಿದವುಗಳು ಹಾಳಾಗಿವೆ ಎಂದು ತಿಳಿಸಿದರು.

ಮಾಧ್ಯಮದವರು ಮಕ್ಕಳನ್ನು ಪ್ರಶ್ನಿಸುತ್ತಿದ್ದಾರೆ ಎಂಬ ಮಾಹಿತಿ ತಿಳಿದ ಅಲ್ಲಿನ ಪ್ರಾಂಶುಪಾಲ, ಇಲ್ಲಿಯ ಜನ ಸರಿಯಿಲ್ಲ. ಗ್ರಾಮ ಪಂಚಾಯಿತಿಯವರು ಸರಿಯಿಲ್ಲ. ಇಲ್ಲಿ ಪೈಪ್‌ ಲೈನ್‌ ಮಾಡುವ ಸಲುವಾಗಿ ಶೌಚಾಲಯಕ್ಕೆ ಕಲ್ಪಿಸಲಾಗಿದ್ದ ಪೈಪ್‌ ಲೈನ್‌ಗಳನ್ನು ಒಡೆದು ಹಾಕಿದ್ದಾರೆ. ಕಳೆದ ತಿಂಗಳು ನಾನೇ ನನ್ನ ಸ್ವಂತ ಹಣದಲ್ಲಿ ₹7 ಸಾವಿರ ಖರ್ಚ ಮಾಡಿ ದುರಸ್ತಿ ಮಾಡಿಸಿದ್ದೆ. ಮತ್ತೆ ಅವುಗಳನ್ನು ಹಾಳು ಮಾಡಿದ್ದಾರೆ. ನನಗೇ ದಿನಾ ಇದೆ ಕೆಲಸವಾಗಿದೆ .ಈಗಾದರೆ ನಾನು ಕಾಲೇಜಿನ ಕೆಲಸ ಮಾಡುವುದು ಹೇಗೆ ಎಂದು ಬರೀ ದೂರುಗಳ ಮಳೆಯನ್ನೆ ಸುರಿಸಿದರು.

ಸರ್ಕಾರದ ಹಣ ವ್ಯರ್ಥ

ಕಾಲೇಜಿನ ಆವರಣದಲ್ಲಿ ನಿರ್ಮಿಸಲಾಗಿರುವ ಶೌಚಾಲಯ ಕಟ್ಟಡಗಳನ್ನು ನೋಡಿದರೆ ನಿಜಕ್ಕೂ ಎಂತವರಿಗೂ ಅಸಹ್ಯ ಮೂಡಿಸುತ್ತದೆ. ಶಾಲಾ ಆವರಣದಲ್ಲಿ ನಿರ್ಮಿಸಲಾಗಿರುವ ತರಗತಿ ಕಟ್ಟಡಗಳ ಕಾಲು ಭಾಗ ಶೌಚಾಲಯ ಕಟ್ಟಡಗಳಿವೆ. ಆದರೆ ಅವುಗಳು ಕಳೆಪೆ ಕಾಮಗಾರಿಯಿಂದ ಹಾಗೂ ಇಲ್ಲಿನ ಆಡಳಿತ ಮಂಡಳಿಯ ನಿರ್ವಹಣೆಯ ಕೊರತೆಯಿಂದ ಬಳಸುವ ಮುನ್ನವೇ ಹಾಲಾಗುತ್ತಿವೆ. ಇದರಿಂದ ಸರ್ಕಾರದ ಲಕ್ಷಾಂತರ ಹಣ ವ್ಯಯವಾಗುತ್ತಿದೆ.

ಮಕ್ಕಳಿಗೆ ಬಯಲೇ ಶೌಚಾಲಯ

ಕರ್ನಾಟಕ ಪಬ್ಲಿಕ್‌ ಶಾಲೆಯ ವ್ಯಾಪ್ತಿಯಲ್ಲಿ ಬರುವ ಪ್ರಾಥಮಿಕ ಶಾಲೆಯಲ್ಲಿ 350 ಮಕ್ಕಳು, ಪ್ರೌಢಶಾಲೆಯಲ್ಲಿ 220 ಮಕ್ಕಳು ಹಾಗೆಯೇ ಕಾಲೇಜಿನಲ್ಲಿ 225 ಮಕ್ಕಳು ಒಟ್ಟು 850 ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. ಆದರೆ ಪ್ರಾಥಮಿಕ ಶಾಲೆಯ ಅಧೀನದಲ್ಲಿ 4 ಶೌಚಾಲಯವಿದ್ದು, ಅದರಲ್ಲಿ ಒಂದು ಹಾಳಾಗಿದೆ. ಉಳಿದವುಗಳನ್ನು ಬಳಸಲಾಗುತ್ತಿದೆ. ಅದರ ಜೊತೆಯಲ್ಲಿ ಮತ್ತೊಂದು ಶೌಚಾಲಯವನ್ನು ಹೊಸದಾಗಿ ನಿರ್ಮಿಸಲಾಗುತ್ತಿದೆ. ಆದರೆ ಪ್ರೌಢಶಾಲೆ ಹಾಗೂ ಕಾಲೇಜು ಹಂತದಲ್ಲಿ 4 ಶೌಚಾಲಯಗಳಿದ್ದು, ಅವುಗಳನ್ನು 2 ಬಳಕೆ ಮಾಡುತ್ತಿರುವುದಾಗಿ ಹೇಳಿದರು. ಇದರಿಂದ ಮಕ್ಕಳು ಮೂತ್ರ ವಿಸರ್ಜನೆಗೆ ಬಯಲು, ಶಾಲಾ ಗೋಡಗಳ ಮರೆಯನ್ನೇ ಅವಲಂಬಿಸುವಂತಾಗಿದೆ.

ಕಾಲೇಜಿನಲ್ಲಿ ಸಮಸ್ಯೆಗಳಿದ್ದು, ಕಾಲೇಜು ಅಭಿವೃದ್ದಿ ಸಮಿತಿ ಸಭೆ ನಡೆಸಿ ಶೀಘ್ರದಲ್ಲಿಯೇ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು.

- ಬಿಜಿ ಗೋವಿಂದಪ್ಪ, ಶಾಸಕರು

ಕಾಲೇಜಿನಲ್ಲಿ ಪ್ರಾಂಶುಪಾಲರ ಬೇಜವಬ್ದಾರಿ ತನದಿಂದ ಸಮಸ್ಯೆ ಸೃಷ್ಟಿಯಾಗುತ್ತಿದೆ. ಅವರಿಗೆ ಸರಿಯಾಗಿ ಆಡಳಿತ ಮಾಡದೇ, ಏನಾದರು ಸಲಹೆ ಸೂಚನೆ ನೀಡದರೆ ಅದನ್ನು ಪರಿಗಣಿಸದೆ ನಿರ್ಲಕ್ಷ್ಯ ಮಾಡುತ್ತಾರೆ. ಅಲ್ಲದೆ ಶಾಲಾ ಸಿಬ್ಬಂದಿಗಳ ವಿಶ್ವಾಸ ಪಡೆಯದೆ ತನಗಿಷ್ಟ ಬಂದಂತೆ ವರ್ತಿಸುತ್ತಿದ್ದಾರೆ. ಈ ಬಗ್ಗೆ ಶಾಸಕರ ಗಮನಕ್ಕೆ ತರಲಾಗಿದೆ-

ರೇವಣ್ಣ, ಎಸ್‌ಡಿಎಂಸಿ ಉಪಾಧ್ಯಕ್ಷ