ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಭಾನುವಾರ ಸಮುದಾಯ ಸಂಘಟನೆ ಹಮ್ಮಿಕೊಂಡಿದ್ದ ಮನುಷ್ಯತ್ವದೆಡೆಗೆ ಸಮುದಾಯ ಜಾಥಾ ಕಾರ್ಯಕ್ರಮದಲ್ಲಿ ನಟ ಪ್ರಕಾಶ ರಾಜ್ ಭಾಗವಹಿಸಿದ್ದ ಹಿನ್ನೆಲೆಯಲ್ಲಿ ಧರ್ಮಸ್ಥಳದ ಭಕ್ತರು, ಎಬಿವಿಪಿ, ಆರ್‌ಎಸ್‌ಎಸ್ ಕಾರ್ಯಕರ್ತರು ಹಾಗೂ ಕಾರ್ಯಕ್ರಮ ಸಂಘಟಕರ ಮಧ್ಯೆ ಸಂಘರ್ಷಕ್ಕೆ ಕಾರಣವಾಗಿದೆ.
ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಭಾನುವಾರ ಸಮುದಾಯ ಸಂಘಟನೆ ಹಮ್ಮಿಕೊಂಡಿದ್ದ ಮನುಷ್ಯತ್ವದೆಡೆಗೆ ಸಮುದಾಯ ಜಾಥಾ ಕಾರ್ಯಕ್ರಮದಲ್ಲಿ ನಟ ಪ್ರಕಾಶ ರಾಜ್ ಭಾಗವಹಿಸಿದ್ದ ಹಿನ್ನೆಲೆಯಲ್ಲಿ ಧರ್ಮಸ್ಥಳದ ಭಕ್ತರು, ಎಬಿವಿಪಿ, ಆರ್‌ಎಸ್‌ಎಸ್ ಕಾರ್ಯಕರ್ತರು ಹಾಗೂ ಕಾರ್ಯಕ್ರಮ ಸಂಘಟಕರ ಮಧ್ಯೆ ಸಂಘರ್ಷಕ್ಕೆ ಕಾರಣವಾಗಿದೆ.
ಪ್ರಕಾಶ ರಾಜ್ ಕಾರ್ಯಕ್ರಮಕ್ಕೆ ಆಗಮಿಸುವಾಗಲೇ ಹಿಂದೂ ಪರ ಸಂಘಟನೆಗಳ ಮುಖಂಡರು ಹಾಗೂ ಬಿಜೆಪಿ ಕಾರ್ಯಕರ್ತರು, ಪ್ರಕಾಶ ರಾಜ್ ಹಿಂದೂ ವಿರೋಧಿ ಮಾತುಗಳನ್ನಾಡುತ್ತಾರೆ. ಧರ್ಮಸ್ಥಳದ ಗದ್ದಲಕ್ಕೆ ಇವರೇ ಕಾರಣ ಎಂದು ಆಕ್ಷೇಪಿಸಿದರು. ಧರ್ಮಸ್ಥಳದ ಭಕ್ತರು ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರು ಘೇರಾವ್ ಹಾಕಲು ಮುಂದಾದರು. ಆದರೆ, ಬಿಗಿ ಪೊಲೀಸ್ ಬಂದೋಬಸ್ತ್ ಹಿನ್ನೆಲೆಯಲ್ಲಿ ಒಳ ಹೋಗುತ್ತಿದ್ದವರನ್ನು ತಡೆಯಲಾಯಿತು. ಈ ಸಂದರ್ಭದಲ್ಲಿ ಪೊಲೀಸರ ಹಾಗೂ ಪ್ರತಿಭಟನಾಕಾರರ ಮಧ್ಯೆ ಮಾತಿನ ಚಕಮಕಿಯೂ ನಡೆಯಿತು.ತದ ನಂತರ ಕಾರ್ಯಕ್ರಮ ನಡೆಯುತ್ತಿದ್ದ ವಿದ್ಯಾವರ್ಧಕ ಸಂಘದಲ್ಲಿ ಕಾರ್ಯಕ್ರಮ ಮುಕ್ತಾಯದ ವೇಳೆ, ಪ್ರಕಾಶ ರಾಜ್ ಅವರನ್ನು ಕೆಲವು ಪ್ರಶ್ನೆ ಕೇಳಬೇಕೆಂದು ಕಾರ್ಯಕರ್ತನೊಬ್ಬ ಪ್ರಯತ್ನಿಸಿದಾಗ, ಆಯೋಜಕರು ಆತನನ್ನು ಹೊರ ಕಳುಹಿಸಿದರು. ಈ ವೇಳೆಯೂ ಆಯೋಜಕರ ಮತ್ತು ಕಾರ್ಯಕರ್ತನ ನಡುವೆ ವಾಗ್ವಾದ ನಡೆಯಿತು. ಪ್ರತಿಭಟಿಸಿದವರ ಮೇಲೆ ಆಯೋಜಕರು ಹಲ್ಲೆ ಮಾಡಿದರು ಎಂದು ಕಾರ್ಯಕರ್ತ ಆರೋಪಿಸಿದ ಘಟನೆಯೂ ನಡೆಯಿತು.
ಇನ್ನು, ಕಾರ್ಯಕ್ರಮ ಮುಗಿಯುತ್ತಿದ್ದಂತೆಯೇ ಮತ್ತೆ ಗದ್ದಲ ಉಂಟಾದೀತು ಎಂದು ಪೊಲೀಸರು ಬಿಗಿ ಭದ್ರತೆಯಲ್ಲಿಯೇ ನಟ ಪ್ರಕಾಶರಾಜ್ ಅವರನ್ನು ಕಳುಹಿಸಿದರು. ಇಷ್ಟಾಗಿಯೂ ಎಬಿವಿಪಿ, ಆರ್‌ಎಸ್‌ಎಸ್ ಕಾರ್ಯಕರ್ತರು ಪ್ರಕಾಶರಾಜ್ ಭಾವಚಿತ್ರಕ್ಕೆ ಮಸಿ ಚೆಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಈ ಮಧ್ಯೆ ಪೊಲೀಸರು ಸುಮಾರು 20 ಎಬಿವಿಪಿ ಹಾಗೂ ಆರ್‌ಎಸ್‌ಎಸ್ ಕಾರ್ಯಕರ್ತರನ್ನು ಬಂಧಿಸಿ ಶಹರ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು.ಈ ಸುದ್ದಿ ತಿಳಿದ ಶಾಸಕ ಅರವಿಂದ ಬೆಲ್ಲದ ಪೊಲೀಸ್ ಠಾಣೆಗೆ ಬಂದು, ನಟ ಪ್ರಕಾಶರಾಜ್ ಅವರಿಗೆ ಧಿಕ್ಕಾರ ಕೂಗಿದವರನ್ನು ಮಾತ್ರ ಬಂಧಿಸಿದ್ದು, ಆರ್‌ಎಸ್‌ಎಸ್‌ಗೆ ಧಿಕ್ಕಾರ ಹಾಕಿದವರನ್ನು ಏತಕ್ಕೆ ಬಂಧಿಸಲಿಲ್ಲ? ಈ ಗೊಂದಲಕ್ಕೆ ಕಾರಣರಾದ ಸಮುದಾಯದ ಆಯೋಜಕರನ್ನು ಸಹ ಬಂಧಿಸಬೇಕು ಎಂದ ಆಗ್ರಹಿಸಿದರು.
ಪ್ರಕಾಶರಾಜ್ ಸಮಾಜ ವಿರೋಧಿ, ಧರ್ಮ ವಿರೋಧಿ. ಅವರ ವಿರೋಧಿತನ ಪ್ರಶ್ನೆ ಮಾಡುವುದು ತಪ್ಪಾ? ಪ್ರಶ್ನೆ ಮಾಡಿದ್ದಕ್ಕೆ ಸಮುದಾಯದವರೇ ಗಲಾಟೆ ಮಾಡಿದ್ದಾರೆ. ಪ್ರತಿಭಟನೆ ಮಾಡಿದವರ ಮೇಲೆ ಸಮುದಾಯದವರು ಹಲ್ಲೆ ಮಾಡಿದ್ದು, ಈ ಬಗ್ಗೆ ಮಾನವ ಹಕ್ಕು ಆಯೋಗಕ್ಕೆ ದೂರು ಕೊಡುತ್ತೇವೆ ಎಂದು ಬೆಲ್ಲದ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.