ಸಾರಾಂಶ
ದೊಡ್ಡಬಳ್ಳಾಪುರ: 29 ಕಾನೂನುಗಳನ್ನು ನಾಲ್ಕು ಸಂಹಿತೆಗಳನ್ನಾಗಿ ಮಾಡಿರುವ ಕೇಂದ್ರದ ಶಾಸನಗಳ ನಿಯಮಾವಳಿಗಳನ್ನು ರಾಜ್ಯ ಸರ್ಕಾರ ಜಾರಿ ಮಾಡಬಾರದು ಕಾರ್ಮಿಕರ ಪರವಾದ ಕಾನೂನುಗಳು ಜಾರಿಯಾಗಬೇಕು ಎಂದು ಸಿಐಟಿಯು ರಾಜ್ಯ ಉಪಾಧ್ಯಕ್ಷ ಡಾ.ಕೆ. ಪ್ರಕಾಶ್ ಆಗ್ರಹಿಸಿದರು.
ದೊಡ್ಡಬಳ್ಳಾಪುರದ ಟಿ.ಸಿದ್ದಲಿಂಗಯ್ಯ ವೃತ್ತದಲ್ಲಿ ನಡೆದ ಸಿಐಟಿಯು ಬೆಂಗಳೂರು ಗ್ರಾಮಾಂತರ ಜಿಲ್ಲಾಮಟ್ಟದ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ಡಿಜಿಟಲ್ ಮೀಟರ್ ಅಳವಡಿಸುವುದು ಹಾಗೂ ಖಾಸಗೀಕರಣದ ಅವಕಾಶಗಳನ್ನು ಒಳಗೊಂಡ ವಿದ್ಯುತ್ ತಿದ್ದುಪಡಿ ಮಸೂದೆ 2022 ನ್ನು ರಾಜ್ಯದಲ್ಲಿ ಜಾರಿಗೊಳಿಸಬಾರದು ಹಾಗೂ ಈ ಮಸೂದೆಯನ್ನು ಹಿಂಪಡೆಯಲು ರಾಜ್ಯ ಸರ್ಕಾರ ಒತ್ತಾಯಿಸಬೇಕು. ಅಂಗನವಾಡಿ ಕೇಂದ್ರಗಳಲ್ಲಿಯೇ ಎಲ್‌ಕೆಜಿ, ಯುಕೆಜಿ ಪ್ರಾರಂಭಿಸಬೇಕು ಹಾಗೂ ಕಾರ್ಮಿಕರಿಗೆ ವೇತನ ಪರಿಷ್ಕರಣೆಯಾಗಬೇಕು. ಗ್ರಾಚುಟಿ ಪಾವತಿಗೆ ಕ್ರಮ ವಹಿಸಬೇಕು. ಬಿಸಿಯೂಟ ನೌಕರರಿಗೆ ವೇತನ ಹೆಚ್ಚಳ ಮಾಡಬೇಕು. ನಿವೃತ್ತಿ ವೇತನ ಸೌಲಭ್ಯವಿಲ್ಲದೆ ಯಾರನ್ನೂ ಕೆಲಸದಿಂದ ಬಿಡುಗಡೆ ಮಾಡಬಾರದು ಎಂಬ ಹಕ್ಕೊತ್ತಾಯಗಳನ್ನು ಸಮಾವೇಶ ಮಾಡುತ್ತಿದೆ ಎಂದು ಪ್ರಸ್ತಾಪಿಸಿದರು.ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಅಸಂಘಟಿತ ಕಾರ್ಮಿಕರ ಕಲ್ಯಾಣ ಹಾಗೂ ಇತ್ತೀಚೆಗೆ ರಚಿಸಲಾದ ಸಾರಿಗೆ ಕಾರ್ಮಿಕರ ಕಲ್ಯಾಣ ಮಂಡಳಿ ಮತ್ತು ಮುಂದೆ ರಚಿಸುವ ಗಿಗ್ ಕಾರ್ಮಿಕ ಕಲ್ಯಾಣ ಮಂಡಳಿ ಮೊದಲಾದ ತ್ರಿಪಕ್ಷಿಯ ಮಂಡಳಿ ಸಮಿತಿಗಳಲ್ಲಿ ಸಿಐಟಿಯು ಪ್ರತಿನಿಧಿಗಳನ್ನು ಸೇರ್ಪಡೆ ಮಾಡಬೇಕು. ಹಮಾಲಿ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು, ಮೆಕ್ಯಾನಿಕ್ಕುಗಳು, ಮನೆಕೆಲಸದ ಮಹಿಳೆಯರು, ಟೈಲರ್‌ಗಳು ಸೇರಿ ವಿವಿಧ ವಿಭಾಗಗಳಿಗೆ ಈಗಾಗಲೇ ಕಾರ್ಮಿಕ ಇಲಾಖೆ ರೂಪಿಸಿರುವ ಅಸಂಘಟಿತ ಕಾರ್ಮಿಕರ ಕಲ್ಯಾಣ ಕಾರ್ಯಕ್ರಮಗಳಿಗಾಗಿ ಮತ್ತು ಭವಿಷ್ಯ ನಿಧಿ ಯೋಜನೆ ಜಾರಿಗಾಗಿ ಕನಿಷ್ಠ 500 ಕೋಟಿ ಹಣವನ್ನು ಬಜೆಟ್ ನಲ್ಲಿ ನೀಡಬೇಕು ಹಾಗೂ ಆ ವಿಭಾಗದ ಕಾರ್ಮಿಕರಿಗೆ ನಿರಂತರ ಕಾರ್ಯಕ್ರಮ ಅಗತ್ಯವಿರುವ ಸಂಗ್ರಹಕ್ಕೆ ಸರ್ಕಾರ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಪಿ.ಎ.ವೆಂಕಟೇಶ್ ಮಾತನಾಡಿ, ರಾಜ್ಯದಲ್ಲಿ ಕಾರ್ಖಾನೆ ಕಾಯ್ದೆಗೆ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯಿದೆ, ಕೈಗಾರಿಕಾ ವಿವಾದಗಳ ಕಾಯ್ದೆ ನಿಶ್ಚಿತ ಕಾಲಾವಧಿ ಕಾರ್ಮಿಕರ ನೇಮಕಕ್ಕೆ ಅವಕಾಶ ನೀಡುವ ಸಲುವಾಗಿ ಮಾದರಿ ಸ್ಥಾಯಿ ಆದೇಶಗಳಿಗೆ ಮಾಡಲಾಗಿರುವ ಕಾರ್ಮಿಕ ವಿರೋಧಿ ತಿದ್ದುಪಡಿಗಳನ್ನು ವಾಪಸ್ ಪಡೆಯಬೇಕು. ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯಕ್ಕೆ ಬರಬೇಕಾದ ಜಿ.ಎಸ್.ಟಿ. ಪಾಲನ್ನು ಪಡೆಯಲು ಕೂಡಲು ಕ್ರಮವಹಿಸಬೇಕು ಎಂದರು.ಕಳೆದ ಫೆಬ್ರವರಿ 22ರಿಂದ ಮಾರ್ಚ್ 1ರವರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 4 ತಾಲೂಕುಗಳಲ್ಲಿ ಪ್ರಚಾರ ಜಾಥಾ ನಡಸಿ ಅಂತಿಮವಾಗಿ ದೊಡ್ಡಬಳ್ಳಾಪುರದಲ್ಲಿ ಜಿಲ್ಲಾಮಟ್ಟದ ಬಹಿರಂಗ ಸಮಾವೇಶ ನಡೆಸಲಾಗಿದೆ. ಮಾರ್ಚ್ 3 ರಿಂದ 7 ರ ತನಕ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯಲಿರುವ ಅನಿರ್ದಿಷ್ಟ ಅಹೋರಾತ್ರಿ ನಿರಂತರ ಧರಣಿಯಲ್ಲಿ ಜಿಲ್ಲೆಯಿಂದ 2 ಸಾವಿರಕ್ಕೂ ಅಧಿಕ ಸಂಘಟಿತ ಹಾಗೂ 500ಕ್ಕೂ ಹೆಚ್ಚು ಅಸಂಘಟಿತ ಕಾರ್ಮಿಕರು, 1500 ಯೋಜನಾ ಕಾರ್ಮಿಕರು ಸೇರಿ 4 ಸಾವಿರಕ್ಕೂ ಅಧಿಕ ಕಾರ್ಮಿಕರು ಭಾಗಿಯಾಗಲಿದ್ದಾರೆ ಎಂದು ಘೋಷಿಸಿದರು.
ಸಿಐಟಿಯು ಜಿಲ್ಲಾಧ್ಯಕ್ಷ ನರಸಿಂಹಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಎನ್.ಕೆ.ಬಸವರಾಜು, ಖಜಾಂಚಿ ಮೋಹನ್ ಬಾಬು, ಅಂಗನವಾಡಿ ನೌಕರರ ಸಂಘದ ಮುಖಂಡರಾದ ನಳಿನಾಕ್ಷಿ, ಸಿಐಟಿಯು ತಾಲೂಕು ಸಂಚಾಲಕ ಅನಿಲ್ ಗುಪ್ತ, ಮುಖಂಡರಾದ ರುದ್ರಾರಾಧ್ಯ, ರೇಣುಕಾರಾಧ್ಯ, ಅಂಜುಂಖಾನ್, ಸುಮಾ ಮತ್ತಿತರರು ಭಾಗವಹಿಸಿದ್ದರು.ಕೋಟ್............
ಡಾ. ಸ್ವಾಮಿನಾಥನ್ ಆಯೋಗದ ಶಿಫಾರಸ್ಸುಗಳ ಪ್ರಕಾರ ರೈತರ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಿ, ಸಾರ್ವಜನಿಕ ಖರೀದಿ ವ್ಯವಸ್ಥೆಯನ್ನು ಬಲಪಡಿಸುವುದು, ಅತಿ ಹೆಚ್ಚು ದಂಡ ವಿಧಿಸುವ ಹಾಗೂ ಜನವಿರೋಧಿ ಮೋಟಾರ್ ವಾಹನ ತಿದ್ದುಪಡಿ ಕಾಯ್ದೆ 2019 ಹಾಗೂ ಮೇಜರ್ ಫೋರ್ಟ್ ಅಥಾರಿಟಿಸ್ ಕಾಯಿದೆ 2021 ಗಳನ್ನು ಕೈ ಬಿಡಲು ರಾಜ್ಯ ಸರ್ಕಾರ ಒತ್ತಾಯಿಸಬೇಕು. ರೈತರ ಕೃಷಿ ಯೋಗ್ಯ ಭೂಮಿಯನ್ನು ಬಲವಂತದ ಭೂಸ್ವಾಧೀನದಿಂದ ಕೈಬಿಡಬೇಕು. ಸಾರಿಗೆ ಚಾಲಕರ ಕಲ್ಯಾಣ ಯೋಜನೆಗಳನ್ನು ಜಾರಿ ಮಾಡಲು ಬಜೆಟ್‌ನಲ್ಲಿ ₹500 ಕೋಟಿ ಅನುದಾನ ನೀಡಬೇಕು ಎಂದು ಸಮಾವೇಶ ಹಕ್ಕೊತ್ತಾಯ ಮಾಡುತ್ತಿದೆ.-ಪಿ.ಎ.ವೆಂಕಟೇಶ್, ಜಿಲ್ಲಾ ಉಪಾಧ್ಯಕ್ಷ, ಸಿಐಟಿಯು
ಫೋಟೋ-2ಕೆಡಿಬಿಪಿ2- ದೊಡ್ಡಬಳ್ಳಾಪುರದಲ್ಲಿ ನಡೆದ ಸಿಐಟಿಯು ಜಿಲ್ಲಾ ಸಮಾವೇಶದಲ್ಲಿ ರಾಜ್ಯ ಉಪಾಧ್ಯಕ್ಷ ಡಾ.ಕೆ.ಪ್ರಕಾಶ್ ಮಾತನಾಡಿದರು.