ಧಾರವಾಡ:

ಮಹಾನಗರ ಪಾಲಿಕೆ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳಲ್ಲಿನ ಹೊರ ಗುತ್ತಿಗೆಯ ಪೌರ ಕಾರ್ಮಿಕರು ಅಥವಾ ಇತರೆ ಕಾರ್ಮಿಕರಿಗೆ ವೇತನ, ಇಎಸ್‌ಐ, ಪಿಎಫ್, ಆರೋಗ್ಯ ವಿಮೆ ಸೇರಿದಂತೆ ಮೂಲ ಸೌಲಭ್ಯಗಳನ್ನು ಗುತ್ತಿಗೆ ಪಡೆದ ಸಂಸ್ಥೆಗಳು ನೀಡುತ್ತಿಲ್ಲ ಎಂಬ ಗಂಭೀರ ಆರೋಪ ಬಂದಿದೆ. ಸಂಬಂಧಿಸಿದ ಅಧಿಕಾರಿಗಳು ಗುತ್ತಿಗೆದಾರರ ಮೇಲೆ ಕ್ರಮಕೈಗೊಳ್ಳುವಂತೆ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಪಿ. ರಘು ಸೂಚಿಸಿದರು.

ಜಿಲ್ಲಾ ಪಂಚಾಯಿತಿಯಲ್ಲಿ ನಗರ ಸ್ಥಳೀಯ ಸಂಸ್ಥೆ, ಗ್ರಾಮ ಪಂಚಾಯಿತಿ ಮತ್ತು ಇತರೆ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಚ್ಛತಾ ಕಾರ್ಮಿಕರು, ಪೌರಕಾರ್ಮಿಕರೊಂದಿಗೆ ಸಂವಾದ ಹಾಗೂ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ಜರುಗಿಸಿದ ಅವರು ಮಾತನಾಡಿದರು.

ಜಿಲ್ಲಾಸ್ಪತ್ರೆ, ಕವಿವಿ ಸೇರಿದಂತೆ ಹಲವೆಡೆ ಗುತ್ತಿಗೆದಾರರು ಕಾರ್ಮಿಕರಿಗೆ ಸರಿಯಾಗಿ ಸೌಲಭ್ಯ ನೀಡುತ್ತಿಲ್ಲ ಎಂಬ ದೂರುಗಳಿವೆ. ಕೂಡಲೇ ದೂರು ಪರಿಶೀಲಿಸಿ ಕ್ರಮಕೈಗೊಳ್ಳದೆ ಹೋದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಆಯೋಗ ಪ್ರಕರಣ ದಾಖಲಿಸುತ್ತದೆ ಎಂದು ಎಚ್ಚರಿಸಿದರು.

ಹುಬ್ಬಳ್ಳಿ-ಧಾರವಾಡ ನಗರಗಳಲ್ಲಿ 82 ವಾರ್ಡ್‌ಗಳಿದ್ದು, ಪ್ರತಿ ವಾರ್ಡ್‌ಗೆ ಪೌರ ಕಾರ್ಮಿಕರಿಗೆ ವಿಶ್ರಾಂತಿ ಗೃಹ, ಶೌಚಾಲಯ ನಿರ್ಮಾಣ, ಗುಣಮಟ್ಟದ ಉಪಾಹಾರ ಪೂರೈಕೆ, ಕಾಲಕಾಲಕ್ಕೆ ವೇತನ, ಇಎಸ್‌ಐ, ಪಿಎಫ್, ಆರೋಗ್ಯ ವಿಮೆ ಸೌಲಭ್ಯ ಒದಗಿಸಬೇಕು. ಸೇವಾನಿರತ ಕಾರ್ಮಿಕರು ಮೃತರಾದರೆ ₹ 10 ಲಕ್ಷ ಪರಿಹಾರ ವಿತರಿಸಬೇಕು. ಸುರಕ್ಷತಾ ಪರಿಕರ, ಸಮವಸ್ತ್ರ ವಿತರಿಸಲು ಪಾಲಿಕೆ ಆಯುಕ್ತರಿಗೆ ತಿಳಿಸಿದರು.


ಕೆಲವೆಡೆ ಸಕಾಲಕ್ಕೆ ವೇತನ ನೀಡುತ್ತಿಲ್ಲ ಎಂಬ ಸಾಕಷ್ಟು ದೂರುಗಳಿವೆ ಎಂದ ಅವರು, ಕಾರ್ಮಿಕರಿಗೆ ವಸತಿ ಯೋಜನೆಯಡಿ ಮನೆ ಹಂಚಿಕೆ ಮಾಡಬೇಕು. ಅಲ್ಲದೇ ಹೊರಗುತ್ತಿಗೆ ನೌಕರರ ವೇತನ ತಡೆಹಿಡಿಯಬಾರದು. ಆಯುಷ್ಮಾನ ಭಾರತ ಕಾರ್ಡ್‌, ಕಾರ್ಮಿಕರಿಗೆ ಸ್ಯಾಲರಿ ಪ್ಯಾಕೇಜ್ ಸೌಲಭ್ಯ ಒದಗಿಸುವುದು ಸೇರಿದಂತೆ ವಿವಿಧ ಸೌಲಭ್ಯ ನೀಡಲು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಆಯೋಗದ ಸದಸ್ಯ ಶಂಕರ, ಮಹಾದೇವಸ್ವಾಮಿ, ಜಿಲ್ಲಾಧಿಕಾರಿ ಸ್ನೇಹಲ್ ಆರ್., ಜಿಪಂ ಸಿಇಒ ಭುವನೇಶ ಪಾಟೀಲ, ಪ್ರೊಬೇಷನರಿ ಐಎಎಸ್ ಅಧಿಕಾರಿ ಅನುಪ್ರಿಯಾ ಸಾಕ್ಯಾ, ಪಾಲಿಕೆಯ ಆಯುಕ್ತ ಡಾ. ರುದ್ರೇಶ ಘಾಳಿ ಇದ್ದರು.