ಪ್ರತಿ ಮೂರು ತಿಂಗಳಿಗೊಮ್ಮೆ ಆರೋಗ್ಯ ರಕ್ಷಾ ಸಮಿತಿ ಸಭೆ ನಡೆಸಿ ಆಸ್ಪತ್ರೆ ಕುಂದುಕೊರತೆಗಳು ಮತ್ತು ರೋಗಿಗಳಿಗೆ ಒದಗಿಸುತ್ತಿರುವ ಸೇವಾ ಸೌಲಭ್ಯಗಳ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕು. ಆದರೆ, ಆಡಳಿತ ಜವಾಬ್ದಾರಿ ಹೊತ್ತ ಡಾ.ಮಂಜುಳಾ ಅವರು ನಿಯಮ ಪಾಲಿಸದೆ ಆರೋಗ್ಯ ಸುರಕ್ಷಾ ಸಮಿತಿಯನ್ನು ಲೆಕ್ಕೆಕ್ಕೆ ತೆಗೆದುಕೊಂಡಿಲ್ಲ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಆರೋಗ್ಯ ರಕ್ಷಾ ಸಮಿತಿ ಅಧ್ಯಕ್ಷರು, ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಪಟ್ಟಣದ ದುಂಡಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಮಂಜುಳಾರ ಕಾರ್ಯವೈಖರಿ ವಿರುದ್ಧ ಶಾಸಕ ಹಾಗೂ ಆರೋಗ್ಯ ರಕ್ಷಾ ಸಮಿತಿ ಅಧ್ಯಕ್ಷ ಎಚ್.ಟಿ.ಮಂಜು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ದುಂಡುಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ತಾಯಿ ಮಗು ಆಸ್ಪತ್ರೆ ಸಭಾಂಗಣದಲ್ಲಿ ನಡೆದ ತಾಲೂಕು ಆರೋಗ್ಯ ರಕ್ಷಾ ಸಮಿತಿಯ ಸಭೆಯಲ್ಲಿ ಆಸ್ಪತ್ರೆ ವೈದ್ಯಾಧಿಕಾರಿ ಕಾರ್ಯವೈಖರಿಗೆ ಬಗ್ಗೆ ಅಸಮಾಧಾನ ಹೊರಹಾಕಿದರು.

ಪ್ರತಿ ಮೂರು ತಿಂಗಳಿಗೊಮ್ಮೆ ಆರೋಗ್ಯ ರಕ್ಷಾ ಸಮಿತಿ ಸಭೆ ನಡೆಸಿ ಆಸ್ಪತ್ರೆ ಕುಂದುಕೊರತೆಗಳು ಮತ್ತು ರೋಗಿಗಳಿಗೆ ಒದಗಿಸುತ್ತಿರುವ ಸೇವಾ ಸೌಲಭ್ಯಗಳ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕು. ಆದರೆ, ಆಡಳಿತ ಜವಾಬ್ದಾರಿ ಹೊತ್ತ ಡಾ.ಮಂಜುಳಾ ಅವರು ನಿಯಮ ಪಾಲಿಸದೆ ಆರೋಗ್ಯ ಸುರಕ್ಷಾ ಸಮಿತಿಯನ್ನು ಲೆಕ್ಕೆಕ್ಕೆ ತೆಗೆದುಕೊಂಡಿಲ್ಲ ಎಂದು ಕಿಡಿಕಾರಿದರು.

ಸಮಿತಿ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳದೆ ಪ್ರಸಕ್ತ ಸಾಲಿ ಸುಮಾರು 80 ಲಕ್ಷ ರು.ಗಳ ಪರಿಕರಗಳನ್ನು ಖರೀದಿಸಿದ್ದಾರೆ. ಆಸ್ಪತ್ರೆಯಲ್ಲಿ ನಡೆಯುವ ಕಾರ್ಯಕ್ರಮಗಳ ಬಗ್ಗೆ ಕ್ಷೇತ್ರದ ಶಾಸಕರಾದ ನನಗಾಗಿಯಾಗಲೀ ಅಥವಾ ಆರೋಗ್ಯ ರಕ್ಷಾ ಸಮಿತಿ ಇತರೆ ಸದಸ್ಯರಿಗಾಗಲೀ ಯಾವುದೇ ಪೂರ್ವ ಮಾಹಿತಿ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸಮಿತಿ ಅಧ್ಯಕ್ಷರು ಮತ್ತು ಸದಸ್ಯರ ಗಮನಕ್ಕೆ ತಾರದೆ ಆಸ್ಪತ್ರೆಗೆ ಅಗತ್ಯವಿರುವ ಪರಿಕರಗಳನ್ನು (ಉಪಕರಣಗಳನ್ನು) ಏಕಾಏಕಿ ಖರೀದಿಸಿದ್ದು, ಇದಕ್ಕೆ ಸಮಿತಿಯಿಂದ ಅನುಮೋದನೆ ನೀಡುವುದಾದರೂ ಹೇಗೆ?. ಅಧ್ಯಕ್ಷನಾಗಿರುವ ನನಗೆ ಯಾವುದೇ ಮಾಹಿತಿ ನೀಡದೆ ಕಾರ್ಯಕ್ರಮ ಆಯೋಜಿಸುವುದು ಮತ್ತು ಪರಿಕರ ಖರೀದಿಸುವುದು ನಿಮ್ಮ ನಿರ್ಲಕ್ಷ್ಯ ಧೋರಣೆ ತೋರುತ್ತದೆ ಎಂದು ತರಾಟೆ ತೆಗೆದುಕೊಂಡರು.

ಮುಂದಿನ ದಿನಗಳಲ್ಲಿ ಆಸ್ಪತ್ರೆಯ ಯಾವುದೇ ಪ್ರಮುಖ ನಿರ್ಧಾರಗಳು, ಖರೀದಿ ಪ್ರಕ್ರಿಯೆ ಹಾಗೂ ಕಾರ್ಯಕ್ರಮಗಳ ಕುರಿತು ಕಡ್ಡಾಯವಾಗಿ ಗಮನಕ್ಕೆ ತರುವಂತೆ ಸೂಚನೆ ನೀಡಿದರು.

ತಾಲೂಕು ಆಸ್ಪತ್ರೆಯಲ್ಲಿ ಉತ್ತಮ ವೈದ್ಯರಿದ್ದಾರೆ. ಅವರು ಸೇವೆ ರೋಗಿಗಳಿಗೆ ಸುಲಲಿತವಾಗಿ ಸಿಗಬೇಕಾದರೆ ಆಸ್ಪತ್ರೆ ಆಡಳಿತ ವ್ಯವಸ್ಥೆ ಚೆನ್ನಾಗಿರಬೇಕು. ಆಸ್ಪತ್ರೆಯಲ್ಲಿ ನವಜಾತ ಶಿಶುಗಳಿಗೆ ಹಾಕಬೇಕಾದ ಮಾಸಿಕ ಲಸಿಕೆಗಳು, ಮಧುಮೇಹ ಮತ್ತಿತರ ಕೆಲವು ಮಾತ್ರೆಗಳ ಕೊರತೆಯಿದೆ. ಅವಧಿ ಮೀರುವ ಹಂತದಲ್ಲಿರುವ ಔಷಧಿ ಮಾತ್ರೆಗಳ ಪೂರೈಕೆಯಾಗುತ್ತಿದೆ. ಅಗತ್ಯ ಔಷಧಿಗಳ ಮತ್ತು ಅವಧಿ ಮೀರುವ ಹಂತದಲ್ಲಿರುವ ಮಾತ್ರೆಗಳ ಪೂರೈಕೆಯ ಬಗ್ಗೆ ಕ್ಷೇತ್ರದ ಶಾಸಕನಾದ ನನ್ನ ಗಮನಕ್ಕೆ ತರಬೇಕು. ನಾನು ಸದರಿ ಸಮಸ್ಯೆಗಳನ್ನು ಆರೋಗ್ಯ ಇಲಾಖೆ ಮೇಲಾಧಿಕಾರಿಗಳೊಂದಿಗೆ ಮಾತನಾಡಿ ಅದಕ್ಕೆ ಪರಿಹಾರ ಕೊಂಡುಕೊಳ್ಳಲು ಸಾಧ್ಯ ಎಂದರು.

ಸಭೆಯಲ್ಲಿ ರಕ್ಷಾ ಸಮಿತಿ ಸದಸ್ಯರಾದ ಇಲ್ಯಾಸ್ ಅಹಮದ್, ಐಕನಹಳ್ಳಿ ಐ.ಬಿ.ಅಣ್ಣಯ್ಯ, ದೊಡ್ಡಗಾಡಿಗನಹಳ್ಳಿ ಕುಮಾರ್, ಮಂದಗರೆರೆ ಮಂಜುನಾಥ್, ಬಳ್ಳೇಕೆರೆ ಶಾಂತ ಸೇರಿದಂತೆ ವಿವಿಧ ಇಲಾಖೆಯ ಪ್ರತಿನಿಧಿಗಳು ಹಾಜರಿದ್ದರು.