ಭೀಮಾ ತೀರದಲ್ಲಿ ಪ್ರಿಯಾಂಕ್‌, ಡಿಸಿ ವಿರುದ್ಧ ಭುಗಿಲೆದ್ದ ಆಕ್ರೋಶ

| Published : Mar 23 2024, 01:00 AM IST

ಭೀಮಾ ತೀರದಲ್ಲಿ ಪ್ರಿಯಾಂಕ್‌, ಡಿಸಿ ವಿರುದ್ಧ ಭುಗಿಲೆದ್ದ ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ನೀರಿಗಾಗಿ ಮುಂದುವರಿದ ಉಪವಾಸ, ವನವಾಸ, ಆಮರಣಾಂತ ಉಪವಾಸ ಕುಳಿತಿದ್ದ ಶಿವು ನಾಟೀಕಾರ್‌ ಆರೋಗ್ಯ ಕ್ಷೀಣ, ವಿಜಯಪುರಕ್ಕೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ. ಜಿಲ್ಲಾ ಉಸ್ತುವಾರಿ ಪ್ರಿಯಾಂಕ್‌ ಖರ್ಗೆ, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್‌ ಹೋರಾಟದ ಸ್ಥಳಕ್ಕೆ ಭೇಟಿ ನೀಡಿಲ್ಲವೆಂದು ಹೋರಾಟ ಸಮಿತಿ ಮುಖ್ಯಸ್ಥ ಚಿದಾನಂದ ಮಠ ಆಕ್ರೋಶ ಹೊರಹಾಕಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ನದಿ ತೀರದ ಜನ- ಜಾನುವಾರುಗಳು ನೀರು ಕುಡಿಯುವ ಉದ್ದೇಶಕ್ಕಾಗಿ ಭೀಮಾ ನದಿಗೆ ಮಹಾರಾಷ್ಟ್ರದ ಉಜನಿ ಜಲಾಶಯದಿಂದ 5 ಟಿಎಂಸಿ ನೀರು ಹರಿಸುವಂತೆ ಆಗ್ರಹಿಸಿ ಕಳೆದ 9 ದಿನದಿಂದ ಅಫಜಲ್ಪುರದಲ್ಲಿ ಆರಂಭವಾಗಿರುವ ಆಮರಣಾಂತ ಉಪವಾಸ ಹೋರಾಟದ ರೂವಾರಿ ಶಿವಕುಮಾರ್‌ ನಾಟೀಕಾರ್‌ ಆರೋಗ್ಯದಲ್ಲಿ ಏರುಪೇರು ಕಂಡಿದ್ದು, ಪ್ರಜ್ಞೆ ಹೀನರಾಗುವ ಸ್ಥಿತಿ ತಲುಪಿದ್ದಾರೆ. ಅವರನ್ನು ಶುಕ್ರವಾರ ವಿಜಯಪುರಕ್ಕೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ.

ಆಮರಣಾಂತ ಉಪವಾಸ ಧರಣಿ ಸತ್ಯಾಗ್ರಹ ಸ್ಥಳದಲ್ಲಿ ಸುದ್ದಿಗೋಷ್ಠಿ ನಡೆಸಿ ಹೋರಾಟ ಸಮಿತಿ ಮುಖ್ಯಸ್ಥ ಚಿದಾನಂದ ಮಠ ಮಾತನಾಡಿ, ಕಳೆದ ಏಳೆಂಟು ದಿನಗಳಿಂದ ಭೀಮಾ ನದಿಗೆ ನೀರು ಹರಿಸಲು ಆಮರಣಾಂತ ಉಪವಾಸ ಸತ್ಯಾಗ್ರಹ ನಡೆದಿದೆ. ಆದರೆ ನೀರು ಹರಿಸುವ ಕುರಿತು ನಮಗೆ ಯಾವುದೇ ಭರವಸೆ ಸಿಗುತ್ತಿಲ್ಲ. ಜಿಲ್ಲಾ ಉಸ್ತುವಾರಿ ಪ್ರಿಯಾಂಕ್‌ ಖರ್ಗೆ, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್‌ ಸೇರಿ ಯಾವ ಅಧಿಕಾರಿಯೂ ಹೋರಾಟದ ಸ್ಥಳಕ್ಕೆ ಭೇಟಿ ನೀಡಿಲ್ಲವೆಂದು ಆಕ್ರೋಶ ಹೊರಹಾಕಿದ್ದಾರೆ.

ಕೂಡಲೇ ಭೀಮಾ ನದಿಗೆ ನೀರು ಹರಿಸುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ನಮ್ಮ ಹೋರಾಟದ ದೆಸೆ ಬದಲಾವಣೆ ಮಾಡಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ದಲಿತ ಸೇನೆ ತಾಲೂಕು ಅಧ್ಯಕ್ಷ ಮಹಾಂತೇಶ ಬಳೂಂಡಗಿ ಮಾತನಾಡಿ, ಕಳೆದ ಏಳೆಂಟು ದಿನಗಳಿಂದ ಶಿವಕುಮಾರ ನಾಟೀಕಾರ ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ. ಆದರೆ ಸೌಜನ್ಯಕ್ಕಾದರೂ ಅಧಿಕಾರಿಗಳು, ಸಚಿವರು ಸ್ಥಳಕ್ಕೆ ಆಗಮಿಸಿಲ್ಲ. ನಾಟೀಕಾರ ಜೀವಕ್ಕೆ ಏನಾದರೂ ಹಾನಿಯಾದರೆ ಯಾರೂ ಜವಾಬ್ದಾರಿ ಎಂದು ಪ್ರಶ್ನಿಸಿದರು.

ಪ್ರೊ.ಮಹಾಂತಪ್ಪ ಜೌಗದ್‌ ಮಾತನಾಡಿ, ಮಹಾರಾಷ್ಟ್ರ ಸರ್ಕಾರದಿಂದ ನೀರು ಪಡೆಯಲು ಕಾನೂನು ಹೋರಾಟ ಮಾಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಬಸಣ್ಣ ಗುಣಾರಿ, ಬಸವರಾಜ ಚಾಂದಕವಟೆ, ಸಿದ್ರಾಮಯ್ಯ ಹಿರೇಮಠ, ಚಿದಾನಂದ ಮಠ, ಸಿದ್ದನಗೌಡ ಮಾಲಿಪಾಟೀಲ ಹವಳಗಾ, ಪ್ರಭಾವತಿ ಮೇತ್ರಿ, ಪ್ರತಿಭಾ ಮಹೀಂದ್ರಕರ, ರಾಜಕುಮಾರ ಉಕ್ಕಲಿ, ಶ್ರೀಕಾಂತ ದಿವಾಣಜಿ, ಸಿದ್ದುಗೌಡ ಪಾಟೀಲ, ಸಂತೋಷ ದಾಮಾ, ಬಸವರಾಜ ಚಾಂದಕವಟೆ, ಶಿವಪುತ್ರಪ್ಪ ಸಂಗೋಳಗಿ, ಚಂದು ನಿಂಬಾಳ, ರಾಜು ಚವ್ಹಾಣ, ಭೀಮರಾವ ಗೌರ, ಯಶವಂತ ಬಡದಾಳ, ಸಿದ್ರಾಮಯ್ಯ ಹಿರೇಮಠ, ಶಾಂತು ಅಂಜುಟಗಿ, ಪ್ರಭಾವತಿ ಮೇತ್ರಿ, ಪ್ರತಿಭಾ ಮಹೀಂದ್ರಕರ, ಸಿದ್ದುಗೌಡ ಪಾಟೀಲ, ಶ್ರೀಕಾಂತ ದಿವಾಣಜಿ, ರಾಜಕುಮಾರ ಉಕ್ಕಲಿ ಅನೇಕರಿದ್ದರು.ಭೀಮಾ ಹೋರಾಟಕ್ಕೆ ಜಯ ಸಿಗಲಿ: ಮಾಜಿ ಸಿಎಂ ಕುಮಾರಸ್ವಾಮಿ

ಮಾಜಿ ಸಿಎಂ ಕುಮಾರಸ್ವಾಮಿಯವರು ಭೀಮಾ ನದಿ ನೀರಿಗಾಗಿ ನಡೆದಿರುವ ಹೋರಾಟದ ಬಗ್ಗೆ ಶುಕ್ರವಾರ ಎಕ್ಸ್‌ ಕಾತೆಯಲ್ಲಿ ಸಂದೇಶ ಹಾಕುವ ಮೂಲಕ ಗಮನ ಸೆಳೆದಿದ್ದಾರೆ. ಜೆಡಿಎಸ್ ಮುಖಂಡ ಶಿವಕುಮಾರ್ ನಾಟೀಕಾರ್‌ ನೇತೃತ್ವದಲ್ಲಿ ಸಾಗಿರುವ ಹೋರಾಟಕ್ಕೆ ಜಯ ಸಿಗಲಿ. ಅವರು 9 ದಿನ ಉಪವಾಸವಿದ್ದ ಕಾರಣ ಅಸ್ವಸ್ಥರಾಗಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಅವರನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿದೆ. ಹೋರಾಟಕ್ಕೆ ಬೇಗ ಯಶ ಸಿಗಲಿ ಎಂದೂ ಕುಮಾರಸ್ವಾಮಿ ಸಂದೇಶದಲ್ಲಿ ಹೇಳಿದ್ದಾರೆ.