ಹಾವೇರಿ ಜಿಲ್ಲಾಡಳಿತ ಹಾಗೂ ತಾಲೂಕಾಡಳಿತ ಕೂಡಲೇ ಬ್ಯಾಡಗಿ ಅಗಲೀಕರಣಕ್ಕೆ ಚಾಲನೆ ನೀಡಬೇಕು, ಇಲ್ಲದೆ ಹೋದಲ್ಲಿ ಜ. 1ರಿಂದ ಮತ್ತೆ ನಾವು ಹೋರಾಟದ ಹಾದಿ ತುಳಿಯಬೇಕಾಗುತ್ತದೆ ಎಂದು ಮುಖ್ಯರಸ್ತೆ ಅಗಲೀಕರಣ ಸಮಿತಿ ಗೌರವಾಧ್ಯಕ್ಷ ಗಂಗಣ್ಣ ಎಲಿ ಎಚ್ಚರಿಸಿದ್ದಾರೆ.
ಬ್ಯಾಡಗಿ: ಪ್ರತಿಭಟನೆ ವಾಪಸ್ ಪಡೆದು 6 ತಿಂಗಳು ಕಳೆಯುತ್ತಾ ಬಂದಿದ್ದರೂ ಇಲ್ಲಿಯವರೆಗೂ ಜಿಲ್ಲಾಡಳಿತ ಹಾಗೂ ತಾಲೂಕಾಡಳಿತ ಮುಖ್ಯರಸ್ತೆ ಅಗಲೀಕರಣಕ್ಕೆ ಮುಂದಾಗದೇ ಕೈಕಟ್ಟಿ ಕುಳಿತಿದೆ ಎಂದು ಮುಖ್ಯರಸ್ತೆ ಅಗಲೀಕರಣ ಸಮಿತಿ ಗೌರವಾಧ್ಯಕ್ಷ ಗಂಗಣ್ಣ ಎಲಿ ಆರೋಪಿಸಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 15 ವರ್ಷಗಳಿಂದ ಅಗಲೀಕರಣಕ್ಕೆ ವಿರೋಧ ಮಾಡುತ್ತಿದ್ದ ಮುಖ್ಯರಸ್ತೆ ವರ್ತಕರು ಹೋರಾಟಕ್ಕೆ ಮಣಿದು ಜೂನ್ ತಿಂಗಳಲ್ಲಿ ಸಾವಿರಾರು ಜನರ ಸಮ್ಮುಖದಲ್ಲಿ ಒಪ್ಪಿಗೆ ಸೂಚಿಸಿ, ಹಾಕಿದ್ದ ಕೇಸ್ ವಾಪಸ್ ಪಡೆದು, ಅಗಲೀಕರಣಕ್ಕೆ ಸಹಕರಿಸುವುದಾಗಿ ಹೇಳಿದ್ದರು. ಮುಂದಿನ 4 ತಿಂಗಳಲ್ಲಿ ಅಗಲೀಕರಣಕ್ಕೆ ಚಾಲನೆ ನೀಡಲಿದ್ದೇವೆ ಎಂದು ಭರವಸೆ ಕೊಟ್ಟು ಹೋಗಿದ್ದ ಜಿಲ್ಲಾಧಿಕಾರಿ, 6 ತಿಂಗಳು ಕಳೆದರೂ ಪತ್ತೆ ಇಲ್ಲ ಮತ್ತು ಪ್ರಕ್ರಿಯೆ ಎಲ್ಲಿಗೆ ಬಂತು ಎಂಬುದನ್ನು ತಿಳಿಸದೇ ಹೋರಾಟಗಾರರ ಜತೆ ಕಣ್ಣುಮುಚ್ಚಾಲೆ ಆಟ ಆಡುತ್ತಿದ್ದಾರೆ ಎಂದು ದೂರಿದರು.ಕೈಕಟ್ಟಿ ಕುಳಿತಿದೆ ಜಿಲ್ಲಾಡಳಿತ: ಹೋರಾಟ ಸಮಿತಿ ಅಧ್ಯಕ್ಷ ಸುರೇಶ ಚಲವಾದಿ ಮಾತನಾಡಿ, ನ್ಯಾಯಾಲಯದ ಮೆಟ್ಟಿಲೇರಿದ್ದವರನ್ನು ಮನವೊಲಿಸಿ ಕೇಸ್ ವಾಪಸ್ ತೆಗೆಸಿ, ಅಗಲೀಕರಣಕ್ಕೆ ಇದ್ದ ಬಹುದೊಡ್ಡ ಸಮಸ್ಯೆಗೆ ತಿಲಾಂಜಲಿ ಇಡಲಾಗಿದೆ. ಇಷ್ಟಾದರೂ ಜಿಲ್ಲಾಡಳಿತ ಹಾಗೂ ತಾಲೂಕಾಡಳಿತ ಆಮೆಗತಿಯಲ್ಲಿ ಕೆಲಸ ಮಾಡುತ್ತಿದೆ. ಇದರ ಹಿಂದಿನ ಉದ್ದೇಶವಾದರೂ ಏನು ಎಂಬುದು ತಿಳಿಯುತ್ತಿಲ್ಲ, ಸ್ಥಳೀಯ ಶಾಸಕರು ಅಗಲೀಕರಣದ ಬಗ್ಗೆ ಸಾಕಷ್ಟು ಮುತುವರ್ಜಿ ವಹಿಸಿ ಕೆಲಸ ಮಾಡಿದ್ದಾರೆ. ಅಗಲೀಕರಣ ವಿಳಂಬ ಮಾಡುತ್ತಿರುವ ಅಧಿಕಾರಿಗಳಿಂದ ಅವರಿಗೂ ಸಹ ಕೆಟ್ಟ ಹೆಸರು ಬರುತ್ತಿದೆ. ಕೂಡಲೇ ಅಗಲೀಕರಣಕ್ಕೆ ಚಾಲನೆ ನೀಡಿ, ಇಲ್ಲದೆ ಹೋದಲ್ಲಿ ಜ. 1ರಿಂದ ಮತ್ತೆ ನಾವು ಹೋರಾಟದ ಹಾದಿ ತುಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.
ಚಳ್ಳೆಹಣ್ಣು ತಿನ್ನಿಸುವ ಕೆಲಸ: ವಿನಾಯಕ ಕಂಬಳಿ ಮಾತನಾಡಿ, ಸ್ಥಳೀಯ ತಹಸೀಲ್ದಾರ್ ಬ್ಯಾಡಗಿಯಲ್ಲಿ ಇದ್ದಾರೋ ಇಲ್ಲವೋ ತಿಳಿಯುತ್ತಿಲ್ಲ. ಅಗಲೀಕರಣದ ಬಗ್ಗೆ ಕಿಂಚಿತ್ತೂ ಮಾಹಿತಿ ನೀಡದೆ ಹೋರಾಟಗಾರರಿಗೆ ಚಳ್ಳೆಹಣ್ಣು ತಿನ್ನಿಸುವ ಕೆಲಸ ನಡೆಯುತ್ತಿದೆ. ಇನ್ನೇನು ಮೆಣಸಿನಕಾಯಿ ಹಂಗಾಮು ಆರಂಭವಾಗಲಿದ್ದು, ಮತ್ತೆ ಮುಖ್ಯ ರಸ್ತೆಯಲ್ಲಿ ವಾಹನಗಳ ಪರದಾಟ ಜೋರಾಗಲಿದೆ. ಆದ್ದರಿಂದ ಕಚೇರಿ ಬಿಟ್ಟು ಹೊರಬಂದು ಜನರ ನೋವು, ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ತಾಲೂಕಾಡಳಿತದಿಂದ ಆಗಲಿ ಎಂದು ಆಗ್ರಹಿಸಿದರು.ಪಾಂಡುರಂಗ ಸುತಾರ, ಅಜೀಜ ಬಿಜಾಪುರ, ಹರೀಶ ರಿತ್ತಿ, ಗುತ್ತೆಮ್ಮ ಮಾಳಗಿ ಉಪಸ್ಥಿತರಿದ್ದರು.