ಕನಿಷ್ಠ ಬೆಂಬಲ ಬೆಲೆ ನಿಗದಿ ಶಾಸನಬದ್ಧಗೊಳಿಸಲು ಆಗ್ರಹ

| Published : Feb 28 2024, 02:30 AM IST

ಸಾರಾಂಶ

ರಾಜ್ಯಾದ್ಯಂತ ಗ್ರಾಮೀಣ ಬಂದ್‌ ಗೆ ಕರೆ ಹಿನ್ನೆಲೆಯಲ್ಲಿ ನಗರದ ನಜರ್‌ ಬಾದ್ ಠಾಣೆ ಮುಂಭಾಗದಿಂದ ಟ್ರಾಕ್ಟರ್‌ ಗಳ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಪ್ರತಿಭಟಿಸಲು ರೈತರು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಆದರೆ, ಅನುಮತಿ ಇಲ್ಲದ ಕಾರಣ ಟ್ರಾಕ್ಟರ್‌ ಗಳನ್ನು ಪೊಲೀಸರು ವಶಪಡಿಸಿಕೊಂಡರು. ಈ ವೇಳೆ ಪೊಲೀಸರು ಮತ್ತು ರೈತರ ನಡುವೆ ಕೆಲಕಾಲ ಮಾತಿ ಚಕಮಕಿ ನಡೆಯಿತು.

ಕನ್ನಡಪ್ರಭ ವಾರ್ತೆ ಮೈಸೂರು

ಕೇಂದ್ರ ಸರ್ಕಾರವು ಎಂ.ಎಸ್. ಸ್ವಾಮಿನಾಥನ್ ಆಯೋಗದ ಶಿಫಾರಸಿನಂತೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಿ ಶಾಸನಬದ್ಧಗೊಳಿಸುವುದು ಹಾಗೂ ರಾಜ್ಯ ಸರ್ಕಾರವು ಕೃಷಿ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿ ಸಾಮೂಹಿಕ ನಾಯಕತ್ವದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿರುವ ಮೈಸೂರು- ಬನ್ನೂರು ರಸ್ತೆ ತಡೆದು ಪ್ರತಿಭಟಿಸಿದರು.

ರಾಜ್ಯಾದ್ಯಂತ ಗ್ರಾಮೀಣ ಬಂದ್‌ ಗೆ ಕರೆ ಹಿನ್ನೆಲೆಯಲ್ಲಿ ನಗರದ ನಜರ್‌ ಬಾದ್ ಠಾಣೆ ಮುಂಭಾಗದಿಂದ ಟ್ರಾಕ್ಟರ್‌ ಗಳ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಪ್ರತಿಭಟಿಸಲು ರೈತರು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಆದರೆ, ಅನುಮತಿ ಇಲ್ಲದ ಕಾರಣ ಟ್ರಾಕ್ಟರ್‌ ಗಳನ್ನು ಪೊಲೀಸರು ವಶಪಡಿಸಿಕೊಂಡರು. ಈ ವೇಳೆ ಪೊಲೀಸರು ಮತ್ತು ರೈತರ ನಡುವೆ ಕೆಲಕಾಲ ಮಾತಿ ಚಕಮಕಿ ನಡೆಯಿತು.

ನಂತರ ಎರಡು ಟ್ರಾಕ್ಟರ್‌ ಗಳನ್ನು ಮಾತ್ರ ಪೊಲೀಸರು ಹಿಂದಿರುಗಿಸಿದರು. ರೈತರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟಿಸಲು ತೆರಳಿದಾಗ ಸೂಕ್ತ ಸ್ಥಳ ನಿಯೋಜಿಸದ ಕಾರಣಕ್ಕೆ ಆಕ್ರೋಶಗೊಂಡ ರೈತರು, ಮೈಸೂರು- ಬನ್ನೂರು ಮುಖ್ಯ ರಸ್ತೆಯನ್ನು ಬಂದ್ ಮಾಡಿ ಪ್ರತಿಭಟಿಸಿದರು. ಈ ವೇಳೆ ಕೆಲಕಾಲ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಯಿತು.

ವಿವಿಧ ಬೇಡಿಕೆಗಳ ಹೊತ್ತು ದೆಹಲಿಯತ್ತ ಸಾಗುತ್ತಿರುವ ರೈತರ ಮೇಲೆ ಕೇಂದ್ರ ಸರ್ಕಾರ ನಡೆಸುತ್ತಿರುವ ದೌರ್ಜನ್ಯ ನಿಲ್ಲಬೇಕು. ಅವರ ನ್ಯಾಯಯುತ ಬೇಡಿಕೆ ಈಡೇರಬೇಕು. ಕೃಷಿ ಕಾಯ್ದೆ ಹಿಂಪಡೆಯುವಂತೆ ರೈತರು ನಡೆಸಿದ ಹೋರಾಟದ ವೇಳೆ ಕೇಂದ್ರ ನೀಡಿದ್ದ ವಾಗ್ದಾನಗಳನ್ನು ಮರೆತಿದ್ದು, ರೈತರನ್ನು ವಂಚಿಸುವ ನಡೆಯನ್ನು ಕೈ ಬಿಡಬೇಕು. ರಾಜ್ಯ ಸರ್ಕಾರವೂ ಬೆಂಬಲ ಬೆಲೆ, ಸಾಲ ಮನ್ನಾ ವಿಚಾರದಲ್ಲಿ ರೈತಪರವಾಗಿ ಕ್ರಮ ವಹಿಸಬೇಕು ಎಂದು ಅವರು ಆಗ್ರಹಿಸಿದರು.

ಈ ಬಾರಿಯ ಅಬುದಾಬಿಯಲ್ಲಿ ನಡೆಯಲಿರುವ ವಿಶ್ವ ವ್ಯಾಪರ ಸಂಸ್ಥೆಯ ಶೃಂಗಸಭೆಯಲ್ಲಿ ಭಾರತವು ಅದರೊಂದಿಗಿನ ಒಪ್ಪಂದದಿಂದ ಹೊರ ಬರಬೇಕು. ಮುಂದುವರಿದ ದೇಶಗಳು ತಮ್ಮಲ್ಲಿನ ಕೃಷಿ ಉತ್ಪನ್ನವನ್ನು ಇಲ್ಲಿ ತಂದು ಮಾರುವ, ನಮ್ಮ ರೈತರನ್ನು ಸಂಕಷ್ಟಕ್ಕೆ ದೂಡುವ ಯೋಜನೆಗಳು ನಮಗೆ ಬೇಡ ಎಂದು ಅವರು ಒತ್ತಾಯಿಸಿದರು.

ಹಿಂದಿನ ಸರ್ಕಾರದ ಭೂ ಸುಧಾರಣಾ ಕಾಯ್ದೆಯನ್ನು ಹಿಂಪಡೆಯಬೇಕು. ರೈತರ ಪಂಪ್‌ ಸೆಟ್‌ ಗಳಿಗೆ ಸರ್ಕಾರವೇ ಉಚಿತವಾಗಿ ವಿದ್ಯುತ್ ಸಂಪರ್ಕ ನೀಡಬೇಕು. ಜಿಲ್ಲೆಯಲ್ಲಿ ಸಾಗುವಳಿ ಮಾಡುತ್ತಿರುವವರಿಗೆ ಸಾಗುವಳಿ ಪತ್ರ ವಿತರಿಸಬೇಕು. ಜಿಲ್ಲೆಯ ಕೆರೆಗಳ ಒತ್ತುವರಿ ತೆರವುಗೊಳಿಸಲು ಕ್ರಮ ವಹಿಸಬೇಕು. ಭೂಮಿಯ ಫಲವತ್ತತೆ ಉಳಿಸುವ ಕುರಿತ ಯೋಜನೆಗಳನ್ನು ಸರ್ಕಾರ ಜಾರಿಗೊಳಿಸಬೇಕು ಎಂದು ಅವರು ಆಗ್ರಹಿಸಿದರು.

ರಾಜ್ಯದ 223 ತಾಲೂಕುಗಳು ಬರದಿಂದ ತತ್ತರಿಸಿವೆ. ಹೀಗಾಗಿ, ರೈತರ ಸಾಲದ ಮೇಲಿನ ಬಡ್ಡಿಯನ್ನು ಸಂಪೂರ್ಣವಾಗಿ ಮನ್ನಾ ಮಾಡುವ ಕಾರ್ಯವನ್ನು ರಾಜ್ಯ ಸರ್ಕಾರ ಮಾಡಬೇಕು. ಕೇಂದ್ರ ಸರ್ಕಾರವು ಎಂ.ಎಸ್. ಸ್ವಾಮಿನಾಥನ್ ಆಯೋಗದ ಶಿಫಾರಸಿನಂತೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಿ ಶಾಸನ ಬದ್ಧಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಪಿ. ಶಿವರಾಜು ಅವರು ರೈತರ ಮನವಿ ಸ್ವೀಕರಿಸಿದರು. ಸಂಘದ ಪದಾಧಿಕಾರಿಗಳಾದ ಮಂಜು ಕಿರಣ್, ವಿದ್ಯಾಸಾಗರ್ ರಾಮೇಗೌಡ, ಸತೀಶ್‌ ರಾವ್, ಇಮ್ಮಾವು ರಘು, ಶ್ವೇತಾ ಮೊದಲಾದವರು ಇದ್ದರು.