ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ತಾಲೂಕು ಕಚೇರಿಯಲ್ಲಿ ರೈತರ ಸಮಸ್ಯೆ ಬಗೆಹರಿಸಲು ವಿಳಂಬ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘದವರು (ಮೂಲ ಸಂಘಟನೆ) ನಗರದ ನಜರ್‌ ಬಾದ್‌ ನಲ್ಲಿರುವ ತಾಲೂಕು ಕಚೇರಿ (ಮಿನಿ ವಿಧಾನಸೌಧ) ಮುಂಭಾಗದಲ್ಲಿ ಸೋಮವಾರ ಪ್ರತಿಭಟಿಸಿದರು.ಯಡಹಳ್ಳಿ ಗ್ರಾಮದ ಮಹದೇವು, ಲಕ್ಷ್ಮೀ, ವಸಂತ, ಕೃಷ್ಣ, ಶಿವರಾಜು, ದೇಶಣ್ಣ ಅವರು ಜಮೀನಿನ ಹದ್ದುಬಸ್ತು ಮಾಡಿಕೊಡುವಂತೆ ಅಧಿಕಾರಿಗಳಿಗೆ ದಾಖಲೆ ನೀಡಿದ್ದರೂ ವಿಳಂಬ ಮಾಡುತ್ತಿದ್ದಾರೆ. ಈ ರೈತರ ಪರವಾಗಿ ನ್ಯಾಯಾಲಯಗಳಲ್ಲಿ ಆದೇಶವೂ ಆಗಿದೆ. ದಾಖಲೆ ಪತ್ರಗಳು ಸಹ ಸರಿಯಾಗಿವೆ. ಆದರೆ, ಕೆಲಸ ಮಾಡಿಕೊಡದೆ ಕಚೇರಿಗೆ ಅಲೆಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.ಅಧಿಕಾರಿಗಳು ರೈತರ ಯಾವ ಸಮಸ್ಯೆಗಳನ್ನೂ ಬಗೆಹರಿಸುತ್ತಿಲ್ಲ. ಹೀಗಾಗಿ ಕೂಡಲೇ ರೈತರ ಅರ್ಜಿಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ರೈತರು ಹಾಗೂ ಜಾನುವಾರುಗಳ ಸಮೇತ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.ರೈತ ಸಂಘದ ಜಿಲ್ಲಾಧ್ಯಕ್ಷ ಬನ್ನೂರು ನಾರಾಯಣ್, ಮುಖಂಡರಾದ ಶಿವರಾಮು, ವಿಶ್ವನಾಥ್, ರಂಗಸ್ವಾಮಿ, ಕೃಷ್ಣೇಗೌಡ, ಸ್ವಾಮಿರಾಜ್, ದೇವರಾಜು, ರಾಜು, ನಾಗರಾಜು, ಶಿವಣ್ಣ ಮೊದಲಾದವರು ಇದ್ದರು.