ಸಾರಾಂಶ
ಕನ್ನಡಪ್ರಭ ವಾರ್ತೆ ಬೀಳಗಿ
ಮುಸ್ಲಿಮರಿಗೆ ಶೇ.4 ಮಿಸಲಾತಿ ಕಲ್ಪಿಸುವ ವಿಷಯದಲ್ಲಿ ಸಂವಿಧಾನ ಬದಲಾವಣೆ ಮಾಡಿ ಮಿಸಲಾತಿ ನೀಡುತ್ತೇವೆ ಎಂಬ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ. ಇಂತಹ ಹೇಳಿಕೆ ಮೂಲ ಶಿವಕುಮಾರ್ ಅವರು ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಅಗೌರವ ತೋರಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಹೇಳಿದರು.ಹೇಳಿಕೆ ಖಂಡಿಸಿ ಇಲ್ಲಿನ ಡಾ.ಅಂಬೇಡ್ಕರ್ ವೃತ್ತದಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಡಿಕೆಶಿ ಅವರ ಪ್ರತಿಕೃತಿ ದಹಿಸಿ ನಡೆಸಿ ಪ್ರತಿಭಟನೆಯಲ್ಲಿ ಮಾತನಾಡಿದರು. ರಾಜ್ಯದ ಜನರಿಗೆ ಸಂವಿಧಾನದ ಹೆಸರು ಹೇಳಿ ಸರ್ಕಾರ ಮಾಡುತ್ತಿರುವ ಕಾಂಗ್ರೆಸ್ ಪಕ್ಷ ಇಂದು ಅದೇ ಸಂವಿಧಾನ ಬದಲಾವಣೆ ಮಾಡಲು ಸಿದ್ಧವಾಗಿದೆ. ಒಂದು ಸಮುದಾಯ ಓಲೈಸಲು ಸಂವಿಧಾನ ಬದಲಾವಣೆ ಹೇಳಿಕೆ ನೀಡಿದರೂ ಸಿಎಂ ಸಿದ್ದರಾಮಯ್ಯ, ರಾಹುಲ್ ಗಾಂಧಿ ಅವರು ಏನೂ ಮಾತನಾಡುತ್ತಿಲ್ಲ. ರಾಜ್ಯದ ಅಭಿವೃದ್ಧಿಯ ಕೆಲಸಗಳು ಆಗುತ್ತಿಲ್ಲ. ಕೃಷ್ಣಾ ಯೋಜನೆ ಬಗ್ಗೆಯೂ ಯಾವುದೇ ರೀತಿಯ ಕೆಲಸ ಮಾಡದೆ ಜನರಿಗೆ ಸುಳ್ಳು ಭರವಸೆ ನೀಡಿ ಉಡಾಫೆ ಉತ್ತರ ನೀಡುತ್ತಾ ಕಾಲ ಹರಣ ಮಾಡುತ್ತಿದ್ದಾರೆ, ಕಾಂಗ್ರೆಸ್‌ನವರು ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೊಲಿಸಿ, ಅವರ ಅಂತ್ಯಕ್ರಿಯೆ ಮಾಡಲು ದೆಹಲಿಯಲ್ಲಿ ಜಾಗ ನೀಡಿದೆ ಅವಮಾನಿಸಿದ್ದರು, ಇಂದು ದೇಶದ ಉತ್ತಮ ಪ್ರಜಾಪ್ರಭುತ್ವ ವ್ಯವಸ್ಥೆಗೆ ಆಧಾರವಾಗಿರುವ ಸಂವಿಧಾನವನ್ನು ಬದಲಾವಣೆ ಮಾಡಲು ಹೊರಟ್ಟಿದ್ದಾರೆ. ರಾಜ್ಯದ ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಡಿಕೆಶಿ ಕೂಡಲೇ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ದೇಶದ ಜನರು ಮತ್ತು ಅಂಬೇಡ್ಕರ್ ಅವರ ಕ್ಷಮೆ ಕೇಳಬೇಕು. ಮುಸ್ಲಿಮರಿಗೆ ಶೇ.4 ಮೀಸಲಾತಿ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಬಿಜೆಪಿ ತಾಲೂಕಾಧ್ಯಕ್ಷ ಹೊಳೆಬಸು ಬಾಳಶೆಟ್ಟಿ, ಪಪಂ ಅಧ್ಯಕ್ಷ ರಾಮಚಂದ್ರ ಬೋರಜಿ, ಸದಸ್ಯರಾದ ಸಿದ್ದಲಿಂಗೇಶ ನಾಗರಾಳ, ಸಂತೋಷ ನಿಂಬಾಳ್ಕರ್, ಪರಶುರಾಮ ಮಮದಾಪುರ, ರಮೇಶ ಗಾಣಿಗೇರ, ವಿಠಲ ಗಡ್ಡದವರ, ಹಿರಿಯರಾದ ಎಂ.ಎಂ. ಶಂಬೋಜಿ, ವಿ.ಜಿ. ರೇವಡಿಗಾರ, ಮಲ್ಲಿಕಾರ್ಜುನ ಅಂಗಡಿ, ಶ್ರೀಶೈಲ್ಲಯ್ಯ ಯಂಕಂಚಿಮಠ, ಸಂತೋಷ ಶೀಲವಂತ ಸೇರಿದಂತೆ ಇತರರು ಇದ್ದರು.