ಸಾರಾಂಶ
ಅಕ್ಕ, ಬಾವರಿಗೆ ಸಾರಿಗೆ ಬಸ್ಸಿನಲ್ಲಿ ಸೀಟು ಸಿಗದೆ ಊರಿಗೆ ಹೋಗದೆ ಮನೆಗೆ ವಾಪಸ್ಸಾಗಿದ್ದರಿಂದ ರೊಚ್ಚಿಗೆದ್ದ ಯುವಕರು ಕಂಠಪೂರ್ತಿ ಕುಡಿದು ಸಾರಿಗೆ ವಾಹನ ಸೇರಿ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿ ದಾಂಧಲೆ ಮೆರೆದಿದ್ದಾರೆ.
ಕನ್ನಡಪ್ರಭ ವಾರ್ತೆ ಹಟ್ಟಿ ಚಿನ್ನದಗಣಿ ಗುರುಗುಂಟಾ ಸಮೀಪದ ಧುಮತಿದೊಡ್ಡಿಯಿಂದ ಬೆಂಗಳೂರಿಗೆ ಹೊರಟ ಅಕ್ಕ, ಬಾವರಿಗೆ ಸಾರಿಗೆ ಬಸ್ಸಿನಲ್ಲಿ ಸೀಟು ಸಿಗದೆ ಊರಿಗೆ ಹೋಗದೆ ಮನೆಗೆ ವಾಪಸ್ಸಾಗಿದ್ದರಿಂದ ರೊಚ್ಚಿಗೆದ್ದ ಯುವಕರು ಕಂಠಪೂರ್ತಿ ಕುಡಿದು ಸಾರಿಗೆ ವಾಹನ ಸೇರಿ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿ ಪೊಲೀಸರ ಅತಿಥಿಯಾಗಿ ಮುದ್ದೆ ಮುರಿಯುವ ಸ್ಥಿತಿ ಬಂದೋದಗಿದ್ದು, ಸಾರ್ವಜನಿಕರು ಛೀ ಮಾರಿ ಹಾಕುತ್ತಿದ್ದಾರೆ. ಏನಿದು ಘಟನೆ:
3 ಕ್ಕೂ ಅಧಿಕ ವಾಹನಗಳ ಮೇಲೆ ಯುವಕರ ಗುಂಪು ಕಲ್ಲು ತೂರಿ ನಡೆಸಿದ ಘಟನೆ ಜೇವರ್ಗಿ- ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿ(150ಎ)ನ ಗುರುಗುಂಟಾ ಗ್ರಾಮದ ಬಳಿಯ ಗೊಲ್ಲಪಲ್ಲಿ ಘಾಟ್ ಪ್ರದೇಶದಲ್ಲಿ ಮಂಗಳವಾರ ಬೆಳಗಿನ ಜಾವ ನಡೆದಿತ್ತು. ಈ ಘಟನೆ ಸುದ್ದಿ ತಿಳಿದು ದರೋಡೆಕೋರರೇ ಈ ಕೃತ್ಯ ಎಸಗಿದ್ದಾರೆಂದು ತಿಳಿದು ಘಟನೆಯ ಕುರಿತು ಜಿಲ್ಲೆಯ ಜನತೆ ತಲ್ಲಣಗೊಂಡಿದ್ದರು. ಗೊಲಪಲ್ಲಿ ಸಮೀಪದ ಧುಮತಿ ದೊಡ್ಡಿಯಿಂದ ಬೆಂಗಳೂರಿಗೆ ಹೋಗಬೇಕಿದ್ದ ಕೂಲಿಕಾರರಾದ ಆಂಜನೇಯ ಎನ್ನುವ ಆರೋಪಿಯ ಅಕ್ಕ- ಬಾವ ಸೀಟು ಸಿಗದೆ ಸೋಮವಾರ ತಡರಾತ್ರಿ ಮನೆಗೆ ವಾಪಸ್ಸಾಗಿದ್ದರಿಂದ, ನಾಲ್ಕು ಜನ ಸೇರಿ ಅಹೋರಾತ್ರಿ ಕುಡಿದು ಕಲುಬುರಗಿ, ಬೀದರ್ ಕಡೆಗಳಿಂದ ಬೆಂಗಳೂರು, ಶಿವಮೊಗ್ಗ ಇತರೆ ಕಡೆಗಳಲ್ಲಿ ಸಾಗುತ್ತಿದ್ದ ಬಸ್, ಲಾರಿ, ಕಾರುಗಳು ಲಿಂಗಸುಗೂರು ತಾಲೂಕಿನ ಗೊಲ್ಲಪಲ್ಲಿ ಅರಣ್ಯಪ್ರದೇಶ ಬಳಿ ಬರುತ್ತಿದ್ದಂತೆಯೇ ವಾಹನಗಳ ಮೇಲೆ ಏಕಾಏಕಿಯಾಗಿ ಕಲ್ಲು ತೂರಾಟ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರಕರಣವನ್ನು ಬೆಂಬೆತ್ತಿದ ಹಟ್ಟಿ ಠಾಣೆ ಸಿಪಿಐ ಕೆ.ಹೊಸಕೇರಪ್ಪ ತಂಡ ಕಡೆಗೂ ಅಂಬರೀಶ್ (25) ಏಳುಬಂಡಿ, ತಿಮ್ಮಣ್ಣ (20) ದಂತಿ ಹೊಲ ಗೊಲಪಲ್ಲಿ, ತಿಮ್ಮಯ್ಯ(20) ಧುಮತಿ ಹೊಲ ಗೊಲಪಲ್ಲಿ, ಆಂಜನೇಯ (20) ಧುಮತಿ ಹೊಲ ಇವರುಗಳು ಬಸ್ಸಿನಲ್ಲಿ ಸೀಟು ಸಿಗದೆ ಇರುವುದರಿಂದ ವಾಹನಗಳ ಮೇಲೆ ಕಲ್ಲು ತೂರಿ ಸಿಟ್ಟನ್ನು ತೀರಿಸಿ ಕೊಂಡಿದ್ದರು. ವಿನಾ ಯಾವುದೇ ಧರೋಡೆ ಉದ್ದೇಶದಿಂದ ಕಲ್ಲನ್ನು ಎಸೆಯಲಾಗಿಲ್ಲವೆಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.ಇನ್ನು ಘಟನೆಗೆ ಸಂಂಧಿಸಿದಂತೆ ರಾಯಚೂರು ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ ಮಾತನಾಡಿ, ಕುಡಿದ ಅಮಲಿನಲ್ಲಿ ಸೀಟು ಸಿಕ್ಕಿಲ್ಲವೆಂದು ಕಲ್ಲೆಸೆದ ಪುಡಾರಿಗಳನ್ನು ಬಂಧಿಸಿ ಕಾನೂನು ಕ್ರಮಕ್ಕೊಳಪಡಿಸಿದ್ದೇವೆ. ಯಾವುದೇ ದರೋಡೆ, ಕೊಲೆ ಯತ್ನದಂತಹ ಪ್ರಕರಣ ನಡೆದಿಲ್ಲ. ಪ್ರಯಾಣಿಕರು ನಿರ್ಭೀತಿಯಿಂದ ಇರಬೇಕು. ಸಾರ್ವಜನಿಕರ ಹಿತ ಕಾಪಾಡಲು ಇಲಾಖೆ ಸದಾ ಬದ್ಧವಾಗಿದ್ದೇವೆ ಎಂದು ಅಭಯ ನೀಡಿದರು.