ಸಾರಾಂಶ
ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ಮುಖ್ಯಾಧಿಕಾರಿಗಳು ಕರೆದ ಪಟ್ಟಣ ಪುರಸಭೆಯ 2025-26ನೇ ಸಾಲಿನ ಆಯ-ವ್ಯಯ ವಿಶೇಷ ಸಾಮಾನ್ಯ ಸಭೆಯನ್ನು ಸದಸ್ಯರ ಒತ್ತಾಯದ ಮೇರೆಗೆ ಅಧ್ಯಕ್ಷರು ಮುಂದೂಡಿದ ಘಟನೆ ಶುಕ್ರವಾರ ನಡೆಯಿತು.ಶುಕ್ರವಾರ ಪಟ್ಟಣದ ತಾಲೂಕು ಪಂಚಾಯತಿ ಸಭಾಭವನದಲ್ಲಿ ಪುರಸಭೆಯ 2025-26ನೇ ಸಾಲಿನ ಬಜೆಟ್ ಸಭೆಯನ್ನು ಪುರಸಭೆ ಮುಖ್ಯಾಧಿಕಾರಿಗಳು ಕರೆದಿದ್ದರು. ಸಭೆ ಆರಂಭವಾಗುತ್ತಿದ್ದಂತೆಯೇ ಸದಸ್ಯರಾದ ವಿಠ್ಠಲಸಾ ಕಾವಡೆ, ಪ್ರಶಾಂತ ಜವಳಿ, ರಫೀಕ್ ಕಲ್ಬುರ್ಗಿ ಸೇರಿದಂತೆ ಇನ್ನೂ ಕೆಲ ಸದಸ್ಯರು ಮುಖ್ಯಾಧಿಕಾರಿ ಎ.ಎಚ್. ಮುಜಾವರ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಯಾವ ಪ್ರೋಸೆಜರ್ ಫಾಲೋ ಮಾಡಿ ಸಭೆ ಕರೆದಿದ್ದೀರಿ? ಯಾರು ಸಭೆ ಕರೆದಿದ್ದಾರೆ? ಅಧ್ಯಕ್ಷರ ಆಯ್ಕೆಯನ್ನು ನ್ಯಾಯಾಲಯ ಅಸಿಂಧು ಮಾಡಿದ ಬಳಿಕ ಉಪಾಧ್ಯಕ್ಷರ, ಸದಸ್ಯರ ಗಮನಕ್ಕೆ ತರದೆ, ಮೇಲಧಿಕಾರಿಗಳಿಂದಲೂ ಸಲಹೆ ಕೇಳದೆ, ಅಧ್ಯಕ್ಷರ ಹೆಸರೂ ಇಲ್ಲದೆ, ಉಪಾಧ್ಯಕ್ಷರ ಅಥವಾ ಪ್ರಭಾರಿ ಅಧ್ಯಕ್ಷರ ಮೂಲಕ ಸಭೆ ಸೂಚನಾ ಪತ್ರ ಕೊಡದೇ, ಸ್ವತಃ ತಾವೇ ಸಹಿ ಮಾಡಿ ನೀಡಿದ್ದೀರಿ. ಇದು ಕಾನೂನು ಬಾಹೀರವಲ್ಲವೇ? ಚುನಾಯಿತ ಸದಸ್ಯರಿಗೆ ಮರ್ಯಾದೆ ಇಲ್ಲವೇ? ಎಂದು ಮುಖಧಿಕಾರಿಯನ್ನು ತರಾಟೆಗೆ ತೆಗೆದುಕೊಂಡು ಸಭೆ ಮುಂದೂಡುವಂತೆ ಸಂತೋಷ ನಾಯನೇಗಲಿ, ಉಮೇಶ ಹುನಗುಂದ, ವಿನೋದ ಮದ್ದಾನಿ, ರಫೀಕ್ ಕಲ್ಬುರ್ಗಿ ಸೇರಿದಂತೆ ಕೆಲ ಸದಸ್ಯರು ಅಧ್ಯಕ್ಷರನ್ನು ಒತ್ತಾಯಿಸಿದರು.ಸಭೆಯಲ್ಲಿ ಕೆಲಹೊತ್ತು ಸದಸ್ಯರು ಮುಖ್ಯಾಧಿಕಾರಿಗಳ ನಡೆ ಒಪ್ಪದೇ ಸಭೆ ಮುಂದೂಡುವಂತೆ ಪಟ್ಟು ಹಿಡಿದರು. ಈಗ ಅಧ್ಯಕ್ಷರಿದ್ದಾರೆ, ಅವರ ಗಮನಕ್ಕೆ ತಂದು ಬಜೆಟ್ ಸಭೆ ಕರೆಯಿರಿ. ಇನ್ನು ಮುಂದೆ ಕರೆಯುವಾಗ ಪ್ರತಿ ಸದಸ್ಯರಿಗೆ ಕರಡು ಪ್ರತಿಗಳನ್ನು ಮುಂಚಿತವಾಗಿ ಒದಗಿಸಿ ಎಂದು ಹೇಳಿದರು. ಮುಖ್ಯಾಧಿಕಾರಿಗಳು ಎಲ್ಲರಿಗೂ ಕೈಮುಗಿದು, ಏಪ್ರಿಲ್ ಒಳಗೆ ಬಜೆಟ್ ಸಭೆ ನಡೆಯದಿದ್ದರೆ, ಪುರಸಭೆಯಿಂದ ಹಣ ಬಳಸಲು ಅವಕಾಶವಿಲ್ಲ ಎಂದ ಹೀಗಾಗಿ ಸಭೆ ಕರೆಯಲಾಗಿದೆ ಎಂದು ಸಮರ್ಥಿಸಿಕೊಂಡರು. ಅಧ್ಯಕ್ಷೆ ಜ್ಯೋತಿ ಗೋವಿನಕೊಪ್ಪ ಬಜೆಟ್ ಸಭೆಯನ್ನು ಮುಂದೂಡಲು ಸೂಚನೆ ನೀಡಿದರು. ಕೊನೆಗೆ ಮುಖ್ಯಾಧಿಕಾರಿಗಳು ಸಭೆಯನ್ನು ಮುಂದೂಡಿದರು.
ಉಪಾಧ್ಯಕ್ಷ ರಾಜಶೇಖರ ಹೆಬ್ಬಳ್ಳಿ, ಪುರಸಭೆ ಸದಸ್ಯರಾದ ಪ್ರಶಾಂತ ಜವಳಿ, ಯಲ್ಲಪ್ಪ ಮನ್ನಿಕಟ್ಟಿ, ವಿದ್ಯಾ ಮುರಗೋಡ, ರಾಜವ್ವ ಹೆಬ್ಬಳ್ಳಿ, ಜ್ಯೋತಿ ಆಲೂರ, ಕಾಶೀನಾಥ ಕಲಾಲ, ಸುಮಿತ್ರಾ ಕೋಡಬಳೆ, ನಾಗರತ್ನಾ ಲಕ್ಕುಂಡಿ, ರಾಜೇಶ್ವರಿ ಉಂಕಿ ಸೇರಿದಂತೆ ನಾಮನಿರ್ದೇಶನ ಸದಸ್ಯರಿದ್ದರು.