ಸಾರಾಂಶ
ಹುಬ್ಬಳ್ಳಿ:
ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಸೋಮವಾರ ಯುವ ಕಾಂಗ್ರೆಸ್ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು. ಬಳಿಕ ಪ್ರಜ್ವಲ್ ಪ್ರತಿಕೃತಿ ದಹಿಸಲಾಯಿತು.ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ವಿ.ವಿ. ಶ್ರೀನಿವಾಸ ಮಾತನಾಡಿ, ಪ್ರಜ್ವಲ್ ರೇವಣ್ಣ ಬಳಿ ಮಹಿಳೆಯರು ಹೋಗಲು ಭಯಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಸಾವಿರಾರು ಅಮಾಯಕ ಮಹಿಳೆಯರನ್ನು ಅತ್ಯಾಚಾರ ಮಾಡಿರುವ ಇಂತಹ ವಿಕೃತ ಮನಸ್ಸುಳ್ಳ ಸಂಸದನ ಮೇಲೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಘಟನೆಯಿಂದಾಗಿ ನೊಂದಿರುವ ಹಾಗೂ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವ ಮಹಿಳೆಯರಿಗೆ ಸರ್ಕಾರ ಭದ್ರತೆ ನೀಡುವ ಮೂಲಕ ಅವರಿಗೆ ನ್ಯಾಯ ಕೊಡಿಸಬೇಕು ಎಂದು ಒತ್ತಾಯಿಸಿದರು.
ಮಹಿಳಾ ಕುಲಕ್ಕೆ ಅವಮಾನ:ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಹಮ್ಮದ್ ನಲಪಾಡ್ ಮಾತನಾಡಿ, ಪ್ರಜ್ವಲ್ ರೇವಣ್ಣ ಮಾಡಿರುವ ಕೃತ್ಯ ಇಡೀ ಮಹಿಳಾ ಕುಲಕ್ಕೆ ಮಾಡಿರುವ ಅವಮಾನವಾಗಿದೆ. ಇಂತಹ ವಿಕೃತ ಮನಸ್ಸುಳ್ಳ ನಾಯಕ ಸಂಸದನಾಗಿ ಕಾರ್ಯನಿರ್ವಹಿಸುವುದು ನಾಗರಿಕ ಸಮಾಜವೇ ತಲೆತಗ್ಗಿಸುವಂತಾಗಿದೆ. ಸರ್ಕಾರ ಹಾಗೂ ಪೊಲೀಸ್ ಇಲಾಖೆ ಇವನ ಮೇಲೆ ಕಠಿಣ ಕ್ರಮಕೈಗೊಳ್ಳಬೇಕು ಎಂದರು.
ಪ್ರಜ್ವಲ್ ವಿದೇಶಕ್ಕೆ ತೆರಳಲು ಜೆಡಿಎಸ್-ಬಿಜೆಪಿ ಸಹಾಯ ಮಾಡಿದೆ. ಬಿಜೆಪಿಯ ಬೇಟಿ ಬಚಾವೋ, ಬೇಟಿ ಪಢಾವೋ ಎಂಬುದು ಇದೇನಾ ಎಂದು ಪ್ರಶ್ನಿಸಿದರು. ಬಿಜೆಪಿಯಾಗಲಿ, ಜೆಡಿಎಸ್ ಆಗಲಿ ಈ ವರೆಗೂ ಪ್ರಜ್ವಲ್ ಮಾಡಿರುವ ಕೆಲಸದ ಬಗ್ಗೆ ತೀವ್ರವಾಗಿ ಖಂಡಿಸಿಲ್ಲ. ಕ್ರಮ ಕೈಗೊಳ್ಳದಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಪ್ರಹ್ಲಾದ ಜೋಶಿ ಉತ್ತರ ನೀಡಲಿ ಎಂದು ಪ್ರಶ್ನಿಸಿದರು. ಇನ್ನು ಮುಂದಾದರೂ ಕೇಂದ್ರ ಸರ್ಕಾರ ಮಹಿಳಾ ವರ್ಗಕ್ಕೆ ಸೂಕ್ತ ರಕ್ಷಣೆ ಕೊಡುವಂತಹ ಕೆಲಸವಾಗಬೇಕಿದೆ ಎಂದು ಆಗ್ರಹಿಸಿದರು.ಫಯಾಜ್‌ಗೆ ಉಗ್ರವಾದ ಶಿಕ್ಷೆ:
ಹುಬ್ಬಳ್ಳಿಯಲ್ಲಿ ನೇಹಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಫಯಾಜ್‌ಗೆ ಉಗ್ರವಾದ ಶಿಕ್ಷೆಯಾಗಬೇಕು. ಈ ರೀತಿಯಾದ ಕೃತ್ಯ ಮುಂದೆ ಜರುಗದಂತೆ ತನಿಖೆ ನಡೆಸಿ, ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.ಶಾಸಕ ಶ್ರೀನಿವಾಸ ಮಾನೆ ಮಾತನಾಡಿ, ಸಂಸದ ಪ್ರಜ್ವಲ್ ರೇವಣ್ಣರನ್ನು ಕೂಡಲೇ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಗಂಟೆಗೂ ಹೆಚ್ಚು ಕಾಲ ನಡೆದ ಪ್ರತಿಭಟನೆಯಲ್ಲಿ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು, ಮಹಿಳೆಯರು ಪಾಲ್ಗೊಂಡಿದ್ದರು. ಪ್ರಜ್ವಲ್ ರೇವಣ್ಣ ಪ್ರತಿಕೃತಿ ದಹಿಸಿ, ಕೆಲಕಾಲ ರಸ್ತೆ ತಡೆ ನಡೆಸಲಾಯಿತು.ಯುಥ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಇಮ್ರಾನ್ ಯಲಿಗಾರ, ಪಾಲಿಕೆ ಪ್ರತಿಪಕ್ಷ ನಾಯಕಿ ಸುವರ್ಣ ಕಲ್ಲಕುಂಟ್ಲಾ, ಪಾಲಿಕೆ ಸದಸ್ಯ ಆರೀಫ ಭದ್ರಾಪುರ, ಸಂತೋಷ ಚಲವಾದಿ, ಮೋಹನ ಅಸುಂಡಿ, ಪ್ರವೀಣ ಶೆಲವಡಿ, ಅಬ್ದುಲ್ ದೇಸಾಯಿ ಸೇರಿದಂತೆ ಹಲವರಿದ್ದರು.