ಜಗತ್ತಿಗೆ ಶಾಂತಿ, ಸಮಾನತೆ ಹಾಗೂ ಮಾನವೀಯತೆಯ ಸಂದೇಶ ಸಾರಿದ ವಿಶ್ವಗುರು ಬಸವಣ್ಣನವರ ಕುರಿತು ವಿವಾದಾತ್ಮಕವಾಗಿ ಬರೆಯುವ ಮೂಲಕ ಪ್ರಚಾರ ಪಡೆಯುವ ಪ್ರವೃತ್ತಿ ಖಂಡನೀಯ
ಕುಷ್ಟಗಿ: ವಿಶ್ವಗುರು ಬಸವಣ್ಣನವರ ಕುರಿತು ಲೇಖಕ ರವಿ ಹಂಜ್ ಅವರು ಬರೆದಿರುವ ಬಸವ ಮಂಟಪ ಕೃತಿಯಲ್ಲಿ ಆಕ್ಷೇಪಾರ್ಹ ವಿಚಾರಗಳನ್ನು ಪ್ರಸ್ತಾಪಿಸಿರುವುದನ್ನು ಖಂಡಿಸಿ, ಲೇಖಕ ರವಿ ಹಂಜ್ ಹಾಗೂ ವೇದಿಕೆ ಕಲ್ಪಿಸಿಕೊಟ್ಟ ಪತ್ರಕರ್ತ ವಿಶ್ವೇಶ್ವರ ಭಟ್ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬಸವಪರ ಸಂಘಟನೆಗಳು ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದವು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸಂಬಂಧಪಟ್ಟವರ ಭಾವಚಿತ್ರಗಳನ್ನು ದಹಿಸಿ ಆಕ್ರೋಶ ಹೊರಹಾಕಿದರು. ಬಳಿಕ ತಹಸೀಲ್ದಾರ್ ಅಶೋಕ ಶಿಗ್ಗಾಂವಿ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ಜಗತ್ತಿಗೆ ಶಾಂತಿ, ಸಮಾನತೆ ಹಾಗೂ ಮಾನವೀಯತೆಯ ಸಂದೇಶ ಸಾರಿದ ವಿಶ್ವಗುರು ಬಸವಣ್ಣನವರ ಕುರಿತು ವಿವಾದಾತ್ಮಕವಾಗಿ ಬರೆಯುವ ಮೂಲಕ ಪ್ರಚಾರ ಪಡೆಯುವ ಪ್ರವೃತ್ತಿ ಖಂಡನೀಯ. ರವಿ ಹಂಜ್ ಅವರು ತಮ್ಮ ಬಸವ ಮಂಟಪ ಕೃತಿಯಲ್ಲಿ ಪ್ರಸ್ತಾಪಿಸಿರುವ ವಿಚಾರಗಳು ಬಸವಾಭಿಮಾನಿಗಳ ಮನಸ್ಸಿಗೆ ನೋವುಂಟು ಮಾಡಿವೆ ಎಂದರು.
ಬಸವಣ್ಣನವರು ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾದವರಲ್ಲ. ಎಲ್ಲ ಸಮುದಾಯಗಳನ್ನೂ ಸಮಾನತೆಯ ತಳಹದಿಯ ಮೇಲೆ ಒಗ್ಗೂಡಿಸಿ ಸಮಾಜ ಕಟ್ಟುವ ಸಂದೇಶ ಸಾರಿದವರು. ಅವರ ವಚನ ಸಾಹಿತ್ಯ ಹಾಗೂ ತತ್ವಾದರ್ಶಗಳು ಇಂದಿಗೂ ಸಮಾಜಕ್ಕೆ ಪ್ರೇರಣೆಯಾಗಿವೆ ಎಂದು ಒತ್ತಾಯಿಸಿದರು.ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪುರ ಮಾತನಾಡಿ ಬಸವಣ್ಣನವರಿಗೆ ಮಾಡಿದ ಅಪಚಾರ ಕೇವಲ ಒಂದು ಸಮಾಜಕ್ಕೆ ಮಾಡಿದ ಅವಮಾನವಲ್ಲ. ಅದು ಮಾನವೀಯ ಮೌಲ್ಯಗಳಿಗೆ ಹಾಗೂ ಜಗತ್ತಿಗೆ ಸಮಾನತೆಯ ಸಂದೇಶ ಸಾರಿದ ಮಹಾನ್ ಚಿಂತನೆಗಳಿಗೆ ಮಾಡಿದ ಅಪಮಾನವಾಗಿದೆ ಎಂದರು.
ಸಂವಿಧಾನ ಜಾರಿಗೆ ಬರುವುದಕ್ಕೂ ಸುಮಾರು 900 ವರ್ಷಗಳ ಹಿಂದೆಯೇ ಬಸವಣ್ಣನವರು ಮಹಿಳೆಯರಿಗೆ ಸಮಾನತೆ, ಸರ್ವರಿಗೂ ಸಮಾನ ಅವಕಾಶ ಹಾಗೂ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಸಾರಿದ್ದರು. ಸರ್ಕಾರ ಕೃತಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದರೂ ರಾಜ್ಯದ ವಿವಿಧೆಡೆ ಇರುವ ಎಲ್ಲ ಪ್ರತಿಗಳನ್ನು ವಶಪಡಿಸಿಕೊಳ್ಳಬೇಕು. ಲೇಖಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ವಿದ್ವಾಂಸರನ್ನೊಳಗೊಂಡ ವಿಶೇಷ ತನಿಖಾ ತಂಡ ರಚಿಸಿ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.ಮಾಜಿ ಶಾಸಕ ಕೆ. ಶರಣಪ್ಪ ವಕೀಲರು ಮಾತನಾಡಿ, ಬಸವಣ್ಣನವರ ಕುರಿತು ಬರೆಯುವವರು ಮೊದಲು ಅವರ ವಚನ ಸಾಹಿತ್ಯವನ್ನು ಸಮಗ್ರವಾಗಿ ಅಧ್ಯಯನ ಮಾಡಬೇಕು. ಬಸವಣ್ಣನವರು ಬಿಜ್ಜಳನ ರಾಜಕೋಶದ ಹಣ ಬಳಸಿ ದಾಸೋಹ ಮಾಡಿದರು ಎಂಬ ಆರೋಪಕ್ಕೆ ಅವರ ವಚನಗಳಲ್ಲಿಯೇ ಸ್ಪಷ್ಟ ಉತ್ತರ ದೊರೆಯುತ್ತದೆ. ದಾಸೋಹಕ್ಕಾಗಿ ಬಿಜ್ಜಳನ ಸಂಪತ್ತನ್ನು ಬಳಸದೆ, ದಾನಿಗಳಿಂದ ಬಂದ ದೇಣಿಗೆಯ ಮೂಲಕ ದಾಸೋಹ ನಡೆಸುತ್ತಿದ್ದುದನ್ನು ವಚನಗಳಲ್ಲಿ ತಿಳಿಸಿದ್ದಾರೆ ಎಂದರು.
ಎಂ.ಎಂ. ಕಲಬುರ್ಗಿ ಅವರ ನೇತೃತ್ವದಲ್ಲಿ ಸಂಪಾದನೆಗೊಂಡ ವಚನ ಸಾಹಿತ್ಯ ಸೇರಿದಂತೆ ಲಭ್ಯವಿರುವ ಮೂಲ ದಾಖಲೆಗಳನ್ನು ಅಧ್ಯಯನ ಮಾಡದೆ, ಇತರರ ಟೀಕೆಗಳನ್ನು ಆಧರಿಸಿ ಬಸವಣ್ಣನವರ ಕುರಿತು ಬರೆಯುವುದು ಸರಿಯಲ್ಲ. ಅವರ ತತ್ವಾದರ್ಶಗಳನ್ನು ಅರಿಯದೆ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಪ್ರಯತ್ನ ಖಂಡನೀಯ. ತಪ್ಪಿತಸ್ಥರ ವಿರುದ್ಧ ಕಾನೂನು ಪ್ರಕ್ರಿಯೆ ಮುಂದುವರಿಸಿ ಸೂಕ್ತ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ ಅವರು ಬಸವಣ್ಣನವರ ಇವನಾರವ, ಇವನಾರವ ಎಂದೆನಿಸದಿರಯ್ಯ ಇವ ನಮ್ಮವ, ಇವ ನಮ್ಮವ ಎಂದೆನಿಸಯ್ಯ ಎಂಬ ಸಮಾನತೆಯ ಸಂದೇಶವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ಟಿ ಬಸವರಾಜ, ಮಹಾದೇವಪ್ಪ ಮಹಾಲಿಂಗಪೂರ, ಶಿವಸಂಗಪ್ಪ ಬಿಜಕಲ್, ಉಮಾಪತಿ ಅಕ್ಕಿ, ಲಾಡ್ಲೇಮಷಾಕ ದೋಟಿಹಾಳ, ಮುರ್ತಜಾ ಪೇಂಟರ್, ಶಶಿಧರ ಕವಲಿ, ಶಿವಾಜಿ ಹಡಪದ್, ವಿರೇಶ ಬಂಗಾರಶೆಟ್ಟರ್, ರಾಮನಗೌಡ ಪಾಟೀಲ್, ದೇವೆಂದ್ರಪ್ಪ ಬಳೂಟಗಿ, ಫಕೀರಪ್ಪ ಚಳಗೇರಿ, ಸಂಗನಗೌಡ ಪಾಟೀಲ್ ಸೇರಿದಂತೆ ಅನೇಕರು ಇದ್ದರು.