ಗದಗದಲ್ಲಿ ಉಪ್ಪು ಮಾರಿ ಬಂಜಾರರ ಆಕ್ರೋಶ

| Published : Oct 17 2025, 01:02 AM IST

ಸಾರಾಂಶ

ಪರಿಶಿಷ್ಟ ಜಾತಿಗಳಲ್ಲಿನ ಅವೈಜ್ಞಾನಿಕ ಒಳಮೀಸಲಾತಿ ವರ್ಗೀಕರಣದ ವಿರುದ್ಧವಾಗಿ ಕರ್ನಾಟಕ ಬಂಜಾರ ಹಕ್ಕು ಸಂರಕ್ಷಣಾ ಸಮಿತಿ ಹಾಗೂ ಜಿಲ್ಲಾ ಬಂಜಾರ ಸಮುದಾಯದ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಬೃಹತ್ ಪ್ರತಿಭಟನೆ ಹಾಗೂ ಅನಿರ್ದಿಷ್ಟಾವಧಿಯ ಅಹೋರಾತ್ರಿ ಧರಣಿಯಲ್ಲಿ ಬಂಜಾರರು ಲವಣ (ಉಪ್ಪು) ಮಾರಿ ಆಕ್ರೋಶ ವ್ಯಕ್ತಪಡಿಸಿದರು.

ಗದಗ: ಪರಿಶಿಷ್ಟ ಜಾತಿಗಳಲ್ಲಿನ ಅವೈಜ್ಞಾನಿಕ ಒಳಮೀಸಲಾತಿ ವರ್ಗೀಕರಣದ ವಿರುದ್ಧವಾಗಿ ಕರ್ನಾಟಕ ಬಂಜಾರ ಹಕ್ಕು ಸಂರಕ್ಷಣಾ ಸಮಿತಿ ಹಾಗೂ ಜಿಲ್ಲಾ ಬಂಜಾರ ಸಮುದಾಯದ ವಿವಿಧ ಸಂಘಟನೆಗಳ ಆಶ್ರಯದಲ್ಲಿ ನಡೆದ ಬೃಹತ್ ಪ್ರತಿಭಟನೆ ಹಾಗೂ ಅನಿರ್ದಿಷ್ಟಾವಧಿಯ ಅಹೋರಾತ್ರಿ ಧರಣಿಯಲ್ಲಿ ಬಂಜಾರರು ಲವಣ (ಉಪ್ಪು) ಮಾರಿ ಆಕ್ರೋಶ ವ್ಯಕ್ತಪಡಿಸಿದರು.ಜಿಲ್ಲೆಯ 72 ತಾಂಡಾಗಳ ಪೈಕಿ ನಿಗದಿತ ವೇಳಾಪಟ್ಟಿಯಂತೆ ಯಲಿಶಿರುಂಜ, ಅತ್ತಿಕಟ್ಟಿ ತಾಂಡಾ, ಬೂದಿಹಾಳ, ಕುಂದ್ರಳ್ಳಿ, ಯಲ್ಲಾಪುರ ತಾಂಡಾ, ನಾಗರಸಕೊಪ್ಪ, ಕಣವಿ ತಾಂಡಾಗಳ ಸಾವಿರಾರು ಬಂಜಾರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.ಪ್ರತಿಭಟನಾಕಾರರು ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಲವಣವನ್ನು (ಉಪ್ಪು) ಎತ್ತಿನಬಂಡಿಯಲ್ಲಿ ತಂದು, ಅಲ್ಲಲ್ಲಿ ಕುಳಿತು ಉಪ್ಪನ್ನು ಮಾರುತ್ತಾ ಬಂಜಾರ ಜನಾಂಗ ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯವೆಂದು ತಮ್ಮ ಹಿಂದಿನ ಕಸಬನ್ನು ಮಾಡುತ್ತಾ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ, ಒಳಮೀಸಲಾತಿ ವರ್ಗೀಕರಣದಲ್ಲಿ ಸರ್ಕಾರ ಬಂಜಾರ ಸಮುದಾಯಕ್ಕೆ ಘೋರ ಅನ್ಯಾಯ ಮಾಡಿದೆ ಎಂದು ಖಂಡಿಸಿದರು.ಕರ್ನಾಟಕ ಬಂಜಾರ ಹಕ್ಕು ಸಂರಕ್ಷಣಾ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕಾಂತ್ ಅಂಗಡಿ ಮಾತನಾಡಿ, ಬಂಜಾರ ಜನಾಂಗ ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿದ್ದು, ಹಿಂದಿನ ಕಾಲದಲ್ಲಿ ಬಂಜಾರ ಜನಾಂಗ ಊರಿಂದ ಊರಿಗೆ ಹೋಗಿ ತಮ್ಮ ಒಂದೊತ್ತಿನ ಚೀಲವನ್ನು ತುಂಬಿಸಲು ಲವಣವನ್ನು ಮಾರಿ ಜೀವನ ಸಾಗಿಸುತ್ತಿದ್ದರು. ಆದರೆ ಸರ್ಕಾರ ಪರಿಶಿಷ್ಟ ಜಾತಿಗಳ ಅವೈಜ್ಞಾನಿಕ ಒಳಮೀಸಲಾತಿ ವರ್ಗೀಕರಣ ಮಾಡಿ ಬಂಜಾರ ಸಮುದಾಯದ ಭವಿಷ್ಯಕ್ಕೆ ಮರಣಶಾಸನ ಬರೆದಿದೆ. ಹಾಗಾಗಿ ಸರ್ಕಾರ ಬಂಜಾರ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಕೂಡಲೇ ಸರಿಪಡಿಸಬೇಕು ಎಂದು ಆಗ್ರಹಿಸಿದರು.ಕೆ.ಸಿ. ನಭಾಪುರ, ಐ.ಎಸ್. ಪೂಜಾರ, ಟಿ.ಡಿ. ಪೂಜಾರ, ಧನುರಾಮ ತಂಬೂರಿ, ಕೃಷ್ಣಪ್ಪ ಲಮಾಣಿ, ಸಂತೋಷ ಪವಾರ, ಆಗ್ರಪ್ಪ ನಾಯಕ, ಚೆನ್ನಪ್ಪ ಕಾರಭಾರಿ, ಶಿವಪ್ಪ ಲಮಾಣಿ, ಶಶಿಕುಮಾರ ಜಾಧವ, ಧನ್ನುರಾಮ ತಂಬೂರಿ, ರಮೇಶ ಪವಾರ, ಕಿರಣ್ ರಾಠೋಡ, ಭೀಮಪ್ಪ ನಾಯಕ, ಭೋಜಪ್ಪ ಲಮಾಣಿ, ವಿಠ್ಠಲ ಕಾರಭಾರಿ, ಹಾಮಜಪ್ಪ ಬಡಿಗೇರ, ಕುಶಾಲ್ ರಾಠೋಡ, ಧಾಮಲಪ್ಪ ನಾಯಕ, ಲಕ್ಷ್ಮಣ ನಾಯಕ, ಪರಮೇಶ್ ಲಮಾಣಿ, ಲಕ್ಷ್ಮಣ ಲಮಾಣಿ, ಭೋಜಪ್ಪ ನಾಯಕ, ದ್ಯಾಮಣ್ಣ ಕಾರಭಾರಿ, ಹರಿಯಪ್ಪ, ಉಮೇಶ ನಾಯಕ, ಪರಮೇಶ ಕಾರಭಾರಿ, ನರಸಪ್ಪ ಡಾವ, ಶೇಖಪ್ಪ ನಾಯಕ, ಗೆಮಪ್ಪ ಕಾರಭಾರಿ, ಗೋವಿಂದ ಲಮಾಣಿ ಇದ್ದರು.