ರಾಜತಾಂತ್ರಿಕ ಕ್ರಮಕ್ಕೆ ಆಗ್ರಹಿಸಿ ಶ್ರೀರಾಮ ಸೇನೆಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಶ್ರೀರಾಮ ಸೇನೆ ವತಿಯಿಂದ ಗುರುವಾರ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮವಿ ಸಲ್ಲಿಸಲಾಯಿತು.

ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಸಿದ ಕಾರ್ಯಕರ್ತರು ಬಾಗ್ಲಾ ದೇಶದಲ್ಲಿ ಹಿಂದೂಗಳ ವಿರುದ್ಧ ಹೆಚ್ಚುತ್ತಿರುವ ದೌರ್ಜನ್ಯಗಳು, ಹತ್ಯೆ, ಧಾರ್ಮಿಕ ಕಿರುಕುಳ ತಡೆಯಲು ತುರ್ತು ರಾಜತಾಂತ್ರಿಕ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಬಾಂಗ್ಲಾದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದಾರೆ. ಅಲ್ಲಿನ ಅಲ್ಪಸಂಖ್ಯಾತರು ದ್ವೇಷಪೂರಿತ ಹಿಂಸಾಚಾರ ಹಲ್ಲೆಗಳು, ಆಸ್ತಿ ನಾಶ ಮತ್ತು ಧಾರ್ಮಿಕ ಕಿರುಕುಳದ ಆತಂಕಕಾರಿ ಮತ್ತು ವ್ಯವಸ್ಥಿತ ಅಲೆಯನ್ನು ಎದುರಿಸುತ್ತಿದ್ದಾರೆ. ಈ ಕೃತ್ಯಗಳು ಪ್ರತ್ಯೇಕ ಘಟನೆಗಳಲ್ಲ. ಬದಲಾಗಿ ನಮ್ಮ ನೆರೆಯ ದೇಶದಲ್ಲಿ ಆಳವಾದ ಮಾನವೀಯ ಮತ್ತು ನೈತಿಕ ಬಿಕ್ಕಟ್ಟನ್ನು ಸೃಷ್ಟಿಸಿರುವ ನಿರಂತರ ಮಾದರಿಯ ಭಾಗವಾಗಿದೆ ಎಂದು ಆರೋಪಿಸಿದರು.

ಈಚೆಗೆ ನಡೆದ ಗುಂಡಿನ ದಾಳಿಯಲ್ಲಿ ಅನ್ವರ್ ಹಾದಿ ಸಾವನ್ನಪ್ಪಿದ್ದು, ಬಾಂಗ್ಲಾದೇಶದ ಕೆಲ ಭಾಗಗಳಲ್ಲಿ ಹಿಂದೂಗಳ ವಿರುದ್ಧ ಸಂಘಟಿತ ಹಿಂಸಾಚಾರಕ್ಕೆ ಕಾರಣವಾಗಿದೆ. ಮೈಮೆನ್ಸಿಂಗ್ ಪ್ರದೇಶದಲ್ಲಿ ಯುವಕ ದೀಪು ಚಂದ್ರದಾಸ್‌ನನ್ನು ಉಗ್ರಗಾಮಿ ಗುಂಪು ಮರಕ್ಕೆ ಕಟ್ಟಿಹಾಕಿ ಸುಟ್ಟು ಹಾಕಿದೆ. ಅದರಂತೆ ಹಿಂದೂ ಯುವಕರ ಹತ್ಯೆ ಮುಂದುವರಿಯತ್ತಿದ್ದು, ಇಂತಹ ಅನಾಗರೀಕ ಕೃತ್ಯಗಳು ಮಾನವ ಹಕ್ಕುಗಳನ್ನು ಉಲ್ಲಂಘಿಸುವುದಲ್ಲದೆ, ಬಾಂಗ್ಲಾದೇಶದ ಹಿಂದೂ ಅಲ್ಪಸಂಖ್ಯಾತರಿಗೆ ರಕ್ಷಣೆ ಇಲ್ಲದಿರುವುದನ್ನು ಬಹಿರಂಗಪಡಿಸುತ್ತವೆ ಎಂದು ಮನವಿಯಲ್ಲಿ ದೂರಲಾಗಿದೆ.

ಜಾಗತಿಕ ಮಾಧ್ಯಮಗಳು ಮತ್ತು ಪ್ರತ್ಯಕ್ಷದರ್ಶಿಗಳ ವರದಿಗಳು ಉದ್ದೇಶಪೂರ್ವಕವಾಗಿ ಹಿಂದೂಗಳ ವ್ಯವಹಾರಗಳನ್ನು ಗುರಿಯಾಗಿಸಲಾಗುತ್ತಿದೆ ಎಂದು ದೃಢಪಡಿಸುತ್ತವೆ. ಹಿಂದೂ ಮನೆಗಳು, ದೇವಾಲಯಗಳಿಗೆ ಬೆಂಕಿ ಹಚ್ಚುವುದು. ಹೆಣ್ಣುಮಕ್ಕಳ ಅಪಹರಣ, ಲೈಂಗಿಕ ದೌರ್ಜನ್ಯ ಮತ್ತು ಬಲವಂತದ ಮತಾಂತರದ ಘಟನೆಗಳು ಪದೇ ಪದೇ ನಡೆಯುತ್ತಿವೆ. ಭಯದ ಮೂಲಕ ಇಡೀ ಹಿಂದೂ ಸಮುದಾಯದ ಧ್ವನಿ ಅಡಗಿಸುವ ಕೆಲಸವನ್ನು ಮತಾಂಧರು ಮಾಡುತ್ತಿದ್ದಾರೆ.

ಬಾಂಗ್ಲಾದೇಶದಲ್ಲಿ ನಡೆದ ಹಿಂದೂ ವಿರೋಧಿ ಹಿಂಸಾಚಾರವನ್ನು ಭಾರತ ತೀವ್ರವಾಗಿ ಖಂಡಿಸಬೇಕು. ನ್ಯಾಯಯುತ ತನಿಖೆಗಳು ಅಪರಾಧಿಗಳಿಗೆ ಶಿಕ್ಷೆ ಮತ್ತು ದೌರ್ಜನ್ಯದಿಂದ ಸಂತ್ರಸ್ತರಾದವರಿಗೆ ಪರಿಹಾರ ನೀಡುವ ಬಗ್ಗೆ ಬಾಂಗ್ಲಾದೇಶ ಸರಕಾರದಿಂದ ಲಿಖಿತ ಭರವಸೆಗಳನ್ನು ಪಡೆಯಬೇಕು. ಅಲ್ಪಸಂಖ್ಯಾತರ ಹಕ್ಕುಗಳು ಮತ್ತು ದೇವಾಲಯ ರಕ್ಷಣೆ ಕುರಿತು ದ್ವಿಪಕ್ಷೀಯ ಒಪ್ಪಂದದ ಜತೆಗೆ ಶಾಶ್ವತ ಜಂಟಿ ಮೇಲ್ವಿಚಾರಣಾ ಸಮಿತಿ ರಚಿಸಬೇಕು ಎಂದು ಆಗ್ರಹಿಸಿದರು.

ಭಾರತ ಪ್ರವೇಶಿಸುವ ಕಿರುಕುಳಕ್ಕೊಳಗಾದ ಹಿಂದೂಗಳಿಗೆ ದೀರ್ಘಾವಧಿಯ ವೀಸಾ, ಪೌರತ್ವ ಅಥವಾ ನಿರಾಶ್ರಿತರ ಪುನರ್ವಸತಿ ಒದಗಿಸಲು ಮಾನವೀಯ ಮತ್ತು ಪಾರದರ್ಶಕ ನೀತಿ ಅಳವಡಿಸಿಕೊಳ್ಳಬೇಕು.

ಒಂದು ವೇಳೆ ದೌರ್ಜನ್ಯಗಳು ಮುಂದುವರಿದರೆ ಭಾರತವು ಬಾಂಗ್ಲಾದೇಶದ ವಿರುದ್ಧ ಆರ್ಥಿಕ, ವ್ಯಾಪಾರ ಅಥವಾ ರಾಜತಾಂತ್ರಿಕ ನಿರ್ಬಂಧಗಳನ್ನು ಹೇರಬೇಕು. ಹಿಂಸಾ ಕಾರ್ಯ ನಡೆಸುತ್ತಿರುವ ಉಗ್ರಗಾಮಿ ಶಕ್ತಿಗಳ ವಿರುದ್ಧ ಕಠಿಣ ನಿಲುವು ತಳೆಯಬೇಕು. ಬಾಂಗ್ಲಾದೇಶದ ನೆರೆಯ ರಾಷ್ಟçವಾದ ಭಾರತವು ಬಾಂಗ್ಲಾ ದೇಶದಲ್ಲಿರುವ ಹಿಂದೂ ಅಲ್ಪಸಂಖ್ಯಾತರ ಹಕ್ಕುಗಳು, ಧಾರ್ಮಿಕ ಸ್ವಾತಂತ್ರö್ಯ ರಕ್ಷಿಸುವ ನಿಟ್ಟಿನಲ್ಲಿ ಕೂಡಲೇ ಮುಂದಾಗಬೇಕೆಂದು ಜಿಲ್ಲಾಧಿಕಾರಿಗೆ ಸಲ್ಲಿಸಲಾದ ಮನವಿಯಲ್ಲಿ ಒತ್ತಾಯಿಸಲಾಗಿದೆ. ಶ್ರೀರಾಮ ಸೇನಾ – ಕರ್ನಾಟಕ ರಾಜ್ಯಾಧ್ಯಕ್ಷ ಸುರೇಶ್‌ಬಾಬು ಈ ವೇಳೆ ಉಪಸ್ಥಿತರಿದ್ದರು.