ದೂರದೃಷ್ಟಿ ಚಿಂತನೆಯಿಲ್ಲದೆ ಬೇಡ್ತಿ-ಅಘನಾಶಿನಿ ತಿರುವು, ಶರಾವತಿ ಪಂಪ್ಡ್ ಸ್ಟೋರೇಜ್‌ನಂಥ ಯೋಜನೆ ಜಾರಿಯಾದಲ್ಲಿ ಅಧಃಪತನ ಖಚಿತ. ಉತ್ತರ ಕನ್ನಡ ಮಾತ್ರವಲ್ಲದೆ, ಬಯಲು ಸೀಮೆ ಸೇರಿ ಇಡೀ ರಾಜ್ಯ ಇದರ ದುಷ್ಪರಿಣಾಮ ಎದುರಿಸಲಿದೆ. ಹೀಗಾಗಿ ಸಂಸದ, ಶಾಸಕರು ಒಟ್ಟಾಗಿ ಕೇಂದ್ರದ ಮೇಲೆ ಈ ಕುರಿತು ಒತ್ತಡ ಹೇರುವ ಕೆಲಸ ಮಾಡಬೇಕಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ದೂರದೃಷ್ಟಿ ಚಿಂತನೆಯಿಲ್ಲದೆ ಬೇಡ್ತಿ-ಅಘನಾಶಿನಿ ತಿರುವು, ಶರಾವತಿ ಪಂಪ್ಡ್ ಸ್ಟೋರೇಜ್‌ನಂಥ ಯೋಜನೆ ಜಾರಿಯಾದಲ್ಲಿ ಅಧಃಪತನ ಖಚಿತ. ಉತ್ತರ ಕನ್ನಡ ಮಾತ್ರವಲ್ಲದೆ, ಬಯಲು ಸೀಮೆ ಸೇರಿ ಇಡೀ ರಾಜ್ಯ ಇದರ ದುಷ್ಪರಿಣಾಮ ಎದುರಿಸಲಿದೆ. ಹೀಗಾಗಿ ಸಂಸದ, ಶಾಸಕರು ಒಟ್ಟಾಗಿ ಕೇಂದ್ರದ ಮೇಲೆ ಈ ಕುರಿತು ಒತ್ತಡ ಹೇರುವ ಕೆಲಸ ಮಾಡಬೇಕಿದೆ...ಇದು ಶನಿವಾರ ನಗರದ ಭಾರತೀಯ ವಿದ್ಯಾಭವನದಲ್ಲಿ ನಡೆದ ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ, ಸ್ವರ್ಣವಲ್ಲೀ ಮಹಾಸಂಸ್ಥಾನದಿಂದ ‘ಪಶ್ಚಿಮ ಘಟ್ಟದಲ್ಲಿ ನದಿತಿರುವು ಯೋಜನೆಗಳು, ಬೇಡ್ತಿ ಅಘನಾಶಿನಿ ಕಣ್ಣೀರು; ಜನಜಾಗೃತಿ ಚಿಂತನ ಮಂಥನ’ ಕಾರ್ಯಕ್ರಮದಲ್ಲಿ ಕೇಳಿ ಬಂದ ಕೂಗು.
ಸೋಂದಾ ಶ್ರೀಸ್ವರ್ಣವಲ್ಲೀ ಮಹಾಸಂಸ್ಥಾನದ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಮಾತನಾಡಿ,‘ ಪಶ್ಚಿಮಘಟ್ಟ ಪ್ರದೇಶ ವ್ಯಾಪ್ತಿಯ ಎಲ್ಲ ಜಿಲ್ಲೆಗಳ ಶಾಸಕ, ಸಂಸದರು ಒಟ್ಟಾಗಿ ಕೇಂದ್ರ ಸರ್ಕಾರದ ಬಳಿ ತೆರಳಿ ಈ ಯೋಜನೆಗಳ ದುಷ್ಟರಿಣಾಮದ ಬಗ್ಗೆ ಮನವರಿಕೆ ಮಾಡಿಕೊಡಬೇಕು ಎಂದರು.ವೈಜ್ಞಾನಿಕ, ದೀರ್ಘಾವಧಿಯ ದೃಷ್ಟಿಕೋನವಿಲ್ಲದ ಯೋಜನೆಗಳು ಅಪಾಯಕ್ಕೆ ಕಾರಣವಾಗುತ್ತವೆ. ಅಭಿವೃದ್ಧಿಯೂ ಪತನವಾಗುತ್ತದೆ. ಉತ್ತರಕನ್ನಡ ಜಿಲ್ಲೆಯು ಯೋಜನೆಗಳಿಗೆ ಸಾಕಷ್ಟು ತ್ಯಾಗ ಮಾಡಿದೆ. ಆದರೆ ಈಗ ಪುನಃ ನಮಗೆ ತ್ಯಾಗದ ಉಪದೇಶ ಮಾಡುತ್ತಾರೆ. ತ್ಯಾಗ ಎಂಬುದು ಉದಾಸೀನತೆ, ನಿರ್ಲಕ್ಷ್ಯತೆ ಹಾಗೂ ಬೇಜವಾಬ್ದಾರಿಯಿಂದ ಕೂಡಿರಬಾರದು ಎಂದು ಹೇಳಿದರು.
ಅವೈಜ್ಞಾನಿಕ ಎತ್ತಿನಹೊಳೆ ಯೋಜನೆಯಿಂದ ಅಲ್ಲಿ ಎತ್ತಲಾಗದ ಹೂಳು ತುಂಬಿದೆ. ಅದನ್ನು ರಿಪೇರಿ ಮಾಡಲೂ ಸಾಧ್ಯವಿಲ್ಲ ಎಂದು ತಜ್ಞರು ಹೇಳುತ್ತಿದ್ದಾರೆ. ಇಂಥ ದುರಂತ ಯೋಜನೆಗಳು ನಮಲ್ಲಿ ಜಾರಿ ಮಾಡಲು ಮುಂದಾಗಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.ಮುಟ್ಟಾಳತನದ ಯೋಜನೆ: ಡಾ.ಉಲ್ಲಾಸ್ ಕಾರಂತ್ ಮಾತನಾಡಿ, ಶರಾವತಿ ಪಂಪ್ಡ್ ಸ್ಟೋರೇಜ್ ಒಂದು ಮುಟ್ಟಾಳತನದ ಯೋಜನೆ. ಪರಿಸರದ ಒಳಿತಿಗೆ ಸುಸ್ಥಿರ ಅಭಿವೃದ್ಧಿ ಎಂಬ ಸೂತ್ರವೇ ಉತ್ತಮ ಎಂದು ಭಾವಿಸಿದ್ದೇವೆ. ಅಂದರೆ ದಟ್ಟ ಅರಣ್ಯವಿದ್ದಲ್ಲೂ ಆ ಪರಿಸರ ಉಳಿಸಿಕೊಂಡೇ ಅಭಿವೃದ್ಧಿ ಮಾಡುತ್ತೇವೆ ಎಂಬ ಮಾತು ಜಾತ್ರೆಯಲ್ಲಿ ಕೇಳಿಬರುವಷ್ಟು ಹಳತು. ಆದರೆ, ಇದನ್ನು ನಾನು ಒಪ್ಪಲ್ಲ. ಬದಲಾಗಿ ಭೂಪ್ರದೇಶ ಅಭಿವೃದ್ಧಿ (ಲ್ಯಾಂಡ್‌ಸ್ಕೇಪ್ ಡೆವಲಪ್‌ಮೆಂಟ್) ಆಗಬೇಕು. ದಟ್ಟಾರಣ್ಯ ಪರಿಸರವನ್ನು ಅದರಂತೆ ಇರಲು ಬಿಡಬೇಕು. ಇನ್ನೊಂದೆಡೆ ಕೃಷಿಗೆ, ವನ್ಯಜೀವಿಗಳಿಗೆ ಮೀಸಲು, ಅಭಿವೃದ್ಧಿಗೆ ಮೀಸಲು ಎಂದು ಗುರುತಿಸಿ ಅಲ್ಲಿ ಕಾರ್ಯ ಮಾಡಬಹುದು ಎಂದು ತಜ್ಞರು ಹೇಳಿದ್ದಾರೆ. ಹೀಗಾಗಿ ಪರಿಸರ ಉಳಿಸಿಕೊಳ್ಳಲು ಈ ಚಿಂತನೆ ಕೀಲಿಕೈ ಆಗಬಹುದು ಎಂದು ಅಭಿಪ್ರಾಯಪಟ್ಟರು.
ವಿಜ್ಞಾನಿ ಡಾ.ಟಿ.ವಿ.ರಾಮಚಂದ್ರ ಮಾತನಾಡಿ, ಉತ್ತರ ಕನ್ನಡದಲ್ಲಿ 70ರ ದಶಕದಲ್ಲಿ ಶೇ. 69ರಷ್ಟಿದ್ದ ನಿತ್ಯ ಹರಿದ್ವರ್ಣ ಕಾಡು ಈಗ ಶೇ.29ಕ್ಕೆ ಇಳಿದಿದೆ. ಅದೇ ರೀತಿ ಆಗ ನದಿಗಳಲ್ಲಿದ್ದ ನೀರಿನ ಪ್ರಮಾಣ ಈಗಿಲ್ಲ. ಜಿಲ್ಲೆಯ ಪರಿಸರ ಮೌಲ್ಯ ಅಗಾಧ. ಒಂದು ವರ್ಷಕ್ಕೆ ₹ 9600 ಕೋಟಿ ಆದಾಯ ಜಿಲ್ಲೆಯಿಂದ ಬರುತ್ತಿದೆ. ಆಮ್ಲಜನಕ ಸೇರ್ಪಡೆ ಮಾಡಿದರೆ ಈ ಮೊತ್ತ ₹ 12 ಸಾವಿರ ಕೋಟಿ, ಕಾಡುಪ್ರಾಣಿಗಳ ಸೇರ್ಪಡೆ ಮಾಡಿದರೆ ₹ 15ಸಾವಿರ ಕೋಟಿಯಾಗುತ್ತದೆ. ಯೋಜನೆಗಳನ್ನು ಜಾರಿಮಾಡಿದಾಗ ಅಲ್ಲೇನು ಹಾನಿಯಾಗುತ್ತದೆ? ಉತ್ತರಕನ್ನಡದ ಜಿಡಿಡಿಪಿ (ಗ್ರಾಸ್ ಡಿಸ್ಟ್ರಿಕ್ಟ್ ಡೊಮೆಸ್ಟಿಕ್ ಪ್ರಾಡಕ್ಟ್) ವರ್ಷಕ್ಕೆ ₹ 5800 ಕೋಟಿಯಷ್ಟಿದೆ. ಅದರಲ್ಲಿ ಕಾಡಿನ ಶೇರಿನ ಪ್ರಮಾಣ ನೋಡಿದಾಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೇವಲ ಕಟ್ಟಿಗೆಯ ಮೌಲ್ಯ ಅಳೆದು ₹180 ಮಾತ್ರವಿದೆ ಎಂದು ಹೇಳಲಾಗುತ್ತಿದೆ. ಅಂದರೆ ಜಿಲ್ಲೆಯ ನೈಸರ್ಗಿಕ ಸಂಪತ್ತನ್ನು ಕಡಿಮೆ ಮೌಲ್ಯಮಾಪನ ಮಾಡಲಾಗುತ್ತಿದೆ ಎಂದರು.ಹಿರಿಯ ವಕೀಲ ಅಶೋಕ್ ಹಾರ್ನಹಳ್ಳಿ ಮಾತನಾಡಿ, ಅಭಿವೃದ್ಧಿಗೆ ಪರಿಸರ ನಾಶ ಮಾಡುವಾಗ ಯೋಜನಾ ಪ್ರದೇಶದಲ್ಲಿ ಲಕ್ಷಗಟ್ಟಲೆ ಮರ ಕಡಿದು ಇನ್ನೊಂದು ಕಡೆ ಮರ ಬೆಳೆಸುತ್ತೇವೆ ಎನ್ನುವುದು ಎಷ್ಟು ಸಮಂಜಸ? ಡಿಪಿಆರ್ ಹಂತದಲ್ಲಿ ಇರುವಾಗಲೇ ಈ ಯೋಜನೆಗಳನ್ನು ತಡೆಯುವ ಕೆಲಸ ಮಾಡಬೇಕು ಎಂದರು.
ಅದಮ್ಯ ಚೇತನ ಸಂಸ್ಥೆ ಮುಖ್ಯಸ್ಥೆ ತೇಜಸ್ವಿನಿ ಅನಂತಕುಮಾರ್, ಪರಿಸರ ಹೋರಾಟಗಾರ ಸುರೇಶ್ ಹೆಬ್ಳೀಕರ್, ನಿವೃತ್ತ ಅರಣ್ಯಾಧಿಕಾರಿ ಎ.ಕೆ.ವರ್ಮಾ ಹಾಗೂ ಯು.ವಿ.ಸಿಂಗ್ ಅವರು ಮಾತನಾಡಿದರು. ಸಮಿತಿಯ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಇದ್ದರು.ಉ.ಕ.ಪರಿಸರ ನಾಶ ದುಷ್ಪರಿಣಾಮ
ರಾಜ್ಯಕ್ಕೆ ತಟ್ಟಲಿದೆ: ಕಾಗೇರಿ ಎಚ್ಚರಿಕೆಪಶ್ಚಿಮಘಟ್ಟ ಬಹಳ ಸೂಕ್ಷ್ಮ ಪ್ರದೇಶ. ಅದನ್ನು ಅರ್ಥಮಾಡಿಕೊಳ್ಳಬೇಕು. ಉತ್ತರನ್ನಡದ ಪರಿಸರದ ಮೇಲಿನ ಪ್ರಹಾರ, ನದಿತಿರುವು ಯೋಜನೆಗಳು ಜಿಲ್ಲೆಗೆ ಮಾತ್ರವಲ್ಲದೆ ರಾಜ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಎಚ್ಚರಿಸಿದರು.
ಈಗಾಗಲೇ ಉತ್ತರ ಕನ್ನಡ ಜಿಲ್ಲೆಯು ಅನೇಕ ತ್ಯಾಗಗಳನ್ನು ಮಾಡಿದೆ. ರಾಜ್ಯ ಮತ್ತು ದೇಶದ ಅಭಿವೃದ್ಧಿಗೆ ತ್ಯಾಗ ಮಾಡಿ, ಏನೆಲ್ಲವನ್ನು ಕೊಡಬೇಕೋ ಅದನ್ನು ಕೊಟ್ಟಿದ್ದೇವೆ. ಅದರಿಂದ, ಈಗಾಗಲೇ ಸಾಕಷ್ಟು ಭಾರವನ್ನು, ಸಮಸ್ಯೆಗಳನ್ನು ಅನುಭವಿಸುತ್ತಿದ್ದೇನೆ ಎಂದರು.ಪಶ್ಚಿಮಘಟ್ಟದಲ್ಲಿನ ನದಿತಿರುವು ಯೋಜನೆಗೆ ಇನ್ನೂ ಹೆಚ್ಚಿನ ತಜ್ಞ ಅಧ್ಯಯನ, ವರದಿಗಳು ಬೇಕು. ವ್ಯವಸ್ಥಿತ ಧಾರಣಾ ಸಾಮರ್ಥ್ಯದ ವರದಿ ಆಗಬೇಕು. ಯೋಜನೆಗಳಿಗೆ ಸಂಬಂಧಿಸಿ, ಸಭೆಯಲ್ಲಿ ತೆಗೆದುಕೊಳ್ಳುವ ಎಲ್ಲ ನಿರ್ಣಯಗಳಿಗೂ ನಾನು ಬದ್ಧ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಮಟ್ಟದಲ್ಲಿ ಯೋಜನೆಗಳನ್ನು ಕೈಬಿಡುವಂತೆ ಆಗ್ರಹಿಸಿ, ರಚನಾತ್ಮಕವಾಗಿ ಕೆಲಸ ಮಾಡುತ್ತೇವೆ. ನಿಮ್ಮೊಂದಿಗೆ ಇದ್ದು, ನನ್ನ ಪಾತ್ರ ನಾನು ನಿರ್ವಹಿಸುತ್ತೇನೆ’ಎಂದು ಭರವಸೆ ನೀಡಿದರು.