ಕಾರ್ಯಕ್ರಮಕ್ಕೆ ಆಹ್ವಾನ ನೀಡದ್ದಕ್ಕೆ ಆಕ್ರೋಶ

| Published : Dec 16 2024, 12:48 AM IST

ಸಾರಾಂಶ

ಪಟ್ಟಣದ ಅರಣ್ಯ ಇಲಾಖೆ ಕಚೇರಿ ಜಾಗದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ವಲಯ ಅರಣ್ಯಾಧಿಕಾರಿ ಕಚೇರಿ ಕಟ್ಟಡ ಉದ್ಘಾಟನೆಗೆ ಸ್ಥಳೀಯ ಜನಪ್ರತಿನಿಧಿಗಳಿಗೆ ಆಹ್ವಾನ ನೀಡಿಲ್ಲ ಎಂದು ಜನಪ್ರತಿನಿಧಿಗಳು ಆಕ್ರೋಶ ವ್ಯಕ್ತಪಡಿಸಿ ಶಾಸಕರನ್ನು ಕಾರ್ಯಕ್ರಮಕ್ಕೆ ತೆರಳದಂತೆ ತಡೆದ ಘಟನೆ ಭಾನುವಾರ ನಡೆಯಿತು.

ಕನ್ನಡಪ್ರಭ ವಾರ್ತೆ ಬಾಳೆಹೊನ್ನೂರು

ಪಟ್ಟಣದ ಅರಣ್ಯ ಇಲಾಖೆ ಕಚೇರಿ ಜಾಗದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ವಲಯ ಅರಣ್ಯಾಧಿಕಾರಿ ಕಚೇರಿ ಕಟ್ಟಡ ಉದ್ಘಾಟನೆಗೆ ಸ್ಥಳೀಯ ಜನಪ್ರತಿನಿಧಿಗಳಿಗೆ ಆಹ್ವಾನ ನೀಡಿಲ್ಲ ಎಂದು ಜನಪ್ರತಿನಿಧಿಗಳು ಆಕ್ರೋಶ ವ್ಯಕ್ತಪಡಿಸಿ ಶಾಸಕರನ್ನು ಕಾರ್ಯಕ್ರಮಕ್ಕೆ ತೆರಳದಂತೆ ತಡೆದ ಘಟನೆ ಭಾನುವಾರ ನಡೆಯಿತು.

ಪಟ್ಟಣದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ವಲಯ ಅರಣ್ಯಾಧಿಕಾರಿ ಕಚೇರಿ ಉದ್ಘಾಟನೆಗೆ ಭಾನುವಾರ ನಿಗದಿಯಾಗಿತ್ತು. ಅರಣ್ಯ ಸಚಿವ ಈಶ್ವರ್ ಖಂಡ್ರೆ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್, ಶಾಸಕ ಟಿ.ಡಿ. ರಾಜೇಗೌಡ ರಂಭಾಪುರಿ ಪೀಠದಲ್ಲಿ ನಡೆದ ಕಾರ್ಯಕ್ರಮ ಮುಗಿಸಿಕೊಂಡು ಪಟ್ಟಣಕ್ಕೆ ಆಗಮಿಸಿದ್ದರು.ಕಾರ್ಯಕ್ರಮಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಸೇರಿದಂತೆ ಯಾವುದೇ ಮುಖಂಡರಿಗೆ ಮಾಹಿತಿ ನೀಡದೇ ಬೇಕಾಬಿಟ್ಟಿ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ಅರಣ್ಯ ಇಲಾಖೆ ಕಚೇರಿ ಮುಂಭಾಗದಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಜಮಾವಣೆಗೊಂಡಿದ್ದರು.ಸ್ಥಳಕ್ಕೆ ಸಚಿವರು ಹಾಗೂ ಶಾಸಕರು ಬರುತ್ತಿದ್ದಂತೆ ಕಾರನ್ನು ಅಡ್ಡಗಟ್ಟಿದ್ದ ಅವರು, ಮುಖಂಡರು ಶಾಸಕರನ್ನು ಸ್ಥಳದಲ್ಲಿ ಕೆಳಗಿಳಿಸಿ ಮುತ್ತಿಗೆ ಹಾಕಿ ಕಾರ್ಯಕ್ರಮಕ್ಕೆ ನಮಗೆ ಆಹ್ವಾನ ನೀಡಿಲ್ಲ, ನೀವು ಕಾರ್ಯಕ್ರಮಕ್ಕೆ ತೆರಳಬೇಡಿ ಎಂದು ಆಗ್ರಹಿಸಿದರು. ಸ್ಥಳದಲ್ಲಿ ಅರಣ್ಯ ಇಲಾಖೆಯ ಡಿಎಫ್‌ಓ, ಎಸಿಎಫ್, ಆರ್‌ಎಫ್‌ಓ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದರು.ಶಾಸಕರು ಸ್ಥಳದಲ್ಲಿದ್ದವರನ್ನು ಸಮಾಧಾನಪಡಿಸಲು ಯತ್ನಿಸಿದರು. ಆದರೆ ಸಮಾಧಾನಗೊಳ್ಳದ ಜನಪ್ರತಿನಿಧಿಗಳು, ಮುಖಂಡರು ರಾಜೇಗೌಡ್ರೇ ನಾವು ಬೇಕು ಅಂದ್ರೆ ಕಾರ್ಯಕ್ರಮಕ್ಕೆ ಹೋಗ್ಬೇಡಿ. ಬೇಡ ಅಂದ್ರೆ ಹೋಗಿ ಎಂದು ಖಡಕ್ಕಾಗಿ ಉತ್ತರಿಸಿದರು. ಬಳಿಕ ಘಟನೆ ಅರಣ್ಯ ಸಚಿವರ ಗಮನಕ್ಕೆ ಬರುತ್ತಿದ್ದಂತೆ ಡಿಎಫ್‌ಓ ಅವರನ್ನು ಕರೆದು ಮುಂದೆ ಹೀಗಾಗದಂತೆ ಎಚ್ಚರ ವಹಿಸಿ. ಯಾವುದೇ ಸರ್ಕಾರಿ ಕಾರ್ಯಕ್ರಮಗಳಿದ್ದರೂ ಗ್ರಾಪಂ ಅಧ್ಯಕ್ಷರು, ಸದಸ್ಯರು ಜನಪ್ರತಿನಿಧಿಗಳನ್ನು ಕರೆಯುವುದು ಕರ್ತವ್ಯ. ಇಂತಹ ಘಟನೆ ಪುನಾರವರ್ತನೆಯಾದರೆ ನಿಮ್ಮ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.ನಂತರ ನೂತನ ಕಟ್ಟಡವನ್ನು ಸಚಿವ ಈಶ್ವರ್ ಖಂಡ್ರೆ ಉದ್ಘಾಟಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್, ಶಾಸಕ ಟಿ.ಡಿ. ರಾಜೇಗೌಡ, ಎಚ್.ಡಿ. ತಮ್ಮಯ್ಯ, ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಮ್ ಅಮಟೆ, ಬಿ. ಕಣಬೂರು ಗ್ರಾಪಂ ಅಧ್ಯಕ್ಷ ರವಿಚಂದ್ರ, ಡಿಎಫ್‌ಓ ನಂದೀಶ್, ಎಸಿಎಫ್ ಮೋಹನ್‌ಕುಮಾರ್, ಆರ್‌ಎಫ್‌ಓ ಎಂ.ಸಂದೀಪ್ ಮತ್ತಿತರರು ಹಾಜರಿದ್ದರು.

ಜನವಸತಿ ಪ್ರದೇಶಕ್ಕೆ ಡೀಮ್ಡ್ ಅರಣ್ಯ ಪರಿಗಣನೆಯಿಲ್ಲ

ಜನರು ಮನೆ ಕಟ್ಟಿಕೊಂಡು ವಾಸವಿರುವ ಜನವಸತಿ ಪ್ರದೇಶಕ್ಕೆ ಡೀಮ್ಡ್ ಅರಣ್ಯವನ್ನು ಪರಿಗಣನೆ ಮಾಡುವುದಿಲ್ಲ ಎಂದು ಅರಣ್ಯ ಸಚಿವ ಈಶ್ವರ್ ಬಿ. ಖಂಡ್ರೆ ತಿಳಿಸಿದರು. ಈಗಾಗಲೇ ಹಲವು ವರ್ಷಗಳಿಂದ ಇರುವ ಸಮಸ್ಯೆಯ ಬಗ್ಗೆ ಅಧ್ಯಯನಕ್ಕೆ ಹೊಸ ಸಮಿತಿಯನ್ನು ರಚಿಸಲು ಹೇಳಲಾಗಿದ್ದು, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಹೊಸ ಸಮಿತಿ ರಚನೆ ಆಗಲಿದೆ ಎಂದು ಪಟ್ಟಣದಲ್ಲಿ ಅಹವಾಲು ನೀಡಿದ ಸಾರ್ವಜನಿಕರಿಗೆ ತಿಳಿಸಿದರು. ಪ್ರಾದೇಶಿಕ ಅಧ್ಯಕ್ಷರ ನೇತೃತ್ವ, ರಾಜ್ಯಮಟ್ಟ ಹಾಗೂ ಜಿಲ್ಲಾಮಟ್ಟದಲ್ಲಿ ಒಟ್ಟು ಮೂರು ಕಡೆಗಳಲ್ಲಿ ಟಾಸ್ಕ್ ಪೋರ್ಸ್ ಸಮಿತಿ ರಚನೆಯಾಗಲಿದ್ದು, ಮೂರು ಕಡೆ ಸಮಿತಿ ರಚನೆಗೊಂಡ ಆರು ತಿಂಗಳಲ್ಲಿ ಸರ್ವೆ ಮಾಡಲಾಗುವುದು. ಈ ಸರ್ವೆಯಲ್ಲಿ ಡೀಮ್ಡ್ ಅರಣ್ಯದಿಂದ ಯಾವುದನ್ನು ಬಿಡಬೇಕೋ ಅದನ್ನು ಬಿಡಲಾಗುವುದು ಎಂದು ತಿಳಿಸಿದ್ದಾರೆ. ಸೆಕ್ಷನ್ 4 ಆಗುವುದಕ್ಕಿಂತ ಮೊದಲು ಅರಣ್ಯ ಅಥವಾ ಕಂದಾಯ ಭೂಮಿ ಎಂದು ಇತ್ತೋ ಅದನ್ನು 94ಸಿಯಲ್ಲಿ ಹಕ್ಕುಪತ್ರ ನೀಡಲು ಪರಿಗಣಿಸಲಾಗುತ್ತಿದೆ. ಸೆಕ್ಷನ್ 4 ಆದ ನಂತರ ನಾವು ಏನು ಮಾಡಿದರೂ ಅದನ್ನು ಕೋರ್ಟ್ ಒಪ್ಪುವುದಿಲ್ಲ. ಅದರ ಹಕ್ಕು ನೀಡಲು ಸಾಧ್ಯವಿಲ್ಲ ಎಂದರು.