ದೊಡ್ಡಬಳ್ಳಾಪುರ: ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ 4 ಕಾರ್ಮಿಕ ಸಂಹಿತೆಗಳ ಅನುಷ್ಠಾನಕ್ಕೆ ಪ್ರಕಟಿಸಿರುವ ನಿಯಮಾವಳಿಗಳ ಅಧಿಸೂಚನೆ ಪ್ರತಿಯನ್ನು ಸುಡುವ ಮೂಲಕ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಿಐಟಿಯು ನೇತೃತ್ವದಲ್ಲಿ ದೊಡ್ಡಬಳ್ಳಾಪುರದ ತಾಲೂಕು ಕಚೇರಿ ವೃತ್ತದಲ್ಲಿ ಮಂಗಳವಾರ ಸಂಜೆ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಎ.ವೆಂಕಟೇಶ್‌, ಪ್ರಜಾಪ್ರಭುತ್ವ ಮೌಲ್ಯಗಳನ್ನು ಗಾಳಿಗೆ ತೂರಿ ಕಾರ್ಮಿಕ ಸಂಹಿತೆಗಳ ಅನುಷ್ಠಾನಕ್ಕೆ ತರುವ ಅಂತಿಮ ಪ್ರಕಟಣೆಯನ್ನು ಕೇಂದ್ರದ ಎನ್‌ಡಿಎ ಸರ್ಕಾರ ಹೊರಡಿಸಿರುವುದು ಶ್ರಮಿಕ ವರ್ಗದ ಮರಣಶಾಸನವಾಗಿದೆ. ಈ ಸಂಹಿತೆಗಳಿಗೆ ಕೇಂದ್ರ ಸರ್ಕಾರ ಪ್ರಕಟಿಸಿದ ಕರಡು ನಿಯಮಾವಳಿಗಳಿಗೆ ಕಾರ್ಮಿಕ ಸಂಘಟನೆಗಳು ಹಾಗು ಸಿಐಟಿಯು ಸಂಘಟನೆ ಸಲ್ಲಿಸಿದ ಯಾವುದೇ ಆಕ್ಷೇಪಣೆಗಳನ್ನು ಪರಿಗಣಿಸದೆ, ಅಧಿಸೂಚನೆ ಹೊರಡಿಸಲಾಗಿದೆ. ದೇಶಾದ್ಯಂತ ಈ ವಿಚಾರದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆಗಳೇ ನಡೆದರೂ ಕೇಂದ್ರ ತನ್ನ ಪೂರ್ವಾಗ್ರಹಪೀಡಿತ ನೀತಿಯನ್ನು ಕೈಬಿಡುವ ಮನಸ್ಸು ಮಾಡಿಲ್ಲ ಎಂದು ಆರೋಪಿಸಿದರು.

ದೇಶದ ಕಾರ್ಮಿಕ ವರ್ಗವು ನಿರಂತರವಾಗಿ ಪ್ರತಿರೋಧವನ್ನು ವ್ಯಕ್ತಪಡಿಸುತ್ತಿದ್ದರೂ, ದೇಶದ ದುಡಿಯುವ ಜನರ ಅಭಿಪ್ರಾಯಗಳನ್ನು ತಿರಸ್ಕರಿಸಿ, ವಿದೇಶಿ ಹಾಗು ಸ್ವದೇಶಿ ಕಾರ್ಪೊರೇಟ್ ಬಂಡವಾಳಿಗರ ಅನುಕೂಲಕ್ಕಾಗಿ ಈ ನಾಲ್ಕು ಸಂಹಿತೆಗಳನ್ನು ಜಾರಿಗೆ ತರಲಾಗಿದೆ. ಸರ್ಕಾರವು ಹಠಮಾರಿ ಧೋರಣೆಯೊಂದಿಗೆ, ಜಾರಿಗೊಳಿಸುತ್ತಿರುವ ಈ ಕಾನೂನುಗಳು ಅತ್ಯಂತ ದೇಶದ್ರೋಹಿ ಕ್ರಮವಾಗಿವೆ ಎಂದು ಟೀಕಿಸಿದರು.

ಹಲವಾರು ದಶಕಗಳಿಂದ ಹೋರಾಟಗಳ ಮೂಲಕ ಗಳಿಸಲಾದ ಕಾರ್ಮಿಕರ ಮೂಲಭೂತ ಹಕ್ಕುಗಳನ್ನು ಹಾಗು ಸವಲತ್ತುಗಳನ್ನು ನಾಶಮಾಡುವ ಕ್ರಮ ಇದಾಗಿದೆ. ಬಂಡವಾಳಿಗರು ಮಾಡುತ್ತಿದ್ದ ಎಲ್ಲಾ ಕಾನೂನು ಉಲ್ಲಂಘನೆಗಳನ್ನು ಕಾನೂನು ಬದ್ಧಗೊಳಿಸುವುದಲ್ಲದೆ, ಖಾಯಂ ಉದ್ಯೋಗದ ಅವಕಾಶಗಳೇ ಭಾರತೀಯ ಯುವ ಪೀಳಿಗೆಗಳಿಗೆ ಇಲ್ಲದಂತೆ ಮಾಡುವ ಕ್ರಮವಾಗಿದೆ. ನವ ಗುಲಾಮಗಿರಿಗೆ ಹಾಲಿ ಹಾಗು ಭಾವಿ ಕಾರ್ಮಿರನ್ನು ಒಳಪಡಿಸುವ ಕುತಂತ್ರವಾಗಿದೆ ಎಂದರು.

ಸಿಐಟಿಯು ಸಂಘಟನೆಯು ಈ ಸಂಹಿತೆಗಳನ್ನು ಕಾರ್ಮಿಕರ ಜೀವನ ಮತ್ತು ಜೀವನೋಪಾಯಗಳ ಮೇಲಿನ ನರಮೇಧದ ದಾಳಿಗಳೆಂದು ಪರಿಗಣಿಸುತ್ತದೆ. ಇವು ಕಾರ್ಮಿಕರ ಮೇಲೆ ಗುಲಾಮಗಿರಿಯನ್ನು ಹೇರುವುದು ಮಾತ್ರವಲ್ಲದೇ, ಕಾರ್ಮಿಕರ ಪ್ರತಿಯೊಂದು ಹಕ್ಕು ಹಾಗು ಪ್ರತಿಭಟಿಸುವ ಅವಕಾಶಗಳನ್ನು ಕಸಿದುಕೊಳ್ಳುತ್ತವೆ ಎಂದರು.


ಸಿಐಟಿಯು ಅಖಿಲ ಭಾರತ ಸಮಿತಿಯು ನೀಡಿರುವ ಕರೆಯ ಅನ್ವಯ "ಈ ಕೂಡಲೇ ಮಂಗಳವಾರ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಹಾಗು ಕೆಲಸದ ಸ್ಥಳಗಳಲ್ಲಿ ನಿಯಮಾವಳಿಗಳ ಪ್ರತಿಗಳನ್ನು ಸಾಮೂಹಿಕವಾಗಿ ಸುಡುವ ಮೂಲಕ ಪ್ರತಿಭಟಿಸಲಾಗುತ್ತಿದೆ ಎಂದರು.

ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ತಾಲೂಕು ಕಾರ್ಯದರ್ಶಿ ಎಲ್.ಸಿ.ಸುಮಾ, ಕಾರ್ಮಿಕ ಮುಖಂಡರಾದ ಮನೀಶ್ ಶರ್ಮ,ಪಿ.ಕೆ. ವೆಂಕಟೇಶ್, ಬೀದಿ ಬದಿ ವ್ಯಾಪಾರಿಗಳ ಸಂಘದ ಮುಖಂಡ ನರೇಶ್ ಕುಮಾರ್, ಆಟೋರಿಕ್ಷಾ ಡ್ರೈವರ್ಸ್ ಯೂನಿಯನ್‌ನ ಏಜಾಜ್ ಪಾಷಾ ಮತ್ತಿತರರು ಪಾಲ್ಗೊಂಡಿದ್ದರು.

ಫೋಟೋ-

12ಕೆಡಿಬಿಪಿ1- ದೊಡ್ಡಬಳ್ಳಾಪುರದಲ್ಲಿ ಬೆಂ.ಗ್ರಾ ಜಿಲ್ಲಾ ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕ ಸಂಹಿತೆಗಳ ನಿಯಮಾವಳಿಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಯಿತು.