ಮಹಾನಗರ ಪಾಲಿಕೆಯ ಚಿಟಗುಪ್ಪಿ ಆಸ್ಪತ್ರೆ ಬಡವರ ಸಂಜೀವಿನಿಯಾಗಿದೆ. ಆಸ್ಪತ್ರೆಗೆ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ರೋಗಿಗಳು ಆಗಮಿಸಿ, ಚಿಕಿತ್ಸೆ ಪಡೆಯುತ್ತಿದ್ದಾರೆ. ಸಣ್ಣ-ಪುಟ್ಟ ಹಾಗೂ ಗಂಭೀರ ಕಾಯಿಲೆಗಳಿಗೆ ಚಿಕಿತ್ಸೆ ಮತ್ತು ಶಸ್ತ್ರ ಚಿಕಿತ್ಸೆ ಮಾಡಿ ಗುಣಪಡಿಸಲಾಗುತ್ತಿದೆ.
ಹುಬ್ಬಳ್ಳಿ:
ಹು-ಧಾ ಮಹಾನಗರ ಪಾಲಿಕೆಯ ವೈದ್ಯಾಧಿಕಾರಿ ಹುದ್ದೆಯನ್ನು ಸರ್ಕಾರ ರದ್ದುಗೊಳಿಸಿರುವುದನ್ನು ಖಂಡಿಸಿ ಕರ್ನಾಟಕ ದಲಿತ ವಿಮೋಚನಾ ಸಮಿತಿಯ ಹುಬ್ಬಳ್ಳಿ ಶಹರ ಸಮಿತಿ ವತಿಯಿಂದ ಇಲ್ಲಿನ ಮಹಾನಗರ ಪಾಲಿಕೆ ಆಯುಕ್ತರ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಯಿತು.ಸ್ಟ್ರೇಚರ್ ಮೇಲೆ ಪೇಶೆಂಟ್ ಮಲಗಿಸಿದಂತೆ, ವ್ಹೀಲ್ ಚೇರ್ ಮೇಲೆ ಮತ್ತೊಬ್ಬ ರೋಗಿಯನ್ನು ಕರೆದುಕೊಂಡು ಬಂದು ವೈದ್ಯಾಧಿಕಾರಿ ಹುದ್ದೆ ರದ್ದುಪಡಿಸಿದರೆ ಏನೆಲ್ಲ ಸಮಸ್ಯೆ ಎದುರಾಗುತ್ತದೆ ಎಂಬುದನ್ನು ಅಣಕು ಪ್ರದರ್ಶಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಮಹಾನಗರ ಪಾಲಿಕೆಯ ಚಿಟಗುಪ್ಪಿ ಆಸ್ಪತ್ರೆ ಬಡವರ ಸಂಜೀವಿನಿಯಾಗಿದೆ. ಆಸ್ಪತ್ರೆಗೆ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ರೋಗಿಗಳು ಆಗಮಿಸಿ, ಚಿಕಿತ್ಸೆ ಪಡೆಯುತ್ತಿದ್ದಾರೆ. ಸಣ್ಣ-ಪುಟ್ಟ ಹಾಗೂ ಗಂಭೀರ ಕಾಯಿಲೆಗಳಿಗೆ ಚಿಕಿತ್ಸೆ ಮತ್ತು ಶಸ್ತ್ರ ಚಿಕಿತ್ಸೆ ಮಾಡಿ ಗುಣಪಡಿಸಲಾಗುತ್ತಿದೆ. ಜನಸ್ನೇಹಿ ಹಾಗೂ ಬಡವರಿಗೆ ಅನುಕೂಲಕರವಾದ ಈ ಆಸ್ಪತ್ರೆಯ ವೈದ್ಯಾಧಿಕಾರಿಯ ಹುದ್ದೆಯನ್ನು ಸರ್ಕಾರ ರದ್ದು ಮಾಡಿದ್ದು ಸರಿಯಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.ಸರ್ಕಾರ ಬಡವರ ಜೀವ ಉಳಿಸುವ ಆಸ್ಪತ್ರೆಯಲ್ಲಿ ವೈದ್ಯರು ಇಲ್ಲದಂತೆ ಮಾಡುತ್ತಿದೆ. ಸಾವಿರಾರು ರೋಗಿಗಳಿಗೆ ಆರೋಗ್ಯ ಸೇವೆ ನೀಡುತ್ತಿರುವ ಚಿಟಗುಪ್ಪಿ ಆಸ್ಪತ್ರೆಯನ್ನು ಸರ್ಕಾರ ನಿರ್ಜಿವ ಮಾಡಹೊರಟಿರುವುದು ಖಂಡನೀಯ ಎಂದರು.ಸರ್ಕಾರ ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿ ಹುದ್ದೆ ರದ್ದುಪಡಿಸಿ, ಕಾರ್ಯಪಾಲಕ ಎಂಜಿನಿಯರ್ (ಪರಿಸರ)ನನ್ನು ನೇಮಕ ಮಾಡುತ್ತಿರುವುದು ಸರಿಯಲ್ಲ. ಆರೋಗ್ಯ ಕ್ಷೇತ್ರದಲ್ಲಿ ಯಾವುದೇ ಅನುಭವ ಹಾಗೂ ಜ್ಞಾನ ಇಲ್ಲದವರನ್ನು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಆಸ್ಪತ್ರೆಯ ಜವಾಬ್ದಾರಿ ನೀಡುತ್ತಿರುವುದು ದುರಂತದ ಸಂಗತಿ. ಕೂಡಲೇ ಸರ್ಕಾರ ಮತ್ತು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ, ಮೊದಲಿನಂತೆಯೇ ಆರೋಗ್ಯಾಧಿಕಾರಿ ಹುದ್ದೆ ಮುಂದುವರಿಸಿಕೊಂಡು ಹೋಗಬೇಕು. ಇಲ್ಲದೇ ಹೋದಲ್ಲಿ ಸದ್ಯದಲ್ಲೇ ಪಾಲಿಕೆ ಆಯುಕ್ತರ ಕಚೇರಿಯ ವಿರುದ್ಧ ಉಗ್ರ ಪ್ರತಿಭಟನೆ ನಡೆಸಿ, ಸರ್ಕಾರಕ್ಕೆ ಬಿಸಿ ಮುಟ್ಟಿಸಲಾಗುವುದು ಎಂದು ಎಚ್ಚರಿಸಿದರು.
ನಂತರ ಮನವಿಯನ್ನು ಪಾಲಿಕೆ ಆಯುಕ್ತರ ಮೂಲಕ ಸರ್ಕಾರಕ್ಕೆ ಹಾಗೂ ನಗರಾಭಿವೃದ್ಧಿ ಇಲಾಖೆ ಸಚಿವರಿಗೆ ಸಲ್ಲಿಸಲಾಯಿತು. ಸಂಘಟನೆಯ ಹು-ಧಾ ಶಹರ ಅಧ್ಯಕ್ಷ ಶ್ರೀಧರ ಕಂದಗಲ್, ಗುರುನಾಥ ವಾಗ್ಮೋಡೆ, ನಿಖಿಲ ಪವಾರ, ವೈಭವ, ಮಂಜುನಾಥ ಕಟಗೆಣ್ಣವರ, ಕೋಟೇಶ ಬುಳ್ಳಾಪುರ, ಶಿವರಾಜ ಮಾದರ, ಮಹ್ಮದ್ ಬಂಡೆ, ವಿರೂಪಾಕ್ಷ ಚಲವಾದಿ, ಇಜಾಜ್, ಶಶಿಕಿರಣ ವೆಲ್ಲೂರು ಸೇರಿದಂತೆ ಅನೇಕರಿದ್ದರು.