ಹೆಚ್ಚಿದ ಕಲ್ಲು ಗಣಿಗಾರಿಕೆಗೆ ಉಕ್ಕಿದ ಆಕ್ರೋಶ

| Published : Dec 24 2024, 12:45 AM IST

ಸಾರಾಂಶ

ಕ್ರಷರ್ ಲಾರಿಗಳಿಂದ ಜಂಪೇನಹಳ್ಳಿಯಿಂದ ತೋವಿನಕೆರೆ ವರೆಗೆ ರಸ್ತೆಗಳು ಸಂಪೂರ್ಣ ಹಾಳಾಗಿದ್ದನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶಟ್ಟಿ ಬಣ) ವತಿಯಿಂದ ಜಂಪೇನಹಳ್ಳಿ ಕೈಮರದಲ್ಲಿ ಸೋಮವಾರ ಲಾರಿ ತಡೆದು ಪ್ರತಿಭಟನೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಕೊರಟಗೆರೆ

ಕ್ರಷರ್ ಲಾರಿಗಳಿಂದ ಜಂಪೇನಹಳ್ಳಿಯಿಂದ ತೋವಿನಕೆರೆ ವರೆಗೆ ರಸ್ತೆಗಳು ಸಂಪೂರ್ಣ ಹಾಳಾಗಿದ್ದನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶಟ್ಟಿ ಬಣ) ವತಿಯಿಂದ ಜಂಪೇನಹಳ್ಳಿ ಕೈಮರದಲ್ಲಿ ಸೋಮವಾರ ಲಾರಿ ತಡೆದು ಪ್ರತಿಭಟನೆ ಮಾಡಲಾಯಿತು. ತಾಲೂಕಿನ ಸಿ.ಎನ್.ದುರ್ಗ ಹೋಬಳಿಯ ಜಂಪೇನಹಳ್ಳಿ ಕೈ ಮರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶಟ್ಟಿ ಬಣ)ದಿಂದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕಾರ್ಯಕರ್ತರು, ಕೈ ಮರದಿಂದ ತೋವಿನಕೆರೆಯವರೆಗೂ ಕ್ರಷರ್ ಲಾರಿಗಳ ಹಾವಳಿಯಿಂದ ರಸ್ತೆ ಸಂಪೂರ್ಣ ಹಾಳಾಗಿದ್ದು, ಎಷ್ಟು ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ವೇದಿಕೆ ತಾಲೂಕು ಅಧ್ಯಕ್ಷ ಹರೀಶ್ ಮಾತನಾಡಿ ಸಿ. ಎನ್.ದುರ್ಗಾ ಹೋಬಳಿಯಲ್ಲಿ ಸುಮಾರು ೬ಕ್ಕೂ ಹೆಚ್ಚು ಕಲ್ಲು ಗಣಿಗಾರಿಕೆ ಮಾಡಲಾಗುತ್ತಿದ್ದು, ಗಣಿಗಾರಿಕೆಯಿಂದ ಅಕ್ಕಪಕ್ಕದ ಗ್ರಾಮಗಳಲ್ಲಿರುವ ಮಕ್ಕಳು ವೃದ್ಧರಿಗೆ ಕಾಯಿಲೆಗಳು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಲ್ಲು ತುಂಬಿಕೊಂಡು ಹೋಗುವ ಲಾರಿಗಳು ರಸ್ತೆಯಲ್ಲಿ ಸಂಚಾರ ಮಾಡುವ ಪಾದಚಾರಿಗಳ ಮೇಲೆ ಏರಿ ಬರುವಂತೆ ವಾಹನ ಚಲಾಯಿಸುತ್ತಾರೆ. ಪ್ರತಿನಿತ್ಯ ನೂರಾರು ಲಾರಿಗಳು ಸಂಚಾರ ಮಾಡುತ್ತಿರುವುದರಿಂದ ರಸ್ತೆಗಳು ಗುಂಡಿ ಬಿದ್ದು, ರಸ್ತೆ ಸಂಪೂರ್ಣ ಹಾಳಾಗಿದೆ ಎಂದು ಕ್ರಷರ್ ಮಾಲೀಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಂಘದ ಉಪಾಧ್ಯಕ್ಷ ಶ್ರೀನಿವಾಸ್ ಮಾತನಾಡಿ ಕೊರಟಗೆರೆ ತಾಲೂಕಿನಲ್ಲಿ ಅತಿ ಹೆಚ್ಚು ಕ್ರಷರ್ ಪ್ರಾರಂಭವಾಗಿವೆ. ಕ್ರಷರ್ ಹಾವಳಿಯಿಂದಾಗಿ ವಿಪರೀತ ಧೂಳು ಹಾಗೂ ಶಬ್ದ ಮಾಲಿನ್ಯ ಹೆಚ್ಚಾಗಿ ಕಣ್ಣು, ಹಾಗೂ ಕಿವಿಗಳು ಕೇಳಿಸಿದಂತೆ ಆಗಿವೆ. ಇಲ್ಲಿಗೆ ವಾಯು ಮಾಲಿನ್ಯ ಅಧಿಕಾರಿಗಳು, ಆರ್‌ಟಿಒ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಯಾರು ಕೂಡ ಬರುವುದಿಲ್ಲ, ಅದರಿಂದ ಇಲ್ಲಿ ಸಾರ್ವಜನಿಕರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ದೂರಿದರು. ಪ್ರತಿಭಟನೆಯಲ್ಲಿ ಉಪಾಧ್ಯಕ್ಷ ನರಸಿಂಹರಾಜು ,ಪದಾಧಿಕಾರಿಗಳಾದ ರವಿಕುಮಾರ್, ಶ್ರೀನಿವಾಸ್, ಕೃಷ್ಣಮೂರ್ತಿ, ನರಸಿಂಹರಾಜು, ನಟರಾಜು, ವೀರಕ್ಯಾತಯ್ಯ, ರಮೇಶ್, ಪುಟ್ಟರಾಜು, ಮಲ್ಲೇಶ್, ಕಿರಣ್, ಲೋಕೇಶ್, ಪುಟ್ಟಶಾಮಯ್ಯ, ನರಸಿಂಹಮೂರ್ತಿ, ಸುರೇಶ್, ಗಂಗರಾಜು, ನಾಗೇಶ್, ಸೇರಿದಂತೆ ಇತರರು ಇದ್ದರು.

(ಚಿತ್ರ ಇದೆ)೨೩ ಕೊರಟಗೆರೆ ಚಿತ್ರ ೦೨;- ಕೊರಟಗೆರೆ ತಾಲೂಕಿನ ಜಂಪೇನಹಳ್ಳಿ ಕೈಮರದಲ್ಲಿ ರಸ್ತೆಗಳು ಸಂಪೂರ್ಣ ಹಾಳಾಗಿದ್ದನ್ನ ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶಟ್ಟಿ ಬಣ) ಲಾರಿ ತಡೆದು ಪ್ರತಿಭಟನೆ.