ರಾಮನಗರ: ರಾಜ್ಯ ಸರ್ಕಾರದ ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಜಾರಿ ವಿರೋಧಿಸಿ ಎಐಡಿಎಸ್ ಒ ವಿದ್ಯಾರ್ಥಿ ಸಂಘಟನೆ ಆಯೋಜಿಸಿದ್ದ ವಿದ್ಯಾರ್ಥಿ - ಪೋಷಕರ ಪ್ರತಿಭಟನಾ ಸಮಾವೇಶದಲ್ಲಿ ಆ ಯೋಜನೆಯ ನಡವಳಿಯನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಲಾಯಿತು.

ನಗರದ ಹಳೇ ಬಸ್ ನಿಲ್ದಾಣದಲ್ಲಿ ನಡೆದ ಸಮಾವೇಶದಲ್ಲಿ ಅತಿಥಿಗಳು ಹಾಗೂ ವಿದ್ಯಾರ್ಥಿಗಳು ಕೆಪಿಎಸ್ ಮ್ಯಾಗ್ನೆಟ್ ಯೋಜನೆಯ ನಡವಳಿಗೆ ಬೆಂಕಿ ಹಚ್ಚಿದರಲ್ಲದೆ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ನಮ್ಮೂರ ಶಾಲೆ ಉಳಿಸುವಂತೆ ಆಗ್ರಹ ಪಡಿಸಿದರು.

ಸಮಾವೇಶದಲ್ಲಿ ರೈತಸಂಘ ಮುಖಂಡ ಸಿ.ಪುಟ್ಟಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ 1 ಸಾವಿರ ಸೇರಿದಂತೆ ರಾಜ್ಯಾದ್ಯಂತ 40 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ರಾಜ್ಯ ಸರ್ಕಾರ ಕೊಲ್ಲುವ ಹುನ್ನಾರ ಮಾಡಿದೆ. ಬಡವರಿಗಾಗಿ ಇರುವ ಸರ್ಕಾರಿ ಶಾಲೆಗಳನ್ನು ಕೊಲ್ಲುವ ಕೆಪಿಎಸ್ ಮ್ಯಾಗ್ನೆಟ್ ಯೋಜನೆಯನ್ನೂ ಸುಟ್ಟು ಬೂದಿ ಮಾಡಬೇಕು. ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ಎಲ್ಲರೂ ಭಾಗಿಯಾಗಬೇಕು ಎಂದು ಕರೆ ನೀಡಿದರು.

ಯಾವುದೇ ನೀತಿಯನ್ನು ಜಾರಿಗೆ ತರುವ ಮುನ್ನ ಗ್ರಾಮಸ್ಥರ ಸಭೆ ಮತ್ತು ಮಕ್ಕಳ ಗ್ರಾಮ ಸಭೆ ನಡೆಯಬೇಕು. ಆದರೆ , ಕೆಪಿಎಸ್ ಮ್ಯಾಗ್ನೆಟ್ ಯೋಜನೆಯನ್ನು ತರುವ ಮುನ್ನ ಇದ್ಯಾವುದನ್ನು ಪಾಲಿಸಿಲ್ಲ. ರೈತರ ಆತ್ಮಹತ್ಯೆಗಳು ಹೆಚ್ಚುತ್ತಿರುವ ಕಾಲದಲ್ಲಿ, ಬಡವರಿಗೆ ಸಾಲ ಮಾಡಿ ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳಿಸಲು ಸಾಧ್ಯವೇ. ಸರ್ಕಾರಿ ಶಾಲೆಗಳನ್ನು ಮುಚ್ಚುವುದು ದೇಶದ್ರೋಹದ ಕೆಲಸ ಎಂದು ಕಿಡಿಕಾರಿದರು.

ಎಐಡಿಎಸ್ ಒ ವಿದ್ಯಾರ್ಥಿ ಸಂಘಟನೆಯ ಬೆಂಗಳೂರು ಜಿಲ್ಲಾ ಕಾರ್ಯದರ್ಶಿ ಕಲ್ಯಾಣ್ ಕುಮಾರ್ ಮಾತನಾಡಿ, ಬಡ ಮಕ್ಕಳಿಂದ ಶಿಕ್ಷಣವನ್ನೇ ಕಸಿದುಕೊಂಡರೆ, ಪ್ರಶ್ನೆ ಮಾಡುವ ಹಕ್ಕನ್ನೇ ಕಸಿದುಕೊಂಡಂತೆ. ನಮ್ಮ ಸರ್ಕಾರಗಳೇ ಖಾಸಗಿ ಕಂಪನಿಗಳಿಗೆ ಖಾಸಗಿ ಶಾಲೆಗಳನ್ನು ತೆರೆಯಲು ಅನುಮತಿ ಕೊಟ್ಟು, ಬೇಕೆಂದೇ ಸರ್ಕಾರಿ ಶಾಲೆಗಳಿಗೆ ಸೌಲಭ್ಯಗಳನ್ನು ಕೊಡುತ್ತಿಲ್ಲ., 70 ಸಾವಿರ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಿಲ್ಲ. ಹೀಗಿದ್ದರೂ ಪೋಷಕರೇ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳಿಸುವುದಿಲ್ಲ ಎನ್ನುವ ಟೊಳ್ಳು ಅಭಿಪ್ರಾಯವನ್ನು ಹಬ್ಬಿಸುತ್ತಿವೆ ಎಂದು ಟೀಕಿಸಿದರು.


ಶಿಕ್ಷಣ ಸಚಿವರು ಸದನದಲ್ಲಿ "ಒಂದೇ ಒಂದು ಸರಕಾರಿ ಶಾಲೆಯನ್ನು ಮುಚ್ಚುವುದಿಲ್ಲ " ಎಂದು ಹೇಳಿ, ಈಗ ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಜಾರಿಗೆ ತರುತ್ತಿದ್ದಾರೆ. ಸಾರ್ವಜನಿಕ ಶಿಕ್ಷಣವನ್ನು ಉಳಿಸಲು, ಕೆಪಿಎಸ್ ಮ್ಯಾಗ್ನೆಟ್ ಯೋಜನೆಯನ್ನು ರದ್ದುಗೊಳಿಸಲು ಒಂದು ಸಭೆಯೊ- ಸಮಾವೇಶವೋ ಸಾಲುವುದಿಲ್ಲ. ಪ್ರತಿ ಹಳ್ಳಿಗಳಲ್ಲಿ ಸಾರ್ವಜನಿಕ ಶಿಕ್ಷಣ ಉಳಿಸಿ ಜನ ಸಮಿತಿಗಳನ್ನು ರಚಿಸಿ ಈ ಹೋರಾಟವನ್ನು ಬಲಿಷ್ಠವಾಗಿ ಕಟ್ಟಬೇಕಾಗಿದೆ ಎಂದು ಹೇಳಿದರು.

ಎಐಡಿಎಸ್ ಒ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಎಂ.ಕೆ.ತುಳಜಾರಾಮ್ ಪ್ರತೀ ಗ್ರಾಮಪಂಚಾಯತಿಗೆ ಒಂದು ಮ್ಯಾಗ್ನೆಟ್ ಶಾಲೆ ಮಾಡುತ್ತೇವೆ ಎಂದು ಹೇಳಿ, ಇದೀಗ 6000 ಮ್ಯಾಗ್ನೆಟ್ ಶಾಲೆಗಳನ್ನು ನಿರ್ಮಿಸಿ, 40,000 ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ವಿಲೀನದ ಹೆಸರಿನಲ್ಲಿ ಮುಚ್ಚುತ್ತಿದ್ದಾರೆ. ಈ ಮ್ಯಾಗ್ನೆಟ್ ಶಾಲೆಗಳಿಗೆ ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ (ಎಡಿಬಿ) ಯಿಂದ 2,500 ಕೋಟಿ ಸಾಲ ಪಡೆದಿರುವಾ ರಾಜ್ಯ ಸರ್ಕಾರ, ಇದುವರೆಗೆ ಅದರ ಷರತ್ತುಗಳನ್ನು ಗೌಪ್ಯವಾಗಿರಿಸಿದೆ ಏಕೆಂದು ಪ್ರಶ್ನಿಸಿದರು.

ಮ್ಯಾಗ್ನೆಟ್ ಶಾಲೆಗಳನ್ನು ನಡೆಸಲು ಖಾಸಗಿ ಕಂಪನಿಗಳಿಗೆ ಮುಕ್ತ ಅವಕಾಶ ನೀಡಿವೆ. ಚನ್ನಪಟ್ಟಣದ ಹೊಂಗನೂರಿನ ಶಾಲೆಯು ಸರ್ಕಾರದ್ದಲ್ಲ, ಬದಲಿಗೆ ಅದನ್ನು ಕಟ್ಟಿರುವುದು ಕಣ್ವ ಫೌಂಡೇಶನ್ ಎಂಬ ಖಾಸಗಿ ಕಂಪನಿ. ನಮ್ಮೂರ ಶಾಲೆಗಳಿಗೆ ನಮ್ಮ ತೆರಿಗೆ ಹಣವು ಸಾಕಾಗುತ್ತಿಲ್ಲವೇ. ಹಾಗಾದರೆ ರಾಜ್ಯ ಸರ್ಕಾರವು ನಮ್ಮ ತೆರಿಗೆ ಹಣದಲ್ಲಿ ನಡೆಸಬೇಕಾದ ಸರ್ಕಾರಿ ಶಾಲೆಗಳನ್ನು ಹಾರಜು ಹಾಕಲು ಹೊರಟಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಎಸ್ ಡಿಎಂಸಿ ಅಧ್ಯಕ್ಷ ಎನ್. ಎಂ. ಶಂಭು ಗೌಡ, ಸಂಘಟನೆ ಮಾಜಿ ಅಧ್ಯಕ್ಷ ಎಂ.ಎನ್.ಶ್ರೀರಾಮ್ , ಎಐಯುಟಿಯುಸಿ ರಾಜ್ಯ ಕಾರ್ಮಿಕ ಮುಖಂಡ ಟಿ.ಸಿ.ರಮಾ, ಎಐಎಂಎಸ್ ಎಸ್ ರಾಜ್ಯ ಮಹಿಳಾ ಮುಖಂಡರಾದ ಎ.ಸಾಂತ, ಯುವ ಮುಖಂಡರಾದ ವಿನಯ್ ಸಾರಥಿ, ಎಸ್ ಡಿಎಂಸಿಸಿಎಫ್ ಅಧ್ಯಕ್ಷ ಉಮೇಶ್ ಜಿ .ಗಂಗವಾಡಿ ಮತ್ತಿತರರು ಉಪಸ್ಥಿತರಿದ್ದರು.

1ಕೆಆರ್ ಎಂಎನ್ 5.ಜೆಪಿಪಿ

ರಾಮನಗರದ ಹಳೇ ಬಸ್ ನಿಲ್ದಾಣದಲ್ಲಿ ರಾಜ್ಯ ಸರ್ಕಾರದ ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಜಾರಿ ವಿರೋಧಿಸಿ ಎಐಡಿಎಸ್ ಒ ವಿದ್ಯಾರ್ಥಿ ಸಂಘಟನೆ ಆಯೋಜಿಸಿದ್ದ ವಿದ್ಯಾರ್ಥಿ - ಪೋಷಕರ ಪ್ರತಿಭಟನಾ ಸಮಾವೇಶದಲ್ಲಿ ನಡವಳಿಯನ್ನು ಸುಡಲಾಯಿತು.