ರಾಜ್ಯದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ (ಪೀರ್ಕಾಡ್) ಬ್ಯಾಂಕುಗಳಿಗೆ ವಾರ್ಷಿಕ ₹20 ಲಕ್ಷ ಮೇಲ್ಪಟ್ಟ ವಹಿವಾಟಿಗೆ ಜಿಎಸ್‌ಟಿ ನೋಂದಣಿ ಹಾಗೂ ರಿಟರ್ನ್ ಫೈಲಿಂಗ್ ಕಡ್ಡಾಯಗೊಳಿಸಿರುವ ಸುತ್ತೋಲೆಗೆ ಜಗಳೂರಿನ ವಾಲ್ಮೀಕಿ ಭವನದಲ್ಲಿ ನಡೆದ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.
ಕನ್ನಡಪ್ರಭ ವಾರ್ತೆ ಜಗಳೂರು
ರಾಜ್ಯದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ (ಪೀರ್ಕಾಡ್) ಬ್ಯಾಂಕುಗಳಿಗೆ ವಾರ್ಷಿಕ ₹20 ಲಕ್ಷ ಮೇಲ್ಪಟ್ಟ ವಹಿವಾಟಿಗೆ ಜಿಎಸ್‌ಟಿ ನೋಂದಣಿ ಹಾಗೂ ರಿಟರ್ನ್ ಫೈಲಿಂಗ್ ಕಡ್ಡಾಯಗೊಳಿಸಿರುವ ಸುತ್ತೋಲೆಗೆ ಜಗಳೂರಿನ ವಾಲ್ಮೀಕಿ ಭವನದಲ್ಲಿ ನಡೆದ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.ಮಹಾಸಭೆಯಲ್ಲಿ ಬ್ಯಾಂಕ್ ಅಧ್ಯಕ್ಷ ಕೆ.ತಿಮ್ಮರಾಯಪ್ಪ ಕಾರ್ಯಕ್ರಮ ಉದ್ಘಾಟಿಸಿ, ಹೊಸ ಜಿಎಸ್‌ಟಿ ನಿಯಮದಿಂದ ರಾಜ್ಯದ ಎಲ್ಲ ಪಿಎಲ್‌ಡಿ ಬ್ಯಾಂಕುಗಳ ಮೇಲೆ ಭಾರಿ ಆರ್ಥಿಕ ಹೊರೆ ಬೀಳಲಿದೆ. ಈ ನಿರ್ಧಾರವನ್ನು ತಕ್ಷಣ ಹಿಂಪಡೆಯುವಂತೆ ಸಹಕಾರ ಸಚಿವ ಲಕ್ಷ್ಮಣ ಸವದಿ ಹಾಗೂ ಕೇಂದ್ರ ಸಹಕಾರ ಸಚಿವ ಅಮಿತ್ ಷಾ ಅವರಿಗೆ ಮನವಿ ಸಲ್ಲಿಸಲು ಒಕ್ಕೊರಲ ನಿರ್ಣಯ ಕೈಗೊಳ್ಳಲಾಯಿತು.
₹4.80 ಕೋಟಿ ಠೇವಣಿ: ಬ್ಯಾಂಕ್ ವ್ಯವಸ್ಥಾಪಕ ಟಿ.ಎನ್.ನಾಗಭೂಷಣ್ ವಾರ್ಷಿಕ ಜಮಾ-ಖರ್ಚು ವಿವರ ಮಂಡಿಸಿ, ಬ್ಯಾಂಕಿನಲ್ಲಿ ಪ್ರಸ್ತುತ ಒಟ್ಟು ₹4.80 ಕೋಟಿ ಠೇವಣಿಗಳಿವೆ. ಪ್ರಸಕ್ತ ಸಾಲಿನ ಮಾರ್ಚ್ ಅಂತ್ಯಕ್ಕೆ ₹96.26 ಲಕ್ಷ ಬ್ಯಾಂಕ್‌ನಲ್ಲಿ ಲಭ್ಯವಿದೆ. ಬ್ಯಾಂಕಿನಿಂದ ಸಾಲ ಪಡೆದ 44 ಸದಸ್ಯರು ಸುಸ್ತಿದಾರರಾಗಿದ್ದಾರೆ. ಸಾಲ ಪಡೆದ ಸದಸ್ಯರು ಬಡ್ಡಿ ಸಮೇತ ಬಾಕಿ ತೀರಿಸಿದರೆ ಮಾತ್ರ ಬ್ಯಾಂಕ್ ಮತ್ತಷ್ಟು ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.ರೈತರ ನೆರವಿಗೆ ಧಾವಿಸಲು ಆಗ್ರಹ: ಮಾಜಿ ಅಧ್ಯಕ್ಷೆ ಜಿ.ಎಸ್.ವೀಣಾ ಗೋಗುದ್ದುರಾಜು ಮಾತನಾಡಿ, ಪ್ರಸ್ತುತ ಬರಗಾಲದ ಸ್ಥಿತಿಯಿಂದ ಕೃಷಿಕರ ಬದುಕು ಅಯೋಮಯವಾಗಿದೆ. ಸಾಲ ಪಡೆದ ರೈತರ ಸ್ಥಿತಿ ಶೋಚನೀಯವಾಗಿದೆ. ಸರ್ಕಾರ ತಕ್ಷಣವೇ ಸೂಕ್ತ ಪರಿಹಾರ ಕ್ರಮ ಕೈಗೊಂಡು ರೈತರ ನೆರವಿಗೆ ಬರಬೇಕು ಎಂದು ಒತ್ತಾಯಿಸಿದರು.
ಮಹಾಸಭೆಯಲ್ಲಿ ಉಪಾಧ್ಯಕ್ಷೆ ದ್ಯಾಮಕ್ಕ, ನಿರ್ದೇಶಕ ಎನ್.ಎಂ.ಹಾಲಸ್ವಾಮಿ, ನಿರ್ದೇಶಕರಾದ ರಾಘವೇಂದ್ರ ಎನ್., ವಾಮದೇವಪ್ಪ ಯು.ಜಿ., ನರೇಂದ್ರಬಾಬು, ಎಂ.ಟಿ. ಧನಂಜಯ ರೆಡ್ಡಿ, ಜೆ.ಶ್ರೀನಿವಾಸ, ಸಣ್ಣ ಸೂರಯ್ಯ, ಹಾಲೇಕಲ್ಲು ಲೋಕೇಶ್, ಚೌಡಮ್ಮ, ರಾಘವೇಂದ್ರ ಸಿ.ಟಿ., ಚಂದ್ರಪ್ಪ ಸೇರಿದಂತೆ 1,000ಕ್ಕೂ ಹೆಚ್ಚು ಸದಸ್ಯರು ಭಾಗವಹಿಸಿದ್ದರು.