ಕೆರಗೋಡು ಪ್ರಕರಣದಲ್ಲಿ ರಾಜ್ಯ ಸರ್ಕಾರದ ನಡೆಗೆ ಆಕ್ರೋಶ

| Published : Jan 30 2024, 02:01 AM IST

ಸಾರಾಂಶ

ಮಂಡ್ಯ ಜಿಲ್ಲೆ ಕೆರಗೋಡಿನಲ್ಲಿ ಹನುಮಾನ್ ಧ್ವಜ ಕೆಳಗಿಳಿಸಿ ಸಮಸ್ತ ಹಿಂದೂಗಳಿಗೆ ಅಪಮಾನ ಮಾಡಲಾಗಿದೆ ಎಂದು ಆರೋಪಿಸಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಸೋಮವಾರ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.ನಗರದ ಬಿಜೆಪಿ ಕಚೇರಿಯಿಂದ ಮೆರವಣಿಗೆಯಲ್ಲಿ ಬಂದ ಪ್ರತಿಭನಾಕಾರರು ಒನಕೆ ಓಬವ್ವ ವೃತ್ತದಲ್ಲಿ ಸಭೆ ಮಾಡಿ ರಾಜ್ಯ ಸರ್ಕಾರದ ನಡೆ ಖಂಡಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ದೂರಿದರು.

ಚಿತ್ರದುರ್ಗ: ಮಂಡ್ಯ ಜಿಲ್ಲೆ ಕೆರಗೋಡಿನಲ್ಲಿ ಹನುಮಾನ್ ಧ್ವಜ ಕೆಳಗಿಳಿಸಿ ಸಮಸ್ತ ಹಿಂದೂಗಳಿಗೆ ಅಪಮಾನ ಮಾಡಲಾಗಿದೆ ಎಂದು ಆರೋಪಿಸಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಸೋಮವಾರ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ನಗರದ ಬಿಜೆಪಿ ಕಚೇರಿಯಿಂದ ಮೆರವಣಿಗೆಯಲ್ಲಿ ಬಂದ ಪ್ರತಿಭನಾಕಾರರು ಒನಕೆ ಓಬವ್ವ ವೃತ್ತದಲ್ಲಿ ಸಭೆ ಮಾಡಿ ರಾಜ್ಯ ಸರ್ಕಾರದ ನಡೆ ಖಂಡಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ದೂರಿದರು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಚಾಲಕ ಎಸ್.ಲಿಂಗಮೂರ್ತಿ ಪೊಲೀಸರ ಬಲದಿಂದ ಕಾಂಗ್ರೆಸ್ ಸರ್ಕಾರ ಕೆರಗೋಡಿನಲ್ಲಿ ಹನುಮ ಧ್ವಜವನ್ನು ಇಳಿಸಿ ಹಿಂದೂಗಳ ಭಾವನೆಗೆ ಧಕ್ಕೆ ತಂದಿದೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೇರ ಹೊಣೆಗಾರರು. ಧರ್ಮ ಬಿಟ್ಟು ಯಾರು ಬದುಕಲು ಸಾಧ್ಯವಿಲ್ಲ. ರಾಮ, ಆಂಜನೇಯ ಇಲ್ಲದ ಊರುಗಳೇ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟಿಸಿ ಇಡೀ ಪ್ರಪಂಚ ಭಾರತದತ್ತ ನೋಡುವಂತೆ ಮಾಡಿದ್ದಾರೆ ಎಂದರು.

ಹಿಂದೂಗಳಲ್ಲಿ ಧಾರ್ಮಿಕ ಭಾವನೆಗಳು ಪ್ರಜ್ವಲಿಸುತ್ತಿರುವುದು ನೋಡಿ ಸಹಿಸಿಕೊಳ್ಳಲು ಕಾಂಗ್ರೆಸ್ಸಿಗೆ ಆಗುತ್ತಿಲ್ಲ. ಇದಕ್ಕಾಗಿ ಕಾರಣಗಳ ಹುಡುಕಿಕೊಂಡ ಹಿಂದೂ ಸಂಘಟನೆಗಳ ಚಟುವಟಿಕೆ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ ಕೆರಗೋಡು ಘಟನೆ ಇನ್ನೆಲ್ಲಿಯೂ ನಡೆಬಾರದು. ಶೋಷಿತರ ಹೆಸರಲ್ಲಿ ಭಾನುವಾರ ಚಿತ್ರದುರ್ಗದಲ್ಲಿ ಜನಜಾಗೃತಿ ನಡೆಸಿರುವುದು ಚುನಾವಣೆ ಗಿಮಿಕ್ ಎಂದು ವ್ಯಂಗ್ಯವಾಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ ಮಾತನಾಡಿ, ಮಂಡ್ಯ ಜಿಲ್ಲೆ ಕೆರಗೋಡಿನಲ್ಲಿ ಹನುಮನ ಧ್ವಜ ಇಳಿಸಿ ಅಶಾಂತಿಯನ್ನುಂಟು ಮಾಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ತುರ್ತು ಪರಿಸ್ಥಿತಿ ನಿರ್ಮಾಣ ಮಾಡಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದಲೂ ಹಿಂದೂಗಳ ಮೇಲೆ ದೌರ್ಜನ್ಯವೆಸಗುತ್ತಿದೆ. ಕೆರಗೋಡಿನಲ್ಲಿ ಗ್ರಾಮ ಪಂಚಾಯಿತಿ ಅನುಮೋದನೆ ಪಡೆದು ಹನುಮ ಧ್ವಜವನ್ನು ನಿರ್ಮಿಸಲಾಗಿತ್ತು. ಪೊಲೀಸರ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿರುವ ಕಾಂಗ್ರೆಸ್ ಹನುಮ ಧ್ವಜವನ್ನು ಇಳಿಸಿದೆ ಎಂದರು.

ಹಳೆ ಕೇಸ್‌ ಅನ್ನು ಕೆದಕಿ ಹುಬ್ಬಳ್ಳಿಯಲ್ಲಿ ಶ್ರೀಕಾಂತ್ ಪೂಜಾರಿಯನ್ನು ಬಂಧಿಸಲಾಗಿತ್ತು. ಈಗಿನ ವಿರೋಧ ಪಕ್ಷದ ನಾಯಕ ಆರ್.ಅಶೋಕ್‍ ಅವರನ್ನು ಒಂಬತ್ತು ತಿಂಗಳಲ್ಲಿ ಮೂರು ಬಾರಿ ಬಂಧಿಸಲಾಗಿತ್ತು. ಕಾಂಗ್ರೆಸ್ ದೌರ್ಜನ್ಯಕ್ಕೆ ಹಿಂದೂ ಸಮಾಜ ಜಗ್ಗಲ್ಲ. ಹತ್ತಿಕ್ಕಲುಯತ್ನಿಸಿದಷ್ಟೂ ಪುಟಿದೇಳುತ್ತದೆ. ಪೊಲೀಸರೇ ಖುದ್ದು ಆಸಕ್ತಿವಹಿಸಿ ಕೆರಗೋಡಿನಲ್ಲಿ ಹನುಮಾನ್ ಧ್ವಜವನ್ನು ಮತ್ತೆ ಪುನರ್ ಪ್ರತಿಷ್ಠಾಪಿಸಬೇಕು. ಇಲ್ಲವಾದರೆ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಸಿದರು.

ಬಿಜೆಪಿ ಯುವ ಮುಖಂಡ ಡಾ.ಸಿದ್ದಾರ್ಥ, ಎನ್.ಆರ್ ಲಕ್ಷ್ಮಿಕಾಂತ್, ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಜಿ.ಟಿ.ಸುರೇಶ್ ಸಿದ್ದಾಪುರ, ಸೂರನಹಳ್ಳಿ ವಿಜಯಣ್ಣ, ನಗರಾಧ್ಯಕ್ಷ ನವೀನ್ ಚಾಲುಕ್ಯ, ಗ್ರಾಮಾಂತರ ಅಧ್ಯಕ್ಷ ಕಲ್ಲೇಶಯ್ಯ, ನರೇಂದ್ರ ಹೊನ್ನಾಳ್, ನಾಗರಾಜ್‍ಬೇದ್ರೆ, ರಾಮರೆಡ್ಡಿ, ಡಾ.ಮಂಜುನಾಥ್, ಶೈಲೇಶ್, ಪಾಲಯ್ಯ, ವೆಂಕಟೇಶ್‍ ಯಾದವ್, ಮಲ್ಲಿಕಾರ್ಜುನ್, ಶ್ಯಾಮಲ ಶಿವಪ್ರಕಾಶ್, ಶೈಲಜಾರೆಡ್ಡಿ, ಮಂಜುಳಮ್ಮ, ಕವನ, ಬಸಮ್ಮ, ದಗ್ಗೆಶಿವಪ್ರಕಾಶ್, ಕಾಂಚನ, ಶಂಭು, ತಿಪ್ಪೇಸ್ವಾಮಿ, ರೂಪ ಸುರೇಶ್, ತಿಪ್ಪೇಸ್ವಾಮಿ, ಸಂಪತ್ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.