ಸಾರಿಗೆ ಸಿಬ್ಬಂದಿ ಬೇಜವಾಬ್ದಾರಿಗೆ ಆಕ್ರೋಶ

| Published : Jan 18 2025, 12:46 AM IST

ಸಾರಾಂಶ

ಪ್ರಯಾಣಿಕರ ಜೀವದ ಬಗ್ಗೆ ಕಾಳಜಿ ಇಲ್ಲದಂತಾಗಿದೆ. ಮೇಲಿಂದ ಮೇಲೆ ಬಸ್‌ಗಳ ನಟ್‌ ಬೋಲ್ಟ್ ಉಚ್ಚಿ ಬೀಳುತ್ತಿರುವ ಘಟನೆಗಳು ಆಗುತ್ತಿದ್ದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಿಲ್ಲ

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ಸಾರಿಗೆ ಸಂಸ್ಥೆಯ ವಾಹನ ಚಾಲಕರು, ನಿರ್ವಾಹಕರು ಪ್ರಯಾಣಿಕರೊಂದಿಗೆ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಇವರಿಗೆ ಹೇಳುವವರು, ಕೇಳುವವರು ಇಲ್ಲದಂತಾಗಿದೆ. ವಾಹನ ನಿಲುಗಡೆ ಸ್ಥಳದಲ್ಲಿ ವಾಹನಗಳನ್ನು ನಿಲ್ಲಿಸುತ್ತಿಲ್ಲ ಎಂದು ನಾಗರಿಕರು ಸಾರಿಗೆ ಘಟಕದ ಚಾಲಕ, ನಿರ್ವಾಹಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಟ್ಟಣದ ಬಸ್ ಘಟಕದಲ್ಲಿ ಬಸ್ ಅವ್ಯವಸ್ಥೆಯ ಬಗ್ಗೆ ಬಸ್ ಘಟಕದ ವ್ಯವಸ್ಥಾಪಕಿ ವಿದ್ಯಾ ನಾಯಕ್ ಅವರಿಗೆ ಪಟ್ಟಣದ ನಾಗರಿಕರು ಮನವಿ ಸಲ್ಲಿಸಿ ಮಾತನಾಡಿ, ಡಿಪೋದಿಂದ ಬಸ್ ಹೊರಗಡೆ ಬಿಡುವಾಗ ಬಸ್‌ಗಳನ್ನು ಸರಿಯಾಗಿ ಪರಿಶೀಲನೆ ಮಾಡುತ್ತಿಲ್ಲ. ಇದರಿಂದ ಪದೇ ಪದೇ ಬಸ್‌ಗಳು ಕೆಟ್ಟು ನಿಲ್ಲುತ್ತಿವೆ. ಇದು ಪ್ರಯಾಣಿಕರ ಜೀವದ ಬಗ್ಗೆ ಕಾಳಜಿ ಇಲ್ಲದಂತಾಗಿದೆ. ಮೇಲಿಂದ ಮೇಲೆ ಬಸ್‌ಗಳ ನಟ್‌ ಬೋಲ್ಟ್ ಉಚ್ಚಿ ಬೀಳುತ್ತಿರುವ ಘಟನೆಗಳು ಆಗುತ್ತಿದ್ದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಗರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಅಶೋಕ ಹೆಗಡೆ ಮಾತನಾಡಿ, ನಟ್ ಬೋಲ್ಟ್‌ಗಳಿಲ್ಲದ ಬಸ್‌ಗಳನ್ನು ಓಡಿಸುತ್ತಿದ್ದೀರಿ. ಗುಜರಿ ಗಾಡಿಗಳನ್ನೇ ರಸ್ತೆಗೆ ಬಿಡುತ್ತಿದ್ದೀರಿ. ಈ ಹಿಂದೆ ಸಾಕಷ್ಟು ಬಾರಿ ಎಚ್ಚರಿಸಿದರೂ ನೀವು ಗಮನ ನೀಡುತ್ತಿಲ್ಲ. ತಾಂತ್ರಿಕ ವ್ಯವಸ್ಥಾಪಕರು ಬಸ್‌ಗಳ ಸುರಕ್ಷತೆ ಬಗ್ಗೆ ಗಮನ ನೀಡುತ್ತಿಲ್ಲ. ಇನ್ನು ನಿರ್ವಾಹಕರು ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸುತ್ತಿಲ್ಲ. ಬಸ್ ಘಟಕದಿಂದ ಸಾಕಷ್ಟು ಅನಾಹುತಗಳು ಸಂಭವಿಸುತ್ತಿವೆ. ಪ್ರಯಾಣಿಕರ ಜೀವದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಕರವೇ ಅಧ್ಯಕ್ಷ ರವಿ ಅಂಗಡಿ ಮಾತನಾಡಿ, ಇತ್ತೀಚೆಗಷ್ಟೇ ಮುಧೋಳ ಬಸ್ ನಿಲ್ದಾಣದಲ್ಲಿ ಮೂತ್ರ ವಿಸರ್ಜನೆಗೆ ವಿಕಲಚೇತನರೊಬ್ಬರು ಇಳಿದು, ವಾಪಸ್ ಬರುವಷ್ಟರಲ್ಲಿಯೇ ಬಸ್ ಬಿಟ್ಟಿದ್ದಾರೆ. ಬಸ್‌ನಲ್ಲಿದ್ದ ಅವರ ಪತ್ನಿ ಬಸ್ ನಿಲ್ಲಿಸಿ ಎಂದು ಸಾಕಷ್ಟು ಬಾರಿ ಹೇಳಿದರೂ ನಿಲ್ಲಿಸಲಿಲ್ಲ. ನಿರ್ವಾಹಕರಿಗೆ ಮಾನವೀಯತೆಯೇ ಇಲ್ಲ. ಅವರು ಗಾಬರಿಗೊಂಡು ಓಡೋಡಿ ಬಂದರೂ ಬಸ್ ಸಿಗಲಿಲ್ಲ. ಓಡೋಡಿ ಹೋಗುವಾಗ ಅವರು ಎಡವಿ ಬಿದ್ದು, ಅಲ್ಲಿದ್ದ ಜನರು ಅವರನ್ನು ಮೇಲೆಬ್ಬಿಸಿ, ದ್ವಿಚಕ್ರವಾಹನದಲ್ಲಿ ಕೂಡ್ರಿಸಿಕೊಂಡು ಹೋದರು. ಬಸ್ ಚಲಿಸುತ್ತಿದ್ದ ಸ್ಥಳಕ್ಕೆ ಹೋಗಿ ಬಸ್ ನಿಲ್ಲಿಸಿದ್ದಾರೆ. ಈ ಘಟನೆಗೆ ಕಾರಣರಾದ ನಿರ್ವಾಹಕ, ಚಾಲಕರ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಎಂ.ಎಂ. ಜಮಖಾನಿ, ಪ್ರಕಾಶ ವಾಳದಉಂಕಿ, ಶ್ರೀಕಾಂತ ಹುನಗುಂದ, ಪ್ರಶಾಂತ ಜವಳಿ, ಶ್ಯಾಮಸುಂದರ ಭಜಂತ್ರಿ, ಪ್ರಕಾಶ ಗಾಯದ, ರಸೀದ ರಾಯಚೂರ, ರುದ್ರಪ್ಪ ಮಂತ್ರಿ, ಹುಚ್ಚೇಶ ಯಂಡಿಗೇರಿ, ಕಿರಣ ಭಾಪ್ರಿ, ಮಹ್ಮದ್ ಹುಸೇನ್ ದೋಟೇಗಾರ, ಮಂಜು ತಿಪ್ಪಾ, ಅಕ್ತರಹುಸೇನ ಅಪಘಾನ, ಬಾಬು ತಟಗಾರ, ನವೀನ ಪಟ್ಟಣಶೆಟ್ಟಿ ಸೇರಿದಂತೆ ಇತರರು ಇದ್ದರು.