ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಕಂಟ್ರಾಕ್ಟರ್ ಹಾಗೂ ಕ್ರಶರ್ ಎರಡೂ ಕಡೆಯಿಂದ ರಾಯಲ್ಟಿ ಸಂಗ್ರಹಿಸುತ್ತಿರುವ ರಾಜ್ಯ ಸರ್ಕಾರ ತನ್ನ ಇಬ್ಬಗೆ ನೀತಿ ಕೈಬಿಡಬೇಕು. 44 ಎ ಕಾಯಿದೆಯನ್ನು ಹಿಂದಕ್ಕೆ ಪಡೆಯಬೇಕೆಂದು ಜಿಲ್ಲಾ ಕ್ವಾರೆ ಮತ್ತು ಕ್ರಶರ್ ಮಾಲೀಕರ ಸಂಘದ ಅಧ್ಯಕ್ಷ ಅಬ್ದುಲ್ ಮಜೀದ್ ಆಗ್ರಹಿಸಿದ್ದಾರೆ.ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ತುರ್ತಾಗಿ ತಮ್ಮನ್ನು ಕರೆದು ಮಾತನಾಡಿ ಸಮಸ್ಯೆ ಬಗೆ ಹರಿಸದಿದ್ದರೆ ಕ್ರಶರ್‌ಗಳ ನಿಲ್ಲಿಸಿ ಉಗ್ರ ಹೋರಾಟ ಮಾಡಬೇಕಾಗುತ್ತದೆಂದು ಎಚ್ಚರಿಸಿದರು.
ಆಂಧ್ರ ತಮಿಳುನಾಡಿನಿಂದ ಇಲ್ಲಿಗೆ ಜೆಲ್ಲಿ ಬರುತ್ತಿವೆ. ಆದರೆ ಅವರಿಂದ ರಾಜ್ಯ ಸರ್ಕಾರಕ್ಕೆ ಯಾವುದೇ ತೆರಿಗೆ ಪಾವತಿಯಾಗುತ್ತಿಲ್ಲ. ಒಂದು ವರ್ಷದಿಂದ ಸರ್ಕಾರಕ್ಕೆ ನಮ್ಮ ಬೇಡಿಕೆಗಳ ಬಗ್ಗೆ ಮನವಿ ಸಲ್ಲಿಸುತ್ತಿದ್ದೇವೆ.ಇನ್ನು ನಾಲ್ಕೈದು ದಿನಗಳು ಕಾಯುತ್ತೇವೆ. ಸಚಿವ ಸಂಪುಟ ವಿಸ್ತರಣೆಯಾದರೆ ನೂತನ ಸಚಿವರಿಗೂ ಮನವಿ ಅರ್ಪಿಸುತ್ತೇವೆ. ಸರ್ಕಾರಕ್ಕೆ ಸಂದಾಯವಾಗಬೇಕಾದ ರಾಯಲ್ಟಿ ಎಲ್ಲಾ ಹೋಗಿದೆ. ಆದರೂ ನಮಗೆ ಕಿರುಕುಳ ನಿಂತಿಲ್ಲ. ಸಾಲ ತೀರಿಸಲಾಗದೆ ರೈತ ಹೇಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೋ ಅದೇ ರೀತಿ ಕ್ರಶರ್‌ನವರು ಆತ್ಮಹತ್ಯೆ ದಾರಿ ಹಿಡಿಯಬೇಕಾಗುತ್ತದೆಂದು ಎಚ್ಚರಿಸಿದರು.
ಕಲ್ಲು ಗಣಿಗೆ ಸಂಬಂಧಿಸಿದಂತೆ ಡಿಎಂಜಿ ಕಡೆಯಿಂದ ಪ್ರತಿವರ್ಷ ಆಡಿಟ್ ಆಗುತ್ತಿರುವುದರಿಂದ ಕೆಇಬಿ ಬಿಲ್ ಪಾವತಿಸಿಕೊಳ್ಳುವುದನ್ನು ತಕ್ಷಣ ನಿಲ್ಲಿಸಬೇಕು. ಜಿಎಸ್‌ಟಿ ರೂಲ್ಸ್ ಪ್ರಕಾರ ಐವತ್ತು ಸಾವಿರ ರು. ಒಳಗಡೆ ಜಿಎಸ್‌ಟಿ ಬಿಲ್ ಇದ್ದರೆ ಈ-ವೇ ಬಿಲ್ ಅವಶ್ಯಕತೆಯಿರುವುದಿಲ್ಲ ಎಂದು ಕಾನೂನು ಹೇಳುತ್ತದೆ. ಆದರೆ ಡಿಎಂಜಿ ಇಲಾಖೆಯವರು ನಮ್ಮ ಸರಕು ಸಾಗಾಣಿಕೆ ಮಾಡುವ ಬಿಲ್ಲಿನ ಮೊತ್ತ ಎರಡು ಸಾವಿರ ರು. 15 ಸಾವಿರ ರು. ಒಳಗಡೆಯಿರುತ್ತದೆ. ಈಗಿರುವಾಗ ಈ-ವೇ ಬಿಲ್‍ನ ಅಗತ್ಯವಿಲ್ಲ. ಆದ್ದರಿಂದ ಈ-ವೇ ಬಿಲ್ ಪದ್ದತಿಯನ್ನು ರದ್ದುಪಡಿಸುವಂತೆ ಅಬುಲ್ ಮಜೀದ್ ಸರ್ಕಾರವನ್ನು ಒತ್ತಾಯಿಸಿದರು.
ಜಿ.ಸಿ.ಸುರೇಶ್‍ಬಾಬು ಮಾತನಾಡಿ, ಹೊರ ರಾಜ್ಯದಿಂದ ಬರುವ ಜೆಲ್ಲಿಗೆ ನಮ್ಮ ರಾಜ್ಯ ಸರ್ಕಾರ ತೆರಿಗೆ ವಸೂಲಿ ಮಾಡುತ್ತಿಲ್ಲ. ನಮ್ಮ ಉದ್ದಿಮೆಯ ಮೇಲೆ ಸರ್ಕಾರ ಇಲ್ಲ ಸಲ್ಲದ ಕಾನೂನುಗಳನ್ನು ಜಾರಿಗೊಳಿಸಿ ಕಲ್ಲು ಗಣಿ ಮತ್ತು ಸ್ಟೋನ್ ಕ್ರಷರ್‍ಗಳಿಗೆ ದಂಡ ವಿಧಿಸುತ್ತಿರುವುದನ್ನು ತಕ್ಷಣವೆ ನಿಲ್ಲಿಸಬೇಕು ಎಂದರು.
ಈ ವೇಳೆ ಮೆದೇಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಿರಂಜನ್, ವೆಂಕಟೇಶ್, ಅಶೋಕ್‍ರೆಡ್ಡಿ, ಮಲ್ಲಿಕಾರ್ಜುನ್, ಅಭಿಷೇಕ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.