Outrage over Yathindra's statement regarding the royal family

ಸಚಿವರ ಹೇಳಿಕೆ ಅರಸು ಸಮುದಾಯಕ್ಕೆ ಧಕ್ಕೆ ತಂದಿದೆ । ಅವರು ಕ್ಷಮೆಯಾಚಿಸಬೇಕು ಇಲ್ಲವೇ ಜಿಲ್ಲಾ ಅರಸು ಸಂಘದ ಹೋರಾಟ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಮೈಸೂರು ರಾಜಮನೆತನದ ಕುರಿತು ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ, ಜಿಲ್ಲಾ ಅರಸು ಸಂಘ ತೀವ್ರವಾಗಿ ಖಂಡಿಸಿದೆ.

ಮಂಗಳವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಟಿ.ಎನ್. ಮುಕುಂದರಾಜ್ ಅರಸ್, ಮೈಸೂರು ರಾಜಮನೆತನಕ್ಕೆ ತನ್ನದೇ ಆದ ಐತಿಹಾಸಿಕ ಪರಂಪರೆ ಹಾಗೂ ರಾಜ್ಯಕ್ಕೆ ಅಪಾರ ಕೊಡುಗೆಗಳಿವೆ. ಇಂತಹ ಹಿನ್ನೆಲೆಯುಳ್ಳ ಮನೆತನದ ಕುರಿತು ಜವಾಬ್ದಾರಿಯುತ ಸ್ಥಾನದಲ್ಲಿರುವವರು ಗೌರವಯುತವಾಗಿ ಮಾತನಾಡಬೇಕು ಎಂದು ಆಗ್ರಹಿಸಿದರು.

ಈ ಹಿಂದೆ ಸಿದ್ದರಾಮಯ್ಯ ಅವರು ಉಪಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮೈಸೂರು ಅರಮನೆಯನ್ನು ಸರ್ಕಾರದ ವಶಕ್ಕೆ ಪಡೆಯುವ ಪ್ರಯತ್ನ ನಡೆಸಿದ್ದರು ಎಂದು ಆರೋಪಿಸಿದ ಅವರು, ಇದೀಗ ಯತೀಂದ್ರ ಸಿದ್ದರಾಮಯ್ಯ ಅವರು ತಂದೆಯ ಹಾದಿಯನ್ನೇ ಅನುಸರಿಸುತ್ತಿದ್ದಾರೆ ಎಂದು ಟೀಕಿಸಿದರು.

ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗಿಂತ ತಮ್ಮ ತಂದೆಯವರು ರಾಜ್ಯಕ್ಕೆ ಹೆಚ್ಚಿನ ಕೊಡುಗೆ ನೀಡಿದ್ದಾರೆ ಎಂಬ ರೀತಿಯಲ್ಲಿ ಯತೀಂದ್ರ ಈ ಹಿಂದೆ ಹೇಳಿಕೆ ನೀಡಿದ್ದರು. ಇದೀಗ ರಾಜಮನೆತನದ ಕುರಿತು ನೀಡಿರುವ ಹೇಳಿಕೆಗಳು ಅರಸು ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದಸರಾ ಸಂದರ್ಭದಲ್ಲಿ ಅರಮನೆಯಲ್ಲಿ ನಡೆದ ಧಾರ್ಮಿಕ ಕಾರ್ಯಗಳಿಗೆ ಅಡ್ಡಿಯುಂಟಾದ ಹಿನ್ನೆಲೆಯಲ್ಲಿ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರು ಸರ್ಕಾರಕ್ಕೆ ಸಲಹೆ ನೀಡಿ ಪತ್ರ ಬರೆದಿದ್ದರು. ಇದಕ್ಕೆ ಗೌರವ ನೀಡುವ ಬದಲು, ಸರ್ಕಾರಕ್ಕೆ ಸಲಹೆ ನೀಡಲು ರಾಜಮನೆತನದವರ ಅಗತ್ಯವಿಲ್ಲ ಎಂಬರ್ಥದಲ್ಲಿ ಯತೀಂದ್ರ ಪ್ರತಿಕ್ರಿಯಿಸಿರುವುದು ಸರಿಯಲ್ಲ ಎಂದರು.

ಅರಮನೆಯಲ್ಲಿ ವಾಸಿಸಲು ರಾಜಮನೆತನದವರಿಗೆ ಸರ್ಕಾರವೇ ಸ್ವಲ್ಪ ಜಾಗ ನೀಡಿದೆ ಎಂಬ ಹೇಳಿಕೆ ಹಾಗೂ ಅಂಬಾರಿ ಹೊರುವ ಆನೆಯ ಕುರಿತು ರಾಜಮಾತೆ ಮಾಹಿತಿ ಕೇಳಿದಾಗ ನೀಡಿರುವ ಪ್ರತಿಕ್ರಿಯೆಯನ್ನೂ ಖಂಡಿಸಿದರು. ಜಂಬೂಸವಾರಿಯಲ್ಲಿ ವಿಜೃಂಭಿಸುವ ಅಂಬಾರಿಗೆ ಸರ್ಕಾರ ಬಾಡಿಗೆ ನೀಡುತ್ತಿದೆ ಎಂಬ ಹೇಳಿಕೆ ಅರಸು ಸಮುದಾಯಕ್ಕೆ ನೋವುಂಟು ಮಾಡಿದೆ ಎಂದು ಹೇಳಿದರು.

ಕ್ಷಮೆಯಾಚನೆಗೆ ಆಗ್ರಹ:

ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು ರಾಜಮನೆತನದ ಕುರಿತು ಇಂತಹ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಿ, ತಮ್ಮ ನಡವಳಿಕೆಯನ್ನು ಬದಲಾಯಿಸಿಕೊಳ್ಳಬೇಕು. ರಾಜ್ಯದ ಜನರ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ ಜಿಲ್ಲಾ ಅರಸು ಸಂಘದ ವತಿಯಿಂದ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಗೌರವ ಅಧ್ಯಕ್ಷ ಮಂಜುನಾಥ ರಾಜ್ ಅರಸ್, ಉಪಾಧ್ಯಕ್ಷ ಮಂಜುನಾಥ ರಾಜ್ ಅರಸ್, ಪ್ರಧಾನ ಕಾರ್ಯದರ್ಶಿ ಯಶೋಧ ರಾಜ್ ಅರಸ್, ಮಾಜಿ ಅಧ್ಯಕ್ಷ ಜನಕರಾಜ್ ಅರಸ್, ಲೋಕೇಶ್, ಮೋಹನ್ ಹಾಗೂ ಆನಂದ ರಾಜ್ ಅರಸ್ ಇದ್ದರು.