ನೇರ ಪಾವತಿಗೆ ಆಗ್ರಹಿಸಿ ಹೊರಗುತ್ತಿಗೆ ನೌಕರರ ಪ್ರತಿಭಟನೆ

| Published : Feb 14 2024, 02:19 AM IST

ಸಾರಾಂಶ

ಸಂಕಷ್ಟ ಭತ್ಯೆಯನ್ನು ಕಾಯಂ ಪೌರಕಾರ್ಮಿಕರಿಗಷ್ಟೇ ನೀಡಿರುವುದು ತಾರತಮ್ಯದ ಪರಮಾವಧಿಯಾಗಿದೆ. ನಗರಾಭಿವೃದ್ಧಿ ಇಲಾಖೆಯು ಕಾರ್ಮಿಕ ವಿರೋಧಿ ಧೋರಣೆಯನ್ನು ಅನುಸರಿಸುತ್ತಿದೆ. ನಗರ ಸ್ಥಳೀಯ ಸಂಸ್ಥೆಗಳ ಎಲ್ಲ ಹೊರಗುತ್ತಿಗೆ ನೌಕರರನ್ನು ನೇರಪಾವತಿಗೆ ತರಲು ಬಜೆಟ್‌ನಲ್ಲಿ ಘೋಷಣೆ ಮಾಡಬೇಕು, ಪೌರಾಡಳಿತ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ಮಾಡಿ ಅಗತ್ಯಕ್ಕೆ ಅನುಗುಣವಾಗಿ ಪೌರಚಾಲಕ ಹುದ್ದೆ ಸೃಷ್ಟಿಸಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರನ್ನು ನೇರ ಪಾವತಿಗೆ ಒಳಪಡಿಸಬೇಕು ಹಾಗೂ ಬಾಕಿ ಇರುವ ಪೌರ ಕಾರ್ಮಿಕರ ಹುದ್ದೆ ಭರ್ತಿ ಮಾಡಬೇಕು ಎಂದು ಒತ್ತಾಯಿಸಿ ಮಂಡ್ಯದಲ್ಲಿ ಹೊರಗುತ್ತಿಗೆ ನೌಕರರು ಪ್ರತಿಭಟನೆ ನಡೆಸಿದರು.

ಕರ್ನಾಟಕ ರಾಜ್ಯ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿ ಹೊರಗುತ್ತಿಗೆ ನೌಕರರ ಸಂಘದ ಆಶ್ರಯದಲ್ಲಿ ನಗರಸಭೆ ಎದುರು ಹೊರಗುತ್ತಿಗೆ ಪೌರ ಚಾಲಕರು ನೀರುಗಂಟಿಗಳು, ಲೋಡರ್ಸ್‌, ಕ್ಲೀನರ್ಸ್, ಹೆಲ್ಪರ್ಸ್‌, ಒಳ ಚರಂಡಿ ಕಾರ್ಮಿಕರು ಹೊರಗುತ್ತಿಗೆ ನೌಕರರು ಧರಣಿ ನಡೆಸಿದರು.

ನಗರ ಸ್ಥಳೀಯ ಸಂಸ್ಥೆಯಲ್ಲಿ ಹೊರಗುತ್ತಿಗೆಯಡಿ ಸೇವೆ ಸಲ್ಲಿಸುತ್ತಿರುವ ನೌಕರರ ಬೇಡಿಕೆಗೆ ಸರ್ಕಾರ ಸ್ಪಂದಿಸುತ್ತಿಲ್ಲ. ನೌಕರರನ್ನು ನೇರಪಾವತಿಗೆ ತರುವುದರಿಂದ ಸರ್ಕಾರಕ್ಕೆ ಜಿಎಸ್‌ಟಿ ಉಳಿತಾಯದ ಜೊತೆಗೆ ನೌಕರರಿಗೆ ಸೇವಾ ಭದ್ರತೆ ದೊರಕಲಿದೆ. ಏಜೆನ್ಸಿಗಳ ಕಿರುಕುಳ ನಿಲ್ಲಲಿದೆ ಎಂದರು.

೨೦೨೨ರಲ್ಲಿ ಅಂದಿನ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಾರ್ಮಿಕರನ್ನು ನೇರಪಾವತಿಗೆ ತರಲು ತೀರ್ಮಾನವಾಗಿದೆ. ಆದರೆ, ಅಧಿಕಾರಿಗಳ ತಾರತಮ್ಯ ನೀತಿಯಿಂದಾಗಿ ಅನ್ಯಾಯ ಮುಂದುವರೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಕಷ್ಟ ಭತ್ಯೆಯನ್ನು ಕಾಯಂ ಪೌರಕಾರ್ಮಿಕರಿಗಷ್ಟೇ ನೀಡಿರುವುದು ತಾರತಮ್ಯದ ಪರಮಾವಧಿಯಾಗಿದೆ. ನಗರಾಭಿವೃದ್ಧಿ ಇಲಾಖೆಯು ಕಾರ್ಮಿಕ ವಿರೋಧಿ ಧೋರಣೆಯನ್ನು ಅನುಸರಿಸುತ್ತಿದೆ ಎಂದು ಆರೋಪಿಸಿದರು.

ನಗರ ಸ್ಥಳೀಯ ಸಂಸ್ಥೆಗಳ ಎಲ್ಲ ಹೊರಗುತ್ತಿಗೆ ನೌಕರರನ್ನು ನೇರಪಾವತಿಗೆ ತರಲು ಬಜೆಟ್‌ನಲ್ಲಿ ಘೋಷಣೆ ಮಾಡಬೇಕು, ಪೌರಾಡಳಿತ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ಮಾಡಿ ಅಗತ್ಯಕ್ಕೆ ಅನುಗುಣವಾಗಿ ಪೌರಚಾಲಕ ಹುದ್ದೆ ಸೃಷ್ಟಿಸಬೇಕು. ಸಂಕಷ್ಟ ಭತ್ಯೆಯನ್ನು ನೇರಪಾವತಿ ಹಾಗೂ ಗುತ್ತಿಗೆ ಪೌರಕಾರ್ಮಿಕರಿಗೂ ವಿಸ್ತರಿಸಬೇಕು. ಬಾಕಿ ಇರುವ ಪೌರಕಾರ್ಮಿಕ ಹುದ್ದೆಗಳ ಭರ್ತಿ ಮಾಡಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ಸಂಘದ ಜಿಲ್ಲಾಧ್ಯಕ್ಷ ನಾಗರಾಜ್, ಎಂ.ಮಹದೇವು, ಎಂ.ಗಣೇಶ, ರಾಜೇಶ್, ಓಬಯ್ಯ, ಪೌರ ಚಾಲಕರ ಸಂಘದ ಚೆನ್ನೇಶ್, ದಿನೇಶ್, ರೂಪೇಶ್, ನವೀನ್. ನಂದೀಶ್, ದೀಪು ನೇತೃತ್ವ ವಹಿಸಿದ್ದರು.