ಸಾರಾಂಶ
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಥಳೀಯ ಅಭ್ಯರ್ಥಿ ಬೆಂಬಲಿಸಿ ಗೆಲ್ಲಿಸುವಂತೆ ಕಾರ್ಯಕರ್ತರಿಗೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಡಾ.ಬಿ.ತಿಪ್ಪೇಸ್ವಾಮಿ ಕರೆ ನೀಡಿದರು.
ಕನ್ನಡಪ್ರಭ ವಾರ್ತೆ ಹಿರಿಯೂರು
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಥಳೀಯ ಅಭ್ಯರ್ಥಿ ಬೆಂಬಲಿಸಿ ಗೆಲ್ಲಿಸುವಂತೆ ಕಾರ್ಯಕರ್ತರಿಗೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಡಾ.ಬಿ.ತಿಪ್ಪೇಸ್ವಾಮಿ ಕರೆ ನೀಡಿದರು.ತಾಲೂಕಿನ ಐಮಂಗಲದ ಹೊರವಲಯದಲ್ಲಿರುವ ಶ್ರೀ ಕಲ್ಕುಂಟೆ ಕರಿಯಮ್ಮ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ಎರಡು ಬಾರಿ ಹೊರ ಜಿಲ್ಲೆಯಿಂದ ಬಂದವರು ಸಂಸದರಾಗಿ ಆಯ್ಕೆಯಾಗಿದ್ದು ಅವರು ಜಿಲ್ಲೆಯ ಅಭಿವೃದ್ಧಿ ಕೆಲಸ ಮಾಡುವಲ್ಲಿ ವಿಫಲರಾಗಿದ್ದಾರೆ. ಹೊರ ಜಿಲ್ಲೆಯವರು ಸಂಸದರಾದರೆ ಅವರನ್ನು ಭೇಟಿ ಮಾಡಲು ಬೆಂಗಳೂರು, ದೆಹಲಿಗೆ ಹೋಗಬೇಕಾಗುತ್ತದೆ. ಜಿಲ್ಲೆಯಲ್ಲಿ ಆಗಬೇಕಾದ ಅನೇಕ ಅಭಿವೃದ್ಧಿ ಕಾರ್ಯಗಳು ನೆನೆಗುದಿಗೆ ಬೀಳುತ್ತವೆ ಎಂದರು.
ಸ್ಥಳೀಯ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದರಿಂದ ಅವರಿಗೆ ಮುಂಚಿತವಾಗಿಯೇ ಕ್ಷೇತ್ರದ ಪರಿಚಯವಿರುವುದರಿಂದ ಜನರಿಗೆ ಅನುಕೂಲವಾಗುವ ಅಭಿವೃದ್ಧಿ ಕೆಲಸ ಮಾಡುತ್ತಾರೆ. ಜನರ ಸಮಸ್ಯೆಯನ್ನು ಆಲಿಸುವಂತಹ, ಜಿಲ್ಲೆಯ ಅಭಿವೃದ್ಧಿಗೆ ಒತ್ತು ನೀಡುವಂತಹ ಸ್ಥಳೀಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಗೆಲ್ಲಿಸುವ ಮೂಲಕ ಜಿಲ್ಲೆಯ ಸ್ವಾಭಿಮಾನವನ್ನು ಎತ್ತಿ ಹಿಡಿಯಬೇಕಾಗಿದೆ ಎಂದು ಹೇಳಿದರು. ಈ ಬಾರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ನನಗೆ ಲೋಕಸಭಾ ಟಿಕೆಟ್ ಕೊಡಿಸುವರೆಂಬ ಭರವಸೆ ಮತ್ತು ನಂಬಿಕೆ ಇದೆ. ಹಾಗಾಗಿ ಈಗಿನಿಂದಲೇ ಹಳ್ಳಿ ಹಳ್ಳಿಗಳಿಗೂ ಭೇಟಿ ನೀಡಿ ಕಾರ್ಯಕರ್ತರನ್ನು ಸಂಘಟಿಸಿ ಚುನಾವಣೆಗೆ ಸಜ್ಜುಗೊಳಿಸಲಾಗುತ್ತಿದೆ ಎಂದರು.ಈ ಸಂದರ್ಭದಲ್ಲಿ ಲಿಡ್ಕರ್ ಮಾಜಿ ಅಧ್ಯಕ್ಷ ಓ.ಶಂಕರ್ , ಕಲ್ಲಹಟ್ಟಿ ತಿಪ್ಪೇಸ್ವಾಮಿ, ಪಾತಲಿಂಗಪ್ಪ, ಭರಂಪುರ ಬಾಬಣ್ಣ, ಎಸ್.ಮಲ್ಲಪ್ಪ, ಎಚ್.ಜಗದೀಶ್, ಮಂಜುನಾಥ್, ಸಿದ್ದಪ್ಪರೆಡ್ಡಿ, ತಿಪ್ಪೇಸ್ವಾಮಿ, ಪಿ.ನಾಗರಾಜು, ಬಿ.ಪ್ರಕಾಶ್, ಹನುಮಂತಪ್ಪ, ಜಿ.ಚಂದ್ರಪ್ಪ ಮುಂತಾದವರು ಹಾಜರಿದ್ದರು.