ಸಾರಾಂಶ
ಬೆಂಗಳೂರು : ಡೆಂಘಿ, ಮಲೇರಿಯಾ ಹರಡುವ ಸೊಳ್ಳೆಗಳ ನಿಯಂತ್ರಣಕ್ಕಾಗಿ ಗಾಂಧಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗೋಪಾಲಪುರದ ಆಯ್ದ ಮನೆಗಳಿಗೆ ಪ್ರಾಯೋಗಿಕವಾಗಿ ಓವಿ ಟ್ರ್ಯಾಪ್ ಸಾಧನಗಳನ್ನು ಅಳವಡಿಸಲಾಗಿದೆ.
ಸೋಮವಾರ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಓವಿ ಟ್ರ್ಯಾಪ್ ಸಾಧನ ಅಳವಡಿಕೆಗೆ ಚಾಲನೆ ನೀಡಿ ಮಾತನಾಡಿ, ಓವಿ ಟ್ರ್ಯಾಪ್ ಬಯೋ ಸಾಧನವಾಗಿದ್ದು, ಅದರಿಂದ ಈಡಿಸ್ ಸೇರಿದಂತೆ ಇನ್ನಿತರ ಸೊಳ್ಳೆಗಳು ಆಕರ್ಷಿತವಾಗಿ ನಾಶವಾಗುತ್ತವೆ. ಸದ್ಯ ಪ್ರಾಯೋಗಿಕವಾಗಿ ಗೋಪಾಲಪುರದಲ್ಲಿ 120 ಮನೆಗಳಿಗೆ ಓವಿ ಟ್ರ್ಯಾಪ್ ಸಾಧನಗಳನ್ನು ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ಸೊಳ್ಳೆ ಹೆಚ್ಚಿರುವ ಪ್ರದೇಶವನ್ನು ಗುರುತಿಸಿ ಅಲ್ಲಿಯೂ ಓವಿ ಟ್ರ್ಯಾಪ್ ಸಾಧನ ಅಳವಡಿಸಲಾಗುವುದು. ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆ ಜಂಟಿಯಾಗಿ ಈ ಸಾಧನವನ್ನು ಅಳವಡಿಸುತ್ತಿವೆ ಎಂದರು.
ಮುಂಬೈನ ಧಾರಾವಿ ಕೊಳಗೇರಿ ಪ್ರದೇಶದಲ್ಲಿ ಈ ರೀತಿ ಸಾಧನ ಅಳವಡಿಸಿದ ನಂತರ ಸೊಳ್ಳೆಗಳ ನಿಯಂತ್ರಣ ಸಾಧ್ಯವಾಗಿದೆ. ಅದೇ ಮಾದರಿಯಲ್ಲಿ ಇದೀಗ ಬೆಂಗಳೂರಿನಲ್ಲೂ ಅನುಸರಿಸಲಾಗುತ್ತಿದೆ. ಉತ್ತಮ ಫಲಿತಾಂಶ ಬಂದರೆ ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದು ತಿಳಿಸಿದರು.
ಏನಿದು ಓವಿ ಟ್ರ್ಯಾಪ್ ಸಾಧನ
ಓವಿ ಟ್ರ್ಯಾಪ್ ಸಾಧನ ಮಡಕೆಯ ಆಕಾರದಲ್ಲಿದ್ದು, ಅದರಲ್ಲಿ ರಾಸಾಯನಿಕ ಬೆರೆಸಲಾದ ನೀರನ್ನು ಭರ್ತಿ ಮಾಡಲಾಗುತ್ತದೆ. ರಾಸಾಯನಿಕ ಮಿಶ್ರಣಕ್ಕೆ ಆಕರ್ಷಿತವಾಗುವ ಸೊಳ್ಳೆಗಳು ಓವಿ ಟ್ರ್ಯಾಪ್ ಸಾಧನಕ್ಕೆ ಬಂದು ಸಾಯುತ್ತವೆ. ಬಯೋ ಟ್ರ್ಯಾಪ್ ಬಳಸುವುದರಿಂದ ಶೇ. 60ರಷ್ಟು ಸೊಳ್ಳೆಗಳನ್ನು ನಿಯಂತ್ರಿಸಲು ಸಾಧ್ಯವಾಗಲಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.